• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಮುಷ್ಕರನಿರತ ಸಾರಿಗೆ ನೌಕರರಿಗೆ ವೇತನ ಕಡಿತ; ಮಾರ್ಚ್ ತಿಂಗಳ ಸಂಬಳಕ್ಕೂ ತಡೆ ಸಾಧ್ಯತೆ

ಮುಷ್ಕರನಿರತ ಸಾರಿಗೆ ನೌಕರರಿಗೆ ವೇತನ ಕಡಿತ; ಮಾರ್ಚ್ ತಿಂಗಳ ಸಂಬಳಕ್ಕೂ ತಡೆ ಸಾಧ್ಯತೆ

ಐರಾವತ ಬಸ್

ಐರಾವತ ಬಸ್

ಮುಷ್ಕರ ನಿಲ್ಲುವವರೆಗೂ ಸಾರಿಗೆ ನೌಕರರ ಸಂಬಳಕ್ಕೆ ತಡೆ ಹಿಡಿಯಲಾಗಿದೆ. ಅನುಮತಿ ಇಲ್ಲದೇ ರಜೆ ತೆಗೆದುಕೊಂಡವರಿಗೆ ವೇತನ ಕಡಿತ ಮಾಡಲಾಗುತ್ತದೆ. ಎರಡು ದಿನದ ನಂತರವೂ ಮುಷ್ಕರ ನಡೆಸಿದರೆ ಎಸ್ಮಾ ಜಾರಿ ಮಾಡಬೇಕಾಗುತ್ತದೆ ಎಂದು ಸರ್ಕಾರ ಎಚ್ಚರಿಕೆ ನೀಡಿದೆ.

  • Share this:

    ಬೆಂಗಳೂರು(ಏ. 07): ಸರ್ಕಾರ ಸಾಕಷ್ಟು ಬಾರಿ ಮನವೊಲಿಕೆಗಾಗಿ ಪ್ರಯತ್ನ ಮಾಡುತ್ತಿರುವುದರ ಹೊರತಾಗಿಯೂ ಸಾರಿಗೆ ನೌಕರರು ಇಂದು ಮುಷ್ಕರ ಆರಂಭಿಸಿದ್ದಾರೆ. ಬಹುತೇಕ ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿ ಬಸ್ಸುಗಳು ರಸ್ತೆಗೆ ಇಳಿದಿಲ್ಲ. ಸರ್ಕಾರ ಎಸ್ಮಾ ಜಾರಿ ಮಾಡುವುದಾಗಿ ನೀಡಿದ ಎಚ್ಚರಿಕೆಗೂ ನೌಕರರು ಜಗ್ಗದೇ ತಮ್ಮ ಹಠ ಮುಂದುವರಿಸಿದ್ಧಾರೆ. ಇದೀಗ ಸರ್ಕಾರ ಮತ್ತೊಂದು ಕಠಿಣ ಕ್ರಮ ಕೈಗೊಳ್ಳುತ್ತಿದೆ. ಮುಷ್ಕರನಿರತ ಸಾರಿಗೆ ನೌಕರರಿಗೆ ವೇತನ ಕಡಿತ ಮಾಡಲು ಸರ್ಕಾರ ನಿರ್ಧರಿಸಿದೆ. ಹಾಗೆಯೇ ಎಸ್ಮಾ ಕಾಯ್ದೆ ಅನ್ವಯ ಮಾಡುವ ನಿರ್ಧಾರವನ್ನೂ ಪರಿಶೀಲಿಸಲಾಗುತ್ತಿದೆ.


    ಬೀದರ್​ನ ಹುಮ್ನಾಬಾದ್​ನಲ್ಲಿ ಮಾತನಾಡುತ್ತಿದ್ದ ಸಾರಿಗೆ ಸಚಿವರೂ ಆಗಿರುವ ಲಕ್ಷ್ಮಣ ಸವದಿ ಅವರು ಈ ವಿಚಾರವನ್ನು ತಿಳಿಸಿದ್ದಾರೆ. ಮುಷ್ಕರ ಬೇಡವೆಂದರೂ ಕೇಳದೇ ಪ್ರತಿಭಟನೆಯಲ್ಲಿ ತೊಡಗಿರುವ ಸಾರಿಗೆ ನೌಕರರಿಗೆ ವೇತನ ಕಡಿತ ಮಾಡುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ, ಸಾರಿಗೆ ನೌಕರರ ಹೋರಾಟದ ಹಿಂದೆ ಕಾಣದ ಕೈಗಳ ಕೈವಾಡ ಇದೆ ಎಂದೂ ಅವರು ಗಂಭೀರ ಆರೋಪ ಮಾಡಿದ್ದಾರೆ.


    ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸಾರಿಗೆ ನೌಕರರ ಮುಷ್ಕರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿ ಮುಷ್ಕರ ಮಾಡುವುದು ಸರಿಯಲ್ಲ. ಉಪಚುನಾವಣೆ ಮುಗಿದ ಬಳಿಕ ಸಂಬಳ ಹೆಚ್ಚಳ ಮಾಡುತ್ತೇವೆ ಎಂದರೂ ಕೇಳುತ್ತಿಲ್ಲ. ಇನ್ನು ಎರಡು ದಿನ ಕಾದು ನೋಡುತ್ತೇವೆ. ಮುಷ್ಕರ ನಿಲ್ಲಿಸದಿದ್ದರೆ ಎಸ್ಮಾ ಕಾಯ್ದೆ ಅನ್ವಯ ಮಾಡಬೇಕಾಗುತ್ತದೆ ಎಂದು ಸಿಎಂ ಎಚ್ಚರಿಕೆ ನೀಡಿದ್ದಾರೆ.


    ಬಿಎಂಟಿಸಿ ಎಂಡಿ ಶಿಖಾ ಕೂಡ ವೇತನ ಕಡಿತದ ಸುಳಿವು ನೀಡಿದ್ಧಾರೆ. ಅನುಮತಿ ಇಲ್ಲದೇ ಕರ್ತವ್ಯಕ್ಕೆ ಬರದವರಿಗೆ ಸಂಬಳ ಕೊಡುವುದಿಲ್ಲ. ನೋ ವರ್ಕ್, ನೋ ಪೇ ಎಂದು ಸ್ಪಷ್ಟವಾಗಿ ಹೇಳಿದ್ದೇವೆ ಎಂದು ಐಎಎಸ್ ಅಧಿಕಾರಿ ಹೇಳಿದ್ಧಾರೆ.


    ಇದನ್ನೂ ಓದಿ: ನಕಲಿ ಹೋರಾಟಗಾರರನ್ನ ನಂಬಿ ಮುಷ್ಕರ ನಡೆಸದಿರಿ: ಸಾರಿಗೆ ನೌಕರರಿಗೆ ಸಚಿವ ಸುಧಾಕರ್ ಮನವಿ


    ಅಂದರೆ, ಕರ್ತವ್ಯಕ್ಕೆ ಹಾಜರಾಗದೇ ಇದ್ದವರಿಗೆ ಮಾರ್ಚ್ ತಿಂಗಳ ಸಂಬಳ ಸಿಗುವುದಿಲ್ಲ ಎನ್ನಲಾಗುತ್ತಿದೆ. ಈಗಾಗಲೇ ಸಾರಿಗೆ ನಿಗಮಗಳು ತಮ್ಮ ನೌಕರರಿಗೆ ಮಾರ್ಚ್ ತಿಂಗಳ ಸಂಬಳವನ್ನ ತಡೆ ಹಿಡಿದಿವೆ. ಪ್ರತಿ ತಿಂಗಳ 10ರಂದು ಸಂಬಳ ಬಿಡುಗಡೆ ಆಗುತ್ತಿತ್ತು. ಈಗ ಮುಷ್ಕರ ಮುಗಿಯುವವರೆಗೂ ಸಂಬಳ ಬಿಡುಗಡೆ ಆಗುವುದು ಅನುಮಾನ. ಮುಷ್ಕರದ ನಡುವೆಯೂ ಕರ್ತವ್ಯಕ್ಕೆ ಹಾಜರಾಗಿರುವ ಸಿಬ್ಬಂದಿಗೂ ಸಂಬಳ ವಿಳಂಬವಾಗುತ್ತದಾ ಎಂಬುದು ತಿಳಿದುಬಂದಿಲ್ಲ.


    ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಶಿಖಾ ನೀಡಿರುವ ಮಾಹಿತಿ ಪ್ರಕಾರ, ಇವತ್ತು ಬೆಂಗಳೂರಿನಲ್ಲಿ 135 ಬಸ್ಸುಗಳು ಮಾತ್ರ ಸಂಚಾರ ಮಾಡುತ್ತಿವೆ. ಇವುಗಳಲ್ಲಿ ಬಹುತೇಕವು ಖಾಸಗಿ ಬಸ್ಸುಗಳಾಗಿವೆ. ಮುಷ್ಕರದ ಬಗ್ಗೆ ಜನರಿಗೆ ಮೊದಲೇ ಮಾಹಿತಿ ಇದ್ದ ಕಾರಣ ಸಮಸ್ಯೆ ಆಗಿಲ್ಲ ಎಂದು ಹೇಳಿರುವ ಶಿಖಾ, ಬೆಂಗಳೂರಿನಿಂದ ಇತರ ಜಿಲ್ಲೆಗಳಿಗೆ ಯುಗಾದಿ ವೇಳೆಗೆ ರೈಲುಗಳ ಸಂಚಾರ ಹೆಚ್ಚಳಕ್ಕೆ ಚರ್ಚೆ ಮಾಡಲಾಗುತ್ತಿದ್ದು, ಈ ಸಂಬಂಧ ರೈಲ್ವೆ ಇಲಾಖೆಗೆ ಮನವಿ ಮಾಡಲಾಗುತ್ತದೆ ಎಂದಿದ್ದಾರೆ.

    Published by:Vijayasarthy SN
    First published: