HOME » NEWS » State » GOVERNMENT SCHOOL ADOPTION CONCEPT FIRST IN THE COUNTRY SAYS CHIEF MINISTER YEDIYURAPPA SBM HK

ಸರ್ಕಾರಿ ಶಾಲಾ ದತ್ತು ಪರಿಕಲ್ಪನೆ ದೇಶದಲ್ಲೇ ಪ್ರಥಮ: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ

ಶಾಲೆಗಳನ್ನು ದತ್ತು ಪಡೆಯುವುದಷ್ಟೇ ಅಲ್ಲ, ಆ ನಂತರ ಶಾಲೆಗೆ ಆಗಾಗ್ಗೆ ಭೇಟಿ ನೀಡಿ ಮಕ್ಕಳ ಪೋಷಕರನ್ನು ಶಾಲೆಗೆ ಕರೆಸಿ ಶಿಕ್ಷಣದ ಮಹತ್ವವನ್ನು ಹೇಳುವುದಲ್ಲದೇ ಶಾಲೆಗಳ ಸ್ಥಿತಿಗತಿಗಳನ್ನು ಗಮನಿಸಿ ಶಾಲೆಯ ಸರ್ವತೋಮುಖ ಬೆಳವಣಿಗೆಗೆ ಪ್ರೇರಣೆಯಾಗಬೇಕು

news18-kannada
Updated:November 24, 2020, 2:59 PM IST
ಸರ್ಕಾರಿ ಶಾಲಾ ದತ್ತು ಪರಿಕಲ್ಪನೆ ದೇಶದಲ್ಲೇ ಪ್ರಥಮ: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ
  • Share this:
ಬೆಂಗಳೂರು(ನವೆಂಬರ್​. 24): ಶಾಲೆಗಳನ್ನು ಜನಪ್ರತಿನಿಧಿಗಳು ಸೇರಿದಂತೆ ಸಮಾಜದ ವಿವಿಧ ಸಂಘ-ಸಂಸ್ಥೆಗಳು ದತ್ತು ತೆಗೆದುಕೊಂಡು ಅಭಿವೃದ್ಧಿ ಪಡಿಸುವಂತಹ ಪರಿಕಲ್ಪನೆ ದೇಶದಲ್ಲೇ ಮೊದಲನೆಯದಾಗಿದ್ದು, ಇದು ಉಳಿದವರಿಗೂ ಪ್ರೇರಣೆಯಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ ಆಶ್ರಯದಲ್ಲಿ ನಡೆದ ಸರ್ಕಾರಿ ಶಾಲೆಗಳ ದತ್ತು ಸ್ವೀಕಾರ ಸಮಾರಂಭದಲ್ಲಿ ದತ್ತು ಸ್ವೀಕರಿಸಿದ ಸಂಸ್ಥೆಗಳಿಗೆ ಶಾಲಾ ದತ್ತು ಪತ್ರಗಳನ್ನು ವಿತರಿಸಿ ಮಾತನಾಡಿದ ಅವರು, ಸರ್ಕಾರದೊಂದಿಗೆ ಸಮುದಾಯವೂ ಕೈಜೋಡಿಸಿ ಶಾಲೆಗಳನ್ನು ಅಭಿವೃದ್ಧಿಗೆ ಕೈಜೋಡಿಸುತ್ತಿರುವುದು ವಿಶಿಷ್ಟವಾದ ಕಲ್ಪನೆಯಾಗಿದ್ದು, ಇದರಿಂದ ಸರ್ಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ನಾಂದಿ ಹಾಡಲಿದೆ. 2020-21ನೇ ಸಾಲಿನ ಆಯವ್ಯದಲ್ಲಿ ಘೋಷಿಸಿದಂತೆ ರಾಜ್ಯದ ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಸದಸ್ಯರು ತಮ್ಮ ಅವಧಿಯಲ್ಲಿ ಕನಿಷ್ಠ ಮೂರು ಶಾಲೆಗಳನ್ನು ದತ್ತು ತೆಗೆದುಕೊಂಡು ತಮ್ಮ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯ ಮೂಲಕ ಅಭಿವೃದ್ಧಿ ಪಡಿಸುವುದು ಸೇರಿದಂತೆ ರಾಜ್ಯದ 34 ಹೆಚ್ಚು ಸರ್ಕಾರಿ ಹಾಗೂ ಖಾಸಗಿ ವಿಶ್ವವಿದ್ಯಾನಿಲಯಗಳು, ಶಿಕ್ಷಣ ಸಂಸ್ಥೆಗಳು, ಮಾಧ್ಯಮ ಸಂಸ್ಥೆಗಳು ದತ್ತು ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ನಿಜಕ್ಕೂ ಪ್ರಶಂಸನೀಯ ಕಾರ್ಯವಾಗಿದೆ ಎಂದರು.

ಈ ಕಾರ್ಯಕ್ರಮ ಸಮುದಾಯದಲ್ಲಿ ಉಳಿದವರಿಗೂ ತಮ್ಮೂರಿನ ಶಾಲೆ ದತ್ತು ಪಡೆದು ಅಭಿವೃದ್ಧಿ ಪಡಿಸಲು ಪ್ರೇರಣೆಯಾಗಲಿದ್ದು, ದೇಶದಲ್ಲಿಯೇ ಒಂದು ಮಾದರಿ ಕಾರ್ಯಕ್ರಮವಾಗಿದೆ ಎಂದು ಅವರು ಹೇಳಿದರು. ತಾವುಗಳು ಶಾಲೆಗಳನ್ನು ದತ್ತು ಪಡೆಯುವುದಷ್ಟೇ ಅಲ್ಲ, ಆ ನಂತರ ಶಾಲೆಗೆ ಆಗಾಗ್ಗೆ ಭೇಟಿ ನೀಡಿ ಮಕ್ಕಳ ಪೋಷಕರನ್ನು ಶಾಲೆಗೆ ಕರೆಸಿ ಶಿಕ್ಷಣದ ಮಹತ್ವವನ್ನು ಹೇಳುವುದಲ್ಲದೇ ಶಾಲೆಗಳ ಸ್ಥಿತಿಗತಿಗಳನ್ನು ಗಮನಿಸಿ ಶಾಲೆಯ ಸರ್ವತೋಮುಖ ಬೆಳವಣಿಗೆಗೆ ಪ್ರೇರಣೆಯಾಗಬೇಕು ಎಂದು ತಿಳಿಸಿದರು.

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ, ನಮ್ಮ ರಾಜ್ಯದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೇ ಮಠ-ಮಾನ್ಯಗಳು, ಶಿಕ್ಷಣ ಸಂಸ್ಥೆಗಳು  ಶಿಕ್ಷಣ, ಜ್ಞಾನ, ಅನ್ನ ಅಕ್ಷರ, ದಾಸೋಹದಲ್ಲಿ ತೊಡಗಿಸಿಕೊಂಡು ಸಮಾಜದ ಎಲ್ಲರಿಗೂ ಜಾತಿಭೇದವಿಲ್ಲದೇ ಶಿಕ್ಷಣ  ನೀಡಿದ್ದರಿಂದಲೇ ನಾಡು ಇಂದು ಶೈಕ್ಷಣಿಕವಾಗಿ ಮುಂದೆ ಬರಲು ಸಾಧ್ಯವಾಗಿದೆ. ಈಗ ಇಡೀ ಸಮುದಾಯ ಮತ್ತು ಜನಪ್ರತಿನಿಧಿಗಳು ತಮ್ಮ ಭಾಗದ ಸರ್ಕಾರಿ ಶಾಲೆಗಳನ್ನು ದತ್ತು  ಪಡೆದು ಅಭಿವೃದ್ಧಿ ಪಡಿಸುವ  ಪರಿಕಲ್ಪನೆಯ ಯೋಜನೆ ವಿಶಿಷ್ಟವಾಗಿದ್ದು, ಇದರಲ್ಲಿ ಹೆಚ್ಚಿನ ಸಂಖ್ಯೆಯ ಸಂಸ್ಥೆಗಳು ಭಾಗಿಯಾಗಿ ರಾಜ್ಯದ ಶಾಲೆಗಳು ಅಭಿವೃದ್ಧಿಯಾಗುವಂತಾಗಲಿ ಎಂದರು.

ಖಾಸಗಿ ಶಾಲೆಗಳಿಗೆ ಸಮಾನವಾಗಿ ಸರ್ಕಾರಿ ಶಾಲೆಗಳ ಅಭಿವೃದ್ಧಿ:

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಮಾತನಾಡಿ, ಕೂಲಿ ಕೆಲಸ ಮಾಡುವವರೂ ಸಹ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಿ ತಮ್ಮ ಆದಾಯದ ಶೇ. 20ರಷ್ಟನ್ನು ಶುಲ್ಕವಾಗಿ ತುಂಬುತ್ತಿದ್ದಾರೆ. ಅವರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವುದರಿಂದ ಆ ಶೇ. 20 ಹಣವನ್ನು ತಮ್ಮ ಕುಟುಂಬದ ಇತರೆ ಸಂಗತಿಗಳಿಗೆ ಬಳಸಿಕೊಳ್ಳಬಹುದು. ಆ ನಿಟ್ಟಿನಲ್ಲಿ ನಾವು ಖಾಸಗಿ ಶಾಲೆಗಳಿಗೆ ಸಮಾನವಾಗಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಸಮುದಾಯದ ಭಾಗಿಯಾಗುವಿಕೆ ನಿಜಕ್ಕೂ ಅತ್ಯಂತ ವೈಶಿಷ್ಟ್ಯ ಪೂರ್ಣವಾದುದು ಎಂದು ತಿಳಿಸಿದರು.

ರಾಜ್ಯದಲ್ಲಿ 53 ಸಾವಿರ ಸರ್ಕಾರಿ ಶಾಲೆಗಳಿದ್ದು, ಶೇ. 85ಕ್ಕಿಂತ ಹೆಚ್ಚಿನ ಮಕ್ಕಳು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣಕ್ಕೆ ಸರ್ಕಾರಿ ಶಾಲೆಗಳನ್ನೇ ಅವಲಂಬಿಸಿರುವುದರಿಂದ ಅವುಗಳ ಅಭಿವೃದ್ಧಿಗೆ ಸಮಾಜದ ಸಕ್ರಿಯ ಭಾಗಿಯಾಗುವಿಕೆಯ ಅಗತ್ಯವಿದ್ದು, ಈ ದತ್ತು ಯೋಜನೆಯಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದ ಸಚಿವರು, ಸಮುದಾಯ ತಮ್ಮೂರಿನ ಶಾಲೆಯ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡು ಬಂಟ್ವಾಳ ತಾಲೂಕಿನ ದದ್ದಲಕಾಡು ಗ್ರಾಮದ ಶಾಲೆಯನ್ನು ಅಭಿವೃದ್ಧಿಪಡಿಸಿ ಅದನ್ನು ಗ್ರಾಮಸ್ಥರು ಉಳಿಸಿಕೊಂಡಿದ್ದನ್ನು ಉದಾಹರಿಸಿದರು. ತಾವು ಇತ್ತೀಚಿಗೆ ಅಧ್ಯಯನ ಮಾಡಿದ ಇಂಗ್ಲಿಷ್‍ನ ‘ಆರ್ಡಿನರಿ ಪೀಪಲ್ ಎಕ್ಸ್ಟ್ರಾರ್ಡಿನರಿ ಟೀಚರ್ಸ್’ ಎಂಬ ಪುಸ್ತಕ ಸಾರಾಂಶಗಳನ್ನು ಮೆಲುಕು ಹಾಕಿದ ಸುರೇಶ್ ಕುಮಾರ್ ಸರ್ಕಾರಿ ಶಾಲೆಗಳು ಏಕೆ ಅಭಿವೃದ್ಧಿಯಾಗಬೇಕು ಎಂಬುದನ್ನು ಸಚಿವರು  ವಿಷದಪಡಿಸಿದರು.

Government school adoption concept first in the country says Chief Minister Yediyurappa
ಕಾರ್ಯಕ್ರಮ ಉದ್ಘಾಟಿಸಿದ ಸಿಎಂ ಬಿ ಎಸ್ ಯಡಿಯೂರಪ್ಪ
ಹಾಗೆಯೇ ಒಸಾಟ್ ಸಂಸ್ಥೆ ಶಾಲೆಗಳನ್ನು ಅಭಿವೃದ್ಧಿಪಡಿಸುತ್ತಿರುವುದು, ಸಿಸ್ಕೋ ಸಂಸ್ಥೆ ಪ್ರಾಜೆಕ್ಟ್ ಮತ್ತು ಗಣಿತ ವಿಷಯಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳಲು ಅನುವಾಗುವಂತೆ ಮಕ್ಕಳಿಗೆ ಉಚಿತವಾಗಿ 18 ಲಕ್ಷ ಪುಸ್ತಿಕೆಗಳನ್ನು ವಿತರಿಸುತ್ತಿರುವುದನ್ನು ಉದಾಹರಿಸಿದ ಸಚಿವರು ಸಮುದಾಯವು ಶಾಲೆಗಳ ಅಭಿವೃದ್ಧಿಯಲ್ಲಿ ಭಾಗಿಯಾಗುವುದರಿಂದ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯೇ ಆಗಲಿದೆ ಎಂದರು.

ನಮ್ಮ ಸರ್ಕಾರಿ ಶಾಲೆಗಳಲ್ಲಿ ಓದಿದ ಮಕ್ಕಳು ಮುಂದೆ ಐಎಎಸ್, ಐಪಿಎಸ್ ಅಧಿಕಾರಿಗಳಾಗಲಿ ಐಐಟಿಗಳಂತಹ ಪ್ರತಿಷ್ಠಿತ ಸಂಸ್ಥೆಗಳನ್ನು ಸೇರುವಂತಾಗಲಿ ಎಂಬ ಭಾವನೆಯಲ್ಲಿ ಇಡೀ ಸಮುದಾಯ, ಸಂಘಸಂಸ್ಥೆಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಲು ಮುಂದಾಗಬೇಕು ಎಂದರು. ಈ ನಿಟ್ಟಿನಲ್ಲಿ ಮೂಲತಃ ಶಿಕ್ಷಣ ಪ್ರೇಮಿಗಳಾದ  ಸರ್ಕಾರದ ಶೈಕ್ಷಣಿಕ ಸಲಹೆಗಾರರಾದ ಪ್ರೊ. ಎಂ.ಆರ್. ದೊರೆಸ್ವಾಮಿಯವರು ಚಿಂತನೆ ಅತ್ಯಂತ ಅಮೂಲ್ಯವಾಗಿದೆ.
ಇದೇ ಸಂದರ್ಭದಲ್ಲಿ ಸಚಿವ ಸುರೇಶ್ ಕುಮಾರ್, ತಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಐದು ಸರ್ಕಾರಿ ಶಾಲೆಗಳ ಅಭಿವೃದ್ಧಿಪಡಿಸುವ ದತ್ತು ಸ್ವೀಕಾರ ಪ್ರಮಾಣ ಪತ್ರ ಸ್ವೀಕರಿಸಿದರು.

ಇದನ್ನೂ ಓದಿ : ಓಡಿ ಹೋಗಿ ಯುವಕ-ಯುವತಿ ಮದುವೆ ; ಠಾಣೆಗೆ ಕರೆತಂದು ಪೊಲೀಸರಿಂದ ಯುವಕನ ಪೋಷಕರ ಥಳಿತ

ಸರ್ಕಾರದ ಶೈಕ್ಷಣಿಕ ಸಲಹೆಗಾರರಾದ ಪ್ರೊ. ಎಂ.ಆರ್. ದೊರೆಸ್ವಾಮಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ಈ ಯೋಜನೆಯ ಉದ್ದೇಶಗಳನ್ನು ವಿವರಿಸಿ ಜನಪ್ರತಿನಿಧಿಗಳಲ್ಲದೇ ಸಮುದಾಯವೂ ಪೂರ್ಣಪ್ರಮಾಣದಲ್ಲಿ ಭಾಗಿಯಾಗುವುದರಿಂದ ನಮ್ಮ ಶಾಲೆಗಳು ಪೂರ್ಣವಾಗಿ ಅಭಿವೃದ್ಧಿಯಾಗಲು ಕಾರಣವಾಗಲಿದೆ ಎಂದರು. ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ಶಿಕ್ಷಣ ಸುಧಾರಣಾ ಶಿಫಾರಸ್ಸುಗಳ ಪುಸ್ತಿಕೆ ಬಿಡುಗಡೆ ಮಾಡಿದರು.

ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಭಾಗವಹಿಸಿದ್ದರು. ಶಾಸಕರಾದ ರಿಜ್ವಾನ್ ಅರ್ಷದ್, ಕೆ.ಟಿ. ಶ್ರೀಕಂಠೇಗೌಡ, ಸಮಗ್ರ ಶಿಕ್ಷಣ  ಕರ್ನಾಟಕ  ರಾಜ್ಯ ಯೋಜನಾಧಿಕಾರಿ ದೀಪಾ ಚೋಳನ್, ಶಿಕ್ಷಣ ಇಲಾಖೆ ಅಧಿಕಾರಿಗಳು ಸೇರಿದಂತೆ ಇತರೆ ಗಣ್ಯರು ಭಾಗವಹಿಸಿದ್ದರು.
Published by: G Hareeshkumar
First published: November 24, 2020, 2:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading