ನೆಲಮಂಗಲ (ಮಾರ್ಚ್ 19): ಗ್ರಾಮ ಪಂಚಾಯತಿ ಚುನಾವಣೆಯನ್ನು ಬಹಿಷ್ಕಾರ ಮಾಡಿರುವ ತ್ಯಾಮಗೊಂಡ್ಲು ಗ್ರಾಮಸ್ಥರ ಜೊತೆ ಚುನಾವಣೆ ನಡೆಸುವಂತೆ ಸರಕಾರದ ಪರವಾಗಿ ಸಭೆ ನಡೆಸಿ ಮನವೊಲಿಸಲು ಬಂದ ತಹಸೀಲ್ದಾರ್ ಮಂಜುನಾಥ್‌ರವರ ಪ್ರಯತ್ನ ವಿಫಲವಾಯಿತು.
ತ್ಯಾಮಗೊಂಡ್ಲು ಗ್ರಾಮದ ಅಭಿವೃದ್ಧಿಯ ದೃಷ್ಟಿಯಿಂದ ಮೊದಲ ಗ್ರಾಮ ಪಂಚಾಯತಿ ಚುನಾವಣೆಯನ್ನು ಬಹಿಷ್ಕಾರ ಮಾಡಿದ್ದರು ಮತ್ತೆ ಸರಕಾರ ಎರಡನೇ ಬಾರಿ ಚುನಾವಣೆಗೆ ಅದಿಸೂಚನೆ ಹೊರಡಿಸಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮತ್ತೆ ಚುನಾವಣೆಗೆ ಯಾರು ನಾಮಪತ್ರಗಳನ್ನು ಸಲ್ಲಿಸದೇ ಬಹಿಷ್ಕಾರ ಮಾಡುತ್ತಿದ್ದಾರೆ. ಈ ಹಂತದಲ್ಲಿ ತಹಶೀಲ್ದಾರ್ ಮಂಜುನಾಥ್‌ರವರು ಪಟ್ಟಣದ ನಾಡಕಛೇರಿಯಲ್ಲಿ ಗ್ರಾಮಸ್ಥರೊಂದಿಗೆ ನಡೆಸಿದ ಸಭೆಯಲ್ಲಿ ಗ್ರಾಮಸ್ಥರು ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ಯಾರು ಸ್ಪರ್ಧೆಸುವುದಿಲ್ಲ, ನಮ್ಮ ಗ್ರಾಮಕ್ಕೆ ಪಟ್ಟಣ ಪಂಚಾಯತಿಯನ್ನಾಗಿಸುವವರೆಗೂ ನಾವು ಹೋರಾಟ ನಡೆಸುತ್ತೇವೆ ಎಂದು ಅವರ ಪಯತ್ನಗಳನ್ನು ತಳ್ಳಿಹಾಕಿದರು.
ತಹಶೀಲ್ದಾರ್ ಮಂಜುನಾಥ್ ಮಾತನಾಡಿ ಈಗಾಗಲೇ ಮೊದಲ ಹಂತದಲ್ಲಿ ಚುನಾವಣೆ ಬಹಿಷ್ಕಾರ ಮಾಡಿದ್ದೀರಿ. ಗ್ರಾಮದಲ್ಲಿನ ಸೌಲಭ್ಯಗಳ ಕೊರತೆಗಳನ್ನು ನೀಗಿಸಲು ಚುನಾಯಿತ ಜನಪ್ರತಿನಿದಿಗಳ ಪಾತ್ರ ಬಹುಮುಖ್ಯವಾಗುತ್ತದೆ ಹಾಗೂ ಮಾನ್ಯ ಜಿಲ್ಲಾದಿಕಾರಿಗಳು ಮಾರ್ಚ್ 2 ರಂದು ಪೌರಾಡಳಿತ ನಿರ್ದೇಶಕರಿಗೆ ಗ್ರಾ.ಪಂ.ನಿಂದ ಪಟ್ಟಣ ಪಂಚಾಯತಿಯನ್ನಾಗಿಸುವ ವಿಷಯ ಕುರಿತು ಪತ್ರ ಬರೆದಿದ್ದಾರೆ ಮುಂದಿನ ದಿನಗಳಲ್ಲಿ ಪಟ್ಟಣ ಪಂಚಾಯತಿಯನ್ನಾಗಿ ಮಾಡುತ್ತಾರೆ. ಈ ಬಾರಿ ಚುನಾವಣೆ ನಡೆಸಲು ಮನವಿ ಮಾಡಿದರು ಹಾಗೂ ಈ ಸಭೆಯಲ್ಲಿ ಚರ್ಚೆಯಾದ ಎಲ್ಲಾ ವಿಚಾರಗಳನ್ನು ಜಿಲ್ಲಾದಿಕಾರಿಗಳ ಗಮನಕ್ಕೆ ತರುತ್ತೇನೆ ಎಂದರು.
ಎರಡನೇ ಬಾರಿ ಘೋಷಣೆಯಾಗಿರುವ ಚುನಾವಣೆಗೆ ಸೋಮವಾರದಿಂದ ನಾಮಪತ್ರಗಳನ್ನು ಸಲ್ಲಿಸಲು ಅವಕಾಶವನ್ನು ನೀಡಲಾಗಿದ್ದು, ಮೂರು ದಿನಗಳು ಕಳೆದರೂ ತ್ಯಾಮಗೊಂಡ್ಲು ಪಟ್ಟಣದಲ್ಲಿ ಒಂದೇ ಒಂದೆ ನಾಮಪತ್ರವು ಸಲ್ಲಿಕೆಯಾಗಿಲ್ಲ. ಗ್ರಾಮದ ಅಭಿವೃದ್ಧಿಗೆ ಗ್ರಾಮದ ಎಲ್ಲಾ ಪಕ್ಷದ ಮುಖಂಡರು, ಗ್ರಾಮಸ್ಥರು ಒಂದಾಗಿ ಪಟ್ಟಣ ಪಂಚಾಯತಿ ಮಾಡುವವರೆಗೂ ನಾವು ಚುನಾವಣೆಯ ಪ್ರಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ ಎಂದು ನಿರ್ಧರಿಸಿದ್ದಾರೆ.
ನಮ್ಮ ಗ್ರಾಮಗಳನ್ನು ನಮಗೆ ಬಿಟ್ಟುಕೊಡಿ :
ತ್ಯಾಮಗೊಂಡ್ಲು ಗ್ರಾಮ ಪಂಚಾಯತಿಯ ಒಂದುವರೆ ಕಿಲೋಮೀಟರ್ ವ್ಯಾಪ್ತಿಯಲ್ಲಿದ್ದ ಹಳ್ಳಿಗಳನ್ನು ಗ್ರಾಮ ಪಂಚಾಯತಿ ಪುನರ್ ವಿಂಗಡಣೆಯ ಸಂದರ್ಭದಲ್ಲಿ ಅಕ್ಕಪಕ್ಕದ ಗ್ರಾಮ ಪಂಚಾಯತಿಗೆ ಸೇರಿಸಿದ್ದಾರೆ ಅ ಗ್ರಾಮಗಳಿದ್ದರೆ ನಮ್ಮ ಗ್ರಾಮ ಪಂಚಾಯತಿಗೆ ಆದಾಯ ಹೆಚ್ಚಾಗುತ್ತಿತ್ತು. ಜನರಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ನೀಡಲು ಸಾಧ್ಯವಾಗುತ್ತದೆ ಅದ್ದರಿಂದ ಪಟ್ಟಣ ಪಂಚಾಯತಿನ್ನಾಗಿ ಮಾಡುವ ಮೊದಲು ನಮ್ಮ ವ್ಯಾಪ್ತಿಯಲ್ಲಿದ್ದ ಗ್ರಾಮಗಳನ್ನು ನಮ್ಮ ವ್ಯಾಪ್ತಿಗೆ ಸೇರಿಸಿ ಎಂದು ಮಾನ್ಯ ಜಿಲ್ಲಾದಿಕಾರಿಗಳಿಗೆ ಮನವಿ ಮಾಡಿದರು.
ತ್ಯಾಮಗೊಂಡ್ಲು ಗ್ರಾಮ ಪಂಚಾಯತಿಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ ಪ್ರತಿ ತಿಂಗಳು ಸಂಬಳ ನೀಡಲು ಹಣದ ಕೊರತೆ ಕಂಡು ಬರುತ್ತದೆ. ಕೆಲವು ಬಾರಿ ಮರ‍್ನಾಲ್ಕು ತಿಂಗಳಿಗೆ ಒಮ್ಮೆ ಸಂಬಳ ನೀಡಿರುವ ಉದಾಹರಣೆಯೂ ಇದೆ, ಇತಂಹ ಸ್ಥಿತಿಯಲ್ಲಿರುವ ಗ್ರಾಮ ಪಂಚಾಯತಿಯಿಂದ ಗ್ರಾಮದ ಜನರಿಗೆ ಅಗತ್ಯ ಸೌಲಭ್ಯಗಳನ್ನು ನೀಡುವುದು ಹೇಗೆ ಎಂದು ಗ್ರಾಮ ಮುಖಂಡರಾದ ಮಹಿಮಣ್ಣ ಪ್ರಶ್ನಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ