HOME » NEWS » State » GRAND DAUGHTER LOOTS HER GRAND MOTHER ASSETS UDUPI SESR

ಕೋಟಿ ರೂ ಆಸ್ತಿಗಾಗಿ ಅಜ್ಜಿ, ತಂದೆಗೆ ಮೋಸ ಮಾಡಿ ಪರಾರಿಯಾದ ಮಗಳು

ಮೊಮ್ಮಗಳ ಬಗ್ಗೆ ಇದ್ದ ಅತಿಯಾದ ಕುರುಡು ಪ್ರೀತಿ ಹಾಗೂ ನಂಬಿಕೆ ಹೊಂದಿದ್ದ ಅಜ್ಜಿ ಮೋಸಹೋಗಿದ್ದು, ಆಸ್ಪತ್ರೆ ಪಾಲಾಗಿದ್ದಾರೆ.

news18-kannada
Updated:October 6, 2020, 6:52 PM IST
ಕೋಟಿ ರೂ ಆಸ್ತಿಗಾಗಿ ಅಜ್ಜಿ, ತಂದೆಗೆ ಮೋಸ ಮಾಡಿ ಪರಾರಿಯಾದ ಮಗಳು
ಸಾಂದರ್ಭಿಕ ಚಿತ್ರ
  • Share this:
ಉಡುಪಿ (ಅ.5): ಹಣ, ಆಸ್ತಿ ಮುಂದೆ ಸಂಬಂಧಗಳು ಗೌಣವಾಗುತ್ತವೆ. ಅಂತಹದ್ದೆ ಘಟನೆ ಇಲ್ಲೊಂದು ನಡೆದು ಮೊಮ್ಮಗಳು ಮಾಡಿದ ಮೋಸಕ್ಕೆ ಈಗ ಅಜ್ಜಿ ಆಸ್ಪತ್ರೆ ಪಾಲಾಗಿದ್ದು, ಅಪ್ಪ ಅನಾಥವಾಗಿದ್ದಾರೆ. ಪೋಷಕರ ಮುಗ್ಧತೆಯನ್ನೇ ದುರಪಯೋಗ ಮಾಡಿಕೊಂಡು ಕೋಟ್ಯಾಂತರ ರೂ ಆಸ್ತಿಯನ್ನು ಲಪಟಾಯಿಸಿ ಮೊಮ್ಮಗಳು ಪರಾರಿಯಾಗಿದ್ದಾಳೆ. 84 ವರ್ಷದ ಸೆಲೆಸ್ಟಿನ್​ ಎಂಬ ಹಿರಿಯ ವೃದ್ದೆ ಮೊಮ್ಮಗಳು ರೋಶನಿ ಉದಯ್​ ವಂಚಿಸಿದಾಕೆ. ಹಲವರು ವರ್ಷಗಳ ಹಿಂದೆ ಮುಂಬೈನಲ್ಲಿ ನೆಲೆಸಿದ್ದ ಸೆಲೆಸ್ಟಿನ್​ , ಗಂಡ ತೀರಿ ಹೋದ ಬಳಿಕ ಇಲ್ಲಿನ ಮುದರಂಗಡಿ ಸಮೀಪದ ಸಾಂತೂರಿನಲ್ಲಿ ಬಂದು ನೆಲೆಸಿದ್ದರು. ಕೂಲಿ ನಾಲಿ ಮಾಡಿ ನಾಲ್ಕು ಮಕ್ಕಳನ್ನು ಸಾಕಿದ ಈಕೆ 1967ರಲ್ಲಿ ಎರಡು ಎಕರೆ ಜಮೀನು ಕೊಂಡಿದ್ದಳು. ಪ್ರಸ್ತುತ ಮಾರುಕಟ್ಟೆಯಲ್ಲಿ ಕೋಟ್ಯಾಂತರ ರೂ ಬೆಲೆಬಾಳುವ ಈ ಆಸ್ತಿಯ ಮೇಲೆ ಕಣ್ಣಿಟ್ಟ ಮೊಮ್ಮಗಳು ಅಜ್ಜಿಗೆ ಪ್ರೀತಿಯಿಂದಲೇ ಮೋಸ ಮಾಡಿದ್ದಾಳೆ.

ಈ ಹಿಂದೆ ಮುಂಬೈನಲ್ಲಿ ವಾಸವಾಗಿದ್ದ ಮಗ​ ರೋನಾಲ್ಡ್ ಅಮ್ಮ ಸೆಬಸ್ಟಿನ್​ ಜೊತೆ ಇಲ್ಲಿಯೇ ವಾಸವಾಗಿದ್ದಾನೆ. ಈತನ  ಮಗಳೇ ರೋಶನಿ. ಅಜ್ಜಿಯ ಜೊತೆಗಿನ ಅತಿಯಾದ ಸಲುಗೆಯಿಂದ ರೋಶನಿ ವಂಚನೆಯ ರಣತಂತ್ರ ಹೂಡಿದ್ದಾಳೆ. ತನ್ನ ವೃದ್ದ ತಂದೆಗೂ ಅರಿವಿಗೆ ಬಾರದಂತೆ ಮನೆ-ಆಸ್ತಿ ಲಪಟಾಯಿಸಿದ್ದಾಳೆ. 2019 ರ ಜನವರಿ ತಿಂಗಳಲ್ಲಿ ಅಜ್ಜಿ ಮತ್ತು ತಂದೆಯನ್ನು ಮೂಲ್ಕಿಯ ಸಬ್ ರಿಜಿಸ್ಟಾರ್ ಕಚೇರಿಗೆ ಕರೆದೊಯ್ದಿದ್ದಾಳೆ. ಇಬ್ಬರೂ ಅನಕ್ಷರಸ್ಥರಾದ ಕಾರಣ ಕೆಲವು ಕಾಗದ ಪತ್ರಗಳಿಗೆ ಇಬ್ಬರ ಹೆಬ್ಬೆಟ್ಟು-ಸಹಿ ಹಾಕಿಸಿಕೊಂಡಿದ್ದಾಳೆ. ಮೂರು ತಿಂಗಳ ನಂತರ ತಂದೆಯನ್ನು ಮಾತ್ರ ಅದೇ ಕಚೇರಿಗೆ ಕರೆದೊಯ್ದು ಮತ್ತೆ ಸಹಿ ಪಡೆದಿದ್ದಾಳೆ. ಈ ಮೂಲಕ ಅಜ್ಜಿಯ ಎಲ್ಲಾ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಂಡಿದ್ದಾಳೆ.

ರೈತರಿಗೆ ನೀಡುವ ಸಾಲದ ಯೋಜನೆಯ ನೆಪ ಮಾಡಿ ಮೊಮ್ಮಗಳು ರೋಶನಿ ಈ ಸಹಿ ಪಡೆದಿದ್ದಾಳೆ. ಮೊಮ್ಮಗಳ ಬಗ್ಗೆ ಇದ್ದ ಅತಿಯಾದ ಕುರುಡು ಪ್ರೀತಿ ಹಾಗೂ ನಂಬಿಕೆ ಹೊಂದಿದ್ದ ಅಜ್ಜಿ ಮೋಸಹೋಗಿದ್ದು, ಆಸ್ಪತ್ರೆ ಪಾಲಾಗಿದ್ದಾರೆ. ಈ ವೃದ್ದೆ ಸೆಲೆಸ್ಟಿನ್ ತನ್ನ ನಾಲ್ವರು ಮಕ್ಕಳ ಹೆಸರಿಗೆ ವೀಲುನಾಮೆ ಬರೆಸಿದ್ದರು. ಆದರೆ ಈ ವೀಲು ನಾಮೆಯನ್ನು ರೋಶನಿ ಬಚ್ಚಿಟ್ಟಿದ್ದಾಳೆ.

ಇಪ್ಪತ್ತು ದಿನಗಳ ಹಿಂದೆ ಸ್ಥಳೀಯ ಪಂಚಾಯತ್ ಅಧಿಕಾರಿಗಳು ಸರ್ಕಾರಿ ಯೋಜನೆಯೊಂದಕ್ಕೆ ಕೃಷಿ ಸಮೀಕ್ಷೆಗೆ ಬಂದಾಗ ಮನೆ ಹಾಗೂ ಜಮೀನು ರೋಶನಿ ಹೆಸರಿಗೆ ವರ್ಗಾವಣೆ ಗೊಂಡಿರೋದು ಪತ್ತೆಯಾಗಿದೆ. ಸದ್ಯ ಈ ಪ್ರಕರಣ ಮಾನವ ಹಕ್ಕುಗಳ ಪ್ರತಿಷ್ಟಾನದ ಮುಂದೆ ಬಂದಿದೆ. ಡಾ.ರವೀಂದ್ರ ನಾಥ್ ಶ್ಯಾನುಭೋಗ್ ಈ ವೃದ್ಧೆಗೆ ಬೆಂಗಾವಲಾಗಿದ್ದಾರೆ. ಕಾನೂನು ಹೋರಾಟ ಜಾರಿಯಲ್ಲಿದೆ.
Published by: Seema R
First published: October 6, 2020, 6:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories