ಪರೋಟಾಗೆ ಶೇ. 18 ಜಿಎಸ್​ಟಿ ನಿಜವೇ? ಇದೆಲ್ಲಾ ವದಂತಿ ಎನ್ನುತ್ತಿದೆ ಸರ್ಕಾರಿ ಮೂಲ; ಹಾಗಾದರೆ ವಾಸ್ತವ ಏನು?

ವಿಶ್ವಾದ್ಯಂತ ಸಂಸ್ಕರಿತ ಅಥವಾ ಪ್ರಿಸರ್ವ್ಡ್ ಫುಡ್ಗಳಿಗೆ ಹೆಚ್ಚು ತೆರಿಗೆ ವಿಧಿಸುವ ಕ್ರಮ ಅನುಸರಿಸಲಾಗುತ್ತದೆ. ಅದರಂತೆಯೇ ಸಂಸ್ಕರಿತ ಪರೋಟಾಗೂ ಹೆಚ್ಚು ತೆರಿಗೆ ಹಾಕಲಾಗಿದೆ. ಹೋಟೆಲ್​ಗಳಲ್ಲಿ ಸಿಗುವ ಪರೋಟಾಗೆ ಹೆಚ್ಚು ತೆರಿಗೆ ಇಲ್ಲ ಎಂದು ಸರ್ಕಾರಿ ಮೂಲಗಳು ಸ್ಪಷ್ಟಪಡಿಸಿವೆ.

ಪರೋಟಾ

ಪರೋಟಾ

 • Share this:
  ಬೆಂಗಳೂರು(ಜೂನ್ 13): ಬಡವರೂ ಸೇರಿದಂತೆ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಜನರು ಹೆಚ್ಚಾಗಿ ತಿನ್ನುವ ಪರೋಟಾಗೆ ಸರ್ಕಾರ ಅತಿ ಹೆಚ್ಚು ಜಿಎಸ್​ಟಿ (ಶೇ. 18) ವಿಧಿಸಿದೆ ಎಂಬಂಥ ಸುದ್ದಿ ಸಾಕಷ್ಟು ಹರಿದಾಡುತ್ತಿದೆ. ಸರ್ಕಾರ ಬಡವರ ರಕ್ತ ಹೀರುತ್ತಿದೆ ಎಂಬ ಟೀಕೆಗಳು ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತಿವೆ. ಆದರೆ, ಇವೆಲ್ಲವೂ ಅರ್ಧಸತ್ಯ ಮತ್ತು ವದಂತಿಗಳು ಎಂದು ಸರ್ಕಾರಿ ಮೂಲಗಳು ಹೇಳುತ್ತಿವೆ.

  ಪರೋಟಾಗೆ ಶೇ. 18ರಷ್ಟು ಜಿಎಸ್​ಟಿ ವಿಧಿಸಿರುವುದು ನಿಜ. ಆದರೆ, ಇದು ಬೀದಿಬದಿಯ ಹೋಟೆಲ್​ಗಳಲ್ಲಿ ಸಿಗುವ ಹಾಗೂ ರೆಸ್ಟೋರೆಂಟ್​ಗಳಲ್ಲಿ ಸಿಗುವ ಪರೋಟಾವಲ್ಲ. ಸಂಸ್ಕರಿಸಿದ ಅಥವಾ ಪ್ರಿಸರ್ವ್ ಮಾಡಿ ಫ್ರೀಜ್ ಮಾಡಿದ ಗೋದಿ ಪರೋಟಾ ಮತ್ತು ಮಲಬಾರ್ ಪರೋಟಾಗೆ ಶೇ. 18 ಜಿಎಸ್​ಟಿ ವಿಧಿಸಬೇಕೆಂದು ಕರ್ನಾಟಕದ ಅಡ್ವಾನ್ಸ್​ಡ್ ರೂಲಿಂಗ್ ಅಥಾರಿಟಿ (ನ್ಯಾಯಾಂಗ ಪ್ರಾಧಿಕಾರ) ಸೂಚಿಸಿತ್ತು. ಈ ಸಂಸ್ಕರಿತ ಪರೋಟಾಗೂ ಹೋಟೆಲ್​ಗಳಲ್ಲಿ ಸಿಗುವ ಪರೋಟಾಗೂ ಬಹಳಷ್ಟು ವ್ಯತ್ಯಾಸವಿದೆ. ಸಂಸ್ಕರಿತ ಪರೋಟಾ 3-7 ದಿನಗಳ ಕಾಲ ಬಾಳಿಕೆ ಬರುತ್ತವೆ. ಇವುಗಳ ಬೆಲೆ ಕೂಡ ಹೆಚ್ಚಿರುತ್ತದೆ. ದುಡ್ಡು ಇರುವ ವರ್ಗದ ಜನರು ಇದನ್ನ ಹೆಚ್ಚಾಗಿ ಸೇವಿಸುತ್ತಾರೆ. ಅದ್ದರಿಂದ ಈ ಆಹಾರಕ್ಕೆ ಶೇ. 18ರಷ್ಟು ಜಿಎಸ್​ಟಿ ವಿಧಿಸಿರುವುದು ತಪ್ಪಾದ ಕ್ರಮ ಅಲ್ಲ ಎಂದು ಸರ್ಕಾರದ ಮೂಲಗಳು ಹೇಳುತ್ತಿವೆ.

  ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಕ್ರೋಶ  ಬೇರೆ ಸಂಸ್ಕರಿತ ಆಹಾರಗಳಿಗೂ ಹೆಚ್ಚು ತೆರಿಗೆ ಇದೆ. ವಿಶ್ವಾದ್ಯಂತ ಇದೇ ನೀತಿ ಅನುಸರಿಸಲಾಗುತ್ತದೆ. ನಮ್ಮ ಮನೆಗೆ ದಿನವೂ ಸರಬರಾಜಾಗುವ ಹಾಲಿಗೆ ಯಾವುದೇ ತೆರಿಗೆ ಇರುವುದಿಲ್ಲ. ಆದರೆ, ಟೆಟ್ರಾಪ್ಯಾಕ್​ನ ಹಾಲಿಗೆ ಶೇ. 5 ತೆರಿಗೆ ಇರುತ್ತದೆ. ಹಾಗೆಯೇ, ಕಂಡೆನ್ಸ್ ಮಾಡಿದ ಹಾಲಿಗೆ ಶೇ. 12 ತೆರಿಗೆ ಬೀಳುತ್ತದೆ. ಪ್ಯಾಕೇಜ್ ಮಾಡಿದ ಆಹಾರ ಐಟಂಗಳಿಗೂ ಹೆಚ್ಚು ತೆರಿಗೆ ಇರುತ್ತದೆ. ಬಿಸ್ಕತ್, ಪೇಸ್ಟ್ರೀಸ್, ಕೇಕ್ ಮೊದಲಾದವಕ್ಕೂ ಕೂಡ ಶೇ. 18ರಷ್ಟು ಜಿಎಸ್​ಟಿ ತೆರಿಗೆ ವಿಧಿಸಲಾಗುತ್ತದೆ. ಇವು ಎಲ್ಲಾ ಸರ್ಕಾರಗಳು ಅನುಸರಿಸುವ ತೆರಿಗೆ ಕ್ರಮವಾಗಿವೆ. ಆದರೆ, ಹೋಟೆಲ್​ಗಳಲ್ಲಿ ನೀಡುವ ಪರೋಟಾಗೆ ಶೇ. 18ರಷ್ಟು ಜಿಎಸ್​ಟಿ ವಿಧಿಸಲಾಗುತ್ತದೆ ಎಂಬುದು ಸುಳ್ಳು. ಮಾಮೂಲಿಯ ಪರೋಟಾ ಮತ್ತಿತರ ರೊಟ್ಟಿಗಳಿಗೆ ಶೇ. 5 ರಷ್ಟು ಮಾತ್ರ ತೆರಿಗೆ ಇದೆ ಎಂದು ಸರ್ಕಾರದ ಮೂಲಗಳು ಸ್ಪಷ್ಟಪಡಿಸಿವೆ.
  First published: