ಬೆಂಗಳೂರು (ಡಿ.11): ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Governor Thawar Chand Gehlot) ಅವರ ಕಾರು ಚಾಲಕ ಹೃದಯಾಘಾತದಿಂದ (Heart Attack) ಸಾವನ್ನಪ್ಪಿರುವ ಘಟನೆ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ (Kempegowda International Airport) ನಿಲ್ದಾಣದಲ್ಲಿ ನಿನ್ನೆ (ಡಿ.10) ತಡರಾತ್ರಿ ನಡೆದಿದೆ. ರವಿಕುಮಾರ್ ಎಸ್. ಕಾಳೆ ಮೃತ ದುರ್ದೈವಿಯಾಗಿದ್ದಾರೆ. ಮಧ್ಯರಾತ್ರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾಜ್ಯಪಾಲರನ್ನು ಕರೆದೊಯ್ಯಲು ಚಾಲಕ ರವಿಕುಮಾರ್ (Ravikumar) ಬಂದಿದ್ದ ಈ ವೇಳೆ ಚಾಲಕರಿಗೆ ಹೃದಯಾಘಾತ ಸಂಭವಿಸಿದೆ.
ರಾಜ್ಯಪಾಲರನ್ನು ಕರೆದೊಯ್ಯಲು ಬಂದಿದ್ದ ಚಾಲಕ
ರಾಜ್ಯಪಾಲರನ್ನು ಕಾರಿನಲ್ಲಿ ಕರೆದೊಯ್ಯಲು ಸಿದ್ದತೆ ಮಾಡಿಕೊಳ್ಳುವ ವೇಳೆ ರವಿಕುಮಾರ್ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಹೃದಯಾಘಾತವೂ ಆಗಿದೆ. ಕೂಡಲೇ ಅವರನ್ನು ಆ್ಯಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಲಾಯ್ತು. ಆದರೆ, ಅಷ್ಟರಲ್ಲಾಗಲೇ ಚಾಲಕ ರವಿಕುಮಾರ್ ಸಾವನ್ನಪ್ಪಿದ್ದರು.
ತಪ್ಪಿದ ಭಾರೀ ಅನಾಹುತ
ಘಟನೆಯ ಬಳಿಕ ರಾಜ್ಯಪಾಲರು ಹೆಚ್ಚುವರಿ ವಾಹನ ಬಳಸಿಕೊಂಡು ರಾಜ್ಯಭವನಕ್ಕೆ ತೆರಳಿದರು. ರಾಜ್ಯಪಾಲರು ನಿಗದಿತ ಸಮಯಕ್ಕಿಂತ ಬೇಗ ಆಗಮಿಸಿದ್ದರೆ, ರವಿಕುಮಾರ್ ಅವರ ಕಾರು ಹತ್ತಿ ಬಂದಿದ್ರೆ ದೊಡ್ಡ ಅನಾಹುತ ಸಂಭವಿಸುತ್ತಿತ್ತು.
ಶಿವಮೊಗ್ಗದಲ್ಲಿ ಭೀಕರ ಅಪಘಾತ
ಶಿವಮೊಗ್ಗ ತಾಲ್ಲೂಕಿನ ಕಲ್ಲಾಪುರ ಬಳಿ ಭಾನುವಾರ ಬೆಳಿಗ್ಗೆ ಕಾರು–ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ 3 ಸಾವನ್ನಪ್ಪಿದ್ದು, ಒಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಶಿವಮೊಗ್ಗ ಹೊರವಲಯದ ಅಬ್ಬಲಗೆರೆ ಸಮೀಪದ ಕಲ್ಲಾಪುರ ಬಳಿ ಗೂಡ್ಸ್ ಲಾರಿ ಹಾಗೂ ಬಲೆನೋ ಕಾರು ನಡುವೆ ಡಿಕ್ಕಿ ಸಂಭವಿಸಿದೆ.
ಗಾಯಾಳುವನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು
ಅಪಘಾತದಲ್ಲಿ ಕಾರಿನಲ್ಲಿದ್ದ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಮೃತರನ್ನು ಕಾರು ಚಾಲನೆ ಮಾಡುತ್ತಿದ್ದ ಕಾರ್ತಿಕ್ (21), ವಿವೇಕ್ (21) ಹಾಗೂ ಮೋಹನ (21) ಎಂದು ಗುರುತಿಸಲಾಗಿದೆ. ರುದ್ರೇಶ್ ಪಾಟೀಲ ಎಂಬುವವರ ಸ್ಥಿತಿ ಗಂಭೀರವಾಗಿದ್ದು, ಗಾಯಾಳುವನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲರೂ ದಾವಣಗೆರೆಯವರು. ಅಲ್ಲಿನ ಬಿಐಇಟಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು. ಶಿವಮೊಗ್ಗಕ್ಕೆ ಬಂದವರು ವಾಪಸ್ ದಾವಣಗೆರೆಗೆ ಹೊರಟಿದ್ದರು ಎಂದು ತಿಳಿದುಬಂದಿದೆ.
ಲಾರಿ ಚಾಲಕ ಪೊಲೀಸರ ವಶಕ್ಕೆ
ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಅಭಯ್ ಪ್ರಕಾಶ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತುಮಕೂರು ಅಪಘಾತದಲ್ಲಿ ಇಬ್ಬರ ಸಾವು
ಚಿಕ್ಕಬಳ್ಳಾಪುರ: ಕ್ಯಾಂಟರ್ ಮತ್ತು ಆಟೋ ನಡುವೆ ಅಪಘಾತ ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಕೊರಟಗೆರೆ ಗಡಿಭಾಗದ ಅರಸಾಪುರ-ಕಾಶಾಪುರ ಬಳಿ ಅಪಘಾತ ಸಂಭವಿಸಿದೆ. ತುಮಕೂರು ಜಿಲ್ಲೆ ಕೊರಟಗೆರೆ, ಗೌರಿಬಿದನೂರು ತಾಲೂಕಿನ ಗಡಿ ಗ್ರಾಮವಾಗಿದೆ. ಕೊರಟಗೆರೆಯಿಂದ ಗೌರಿಬಿದನೂರಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಲ್ಲಿ ಅಪಘಾತ ಸಂಭವಿಸಿದೆ.
ಇದನ್ನೂ ಓದಿ: Love Jihad Law: ರಾಜ್ಯದಲ್ಲಿ ಲವ್ ಜಿಹಾದ್ ತಡೆಗೆ ವಿಶೇಷ ಪೊಲೀಸ್ ದಳ: ಗೃಹ ಸಚಿವ ಆರಗ ಜ್ಞಾನೇಂದ್ರ ಭರವಸೆ
ಇಬ್ಬರು ಮಕ್ಕಳ ಸ್ಥಿತಿ ಚಿಂತಾಜನಕ
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಮೂವರಿಗೆ ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ದುರಂತದಲ್ಲಿ ಆಟೋ ಚಾಲಕನ ಕೈ ಕಟ್- ಇಬ್ಬರು ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ. ಕೊರಟಗೆರೆ ಪಟ್ಟಣದ ಮೀಲಾನಿ (25), ಜೈರಬಿ (70) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಆಟೋ ಚಾಲಕ ಕಲಂಧರ್(35) ಅರ್ಪ(5), ಅಸೀತಾ(3)ಗೆ ಗಂಭೀರ ಗಾಯಗೊಂಡಿದ್ದು, ಸ್ಥಳಕ್ಕೆ ಗೌರಿಬಿದನೂರು ಪೊಲೀಸರು ಹಾಗೂ ಕೊರಟಗೆರೆ ಪೊಲೀಸರು ಭೇಟಿ ನೀಡಿದ್ರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ