• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Swachh Bharat: ಗ್ರಾಮ ಸ್ವಚ್ಛತೆಗೆ ಪಂಚಾಯತ್ ಉಪಾಧ್ಯಕ್ಷೆ ಪಣ, ಕಸ ವಿಲೇವಾರಿ ವಾಹನಕ್ಕೆ ಈಗ ಇವರೇ ಚಾಲಕಿ!

Swachh Bharat: ಗ್ರಾಮ ಸ್ವಚ್ಛತೆಗೆ ಪಂಚಾಯತ್ ಉಪಾಧ್ಯಕ್ಷೆ ಪಣ, ಕಸ ವಿಲೇವಾರಿ ವಾಹನಕ್ಕೆ ಈಗ ಇವರೇ ಚಾಲಕಿ!

ಕಸದ ವಾಹನ ಚಾಲಕಿಯಾದ ಗ್ರಾ.ಪಂ. ಉಪಾಧ್ಯಕ್ಷೆ

ಕಸದ ವಾಹನ ಚಾಲಕಿಯಾದ ಗ್ರಾ.ಪಂ. ಉಪಾಧ್ಯಕ್ಷೆ

ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ನಫೀಝಾ ತಸ್ಲಿ ಗ್ರಾಮದ ಕಸಗಳಿಗೆ ಮುಕ್ತಿ ನೀಡಲು ಶತ ಪ್ರಯತ್ನ ಮಾಡುತ್ತಿದ್ದಾರೆ. ಖಾಯಂ ವಾಹನ ಚಾಲಕರು ಬರುವ ತನಕ ತಾವೇ ವಾಹನ ಚಾಲಕಿಯಾಗುವ ನಿರ್ಧಾರವನ್ನು ಕೈಗೊಂಡಿದ್ದಾರೆ. ಇವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

  • Share this:

ಬಂಟ್ವಾಳ, ದಕ್ಷಿಣ ಕನ್ನಡ: ಗ್ರಾಮದ (Village) ಕಸ ವಿಲೇವಾರಿಗೆ (garbage disposal) ಗ್ರಾಮ ಪಂಚಾಯತ್ (Gram Panchayat) ಉಪಾಧ್ಯಕ್ಷೆ (Vice President) ಕಸ ವಿಲೇವಾರಿ ವಾಹನದ (Vehicle) ಚಾಲಕಿಯಾಗುವ (Driver) ಮೂಲಕ ಗಮನಸೆಳೆದಿದ್ದಾರೆ. ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬಂಟ್ವಾಳ (Bantwal) ತಾಲೂಕಿನ ಪೆರುವಾಯಿ ಗ್ರಾಮ ಪಂಚಾಯತ್‌ ಉಪಾಧ್ಯಕ್ಷೆ ನಫೀಝಾ ತಸ್ಲಿ ಈ ರೀತಿ ಚಾಲಕಿಯಾಗಿ ಸೇವೆ ಸಲ್ಲಿಸುತ್ತಿರುವ ಮಹಿಳೆಯಾಗಿದ್ದು, ಈಕೆಯ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಮುಸ್ಲಿಂ ಸಮುದಾಯದಿಂದ (Muslim Community) ಬಂದ ಈ ಮಹಿಳೆ ಚಾಲಕಿಯಾಗಿ ದುಡಿಯುತ್ತಿರುವುದು ಸಮುದಾಯದ ಕೆಲವರ ಕೆಂಗಣ್ಣಿಗೆ ಪಾತ್ರವಾದರೂ, ಮನೆ ಮಂದಿಯ (Family) ಸಂಪೂರ್ಣ ಸಹಕಾರದಿಂದಾಗಿ (Co-Operation) ನಫೀಝಾ ತನ್ನ ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.


ನಿಂತಲ್ಲೇ ನಿಂತಿತ್ತು ಕಸ ವಿಲೆವಾರಿ ವಾಹನ


ಪ್ರತೀ ಗ್ರಾಮಪಂಚಾಯತ್ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಕಸಗಳನ್ನು ವೈಜ್ಞಾನಿಕ ರೂಪದಲ್ಲಿ ವಿಲೇವಾರಿ ಮಾಡಬೇಕೆನ್ನುವ ಆದೇಶ ಸರಕಾರದಿಂದ ಬಂದಿದೆ. ಈ ನಿಟ್ಟಿನಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮಪಂಚಾಯತ್ ಗೂ ಕಸ ವಿಲೇವಾರಿಗಾಗಿ ಒಂದು ವಾಹನವನ್ನು ಖರೀದಿಸಲಾಗಿದೆ. ಎಲ್ಲಾ ಪಂಚಾಯತ್ ನಂತೆ ಈ ಗ್ರಾಮಪಂಚಾಯತ್ ಗೆ ಕೂಡಾ ಕಸ ವಿವೇವಾರಿಗಾಗಿ ವಿಲೇವಾರಿ ಘಟಕ ಮತ್ತು ವಾಹನದ ವ್ಯವಸ್ಥೆಯನ್ನೂ ಮಾಡಲಾಗಿದೆ. ಆದರೆ ವಾಹನ ಬಂದು ಆರು ತಿಂಗಳು ಕಳೆದರೂ, ವಾಹನಕ್ಕೆ ಸರಿಯಾದ ಚಾಲಕರು ಸಿಗದ ಹಿನ್ನಲೆಯಲ್ಲಿ ಬಂದ ವಾಹನ ಘಟಕದಲ್ಲೇ ಪಾರ್ಕ್ ಮಾಡುವಂತಹ ಸ್ಥಿತಿ ಬಂದೊದಗಿತ್ತು.


ತಾನೇ ಕಸದ ವಾಹನದ ಚಾಲಕಿಯಾದ ಮಹಿಳೆ


ಈ ಸಂದರ್ಭದಲ್ಲಿ ಪಂಚಾಯತ್ ನ ಉಪಾಧ್ಯಕ್ಷೆ ನಫೀಝಾ ತಸ್ಲಿ ಗ್ರಾಮಪಂಚಾಯತ್ ನ ಕಸಗಳಿಗೆ ವ್ಯವಸ್ಥೆ ಮಾಡಬೇಕೆಂಬ ಇಂಗಿತ ವ್ಯಕ್ತಪಡಿಸಿ, ಖಾಯಂ ವಾಹನ ಚಾಲಕಿ ಬರುವ ತನಕ ತಾನೇ ವಾಹನ ಚಾಲಕಿಯಾಗುವ ನಿರ್ಧಾರವನ್ನು ಕೈಗೊಂಡಿದ್ದಾರೆ. ನಫೀಝಾ ನಿರ್ಧಾರಕ್ಕೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಪಂಚಾಯತ್ ಅಧ್ಯಕ್ಷರೂ ಬೆಂಬಲ ಸೂಚಿಸಿದ ಹಿನ್ನಲೆಯಲ್ಲಿ ನಫೀಝಾ ಕಸ ವಿವೇವಾರಿ ವಾಹನದಲ್ಲಿ ಕಸ ಸಂಗ್ರಹಕ್ಕೆ ಶುರು ಮಾಡಿದ್ದಾರೆ.


ಇದನ್ನೂ ಓದಿ: Hassan: ತಂದೆಯ ಖಾಕಿ ಡ್ರೆಸ್ ನೋಡಿ ಸೇನೆ ಸೇರುವ ಕನಸು, ಬಿಎಸ್‌ಎಫ್‌ ಸೇರಿದ ಬಳಿಕ ಇದೀಗ ನನಸು!


ಸ್ವಚ್ಛತೆ ಬಗ್ಗೆ ಗ್ರಾಮದ ಜನರಿಗೆ ಪಾಠ


ಸುಮಾರು 600 ಮನೆಗಳಿರುವ ಪೆರುವಾಯಿ ಗ್ರಾಮಪಂಚಾಯತ್ ನ ಪೇಟೆ ಪ್ರದೇಶಗಳಲ್ಲಿ ಇದೀಗ ಕಸವನ್ನು ಸಂಗ್ರಹಿಸುವ ಕಾರ್ಯ ಆರಂಭಗೊಂಡಿದೆ. ಪೇಟೆಯ ಎಲ್ಲಾ ಅಂಗಡಿಗಳ ಮುಂಭಾಗ ಕಸದ ವಾಹನಗಳನ್ನು ಕೊಂಡೊಯ್ಯುವ ನಫೀಝಾ ಗ್ರಾಮಸ್ಥರಲ್ಲಿ ಕಸವನ್ನು ಕಸ ವಿವೇವಾರಿ ವಾಹನಗಳಿಗೆ ನೀಡುವಂತೆಯೂ ಹುರಿದುಂಬಿಸುತ್ತಾರೆ.


ಕುಟುಂಬದವರ ಸಹಕಾರದೊಂದಿಗೆ ಮುಂದುವರೆದ ಕಾರ್ಯ


ಗ್ರಾಮವನ್ನು ಸ್ವಚ್ಛ ಗ್ರಾಮವನ್ನಾಗಿ ಮಾಡಬೇಕೆಂದು ಚಾಲಕಿಯಾಗಿರುವುದಾಗಿ ಹೇಳುವ ನಫೀಝಾರ ಈ ಕಾರ್ಯಕ್ಕೆ ಆಕೆಯ ಪತಿ ಸೇರಿದಂತೆ ಮನೆ ಮಂದಿಯೆಲ್ಲಾ ಪ್ರೋತ್ಸಾಹವನ್ನೂ ನೀಡಿದ್ದಾರೆ. ಆದರೆ ಮುಸ್ಲಿಂ ಸಮುದಾಯಕ್ಕೆ ಸೇರಿದ ನಫೀಝಾರ ಈ ನಡೆ ಸಮುದಾಯದ ಕೆಲವು ವ್ಯಕ್ತಿಗಳ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಆದರೆ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದ ನಫೀಝಾ ತನ್ನ ಕಾರ್ಯವನ್ನು ಯಾವುದೇ ಫಲಾಪೇಕ್ಷೆಯಿಲ್ಲದೆ ಮಾಡುತ್ತಿದ್ದಾರೆ.


ಸ್ವಚ್ಛತೆಯ ಬಗ್ಗೆ ತರಬೇತಿ ಪಡೆದಿದ್ದ ನಫೀಝಾ


ಸ್ವಚ್ಛತೆಯ ವಿಚಾರದಲ್ಲಿ ನಫೀಝಾ ಗ್ರಾಮದಲ್ಲಿ ಅತ್ಯಂತ ಜವಾಬ್ದಾರಿಯುತವಾಗಿದ್ದ ಮಹಿಳೆ ಎನ್ನುವುದು ಈ ಹಿಂದೆಯೂ ಬೆಳಕಿಗೆ ಬಂದಿದೆ. ಪೆರುವಾಜೆ ಗ್ರಾಮಪಂಚಾಯತ್ ಮಂಗಳೂರಿನ ರಾಮಕೃಷ್ಣ ಮಿಷನ್ ಜೊತೆ ಸೇರಿಕೊಂಡು ಸ್ವಚ್ಛತಾ ಕಾರ್ಯಕ್ರಮಗಳನ್ನು ಮಾಡುವ ಸಂದರ್ಭದಲ್ಲಿ ನಫೀಝಾ ಸ್ವಚ್ಛತಾ ಕಾರ್ಯಕರ್ತೆಯಾಗಿ ದುಡಿದಿದ್ದಾರೆ.


ನಫೀಝಾ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ


ಇದೀಗ ಗ್ರಾಮಪಂಚಾಯತ್ ಚುನಾವಣೆಯಲ್ಲಿ ನಿಂತು ಗೆದ್ದಿರುವ ನಫೀಝಾ, ಮತ್ತೆ ತನ್ನ ಸ್ವಚ್ಛತೆಯ ಬದ್ಧತೆಯನ್ನು ಕಸ ವಿಲೇವಾರಿ ವಾಹನದ ಚಾಲಕಿಯಾಗುವ ಮೂಲಕ ತೋರಿಸಿಕೊಟ್ಟಿದ್ದಾರೆ. ನಫೀಝಾರ ಈ ಸೇವೆಗೆ ಗ್ರಾಮದ ಎಲ್ಲಾ ಜನ ಮೆಚ್ಚುಗೆಯನ್ನೂ ವ್ಯಕ್ತಪಡಿಸುತ್ತಿದ್ದಾರೆ ಎನ್ನುತ್ತಾರೆ ಪೆರುವಾಯಿ ಗ್ರಾಮಪಂಚಾಯತ್ ಅಧ್ಯಕ್ಷ ಬಾಲಕೃಷ್ಣ  ಪೂಜಾರಿ.


ಇದನ್ನೂ ಓದಿ: 10 Crore Hospital Bill: ಹೊಟ್ಟೆ ನೋವು ಅಂತ ಬಂದವಳಿಗೆ 10 ಕೋಟಿ ಬಿಲ್! ಆದರೂ ಬದುಕಲಿಲ್ಲ ಮಹಿಳೆ, ಆಸ್ಪತ್ರೆ ವಿರುದ್ಧ ಪತಿ ಹೋರಾಟ


ಪಿಯುಸಿ ತನಕ ವಿದ್ಯಾಭ್ಯಾಸ ಹೊಂದಿರುವ ನಫೀಝಾ ಕಸ ವಿಲೇವಾರಿ ವಾಹನಕ್ಕೆ ಖಾಯಂ ಚಾಲಕಿ ಬರುವ ತನಕ ತನ್ನ ಸೇವೆಯನ್ನು ಮುಂದುವರಿಸಲು ನಿರ್ಧರಿಸಿದ್ದಾರೆ. ವಾರಕ್ಕೆ ಎರಡು ದಿನ ಕಸದ ವಾಹನದೊಂದಿಗೆ ಪೇಟೆ ಪ್ರದಕ್ಷಿಣೆ ಹಾಕುವ ನಫೀಝಾರಿಗೆ ಗ್ರಾಮಸ್ಥರೂ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ.

Published by:Annappa Achari
First published: