ಬರದ ತಾಲೂಕಿನ ಬತ್ತಿದ ಕೆರೆಗಳಿಗೆ ಸಿಗಲಿದೆ ಜೀವ ಸೆಲೆ;197 ಕೆರೆಗಳಿಗೆ ನೀರು ತುಂಬಿಸಲು ಮುಂದಾದ ಸರ್ಕಾರ

ಕಡೂರು ತಾಲೂಕಿನ 114 ಕಕೆರೆಗಳು ಸೇರಿದಂತೆ, ಚಿಕ್ಕಮಗಳೂರು ತಾಲೂಕಿನ 48, ತರೀಕೆರೆ ತಾಲೂಕಿನ 31, ಕೆರೆಗಳಿಗೆ ನೀರು ತುಂಬಿಸಲು ಸರ್ಕಾರ ಮುಂದಾಗಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚಿಕ್ಕಮಗಳೂರು (ನ.18) : ಕಾಫಿನಾಡು ಹಚ್ಚ ಹಸಿರಿನ ಜೊತೆ ಬರದ ನಾಡು ಕೂಡ. ಇಲ್ಲಿನ ಕಡೂರು ಸೇರಿದಂತೆ ಹಲವು ಕಡೆ ಜನರು ನೀರಿಗಾಗಿ ಪರಿತಪಿಸುತ್ತಲೇ ಇದ್ದಾರೆ. ಮಳೆಯಿಲ್ಲದೇ ಈ ಭಾಗದ ಕೆರೆಗಳೆಲ್ಲಾ ಒಣಗಿ ಹೋಗಿದ್ದವು. ಒಣಗಿ ಹೋಗೋದು ಏನು, ಕೆಲವೆಡೆ ಕೆರೆಗಳೆ ಕಾಣೆಯಾಗಿದ್ದವು. ಇನ್ನು ಕೆರೆಗಳನ್ನೇ ನಂಬಿಕೊಂಡು ಕೃಷಿ ಮಾಡುತ್ತಿದ್ದ ರೈತರ ಬದುಕಂತೂ ಮೂರಾ ಬಟ್ಟೆಯಾಗಿತ್ತು. ಇನ್ನೇನು ಕೃಷಿಯಲ್ಲಿನ ಆಸೆಯನ್ನೇ ಬಿಟ್ಟಿದ್ದ ಅನ್ನದಾತರ ಬಾಳಲ್ಲಿ ಇದೀಗ ಭರವಸೆಯ ಕಿರಣ ಮೂಡಿದೆ. ಕಡೂರು ತಾಲೂಕಿನ 114 ಕೆರೆಗಳಿಗೆ ನೀರು ತುಂಬಿಸಲು ಸರ್ಕಾರ ತೀರ್ಮಾನಿಸಿದೆ. ಕಡೂರು ತಾಲೂಕಿನ  ಕೆರೆಗಳು ಸೇರಿದಂತೆ, ಚಿಕ್ಕಮಗಳೂರು ತಾಲೂಕಿನ 48, ತರೀಕೆರೆ ತಾಲೂಕಿನ 31, ಕೆರೆಗಳಿಗೆ ನೀರು ತುಂಬಿಸಲು ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಇದಿಷ್ಟೇ ಅಲ್ಲದೇ ಪಕ್ಕದ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ 4 ಕೆರೆಗಳಿಗೂ ನೀರು ತುಂಬಿಸಲು ಸರ್ಕಾರ ಮನಸ್ಸು ಮಾಡಿದೆ. ಒಟ್ಟು 197 ಕೆರೆಗಳಿಗೆ 1281 ಕೋಟಿ ವೆಚ್ಚದಲ್ಲಿ ನೀರು ತುಂಬಿಸಲು ಸರ್ಕಾರ ಅನುಮೋದನೆ ಹೊರಡಿಸಿದ್ದು, ಈ ಭಾಗದ ರೈತರ ದಶಕಗಳ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಂತಾಗಿದೆ.

ಕೆರೆಯ ಶೇಖರಣಾ ಸಾಮರ್ಥ್ಯದ ಶೇಕಡಾ 50 ರಷ್ಟನ್ನು ನೀರು ತುಂಬಿಸಲು ಯೋಜನೆ ರೂಪಿಸಲಾಗಿದೆ. ಇದರಿಂದ ಅಂತರ್ಜಲ ಅಭಿವೃಧಿಯಾಗುವುದಲ್ಲದೇ ಕೃಷಿ ಚಟುವಟಿಕೆಗಳಿಗೂ ಕೂಡ ಸಹಾಯವಾಗಲಿದೆ. ಒಟ್ಟು ನಾಲ್ಕು ಹಂತಗಳಲ್ಲಿ ಯೋಜನೆ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದ್ದು, ಮೊದಲ ಹಂತದಲ್ಲಿ 32 ಕೆರೆಗಳನ್ನ ತುಂಬಿಸಲು 406 ಕೋಟಿ, ಎರಡನೇ ಹಂತದಲ್ಲಿ 66 ಕೆರೆಗಳನ್ನ ತುಂಬಿಸಲು 299 ಕೋಟಿ, 3ನೇ ಹಂತದಲ್ಲಿ 99 ಕೆರೆಗಳನ್ನ ತುಂಬಿಸಲು 477 ಕೋಟಿ, 4ನೇ ಹಂತದಲ್ಲಿ 100 ಕೋಟಿ ವೆಚ್ಚದಲ್ಲಿ ಕೆರೆಗಳನ್ನ ತುಂಬಿಸಲು ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಹತ್ತಾರು ವರ್ಷಗಳಿಂದ ನಮ್ಮೂರ ಕೆರೆಗಳನ್ನ ತುಂಬಿಸಿ ಅಂತಾ ರೈತರು ಜನಪ್ರತಿನಿಧಿಗಳ, ಅಧಿಕಾರಿಗಳು, ಸರ್ಕಾರದ ಬಳಿ ಪರಿ ಪರಿಯಾಗಿ ಬೇಡಿಕೊಂಡಿದ್ರು. ಆದ್ರೆ ಅದೆಲ್ಲಾ ಕೇವಲ ಭರವಸೆಯಾಗಿಯೇ ಉಳಿಯಿತೇ ಹೊರತು, ಈಡೇರಲಿಲ್ಲ. ಸದ್ಯ ನಮ್ಮೂರ ಕೆರೆಗಳು ತುಂಬುತ್ತೆ ಅನ್ನೋ ಸುದ್ದಿ ಕೇಳಿ ಅನ್ನದಾತರಲ್ಲಿ ಸಂಭ್ರಮ ಮೂಡಿದೆ.

ಈ ಕೆರಗಳಿಗೆ ಭದ್ರಾ ಕಣಿವೆಯಿಂದ ನೀರು ತುಂಬಿಸಲು ಯೋಜನೆ ಸಿದ್ದಪಡಿಸಲಾಗಿದ್ದು, ರೈತರಿಗಂತೂ ಹೋದ ಜೀವನೇ ಬಂದಂತಾಗಿದೆ.  ಜಿಲ್ಲೆಯ ಮಲೆನಾಡು ಭಾಗದಲ್ಲಿ ಅತಿಹೆಚ್ಚು ಮಳೆಯಾದ್ರೂ ಕೂಡ ಬಯಲು ಸೀಮೆಯ ಪ್ರದೇಶವಾದ ಕಡೂರು ತಾಲೂಕು ಸೇರಿದಂತೆ ತರೀಕೆರೆ ಹಾಗೂ ಚಿಕ್ಕಮಗಳೂರು ತಾಲೂಕಿನ ಕೆಲ ಭಾಗಗಳಲ್ಲಿ ಮಳೆ ಅನ್ನೋದೇ ಮರೀಚಿಕೆಯಾಗಿತ್ತು.
Published by:Seema R
First published: