ಸದ್ಯದಲ್ಲೇ ಲವ್ ಜಿಹಾದ್, ಗೋಹತ್ಯೆ ನಿಷೇಧ ಕಾನೂನು? ಸರ್ಕಾರದ ವಲಯದಲ್ಲಿ ಗಂಭೀರ ಚರ್ಚೆ

ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ಬದ್ಧವಾಗಿದೆ. ಈಗಾಗಲೇ ಸಮಿತಿ ರಚಿಸಿದೆ. ಚಳಿಗಾಲದ ಅಧಿವೇಶನದಲ್ಲಿ ಮಸೂದೆ ರಚಿಸಿ ಮಂಡನೆ ಮಾಡಲಿದೆ ಎಂದು ಬಿಜೆಪಿಯ ರಾಜ್ಯ ಘಟಕ ಟ್ವೀಟ್ ಮಾಡಿದೆ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಕೂಡ ಇದನ್ನ ಪುನರುಚ್ಚರಿಸಿದ್ದಾರೆ.

ಸಿ.ಟಿ.ರವಿ

ಸಿ.ಟಿ.ರವಿ

  • Share this:
ಬೆಂಗಳೂರು(ನ. 20): ರಾಜ್ಯದಲ್ಲಿ ಲವ್ ಜಿಹಾದ್ ಮತ್ತು ಗೋಹತ್ಯೆ ನಿಷೇಧವಾಗುವುದು ಬಹುತೇಕ ಖಚಿತ ಎಂಬಂತಿದೆ. ಸದ್ಯದಲ್ಲೇ ಕಾನೂನುಗಳನ್ನ ಜಾರಿಗೆ ತರುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸರ್ಕಾರದ ವಲಯದಲ್ಲಿ ಗಂಭೀರ ಚರ್ಚೆಗಳು ನಡೆಯುತ್ತಿವೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಈ ಕಾನೂನು ಜಾರಿ ಸಂಬಂಧ ರಾಜ್ಯ ಸರ್ಕಾರಕ್ಕೆ ಸಲಹೆ ಮತ್ತು ಮನವಿ ಮಾಡಿದ್ದಾರೆಂದು ಬಿಜೆಪಿಯ ರಾಜ್ಯಘಟಕದಿಂದ ಟ್ವೀಟ್ ಮಾಡಿ ತಿಳಿಸಲಾಗಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ರಾಜ್ಯ ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಅವರ ಜೊತೆ ಗೋಹತ್ಯೆ ನಿಷೇಧ ಕಾನೂನಿನ ಬಗ್ಗೆ ಚರ್ಚೆ ಮಾಡಿರುವುದು ತಿಳಿದುಬಂದಿದೆ. ಗೋ ಹತ್ಯೆ ನಿಷೇಧ ಕಾನೂನು ಜಾರಿಗೊಳಿಸಲು ಬಿಜೆಪಿ ಸರ್ಕಾರ ಈಗಾಗಲೇ ಸಮಿತಿ ರಚಿಸಿದೆ. ಮುಂದಿನ ಅಧಿವೇಶನದಲ್ಲಿ ಕಾಯ್ದೆ ಜಾರಿಗೊಳಿಸಲು ಸರ್ಕಾರ ಮಸೂದೆ ಮಂಡಿಲಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಈ ವಿಚಾರವನ್ನು ಸಿ.ಟಿ. ರವಿ ಇಂದು ಮಾಧ್ಯಮಗಳ ಮುಂದೆಯೂ ಸ್ಪಷ್ಟಪಡಿಸಿದ್ದಾರೆ. ಲವ್ ಜಿಹಾದ್ ಮತ್ತು ಗೋಹತ್ಯೆ ನಿಷೇಧಿಸುವ ಕಾಯ್ದೆಗಳ ಜಾರಿಗೆ ಬಿಜೆಪಿಯ ಕೋರ್ ಕಮಿಟಿ ಸಹಮತ ವ್ಯಕ್ತಪಡಿಸಿದೆ. ಗೋ ಹತ್ಯೆ ನಿಷೇಧ ಕಾನೂನುನನ್ನು ಮತ್ತೆ ತರಬೇಕೆಂಬ ಕೂಗು ಜೋರಾಗಿದೆ. ಕಠಿಣ ಕಾನೂನು ತರುವ ಚಿಂತನೆ ಇದೆ. ನಾನು ಪಶು ಸಂಗೋಪನಾ ಸಚಿವರ ಜೊತೆ ಚರ್ಚೆ ಮಾಡಿದ್ದೇನೆ. ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಈ ಎರಡು ಕಾಯ್ದೆಗಳನ್ನ ತರಬೇಕು ಎಂದು ಸಿ.ಟಿ. ರವಿ ಇಂದು ಹೇಳಿದ್ದಾರೆ.

ಕಳೆದ ಸರ್ಕಾರದ ಅವಧಿಯಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬರಬೇಕಿತ್ತು. ಆದರೆ, ರಾಜಕೀಯ ಕಾರಣಕ್ಕೆ ಅದು ಆಗಿರಲಿಲ್ಲ. ಅಕ್ಬರ್ ಆಳ್ವಿಕೆಯಲ್ಲಿ ಗೋಹತ್ಯೆ ನಿಷೇಧವಾಗಿದ್ದರ ಬಗ್ಗೆ ಇತಿಹಾಸದಲ್ಲಿ ಉಲ್ಲೇಖವಾಗಿರುವುದನ್ನು ನೋಡಿದ್ದೇವೆ. ಈಗಿರುವ ಗೋ ರಕ್ಷಣೆ ಕಾಯ್ದೆ ಕಠಿಣವಾಗಿಲ್ಲ. ಕೇವಲ 59 ಸಾವಿರ ರೂ ದಂಡ ಹಾಕಿ ಬಿಟ್ಟುಕಳುಹಿಸಲಾಗುತ್ತೆ. ಅದರಿಂದ ಗೋ ಹತ್ಯೆ ನಿಷೇಧ ಆಗುವುದಿಲ್ಲ. ಉತ್ತರ ಪ್ರದೇಶ ಸೇರಿ ಇತರೆ ರಾಜ್ಯಗಳಲ್ಲಿನ ಕಾಯ್ದೆಗಳನ್ನ ನೋಡಿಕೊಂಡು ಕಠಿಣ ಕಾನೂನು ರೂಪಿಸುವ ಅಗತ್ಯ ಇದೆ ಎಂದು ಅವರು ತಿಳಿಸಿದ್ದಾರೆ.

ಗೋಹತ್ಯೆ ನಿಷೇಧಕ್ಕೆ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿ.ಟಿ. ರವಿ, “ನೀವು ಕಟುಕರ ವಂಶದಿಂದ ಬಂದವರಲ್ಲ. ಆದರೂ ಯಾಕೆ ಕಾಯ್ದೆಯನ್ನ ವಿರೋಧಿಸುತ್ತೀರಾ ಎಂದು ಸಿದ್ದರಾಮಯ್ಯನವರನ್ನ ಕೇಳುತ್ತೇನೆ. ನಾನು ಎಮ್ಮೆ, ಹಸು ಕಾಯ್ತಿದ್ದೆ ಎಂದು ಅವರೇ ಹೇಳಿಕೊಳ್ಳುತ್ತಾರೆ. ಹಸು ಎಮ್ಮೆ ಮೇಯಿಸಿದವರು ಅವುಗಳ ಹತ್ಯೆಯನ್ನು ಸಹಿಸುವುದಿಲ್ಲ” ಎಂದು ಕಿವಿಮಾತು ಹೇಳಿದ್ದಾರೆ.

ಇದನ್ನೂ ಓದಿ: ಮರಾಠಾ ವಿವಾದ; ಕರವೇ ನಿರಾಸಕ್ತಿ ನಡುವೆಯೂ ಡಿ. 5ರ ಕರ್ನಾಟಕ ಬಂದ್ ಫಿಕ್ಸ್; ನ. 26ರಂದು ಅತ್ತಿಬೆಲೆ ಗಡಿ ಬಂದ್

ಇನ್ನು, ಆರೆಸ್ಸೆಸ್ ಬಗ್ಗೆ ಸಿದ್ದರಾಮಯ್ಯ ಮಾಡಿರುವ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಆರ್ ಎಸ್ ಎಸ್ ಬಗ್ಗೆ ತಿಳಿವಳಿಕೆ ಇಲ್ಲದ ಕಾರಣ ಹೀಗೆ  ಮಾತನಾಡುತ್ತಾರೆ. ದೇಶಕ್ಕಾಗಿ ಕೆಲಸ ಮಾಡಿದ ಎಲ್ಲಾ ಸಮುದಾಯದವರನ್ನು ಸಂಘ ಗೌರವಿಸುತ್ತದೆ. ಸಿದ್ದರಾಮಯ್ಯ ಇದರ ಅರಿವಿಲ್ಲದೆ ಮಾತಾಡುತ್ತಾರೆ. ಗೊತ್ತಿಲ್ಲದಿದ್ದರೆ ಸಂಘದ ಶಾಖಾ ಕಚೇರಿಗಳಿಗೆ ಭೇಟಿ ನೀಡಿ ತಿಳಿದುಕೊಳ್ಳಲಿಲ್ಲ. ಅವರಿಗಂತೂ ವಯಸ್ಸಾಯಿತು. ಅವರ ಮೊಮ್ಮಕ್ಕಳನ್ನಾದರೂ ಶಾಖೆಗಳಿಗೆ ಕಳುಹಿಸಲಿ. ತಿಳಿಯದೇ ಮಾತನಾಡಿದರೆ ಕುರುಡರು ಆನೆ ಮುಟ್ಟಿ ವರ್ಣಿಸಿದಂತೆ ಆಗುತ್ತದೆ ಎಂದು ಸಿ.ಟಿ. ರವಿ ಹೇಳಿದ್ದಾರೆ.

ಇನ್ನು, ಆರೆಸ್ಸೆಸ್ ಈ ದೇಶದ ವಿಭಜನೆ ಮಾಡುತ್ತಿದೆ ಎಂಬ ಖರ್ಗೆ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ದೇಶದ ವಿಭಜನೆಗೆ ಅನುಮತಿ ಕೊಟ್ಟವರು ಯಾರ ಅಪ್ಪಂದಿರು ಎಂದು ಪ್ರಶ್ನೆ ಮಾಡಿದ್ಧಾರೆ.

ಯಾರಪ್ಪನ ಕಾಲದಲ್ಲಿ ದೇಶದ ವಿಭಜನೆ ಆಯಿತು ಅನ್ನೋದನ್ನ ಅವರು ಹೇಳಲಿ. ಜೆಕೆಎಲ್​ಎಫ್ ಜೊತೆ ಸೇರಿ ರಾಜಕಾರಣ ಮಾಡಿದವರು ಯಾರ ಅಪ್ಪಂದಿರು? ದೇಶದ ವಿಭಜನೆಗೆ ಯಾರ ಅಪ್ಪ ಅನುಮತಿ ಕೊಟ್ಟರು? ಬಿಂದ್ರನ್​ವಾಲೆ ವಿಚಾರದ ಹಿಂದೆ ಇರೋದು ಯಾರ ಅವ್ವಂದಿರು? ಜೆಕೆಎಲ್​ಎಫ್ ಜೊತೆಗೆ ಆರ್ಟಿಕಲ್ 370ಅನ್ನು ಧಿಕ್ಕರಿಸಿದವರು ಯಾರ ಅಪ್ಪಂದಿರು ಎಂದು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿ.ಟಿ. ರವಿ ತಿರುಗೇಟು ನೀಡಿದ್ದಾರೆ.

ಇದೇ ವೇಳೆ, ರಾಜ್ಯದಲ್ಲಿ ಎಸ್​ಡಿಪಿಐ ಮತ್ತು ಪಿಎಫ್​ಐ ಸಂಘಟನೆಗಳನ್ನ ನಿಷೇಧಿಸಲು ಬಿಜೆಪಿ ಬದ್ಧವಾಗಿದೆ. ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಕಾನೂನಿನ ಅಂಶ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ. ಸೂಕ್ತ ಆಧಾರಗಳ ಸಮೇತ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದೂ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಒಂದೇ ಸೂರಿನಡಿ 750 ಸರ್ಕಾರಿ ಸೇವೆ; ‘ಗ್ರಾಮ ಒನ್’ಗೆ ಸಿಎಂ ಚಾಲನೆ; ದಾವಣಗೆರೆಯಲ್ಲಿ ಮೊದಲ ಪ್ರಯೋಗ

ನಾಳೆ ಶನಿವಾರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ತಮಿಳುನಾಡಿಗೆ ಹೋಗುತ್ತಿದ್ದಾರೆ. ಅಲ್ಲಿನ ರಾಜ್ಯದ ಬಿಜೆಪಿ ವರಿಷ್ಟರ ಜೊತೆ ಅವರು ಸಮಾಲೋಚನೆ ನಡೆಸುತ್ತಾರೆ. ತಮಿಳುನಾಡಿನಲ್ಲಿ 2021ರಲ್ಲಿ ಚುನಾವಣೆ ಇದ್ದು, ಅದರ ಕಾರ್ಯತಂತ್ರ ಕುರಿತು ನಾಳೆ ಸಭೆ ಮಾಡಲಿದ್ದೇವೆ ಎಂದು ಸಿ.ಟಿ. ರವಿ ಮಾಹಿತಿ ನೀಡಿದ್ದಾರೆ.

ಮಾಜಿ ಸಚಿವರೂ ಆಗಿರುವ ಸಿ.ಟಿ. ರವಿ ಅವರು ತಮಿಳುನಾಡಿನ ಬಿಜೆಪಿ ಘಟಕದ ಉಸ್ತುವಾರಿ ಆಗಿ ಜವಾಬ್ದಾರಿ ಹೊತ್ತಿದ್ದಾರೆ. ಹೀಗಾಗಿ, ತಮಿಳುನಾಡು ಚುನಾವಣೆಯಲ್ಲಿ ಸಿ.ಟಿ. ರವಿ ಸಕ್ರಿಯ ಪಾತ್ರ ವಹಿಸುತ್ತಿದ್ದಾರೆ. ಅಲ್ಲಿ ರಜಿನೀಕಾಂತ್ ಅವರನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ. ಅಮಿತ್ ಶಾ ಅವರು ತಲೈವಾರನ್ನು ಭೇಟಿಯಾಗಲಿದ್ದಾರೆ ಎಂಬ ಸುದ್ದಿ ಇದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಿ.ಟಿ. ರವಿ, ಈವರೆಗಿನ ಅಮಿತ್ ಶಾ ಅವರ ಕಾರ್ಯಕ್ರಮ ಪಟ್ಟಿಯಲ್ಲಿ ರಜಿನೀಕಾಂತ್ ಭೇಟಿ ನಿಗದಿಯಾಗಿಲ್ಲ. ಕಾರ್ಯಕ್ರಮ ಪಟ್ಟಿ ಬದಲಾವಣೆ ಆದರೆ ಮಾತ್ರ ಆ ಸಾಧ್ಯತೆ ಇರಬಹುದು ಎಂದು ಭೇಟಿ ಸಾಧ್ಯತೆಯನ್ನು ಸಂಪೂರ್ಣವಾಗಿ ನಿರಾಕರಿಸಲಿಲ್ಲ.

ಇನ್ನು, ರಾಜ್ಯ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ಮಾತನಾಡಿದ ಸಿ.ಟಿ. ರವಿ, ವರಿಷ್ಠರ ಜೊತೆ ಸಿಎಂ ಮಾತನಾಡುತ್ತಾರೆ. ಮುಖ್ಯಮಂತ್ರಿಗಳು ಸಮರ್ಥರಿದ್ದಾರೆ. ಸಚಿವಾಕಾಂಕ್ಷಿಗಳು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಲಿ. ಪಕ್ಷಕ್ಕೆ ಮುಜುಗರ ತರುವ ಕೆಲಸ ಮಾಡಿದರೆ ಪಕ್ಷ ಸಹಿಸುವುದಿಲ್ಲ. ಕೆಲವರು ಗುಂಪುಗಾರಿಕೆ ಮಾಡುವುದನ್ನೇ ಮೆರಿಟ್ ಅಂದ್ಕೊಂಡಿದ್ದಾರೆ ಎಂದು ಪ್ರತ್ಯೇಕವಾಗಿ ಸಭೆ ನಡೆಸುತ್ತಿರುವ ಕೆಲ ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ವರದಿ: ಶ್ರೀನಿವಾಸ ಹಳಕಟ್ಟಿ
Published by:Vijayasarthy SN
First published: