ಗ್ರಾಮ ಪಂಚಾಯಿತಿಗಳಿಗೆ ವರ್ಷಕ್ಕೆ 1.5 ಕೋಟಿ ರೂ ನೇರ ಅನುದಾನ : ಡಿಸಿಎಂ ಅಶ್ವತ್ಹನಾರಾಯಣ

ಗರೀಬಿ ಹಠಾವೋ ಸೇರಿದಂತೆ ಯಾವುದೇ ಘೋಷಣೆಗಳ ಮೂಲಕ ಗ್ರಾಮಗಳಲ್ಲಿ ಬಡತನ ನಿರ್ಮೂಲನೆ ಆಗಲಿಲ್ಲ. ಎಪ್ಪತ್ತು ವರ್ಷಗಳಾದರೂ ಬಡತನ ಜೀವಂತವಾಗಿದೆ. ಮಾತಿನ ಬದಲಿಗೆ ರಚನಾತ್ಮಕವಾಗಿ ಕೆಲಸ ಮಾಡಿದರೆ ಗ್ರಾಮಗಳು ಉದ್ಧಾರವಾಗುತ್ತವೆ

ಉಪಮುಖ್ಯಮಂತ್ರಿ ಅಶ್ವತ್ಹನಾರಾಯಣ

ಉಪಮುಖ್ಯಮಂತ್ರಿ ಅಶ್ವತ್ಹನಾರಾಯಣ

  • Share this:
ರಾಮನಗರ (ಡಿಸೆಂಬರ್​. 01): ಆಡಳಿತ ವಿಕೇಂದ್ರೀಕರಣವನ್ನು ಮತ್ತಷ್ಟು ಉತ್ತಮವಾಗಿ ಅನುಷ್ಠಾನಗೊಳಿಸಿ ಪ್ರತಿ ಗ್ರಾಮ ಪಂಚಾಯಿತಿಗೂ ವರ್ಷಕ್ಕೆ 1.5 ರೂ. ಅನುದಾನವನ್ನು ನೇರವಾಗಿ ಬಿಡುಗಡೆ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರಕಟಿಸಿದರು. ರಾಮನಗರದಲ್ಲಿ ಮಾತನಾಡಿದ ಅವರು, 15ನೇ ಹಣಕಾಸು ಆಯೋಗದ ವರದಿಯಲ್ಲಿ ನೇರವಾಗಿ ಗ್ರಾಮ ಪಂಚಾಯಿತಿಗಳಿಗೆ ನೇರವಾಗಿ ಹೆಚ್ಚು ಅನುದಾನ ನೀಡುವ ಅಂಶಗಳಿವೆ. ಅದರಂತೆ, ಗ್ರಾಮೀಣಾಭಿವೃದ್ಧಿಗೆ ಬೇಕಾದ ಎಲ್ಲ ಹಣಕಾಸು ಒದಗಿಸಲಾಗುವುದು. ಜತೆಗೆ, ಆಯಾ ಗ್ರಾಮಗಳ ನರೇಗಾ ಯೋಜನೆಗಳ ಅನುಷ್ಠಾನದ ಹೊಣೆಯನ್ನು ಜಿಲ್ಲಾ ಪಂಚಾಯಿತಿಯಿಂದ ಗ್ರಾಮ ಪಂಚಾಯಿತಿಗಳಿಗೆ ವಹಿಸಲಾಗುವುದು ಎಂದರು. ನಮ್ಮ ಪಕ್ಷದ ಗ್ರಾಮ ಸ್ವರಾಜ್ಯ ಪರಿಕಲ್ಪನೆಯಂತೆ ಆದರ್ಶ ಗ್ರಾಮಗಳನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಆರೋಗ್ಯ, ಮೂಲಸೌಕರ್ಯ, ಶಿಕ್ಷಣ, ರಸ್ತೆ, ಕೆರೆಕುಂಟೆ ಸೇರಿದಂತೆ ಎಲ್ಲ ಅಗತ್ಯ ಸೌಕರ್ಯಗಳನ್ನು ಒದಗಿಸಲಾಗುವುದು. ಕೇವಲ ಆರು ವರ್ಷಗಳ ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯ ವ್ಯವಸ್ಥೆ ಶೇ.30ರಷ್ಟು ಮಾತ್ರ ಇತ್ತು. ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಶೌಚಾಲಯ ಕಟ್ಟುವುದೂ ಅಸಾಧ್ಯ ಎನ್ನುವಂಥ ಸ್ಥಿತಿ ಇತ್ತು ಎಂದರು.

ಪ್ರಧಾನಿ ಮೋದಿ ಅವರ ಸ್ವಚ್ಛ ಭಾರತ್‌ ಅಭಿಯಾನದಿಂದ ಇವತ್ತು ಗ್ರಾಮದ ಪ್ರತಿ ಮನೆಯಲ್ಲೂ ಶೌಚಾಲಯಗಳನ್ನು ಕಾಣಬಹುದು. ಸ್ವಚ್ಛತೆ ಎನ್ನುವುದು ಜನಜೀವನದ ಅವಿಭಾಜ್ಯ ಅಂಗವಾಗಿದೆ ಎಂಬುದನ್ನು ಎಲ್ಲೆಲ್ಲೂ ಕಾಣಬಹುದು ಎಂದು ಅವರು ತಿಳಿಸಿದರು.

ಘೋಷಣೆಗಳಿಂದ ಉಪಯೋಗವಿಲ್ಲ:

ಗರೀಬಿ ಹಠಾವೋ ಸೇರಿದಂತೆ ಯಾವುದೇ ಘೋಷಣೆಗಳ ಮೂಲಕ ಗ್ರಾಮಗಳಲ್ಲಿ ಬಡತನ ನಿರ್ಮೂಲನೆ ಆಗಲಿಲ್ಲ. ಎಪ್ಪತ್ತು ವರ್ಷಗಳಾದರೂ ಬಡತನ ಜೀವಂತವಾಗಿದೆ. ಮಾತಿನ ಬದಲಿಗೆ ರಚನಾತ್ಮಕವಾಗಿ ಕೆಲಸ ಮಾಡಿದರೆ ಗ್ರಾಮಗಳು ಉದ್ಧಾರವಾಗುತ್ತವೆ. ಕಾಂಗ್ರೆಸ್‌ ಬರೀ ಘೋಷಣೆಗಳನ್ನು ಮಾಡುತ್ತಾ ಬಂದಿತ್ತು. ಅವುಗಳಲ್ಲಿ ಗರೀಬಿ ಹಠಾವೋ ಎನ್ನುವುದು ಕೂಡ ಒಂದು. ಇಂಥ ನೂರಾರೂ, ಸಾವಿರಾರು ಘೋಷಣೆಗಳನ್ನು ಕಾಂಗ್ರೆಸ್‌ ಮಾಡಿದೆಯಾದರೂ, ಸಿಕ್ಕಿರುವ ಫಲಿತಾಂಶ ಮಾತ್ರ ಶೂನ್ಯ ಎಂದರು.

ಬಿಜೆಪಿ ಹಾಗೆ ಮಾಡುತ್ತಿಲ್ಲ. ಸಮಸ್ಯೆಯನ್ನು ಶಾಶ್ವತವಾಗಿ ಪರಿಹಾರ ಮಾಡಲು ಯತ್ನಿಸುತ್ತಿದೆ. ಘೋಷಣೆ ಬದಲು ಕೆಲಸ ಮಾಡುತ್ತಿದೆ. ಪರಿಣಾಮವಾಗಿ ಭಾರತ ಬದಲಾಗುತ್ತಿದೆ ಎಂದು ಡಿಸಿಎಂ ಹೇಳಿದರು.

ಶ್ರೀರಂಗ ಯೋಜನೆಗೆ ಇನ್ನಷ್ಟು ಹಣ:

ಬಿಜೆಪಿ ಸರಕಾರ ಬಂದ ಮೇಲೆ ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ಶರವೇಗದಲ್ಲಿ ನಡೆಯುತ್ತಿವೆ. ಶ್ರೀರಂಗ ಏತ ನೀರಾವರಿ ಯೋಜನೆಗೆ ಇನ್ನೂ ಹೆಚ್ಚುವರಿಯಾಗಿ 175 ಕೋಟಿ ರೂ. ಅನುದಾನ ನೀಡಲಾಗುತ್ತಿದೆ. ಜಿಲ್ಲೆಗೆ ಮಾವು ಸಂಸ್ಕರಣಾ ಘಟಕ, ಜಾಗತಿಕ ಗುಣಮಟ್ಟದ ರೇಷ್ಮೆ ಮಾರುಕಟ್ಟೆ ಬರುತ್ತಿರುವುದರ ಜತೆಗೆ, ಆರೋಗ್ಯ-ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಜಿಲ್ಲೆ ಆಮೂಲಾಗ್ರವಾಗಿ ಬೆಳವಣಿಗೆ ಆಗುತ್ತಿದೆ. ಅಧಿಕಾರ ಸಿಕ್ಕಿದಾಗ ಕೆಲಸ ಮಾಡದ ಪ್ರತಿಪಕ್ಷ ನಾಯಕರು, ಈಗ ವಿನಾಕಾರಣ ಹಲುಬುತ್ತಿದ್ದಾರೆಂದು ಅಶ್ವತ್ಥನಾರಾಯಣ ದೂರಿದರು.

ಇದನ್ನೂ ಓದಿಗಡಿ ವಿಚಾರದಲ್ಲಿ ಮಹಾಜನ್ ವರದಿಯೇ ಅಂತಿಮ - ಭಾಷಾ ಸಾಮರಸ್ಯಕ್ಕೆ ಧಕ್ಕೆ ಸಲ್ಲ: ಶ್ಯಾಮಸುಂದರ ಗಾಯಕವಾಡ

ಎಲ್ಲ ಜಾತಿ- ಸಮುದಾಯಗಳನ್ನು ಒಟ್ಟಿಗೆ ಕರೆದುಕೊಂಡು ಹೋಗುವಂಥ ಕೆಲಸವನ್ನು ಯಡಿಯೂರಪ್ಪ ನೇತೃತ್ವದ ಸರಕಾರ ಮಾಡುತ್ತಿದೆ. ಅದಕ್ಕೆ ಪೂರಕವಾಗಿ ವೀರಶೈವ ಲಿಂಗಾಯಿತ ಅಭಿವೃದ್ಧಿ ನಿಗಮವನ್ನು ಸ್ಥಾಪನೆ ಮಾಡಲಾಗಿದೆ. ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪನೆಗೂ ಒತ್ತಾಯವಿದೆ. ಆ ಬಗ್ಗೆಯೂ ಸರಕಾರ ಗಮನ ಹರಿಸಲಿದೆ. ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸರಕಾರ ಬದ್ಧವಾಗಿದೆ ಎಂದು ತಿಳಿಸಿದರು.

ವೀರಶೈವ ಲಿಂಗಾಯಿತರನ್ನು  2ಎ ಗೆ ಸೇರಿಸಲು ಸರಕಾರ ಮುಂದಾಗಿದೆ. ಒಕ್ಕಲಿರನ್ನೂ ಸೇರಿಸಬೇಕು ಎಂದು ಎಂದು ನೀವು ಬೇಡಿಕೆ ಇಡುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಯಾವುದೇ ಸಮುದಾಯವನ್ನು ಯಾವುದೇ ಪರಿಶ್ಚೇಧಕ್ಕೆ ಸೇರಿಸಬೇಕಾದರೆ, ಅದರ ಹಿಂದೆ ವೈಜ್ಞಾನಿಕ ಆಧ್ಯಯನ ವರದಿ ಮಾಡಿಸಿ ಅಧ್ಯಯನ ನಡೆಸಬೇಕಾಗುತ್ತದೆ ಎಂದರು.
Published by:G Hareeshkumar
First published: