ರ‍್ಯಾಗಿಂಗ್‌ ತಡೆ ನೆಪದಲ್ಲಿ ಪ್ರೋತ್ಸಾಹಧನಕ್ಕೆ ಕೊಕ್ಕೆ;ಕನ್ನಡ ವಿವಿಯ ವಿದ್ಯಾರ್ಥಿಗಳಿಗೆ ಬಾಂಡ್ ಪತ್ರದ ಮೂಲಕ ಮೂಗುದಾರ?

ವಿವಿ ಕ್ಯಾಂಪಸ್ಸಿನಲ್ಲಿ ರ‍್ಯಾಗಿಂಗ್‌ ತಡೆಗೆ ಕನ್ನಡ ವಿವಿ ಆಡಳಿತ ಮಂಡಳಿ ಈ ವರ್ಷ 20 ರೂಪಾಯಿ ಬಾಂಡ್ ಪೇಪರ್ ನಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರ ಕಡೆಯಿಂದ ದೃಢೀಕರಣ ಪತ್ರ ಬರೆಸಿಕೊಳ್ಳುತ್ತಿದೆ. ಈ ಮೂಲಕ ರ‍್ಯಾಗಿಂಗ್‌ ತಡೆಗೆ ತೆಗೆದುಕೊಂಡಿರುವ ಕ್ರಮ ಉತ್ತಮವಾದುದೇ. ಆದರೆ ಇದು ಮೇಲ್ನೋಟಕ್ಕೆ ಚೆನ್ನಾಗಿದ್ದು, ದೃಢೀಕರಣ ಪತ್ರದಲ್ಲಿರುವ 7ನೇ ಅಂಶ ವಿದ್ಯಾರ್ಥಿಗಳಿಗೆ ಸಾಕಷ್ಟು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

news18-kannada
Updated:February 21, 2020, 7:27 AM IST
ರ‍್ಯಾಗಿಂಗ್‌ ತಡೆ ನೆಪದಲ್ಲಿ ಪ್ರೋತ್ಸಾಹಧನಕ್ಕೆ ಕೊಕ್ಕೆ;ಕನ್ನಡ ವಿವಿಯ ವಿದ್ಯಾರ್ಥಿಗಳಿಗೆ ಬಾಂಡ್ ಪತ್ರದ ಮೂಲಕ ಮೂಗುದಾರ?
ಹಂಪಿ ಕನ್ನಡ ವಿಶ್ವವಿದ್ಯಾಲಯ.
  • Share this:
ಬಳ್ಳಾರಿ; ವಿಶ್ವವಿದ್ಯಾಲಯ ಹಾಗೂ ಅದರ ವ್ಯಾಪ್ತಿಯ ಕಾಲೇಜಿನಲ್ಲಿ ರ‍್ಯಾಗಿಂಗ್‌ ಪಡೆಂಭೂತ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಕನ್ನಡ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರಿಂದ ಬಾಂಡ್ ಪತ್ರ ಬರೆಸಿಕೊಂಡು ಮೂಗುದಾರ ಹಾಕಲು ಮುಂದಾಗಿದೆ. ಇದು ನಿಜಕ್ಕೂ ಉತ್ತಮ ಬೆಳವಣಿಗೆ ಆದರೆ, ಈ ಹೆಸರಿನಲ್ಲಿ ವಿವಿ ವಿದ್ಯಾರ್ಥಿಗಳ ಪ್ರೋತ್ಸಾಹಧನಕ್ಕೂ ಕೊಕ್ಕೆ ಹಾಕಲಾಗುತ್ತಿದೆಯೇ ಎಂಬ ಅನುಮಾನಗಳು ಇದೀಗ ವ್ಯಕ್ತವಾಗುತ್ತಿದೆ.

ರಾಜ್ಯದಲ್ಲಿ ಕನ್ನಡ ನಾಡು, ನುಡಿ, ಭಾಷೆ ಬೆಳವಣಿಗೆಗೆ ಇರುವ ಏಕೈಕ ವಿಶ್ವವಿದ್ಯಾಲಯ ಹಂಪಿಯ ಕನ್ನಡ ವಿವಿ. ಇಲ್ಲಿ ಪದವಿಗಳಿಗಿಂತ ಸಂಶೋಧನೆಗೆ ಈ ವಿವಿಯಲ್ಲಿ ಹೆಚ್ಚು ಪ್ರಾಮುಖ್ಯತೆಯಿದೆ. ಇಂಥ ಕನ್ನಡ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ, ಡಿಪ್ಲೊಮಾ, ಎಂಫಿಲ್, ಪಿಎಚ್ ಡಿ ಹೀಗೆ ಉನ್ನತ ವ್ಯಾಸಾಂಗಕ್ಕೆ ರಾಜ್ಯದ ವಿವಿಧ ಮೂಲೆಗಳಿಂದ ಇಲ್ಲಿಗೆ ವಿದ್ಯಾಭ್ಯಾಸ ಮಾಡಲು ಬರುತ್ತಾರೆ.

ವಿವಿ ಕ್ಯಾಂಪಸ್ಸಿನಲ್ಲಿ ರ‍್ಯಾಗಿಂಗ್‌ ತಡೆಗೆ ಕನ್ನಡ ವಿವಿ ಆಡಳಿತ ಮಂಡಳಿ ಈ ವರ್ಷ 20 ರೂಪಾಯಿ ಬಾಂಡ್ ಪೇಪರ್ ನಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರ ಕಡೆಯಿಂದ ದೃಢೀಕರಣ ಪತ್ರ ಬರೆಸಿಕೊಳ್ಳುತ್ತಿದೆ. ಈ ಮೂಲಕ ರ‍್ಯಾಗಿಂಗ್‌ ತಡೆಗೆ ತೆಗೆದುಕೊಂಡಿರುವ ಕ್ರಮ ಉತ್ತಮವಾದುದೇ. ಆದರೆ ಇದು ಮೇಲ್ನೋಟಕ್ಕೆ ಚೆನ್ನಾಗಿದ್ದು, ದೃಢೀಕರಣ ಪತ್ರದಲ್ಲಿರುವ 7ನೇ ಅಂಶ ವಿದ್ಯಾರ್ಥಿಗಳಿಗೆ ಸಾಕಷ್ಟು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

9833_IMG-20200219-WA0055
ವಿದ್ಯಾರ್ಥಿಗಳಿಂದ ಬರೆಸಿಕೊಳ್ಳಲಾಗಿರುವ ಮುಚ್ಚಳಿಕೆ.


ಇದರಲ್ಲಿ ವಿವಿ ನೀಡುವ ಪ್ರೋತ್ಸಾಹ ಧನ ಹಾಗೂ ಶಿಷ್ಯ ವೇತನವನ್ನು ನಿರೀಕ್ಷಿಸುವಂತಿಲ್ಲ ಎಂಬ ಅಂಶವನ್ನು ಮುದ್ರಿಸಲಾಗಿದೆ. ಇದು ಸಹಜವಾಗಿ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಮಾನಗಳಿಗೆ ಎಡೆಮಾಡುತ್ತಿದೆ ಎಂದು ವಿವಿ ವಿದ್ಯಾರ್ಥಿ ಬಸವರಾಜ್ ಆಕ್ಷೇಪ ವ್ಯಕ್ತಪಡಿಸುತ್ತಾರೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ ಸಿಎಎ ವಿರೋಧ ಪ್ರತಿಭಟನೆ ಸಭೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಯುವತಿ

ವಿಶ್ವವಿದ್ಯಾಲಯದ ಎಸ್ ಇ ಪಿ, ಟಿಎಸ್ ಪಿ ಅನುದಾನದಲ್ಲಿ ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟ ಪಂಗಡದ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾಸಿಕ ಪ್ರೋತ್ಸಾಹ ಧನ ವಿತರಣೆ ಮಾಡದಿರಲು ವಿವಿ ಚಿಂತನೆ ಮಾಡುತ್ತಿದೆಯಾ? ಎಂಬ ಅನುಮಾನ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ವಿಶ್ವವಿದ್ಯಾಲಯದಲ್ಲಿ 300ಕ್ಕೂ ಹೆಚ್ಚು ಎಸ್ ಸಿ-ಎಸ್ ಟಿ ವಿದ್ಯಾರ್ಥಿಗಳಿದ್ದು, ಇವರೆಲ್ಲರಿಗೂ ವಿವಿ ಬಿಡುಗಡೆಯಾಗಿರುವ ಎಸ್ ಇ ಪಿ ಹಾಗೂ ಟಿ ಎಸ್ ಪಿ ಅನುದಾನದಲ್ಲಿಯೇ ಮಾಸಿಕ ಪ್ರೋತ್ಸಾಹ ಧನ ನೀಡಲಾಗುತ್ತಿತ್ತು.ಅದರಂತೆ ವಿದ್ಯಾರ್ಥಿಗಳಿಗೆ ಪ್ರತಿತಿಂಗಳು 10 ಸಾವಿರ ನೀಡಲಾಗುತ್ತಿದೆ. ಕಳೆದ ವರ್ಷ ಪ್ರೋತ್ಸಾಹ ಧನ ವಿತರಣೆ ವಿಳಂಬವಾಗಿತ್ತು. ಇದಕ್ಕೆ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ಮಾಡಿದ್ದರು. ಈ ಸಂಬಂಧ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಹೀಗಾಗಿ ಈ ಸಲ ವಿವಿ ಜಾಣ ನಡೆ ಅನುಸರಿಸಿದ್ದು, ಸರ್ಕಾರದ ಸೌಲಭ್ಯ ಪಡೆಯಲಿ ಆದರೆ ವಿವಿ ಪ್ರೋತ್ಸಾಹ ಧನ ನೀಡುವುದಿಲ್ಲ ಎಂಬ ಅಂಶ ಸೇರಿಸಿದೆ.

ಈ ಬಗ್ಗೆ ವಿವಿ ಉಪ ಕುಲಪತಿ ಡಾ. ಸ.ಚಿ.ರಮೇಶ್ ಅವರನ್ನು ಕೇಳಿದರೆ, ವಿವಿಗೆ ಸಿಗುತ್ತಿರುವ ಅನುದಾನ ತುಂಬ ಕಡಿಮೆಯಿದೆ. ಅನುದಾನ ದೊರೆತರೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಬಹುದು. ಯುಜಿಸಿ, ವಿವಿ ಅಧಿನಿಯಮ- ಪರಿನಿಯಮದಂತೆ ದೃಢೀಕರಣ ಪತ್ರ ಬರೆಸಿಕೊಳ್ಳಲಾಗುತ್ತಿದೆ ಹೊರತು ಯಾವುದೇ ದುರದ್ದೇಶದಿಂದಲ್ಲ ಎಂದು ಸ್ಪಷ್ಟನೆ ನೀಡುತ್ತಾರೆ.

ಯುಜಿಸಿ ನಿಯಮದ ಪ್ರಕಾರ ರ‍್ಯಾಗಿಂಗ್‌ ತಡೆಗೆ ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ಬಾಂಡ್ ಪತ್ರ ಬರೆಸಿಕೊಳ್ಳುವುದೇನೋ ಸರಿ. ಆದರೆ ಅದರಲ್ಲಿ ಉಲ್ಲೇಖವಾಗಿರುವ ಪ್ರೋತ್ಸಾಹ ಹಾಗೂ ಶಿಷ್ಯವೇತನ ನಿರೀಕ್ಷಿಸಬಾರದು ಎಂಬುದು ವಿವಿ ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ : ಮೋದಿ-ಶಾ ಎಲ್ಲಾ ಚುನಾವಣೆಯಲ್ಲೂ ಗೆಲ್ಲಲು ಸಾಧ್ಯವಿಲ್ಲ, ದೆಹಲಿಯಲ್ಲಿ ಬಿಜೆಪಿಯನ್ನು ಬಲಪಡಿಸಿ; ಮೋಹನ್ ಭಾಗವತ್​
First published:February 21, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ