news18-kannada Updated:December 20, 2020, 1:13 PM IST
ನಾಮಪತ್ರ ವಾಪಸ್ ಪಡೆದ ಅಭ್ಯರ್ಥಿಗಳು
ಕೊಡಗು(ಡಿ.20): ತಮ್ಮ ಸಮಸ್ಯೆಗಳನ್ನು ಬಗೆಹರಿಸದ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಬೇಸತ್ತ ಜನರು ಕೊನೆ ಅಸ್ತ್ರವಾಗಿ ಚುನಾವಣೆ ಬಹಿಷ್ಕಾರವನ್ನು ಬಳಕೆ ಮಾಡುತ್ತಾರೆ. ಆದರೆ ಇಲ್ಲಿ ಚುನಾವಣೆ ಬಹಿಷ್ಕಾರಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ವಾರ್ಡ್ ಒಂದರ ಐದು ಸ್ಪರ್ಧಿಗಳು ತಮ್ಮ ನಾಮಪತ್ರಗಳನ್ನು ಸಾಮೂಹಿಕವಾಗಿ ಹಿಂಪಡೆಯುವ ಮೂಲಕ ಚುನಾವಣೆಯೇ ಬೇಡ ಎಂದು ನಿರ್ಧರಿಸಿದ್ದಾರೆ. ಹೌದು ಇದು ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬಳದಾಳು ವಾರ್ಡಿನ ಜನರ ಆಕ್ರೋಶದ ಪರಿ.
ಕಳೆದ ಮೂರ್ನಾಲ್ಕು ವರ್ಷಗಳಿಂದ ಸಮಸ್ಯೆಗಳ ಬಗೆಹರಿಸುವಂತೆ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿ ಸಾಧ್ಯವಾಗದೆ ಬೇಸತ್ತ ಜನರು, ಚುನಾವಣೆಗೆ ನಿಲ್ಲುವವರಂತೆ ನಾಮಪತ್ರ ಸಲ್ಲಿಸಿ, ಬಳಿಕ ಎಲ್ಲರೂ ಸಾಮೂಹಿಕವಾಗಿ ನಾಮಪತ್ರ ಹಿಂಪಡೆಯುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಖಾಸಗಿ ಶಾಲೆಗಳ ವಿರುದ್ಧ ಪೋಷಕರ ಪ್ರತಿಭಟನೆ; ಸಮಸ್ಯೆ ಬಗೆಹರಿಸುವಂತೆ ಸರ್ಕಾರಕ್ಕೆ ಸಿದ್ದರಾಮಯ್ಯ ಒತ್ತಾಯ
ಕುಂಬಾಳದಾಳು ವಾರ್ಡ್ ಮಹಿಳಾ ಮೀಸಲು ಕ್ಷೇತ್ರವಾಗಿತ್ತು. ಹೀಗಾಗಿ ಕೆ.ಬಿ ಟೈನಿ, ಮಮತಾ, ಪಾರ್ವತಿ, ಪುಷ್ಪ ಮತ್ತು ಭಾಗ್ಯ ಈ ಐವರು ನಾಮಪತ್ರ ಸಲ್ಲಿಸಿದ್ದರು. ಬಳಿಕ ಚುನಾವಣೆ ಬಹಿಷ್ಕರಿಸಲು ಕುಂಬಳದಾಳು ಗ್ರಾಮದವರೆಲ್ಲಾ ನಿರ್ಧರಿಸಿ, ಐವರು ಸಾಮೂಹಿಕವಾಗಿ ನಾಮಪತ್ರ ವಾಪಸ್ ಪಡೆದಿದ್ದೇವೆ ಎನ್ನುತ್ತಾರೆ ನಾಮಪತ್ರ ವಾಪಸ್ ಪಡೆದ ಅಭ್ಯರ್ಥಿ ಮಮತಾ.
ಆ ಮೂಲಕ ವಾರ್ಡಿನಿಂದ ಚುನಾವಣೆಯನ್ನೇ ಬಹಿಷ್ಕಾರ ಮಾಡಿದ್ದಾರೆ. ಮತದಾನ ಬಹಿಷ್ಕಾರ ಮಾಡಿದರೆ, ಅಧಿಕಾರಿಗಳು ಬಂದು ಮನವೊಲಿಸುವ ಪ್ರಯತ್ನ ಮಾಡುತ್ತಾರೆ. ಆದರೆ ಚುನಾವಣೆಯನ್ನೇ ಬಹಿಷ್ಕರಿಸಿ ನಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದೇವೆ ಎನ್ನೋದು ಸ್ಥಳೀಯರ ಹೇಳಿಕೆ.
ಅಷ್ಟು ಇಂತಹ ಕಠಿಣ ನಿರ್ಧಾರ ತೆಗೆದುಕೊಳ್ಳಲು ಕಾರಣ ಏನು ಅಂತಾ ಕೇಳಿದರೆ, ಕಳೆದ ಐದು ವರ್ಷಗಳಿಂದ ಗ್ರಾಮದಲ್ಲಿ ಕುಡಿಯುವ ನೀರಿಲ್ಲದೆ ಪಡಬಾರದ ಕಷ್ಟ ಪಡುವಂತೆ ಆಗಿದೆ. ಅಷ್ಟೇ ಅಲ್ಲ, ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು ವಾಹನ ಸಂಚಾರ ದುಸ್ಥರವಾಗಿ ಹೋಗಿದೆ. ಇದೇ ಕಾರಣದಿಂದ ದಿನಕ್ಕೆ ಮೂರು ಬಾರಿ ಗ್ರಾಮಕ್ಕೆ ಬರುತ್ತಿದ್ದ ಸಾರಿಗೆ ಬಸ್ಸು ಸಂಚಾರ ನಿಲ್ಲಿಸಿ ಮೂರು ವರ್ಷಗಳಾಯಿತು.
ಎಲ್ಲಾ ಅಧಿಕಾರಿಗಳಿಗೂ, ತಮ್ಮ ಊರಿನ ಸಮಸ್ಯೆಗಳ ಬಗ್ಗೆ ಮನವಿ ಮಾಡಿ ಸಾಕಾಗಿ ಹೋಗಿದೆ. ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಿದ್ದೇವೆ, ಆದರೂ ನಮ್ಮ ಸಮಸ್ಯೆ ಬಗೆಹರಿದಿಲ್ಲ. ಈಗ ಸಾಮೂಹಿಕವಾಗಿ ನಾಮಪತ್ರ ವಾಪಸ್ ಪಡೆದಿದ್ದರೂ ಅಧಿಕಾರಿಗಳು ಬಂದು ನಮ್ಮ ಸಮಸ್ಯೆ ಆಲಿಸಿಲ್ಲ ಎನ್ನುವುದು ಸ್ಥಳೀಯರಾದ ಗಣಪತಿ ಅವರ ಆಕ್ರೋಶ.
Published by:
Latha CG
First published:
December 20, 2020, 1:13 PM IST