ಕೋಲಾರ: ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಸಹಿ ಪೋರ್ಜರಿ ಕೇಸ್ ನಲ್ಲಿ (Sign Forgery Case) , ಕೋಲಾರ ತಹಶೀಲ್ದಾರ್ ಕಚೇರಿಯ (Tahsildar Office) ಸಿಬ್ಬಂದಿಗಳೇ ಭಾಗಿಯಾಗಿರೊದು ಬೆಳಕಿಗೆ ಬಂದಿದೆ, ವಕ್ಕಲೇರಿ ಹೋಬಳಿಯ ರೆವಿನ್ಯು ಇನ್ಸ್ ಪೆಕ್ಟರ್ ಮಂಜುನಾಥ್ ಹಾಗು ತಹಶೀಲ್ದಾರ್ ಕಚೇರಿಯ ಕೇಸ್ ವರ್ಕರ್ ಶೈಲಜಾ ಎನ್ನುವ ಇಬ್ಬರನ್ನ ಕೋಲಾರದ ಗಲ್ ಪೇಟೆ ಪೊಲೀಸರು ಬಂದಿಸಿದ್ದು, ಈ ಪೋರ್ಜರಿ ಕೇಸ್ ನ ಪ್ರಮುಖ ಆರೋಪಿಯಾದ ತಾಲೂಕು ಕಚೇರಿಯ ಶಿರಸ್ತೇದಾರ್ ಶ್ರೀನಿವಾಸ್ ಪರಾರಿಯಾಗಿದ್ದಾರೆ. ಕೋಲಾರ ತಾಲೂಕಿನ ಆಲಹಳ್ಳಿ ಗ್ರಾಮದ ಕೋಟಿ ಕೋಟಿ ಬೆಲೆ ಬಾಳುವ, ಸರ್ವೆ ಸಂಖ್ಯೆ 127 ರಲ್ಲಿನ 3.27 ಎಕರೆಯ, ಲ್ಯಾಂಡ್ ಲಾಕ್ಡ್ ಲ್ಯಾಂಡ್ ಜಮೀನನ್ನ, ಸನ್ ಲಾಡ್ಜ್ ಪ್ರಾಪರ್ಟಿ ಎನ್ನುವ ರಿಯಲ್ ಎಸ್ಟೇಟ್ ಕಂಪನಿಗೆ, ಸರ್ಕಾರಿ ನಿಗದಿತ ದರದಲ್ಲಿಮಾರಾಟ ಮಾಡುವಂತೆ, ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಸಹಿಯುಳ್ಳ ಪತ್ರವಿರೊ ಪೈಲ್ ತಹಶೀಲ್ದಾರ್ ಕಚೇರಿಯಲ್ಲಿ ಪತ್ತೆಯಾಗಿತ್ತು. ಅದೇ ಕಂಪನಿಗೆ ಜಮೀನು ಮಂಜೂರು ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲವೆಂದು ರಾಜ್ಯ ಸರ್ಕಾರ ಹಾಗು ಹಿಂದಿನ ಕೋಲಾರ ಜಿಲ್ಲಾಧಿಕಾರಿಯಾದ ಸೆಲ್ವಮಣಿ ಅವರು ಖಾಸಗಿ ಕಂಪನಿ ಅರ್ಜಿ ತಿರಸ್ಕರಿಸಿದ್ದರು. ಆದರೆ ತಹಸೀಲ್ದಾರ್ ಕಚೇರಿಯ ಕೆಲ ಅಧಿಕಾರಿಗಳು, ಈಗಿನ ಡಿಸಿ ವೆಂಕಟ್ ರಾಜಾ ಅವರು ಜಮೀನು ಮಂಜೂರು ಮಾಡುವಂತೆ ಆದೇಶಿಸಿರೊ ಮಾಹಿತಿ ನಕಲಿ ಪತ್ರದಲ್ಲಿದೆ, ಈ ಬಗ್ಗೆ ತಹಶೀಲ್ದಾರ್ ನಾಗರಾಜ್ ಗಲ್ ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಬುಧವಾರದಿಂದ ಗಲ್ ಪೇಟೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
3 ದಿನ ದಿಢೀರ್ ರಜೆ ಮೇಲೆ ತೆರಳಿದ ಕೋಲಾರ ತಹಶಿಲ್ದಾರ್ ನಾಗರಾಜ್
ಪೊರ್ಜರಿ ಸಹಿ ಕೇಸ್ ತನಿಖೆ ಚುರುಕುಗೊಳ್ಳುತ್ತದ್ದಂತೆ ತಹಶೀಲ್ದಾರ್ ನಾಗರಾಜ್ ಅವರಿಗು, ಭೂ ಸಂಕಷ್ಟದ ಭೀತಿ ಎದುರಾದಂತಿದೆ, ಬುಧವಾರ ತನಿಖೆಗೆ ಹಾಜರಾಗಿ ಎಂದು ಪೋನ್ ಮೂಲಕ ಪೊಲೀಸರು ಸೂಚಿಸಿದ್ದರು ತನಿಖೆಗೆ ಹಾಜರಾಗಿಲ್ಲ, ಆದರೆ ಗುರುವಾರ ದಿಡೀರನೇ ಶಿರಡಿಗೆ ಹೋಗುವ ಕಾರಣ ನೀಡಿ, ಗುರುವಾರದಿಂದ ಮೂರು ದಿನ ರಜೆ ಪಡೆದು, ದೇಗುಲಕ್ಕೆ ತೆರಳಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ, ಡಿಸಿ ನಕಲಿ ಸಹಿಯುಳ್ಳ ಪೈಲ್ ಅನ್ನು ತಹಶೀಲ್ದಾರ್ ಕಚೇರಿ ಒಳಗಿಟ್ಟವರ ಮಾಹಿತಿ ಕಲೆ ಹಾಕಲು ಇದ್ದ ಏಕೈಕ ಸಾಕ್ಷಿಯೆಂದರೆ, ಅದು ಕಚೇರಿಯ ಸಿಸಿಟಿವಿ ದೃಶ್ಯಗಳು, ಆದರೆ ಅದೇ ದೃಶ್ಯಾವಳಿಗಳು ಡಿಲೀಟ್ ಆಗಿದೆಯೆಂದು ಹೇಳಲಾಗುತ್ತಿದೆ, ಈ ಬಗ್ಗೆ ಮಾತನಾಡಿರುವ ಕೋಲಾರ ಎಸ್ಪಿ ದೇವರಾಜ್, ಖಾಸಗಿ ಕಂಪನಿಯವರು 15 ದಿನದ ಹಿಂದೆ ದೂರು ನೀಡಿದ ಬಗ್ಗೆ ಅನುಮಾನವಿದೆ, ಯಾವ ವಿಚಾರಕ್ಕೆ ವೈಮನಸ್ಸು ಉಂಟಾಗಿ ದೂರ ನೀಡಿದ್ದಾರೆ ಗೊತ್ತಿಲ್ಲ, ವಿಚಾರಣೆಗೆ ಹಾಜರಾಗಲು ತಹಶೀಲ್ದಾರ್ ಅವರಿಗೆ ನೋಟೀಸ್ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಏನಿದು ಪ್ರಕರಣ ?
ನರಸಾಪುರ ಕೈಗಾರಿಕಾ ವಲಯದ ಆಸು ಪಾಸಿನಲ್ಲೆ ಇರುವ ಆಲಹಳ್ಳಿ ಗ್ರಾಮದಲ್ಲಿ ಭೂಮಿಗೆ ಚಿನ್ನದ ಬೆಲೆ ಇದೆ, ಸನ್ ಲಾಡ್ಜ್ ಪ್ರಾಪರ್ಟಿಸ್ ಪ್ರೈವೇಟ್ ಲಿಮಿಟೆಡ್ ಎನ್ನುವ ರಿಯಲ್ ಎಸ್ಟೇಟ್ ಕಂಪನಿಯು ತಾಲೂಕಿನ ವಕ್ಕಲೇರಿ ಹೋಬಳಿಯ ಆಲಹಳ್ಳಿ ಗ್ರಾಮದ ಹಲವು ಸರ್ವೆ ಸಂಖ್ಯೆಯಲ್ಲಿರುವ ಹಿಡುವಳಿ ಜಮೀನುಗಳನ್ನು ಕೈಗಾರಿಕಾ ಉದ್ದೇಶಕ್ಕಾಗಿ ಖರೀದಿಸಿದ್ದಾರೆ. ಈ ಜಮೀನುಗಳ ಮಧ್ಯದಲ್ಲಿ ಸರ್ವೆ ಸಂಖ್ಯೆ 127 ರಲ್ಲಿನ 3.27 ಎಕರೆ ಸರಕಾರಿ ಖರಾಬು ಜಮೀನು ಆಗಿರುವುದರಿಂದ ಲ್ಯಾಂಡ್ ಲಾಕ್ಡ್ ಲ್ಯಾಂಡ್ ಆಗಿರುತ್ತದೆ, ಈ ಜಮೀನನ್ನ ತಮಗೆ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ, ಆದರೆ ಅದು ಗ್ರಾಮದ ಉಳಿಕೆ ಭೂಮಿಯಾದ್ದರಿಂದ, ಈ ಕಂಪನಿಗೆ ಜಮೀನು ಮಂಜೂರು ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲವೆಂದು ಸರಕಾರವೇ ಪ್ರಸ್ತಾವನೆಯನ್ನು ತಿರಸ್ಕರಿಸಿದೆ, ಹಿಂದಿನ ಕೋಲಾರ ಜಿಲ್ಲಾಧಿಕಾರಿಯು ಅರ್ಜಿಯನ್ನ ತಿರಸ್ಕರಿಸಿ, ತಹಸೀಲ್ದಾರ್ ಕಚೇರಿಗೆ ವಾಪಾಸ್ ಕಳಿಸಿದ್ದಾರೆ, ಆದರೆ ಕೆಲ ಅಧಿಕಾರಿಗಳು, ಜಿಲ್ಲಾಧಿಕಾರಿ ಸಹಿಯನ್ನು ನಕಲು ಮಾಡಿ ಕೈಚಳಕ ತೋರಿಸಿದ್ದಾರೆ, ತಿರಸ್ಕರಿಸಲಾಗಿದೆ ಎನ್ನುವ ಕಡೆ, ಪುರಸ್ಕರಿಸಲಾಗಿದೆ ಎಂದು, ತಹಸೀಲ್ದಾರ್ ಅವರಿಗೆ ಮುಂದಿನ ಕ್ರಮಕ್ಕಾಗಿ ಹಿಂದಿರುಗಿಸಿದೆ ಎಂದು ಉಲ್ಲೇಖಿಸಿ ಸ್ಕ್ಯಾನ್ ಮಾಡಿ ಜಿಲ್ಲಾಕಾರಿಗಳ ಸಹಿಯನ್ನು ಮುದ್ರಿಸಿರುವುದು ದಾಖಲೆಗಳಿಂದ ಬೆಳಕಿಗೆ ಬಂದಿದೆ.
ಇದನ್ನೂ ಓದಿ: Karwara: ನಗರಸಭೆಯಲ್ಲಿ ಗೋಲ್ಮಾಲ್! ಕಾಮಗಾರಿ ಮುಗಿದ ಮೇಲೆ ಟೆಂಡರ್ ಯಾಕೆ ಸ್ವಾಮಿ?
ಕರ್ನಾಟಕ ಮಂಜೂರಾತಿ ನಿಯಮಗಳು 1969 ರ ನಿಯಮ 22 ರ ಅಡಿಯಲ್ಲಿ ಕೈಗಾರಿಕಾ ಉದ್ದೇಶಕ್ಕಾಗಿ ಮಂಜೂರು ಮಾಡಲು ಕಂಪನಿಯು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿತ್ತು. ಅದರಂತೆ ಜಿಲ್ಲಾಕಾರಿಗಳು ತಹಸೀಲ್ದಾರ್, ಸಹಾಯಕ ಕಮೀಷನರ್‌ಗಳು ಸದರಿ ಜಮೀನು ಪಹಣಿ ದಾಖಲೆಯಂತೆ ಸರಕಾರಿ ಖರಾಬು ಎಂಬುದಾಗಿ ವರ್ಗೀಕರಿಸಲಾಗಿದೆ. ಇನ್ನೂ ಕೈಗಾರಿಕಾ ಉದ್ದೇಶಕ್ಕಾಗಿ ಮಾರ್ಗಸೂಚಿ ದರದನ್ವಯ ಮಂಜೂರು ಮಾಡಲು, ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969 ನಿಯಮ 22 ರನ್ವಯ ಅವಕಾಶ ಇರುವುದಿಲ್ಲ ಎಂಬ ಅಭಿಪ್ರಾಯ ನೀಡಿದ ಹಿನ್ನೆಲೆಯಲ್ಲಿ ಪ್ರಸ್ತಾವನೆಯನ್ನು ತಿರಸ್ಕಾರಿಸಲಾಗಿದೆ ಎಂದು ಹಿಂದಿನ ಜಿಲ್ಲಾಧಿಕಾರಿಯಾದ ಸೆಲ್ವಮಣಿ ಅವರು ಕಳೆದ ವರ್ಷದ ಡಿಸೆಂಬರ್ ನಲ್ಲಿ ಆದೇಶಿಸಿದ್ದಾರೆ. ಅದರಂತೆ ಜಿಲ್ಲಾಕಾರಿಗಳು ಕೋಲಾರ ತಹಸೀಲ್ದಾರ್‌ಗೆ ಕಡತವನ್ನು ಹಿಂತಿರುಗಿಸುತ್ತಾ ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ಸೂಚಿಸಿರುತ್ತಾರೆ, ಜಿಲ್ಲಾಧಿಕಾರಿಗಳ ಪತ್ರದಲ್ಲಿ ತಿರಸ್ಕರಿಸಲಾಗಿದೆ ಎಂಬುದನ್ನು ತಿದ್ದಿರುವ ಭೂಗಳ್ಳರು, ಪುರಸ್ಕರಿಸಲಾಗಿದೆ ಎಂದು ತಿರುಚಿರುವುದು ಬೆಳಕಿಗೆ ಬಂದಿದೆ.ಆದರೆ ನಕಲಿ ದಾಖಲೆಗಳನ್ನು ಸೃಷ್ಟಿಸಿರುವ ಬಗ್ಗೆ ಕಂಪನಿಗೆ ಯಾವುದೇ ಮಾಹಿತಿಯೂ ಇಲ್ಲ ಹಾಗೂ ಸಂಬಂಧವೂ ಇಲ್ಲವೆಂದು ಕಂಪನಿಯ ನಿರ್ದೇಶಕರು ಕೋಲಾರ ತಹಸೀಲ್ದಾರ್ ಅವರಿಗೆ ಜೂನ್ 16 ರಂದು ಪತ್ರ ಬರೆದು ಸ್ಪಷ್ಟಪಡಿಸಿದ್ದಾರೆ.
ಒಟ್ಟಾರೆ ತಾಲ್ಲೂಕು ಕಚೇರಿಯಲ್ಲಿರುವ ಭ್ರಷ್ಟ ಅಧಿಕಾರಿಗಳು, ಜಿಲ್ಲಾಧಿಕಾರಿಗಳಿಂದ ಬಂದಿರುವ ಕಡತಕ್ಕೆ ಪರ್ಯಾಯವಾಗಿ ಮತ್ತೊಂದು ಪತ್ರವನ್ನು ಸಿದ್ಧಪಡಿಸಿದ್ದಾರೆ. ಜಮೀನು ಮಂಜೂರಿಗೆ ಕೆಲ ಖಾಸಗಿ ವ್ಯಕ್ತಿಗಳು, ತಾಲ್ಲೂಕು ಕಚೇರಿ ಸಿಬ್ಬಂದಿ ಶಾಮೀಲಾಗಿದ್ದು, ಕೋಲಾರ ಗಲ್ ಪೇಟೆ ಪೊಲೀಸರು ನಿಸ್ಪಕ್ಷಪಾತ ತನಿಖೆ ನಡೆಸಿ ಭೂ ಗಳ್ಳರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಆಗ್ರಹ ವ್ಯಕ್ತವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ