ದೇಶದಲ್ಲಿ ಬಂದ್ ಆಗಲಿವೆಯೇ ವಾಟ್ಸಪ್, ಫೇಸ್ಬುಕ್?

news18
Updated:August 7, 2018, 10:33 AM IST
ದೇಶದಲ್ಲಿ ಬಂದ್ ಆಗಲಿವೆಯೇ ವಾಟ್ಸಪ್, ಫೇಸ್ಬುಕ್?
news18
Updated: August 7, 2018, 10:33 AM IST

ನ್ಯೂಸ್ 18 ಕನ್ನಡ


ಬೆಂಗಳೂರು (ಆ.7) : ವಾಟ್ಸಪ್, ಫೇಸ್ಬುಕ್, ಇನ್ಸ್ಟಾಗ್ರಾಂ ಹಾಗೂ ಟೆಲಿಗ್ರಾಂ ಮತ್ತಿತರ ಸಾಮಾಜಿಕ ಜಾಲತಾಣಗಳಿಂದ ಸುಳ್ಳು ಸುದ್ದಿ ಹರಡುವಿಕೆ ಮತ್ತು ಸಾರ್ವಜನಿಕರ ಖಾಸಗಿ ಮಾಹಿತಿಯ ಸೋರಿಕೆಯಿಂದ ದೇಶದ ಹಿತಾಸಕ್ತಿ ಮತ್ತು ಸುವ್ಯವಸ್ಥೆಗೆ ತೊಂದರೆಯಾದಲ್ಲಿ ಈ ಮೊಬೈಲ್ ಆ್ಯಪ್ಗಳನ್ನು ಬ್ಲಾಕ್ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.


ಭಾರತದಲ್ಲಿ ಈ ಸಾಮಾಜಿಕ ಜಾಲತಾಣಗಳ ಮೊಬೈಲ್ ಆ್ಯಪ್ಗಳನ್ನು ಬ್ಲಾಕ್ ಮಾಡಲು ಕೈಗೊಳ್ಳಬಹುದಾದ ತಾಂತ್ರಿಕ ಕ್ರಮಗಳ ಬಗ್ಗೆ ಕೇಂದ್ರ ಸರ್ಕಾರ ದೂರಸಂಪರ್ಕ ವಲಯದ ಅಭಿಪ್ರಾಯ ಕೋರಿದೆ. ಈ ಕುರಿತು ದೂರುಸಂಪರ್ಕ ಇಲಾಖೆ ಜುಲೈ 18ರಂದು ಎಲ್ಲ ದೂರಸಂಪರ್ಕ ಆಪರೇಟರ್ಗಳಿಗೆ ಭಾರತೀಯ ಅಂತರ್ಜಾಲ ಸೇವಾ ಪೂರೈಕೆದಾರರ ಸಂಘಟನೆ (ಐಎಸ್ಪಿಎಐ), ಸೆಲ್ಯುಲರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಸಿಒಎಐ) ಮತ್ತು ಇತರ ತಜ್ಞರಿಗೆ ಪತ್ರ ಬರೆದಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆ (ಐಟಿ ಆ್ಯಕ್ಟ್) ಸೆಕ್ಷನ್ 69 ಎ ಅನ್ವಯ ಮೊಬೈಲ್ ಆ್ಯಪ್ಗಳನ್ನು ದೇಶದಲ್ಲಿ ಶಾಶ್ವತವಾಗಿ ಅಥವಾ ತಾತ್ಕಾಲಿಕವಾಗಿ ಬ್ಲಾಕ್ ಮಾಡುವ ಕುರಿತು ಪತ್ರದಲ್ಲಿ ಅಭಿಪ್ರಾಯ ಕೇಳಲಾಗಿದೆ ಎಂದು ಮೂಲಗಳು ತಿಳಿಸಿವೆ.


ವಾಟ್ಸಾಪ್ ಬಗ್ಗೆ ಸರ್ಕಾರದ ಅಸಮಾಧಾನಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ವಾಟ್ಸಪ್ ಅತಿಹೆಚ್ಚು ಬಳಕೆಯಲ್ಲಿದ್ದು, ಹಲವು ಅಹಿತಕರ ಘಟನೆಗಳಿಗೆ ನೇರ ಕಾರಣವಾಗಿದೆ. ಸಂದೇಶಗಳ ಸತ್ಯಾಸತ್ಯತೆ ಪರಿಶೀಲಿಸದೆ ಕ್ಷಣಾರ್ಧದಲ್ಲಿ ದೇಶದ ತುಂಬೆಲ್ಲ ವಾಟ್ಸಾಪ್ ಸಂದೇಶಗಳು ಹರಿದಾಡುವುದರಿಂದ ಹಲವು ಅಹಿತಕರ ಘಟನೆಗಳು ನಡೆದಿವೆ. ಸರ್ಕಾರದ ಪ್ರಮುಖ ಬೇಡಿಕೆಯಾದ ಸಂದೇಶಗಳ ಸತ್ಯಾಸತ್ಯತೆ ಪತ್ತೆಹಚ್ಚುವಿಕೆ ವಿಚಾರದಲ್ಲಿ ವಾಟ್ಸಪ್ ಬದ್ಧತೆ ಪ್ರದರ್ಶಿಸುತ್ತಿಲ್ಲ ಎಂದು ಮಾಹಿತಿ ತಂತ್ರಜ್ಞಾನ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಗುಂಪು ಹಲ್ಲೆಗಳಿಗೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂತಹ ಸುಳ್ಳು ಸುದ್ದಿಗಳನ್ನು ತಡೆಯಲು ವಾಟ್ಸಪ್ ಕೈಗೊಳ್ಳುತ್ತಿರುವ ಕ್ರಮ ಸಾಲದು ಎಂದು ಕಳೆದ ತಿಂಗಳು ಸರ್ಕಾರ ಅಸಮಾಧಾನ ವ್ಯಕ್ತಪಡಿಸಿತ್ತು. ವಾಟ್ಸಾಪ್ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ. ಪ್ರಚೋದನಾಕಾರಿ ಸಂದೇಶಗಳ ಮೂಲವನ್ನು ಪತ್ತೆ ಮಾಡಬೇಕು ಎಂದು ಮಾಹಿತಿ ತಂತ್ರಜ್ಞಾನ ಇಲಾಖೆ ಎಚ್ಚರಿಕೆಯನ್ನು ನೀಡಿತ್ತು.


ಸುಳ್ಳುಸುದ್ದಿ ಹರಡುವಿಕೆ ತಡೆಗೆ ಭಾರತ ಘಟಕದಲ್ಲಿ ಮುಖ್ಯಸ್ಥರನ್ನೂ ಒಳಗೊಂಡ ಸ್ಥಳೀಯ ತಂಡವೊಂದನ್ನು ರಚಿಸುವುದಾಗಿ ವಾಟ್ಸಾಪ್ ಇತ್ತೀಚೆಗೆ ಕೇಂದ್ರ ಸರ್ಕಾರಕ್ಕೆ ತಿಳಿಸಿತ್ತು.

First published:August 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...