Siddharoodha Mutt: ಹರ್ಷೋದ್ಗಾರದಲ್ಲಿ ಸಿದ್ಧಾರೂಢ ರಥೋತ್ಸವ, ಲಕ್ಷಾಂತರ ಜನ ಸಾಕ್ಷಿ

ಸಿದ್ಧಾರೂಢ ರಥೋತ್ಸವ

ಸಿದ್ಧಾರೂಢ ರಥೋತ್ಸವ

ಶಿವರಾತ್ರಿ ಅಂಗವಾಗಿ ಹುಬ್ಬಳ್ಳಿಯಲ್ಲಿ ಸಿದ್ಧಾರೂಢರ ರಥೋತ್ಸವ ಸಂಭ್ರಮದಿಂದ ನೆರವೇರಿತು. ಲಕ್ಷಾಂತರ ಭಕ್ತರು ತೇರೆಳೆದು ಭಕ್ತಿ ಸಮರ್ಪಿಸಿದರು. ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು.

  • Share this:

ಹುಬ್ಬಳ್ಳಿ: ಎಲ್ಲಿ ನೋಡಿದರು ಶಿವ ಭಕ್ತರು (Shiva Devotees). ಹಣೆ ಮೇಲೆ ವಿಭೂತಿ. ಬಾಯಲ್ಲಿ ಶಿವ ಪಂಚಾಕ್ಷರಿ ಮಂತ್ರ ಜಪಿಸುತ್ತ ಆರಾಧ್ಯ ದೈವ ಗುರುದ್ವಯರ ರಥವನ್ನ ಎಳೆಯುವ ಸಂಭ್ರಮ ಹೇಳತೀರದು. ಸಾಕ್ಷಾತ್ ಕೈಲಾಸವೇ ಭುವಿಗಿಳಿದ ಅನುಭವ. ಇಷ್ಠಾರ್ಥ ಸಿದ್ಧಿಗಾಗಿ ತೇರಿಗೆ ಹಣ್ಣು, ಉತತ್ತಿ ಎಸೆದು ಸಿದ್ದಾರೂಡರ ರಥವನ್ನು (Siddharoodha Ratha) ಅದ್ಧೂರಿಯಾಗಿ ಭಾನುವಾರ ಎಳೆಯಲಾಯಿತು. ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮಿ ಮಠ ಟ್ರಸ್ಟ್ ಕಮಿಟಿ ವತಿಯಿಂದ ಶಿವರಾತ್ರಿ ಮಹೋತ್ಸವದ (Maha Shivaratri Mahotsava) ನಿಮಿತ್ತ ಭಾನುವಾರ ಲಕ್ಷಾಂತರ ಭಕ್ತರ ಹರ್ಷೋದ್ಗಾರದ ನಡುವೆ ಸಿದ್ದಾರೂಢ ಸ್ವಾಮಿಯ (Siddhroodha Swamy) ರಥೋತ್ಸವ ಸಂಭ್ರಮದಿಂದ ನಡೆಯಿತು.


ಸಿದ್ಧಾರೂಢರ ರಥ ದೇವಸ್ಥಾನದ ಮುಖ್ಯ ಬೀದಿಯಲ್ಲಿ ಸಾಗುತ್ತಿದ್ದಂತೆಯೇ ಭಕ್ತಾದಿಗಳು ಉತ್ತತ್ತಿ (ಒಣ ಖರ್ಜೂರ), ಬಾಳೆಹಣ್ಣು, ನಿಂಬೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಜನಸಾಗರ ರಥೋತ್ಸವವನ್ನು ಕಣ್ತುಂಬಿಕೊಂಡಿತು.


ಓಂ ನಮಃ ಶಿವಾಯ


ಡೊಳ್ಳು, ಬ್ಯಾಂಜೋ ಸೇರಿದಂತೆ ವಿವಿಧ ವಾದ್ಯ-ಮೇಳಗಳೊಂದಿಗೆ ಸಾಗಿದ ಯುವ ಸಮೂಹ ನೃತ್ಯ ಮಾಡುವ ಮೂಲಕ ಜಾತ್ರೆಯ ಸಂಭ್ರಮವನ್ನು ಇಮ್ಮಡಿಗೊಳಿಸಿತು. ತೇರು ಮುಂದೆ ಸಾಗುತ್ತಿದ್ದಂತೆ ಓಂ ನಮಃ ಶಿವಾಯ, ಹರ ಹರ ಮಹಾದೇವ ಎಂಬ ಉದ್ಗಾರ ಭಕ್ತಿಲೋಕ ಧರೆಗಿಳಿಸಿದಂತೆ ಭಾಸವಾಯಿತು.


ಸಂಜೆ 5.30 ಗಂಟೆಗೆ ಸಲ್ಲುವ ಶುಭ ಮುಹೂರ್ತದಲ್ಲಿ ಭೂ ಕೈಲಾಸ, ಹುಬ್ಬಳ್ಳಿಯಲ್ಲಿ ಶ್ರೀ ಸಿದ್ಧಾರೂಢ ಹಾಗೂ ಗುರುನಾಥಾರೂಢರ ಉತ್ಸವ ಮೂರ್ತಿಗಳನ್ನ ಅಲಂಕೃತ ತೇರಿನಲ್ಲಿಟ್ಟು ಎಳೆಯಲಾಯಿತು. ಜಾತಿ, ಧರ್ಮದ ಸಂಕೋಲೆಗಳನ್ನು ಮೀರಿ ಸರ್ವ ಜನಾಂಗದವರು ರಥೋತ್ಸವದಲ್ಲಿ ಭಾಗಿಯಾಗಿದ್ದರು.


ಶ್ರೀಮಠಕ್ಕೆ ದೀಪಾಲಂಕಾರ


ಟೆಂಪೊ, ಟ್ರ್ಯಾಕ್ಟರ್, ದ್ವಿಚಕ್ರ, ಕಾರುಗಳಲ್ಲಿ ಮಾತ್ರವಲ್ಲದೇ ಪಾದಯಾತ್ರೆ ಮೂಲಕವೂ ರಾಜ್ಯದ ವಿವಿಧ ಭಾಗದಿಂದ ಲಕ್ಷಾಂತರ ಭಕ್ತರು ಜಾತ್ರೆಗೆ ಆಗಮಿಸಿದ್ದರು. ಶಿವರಾತ್ರಿ ಪ್ರಯುಕ್ತ ವಿಶೇಷ ಕಳೆ ಪಡೆದಿದ್ದ ಶ್ರೀಮಠ, ದೀಪಾಲಂಕಾರಗಳಿಂದ ಕಂಗೊಳಿಸುತ್ತಿತ್ತು.


ಇನ್ನು ಮಹಾರಾಷ್ಟ್ರ, ಆಂಧ್ರಪ್ರದೇಶ, ಗೋವಾ ಸೇರಿದಂತೆ ರಾಜ್ಯದ ಹುಬ್ಬಳ್ಳಿ - ಧಾರವಾಡ, ಬಾಗಲಕೋಟೆ, ವಿಜಯಪುರ, ದಾವಣಗೆರೆ, ಕಲಬುರಗಿ, ಹಾವೇರಿ, ಗದಗ, ಬೆಳಗಾವಿ ಸೇರಿದಂತೆ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.


70 ಅಡಿ ಎತ್ತರದ ರಥ


ಮಹಾ ರಥೋತ್ಸವದ ಅಂಗವಾಗಿ ಸುಮಾರು 70 ಅಡಿ ಎತ್ತರದ ತೇರನ್ನ ಶೃಂಗರಿಸಲಾಗಿತ್ತು. ಮಠದ ಆವರಣದಿಂದ ಹೊರಟ ತೇರು ಮಹಾದ್ವಾರದ ವರೆಗೆ ತಲುಪಿ ಮತ್ತೆ ಮಠಕ್ಕೆ ಮರಳಿತು. ಇನ್ನು ಜಾತ್ರೆಗೆ ಬರುವ ಭಕ್ತರು ತಮ್ಮ ವಾಹನಗಳನ್ನು ನಿಲ್ಲಿಸಲು ಶ್ರೀನಿವಾಸ ನಗರದ ಉದ್ಯಾನದ ಬಳಿ, ಅಂಬೇಂಡ್ಕರ್ ಕ್ರಿಡಾಂಗಣ, ಆನಂದನಗರ ರಸ್ತೆಗೆ ಹೊಂದಿಕೊಂಡು ವ್ಯವಸ್ಥೆ ಮಾಡಲಾಗಿತ್ತು.


ಇದನ್ನೂ ಓದಿ:  Rohini Sindhuri: ಖಾಸಗಿ ಫೋಟೋಗಳು ಸಿಕ್ಕಿದ್ದು ಎಲ್ಲಿಂದ? ರೋಹಿಣಿ ಸಿಂಧೂರಿ ಸ್ಪಷ್ಟನೆ; ಮಾಧ್ಯಮಗಳಲ್ಲಿ ಬಳಸದಂತೆ ಮನವಿ


ಚಾಲಕರ ಸಂಘದಿಂದ ಉಚಿತ ಆಟೋ ವ್ಯವಸ್ಥೆ


ಉತ್ತರ ಕರ್ನಾಟಕದ ಜಾತ್ರಾ ಮಹೋತ್ಸವಗಳಲ್ಲಿ ಒಂದಾದ ಸಿದ್ಧಾರೂಢ ಮಠಕ್ಕೆ ಬರುವ ಭಕ್ತರಿಗೆ ಊಟ, ಉಪಹಾರದ ಉಚಿತ ವ್ಯವಸ್ಥೆಯನ್ನೂ ಅಚ್ಚುಕಟ್ಟಾಗಿ ಮಾಡಲಾಗಿತ್ತು. ಮತ್ತೊಂದೆಡೆ ಚೆನ್ನಮ್ಮ ವೃತ್ತ ಸೇರಿ ನಗರದ ವಿವಿಧೆಡೆಯಿಂದ ಆಟೋ ಚಾಲಕರ ಸಂಘದಿಂದ ದೇವಸ್ಥಾನದವರೆಗೂ ಉಚಿತ ಆಟೋ ವ್ಯವಸ್ಥೆ ಮಾಡಲಾಗಿತ್ತು.
ಶ್ರೀನಿವಾಸ ಕಲ್ಯಾಣೋತ್ಸವ


ಚಿಕ್ಕಬಳ್ಳಾಪುರದ ಬಾಗೇಪಲ್ಲಿಯಲ್ಲಿ ಅದ್ದೂರಿ ಶ್ರೀನಿವಾಸ ಕಲ್ಯಾಣೋತ್ಸವ ನೆರವೇರಿತು. ಬಿಜೆಪಿ ಮುಖಂಡ ಮುನಿರಾಜು ಆಯೋಜಿಸಿದ್ದ ಶ್ರೀನಿವಾಸ ಕಲ್ಯಾಣೋತ್ಸವ ಮಾಜಿ ಸಿಎಂ ಯಡಿಯೂರಪ್ಪ ಭಾಗಿಯಾಗಿದ್ರು.. ಕಲ್ಯಾಣ ಮಹೋತ್ಸವದಲ್ಲಿ ಸಾವಿರಾರು ಮಂದಿ‌ ಭಾಗಿ ದೇವರ ಕೃಪೆಗೆ ಪಾತ್ರರಾದ್ರು. ಇನ್ನು, ಯಡಿಯೂರಪ್ಪಗೆ ಸಚಿವ ಸುಧಾಕರ್, ಸಂಸದ ಪಿ ಸಿ ಮೋಹನ್ ಸಾಥ್ ನೀಡಿದ್ದಾರೆ.

Published by:Mahmadrafik K
First published: