HOME » NEWS » State » GOVERNMENT NEGLIGENCE SHOWS UP AS NO RELIEF PROVIDED TO FLOOD AFFECTED PEOPLE SESR

ನೆರೆ ಇಳಿದು ತಿಂಗಳುಗಳೇ ಕಳೆದರೂ ಇನ್ನೂ ಇಲ್ಲ ಪರಿಹಾರ; ಸಂತ್ರಸ್ತರ ಗೋಳು ಮರೆತಿತಾ ಸರ್ಕಾರ?

ಕಳೆದ ವರ್ಷ ಸುರಿದ ರಣಭೀಕರ ಮಳೆಯಿಂದ ಮನೆ-ಮಠ, ಆಸ್ತಿ-ಪಾಸ್ತಿ ಕಳೆದುಕೊಂಡು ಸಾವಿರಾರು ಜನ ನಿರ್ಗತಿಕರಾಗಿದ್ರು, ಮಳೆ ಸುರಿದು ಆರು ತಿಂಗಳಗಳೇ ಕಳೆಯುತ್ತಾ ಬಂದ

news18-kannada
Updated:February 13, 2020, 11:50 AM IST
ನೆರೆ ಇಳಿದು ತಿಂಗಳುಗಳೇ ಕಳೆದರೂ ಇನ್ನೂ ಇಲ್ಲ ಪರಿಹಾರ; ಸಂತ್ರಸ್ತರ ಗೋಳು ಮರೆತಿತಾ ಸರ್ಕಾರ?
ಪ್ರವಾಹ ಪರಿಶೀಲನೆ ನಡೆಸಿದ್ದ ಸಿಎಂ ಬಿಎಸ್​ವೈ.
  • Share this:
ಚಿಕ್ಕಮಗಳೂರು(ಫೆ. 13): ಕಾಫಿನಾಡಿನ ಜನರಿಗೆ ಮಳೆ ಹೊಸದಲ್ಲ. ಆದರೆ, ಕಳೆದ ಮಳೆಗಾಲದಲ್ಲಿ ಸುರಿದ ಮಳೆ ಮಲೆನಾಡಿಗರನ್ನು ಅಕ್ಷರಶಃ ಬೆಚ್ಚಿ ಬೀಳಿಸಿತು. ಅದರಲ್ಲಿಯೂ ಆಗಸ್ಟ್​​ ತಿಂಗಳಿನಲ್ಲಿ ಸುರಿದ 10 ದಿನದ ಮಳೆಯಂತೂ ಜನರ ಬದುಕನ್ನು ಮೂರಬಟ್ಟೆಯಾಗಿಸಿತು. ಜಿಲ್ಲೆಯ ಭಾರೀ ಮಳೆಗೆ ಮೂಡಿಗೆರೆಯ ಮಲೆಮನೆ, ಮಧುಗುಂಡಿ, ಆಲೇಖಾನ್ ಹೊರಟ್ಟಿ, ದುರ್ಗದ ಹಳ್ಳಿ ಸೇರಿದಂತೆ ಹಲವು ಗ್ರಾಮಗಳೇ ಕೊಚ್ಚಿ ಹೋಗಿದ್ದು, ಜನರು ನಿರಾಶ್ರಿತ ತಾಣ ಸೇರುವಂತೆ ಆಯಿತು. ವರ್ಷಗಳ ಕಾಲ ಜೋಪಾನ ಮಾಡಿದ ಕಾಫಿತೋಟ ಕಣ್ಮುಂದೆಯೇ ನಾಶವಾಗಿದ್ದನ್ನು ಕಂಡು ತಾಲೂಕಿನ ಮೂವರು ಆತ್ಮಹತ್ಯೆಗೂ ಶರಣಾದರು.

ನೆರೆಯಿಂದಾಗಿ ಜಿಲ್ಲೆಯಲ್ಲಿ ಸುಮಾರು 400 ಕೋಟಿ ನಷ್ಟ ಉಂಟಾಗಿದ್ದು, ಈ ಕುರಿತು ಸಿಎಂ ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಇನ್ನಿತರ ಅಧಿಕಾರಿಗಳು ಕೂಡ ಪರಿಸ್ಥಿತಿ ಅವಲೋಕಿಸಿದರು. ಅಲ್ಲದೇ ಸಂತ್ರಸ್ತರಿಗೆ ಪುನರ್ ಜೀವನ​ ಕಲ್ಪಿಸುವ ಭರವಸೆ ನೀಡಿದರು. ಸರ್ಕಾರದ ಈ ಭರವಸೆ ಹಿನ್ನೆಲೆ ಆಶ್ರಯತಾಣ ಸೇರಿದ ಸಂತ್ರಸ್ತರು ಇನ್ನೂ ಕೂಡ ಕಣ್ಣೀರಲ್ಲಿ ಜೀವನ ದೂಡುವಂತೆ ಆಗಿದೆ.

ಆಸ್ತಿ-ಪಾಸ್ತಿ ಕಳೆದುಕೊಂಡು ಸಂತ್ರಸ್ತರ ಶಿಬಿರ ಸೇರಿ ಆರು ತಿಂಗಳಿಗೂ ಹೆಚ್ಚು ಅವಧಿಯಾದರೂ ಇನ್ನೂ ಕೂಡ ಯಾವುದೇ ಪರಿಹಾರ ಅವರಿಗೆ ಸಿಕ್ಕಿಲ್ಲ. ಮನೆ ಮಠ ಕಳೆದುಕೊಂಡವರಿಗೆ ಶಾಶ್ವತ ಸೂರು ಕಲ್ಪಿಸುವ ಭರವಸೆ ಇನ್ನೂ ಈಡೇರದೆ ಹಾಗೆಯೇ ಉಳಿದಿದೆ. ನೆರೆ ಇಳಿದ ಮೇಲೆ ಸರ್ಕಾರ ಸಂತ್ರಸ್ತರನ್ನು ಕೂಡ ಮರೆಯುತ್ತದೆ ಎಂಬುದಕ್ಕೆ ಮತ್ತೊಮ್ಮೆ ಇದು ಸಾಕ್ಷ್ಯವಾಗಿದೆ.

ಇನ್ನು, ಸಂತ್ರಸ್ತರಿಗೆ ಪುನರ್​ವಸತಿ ಕಲ್ಪಿಸಲು ಮೂಡಿಗೆರೆಯ ಆಲೇಖಾನ್ ಹೊರಟ್ಟಿ, ಮಧುಗುಂಡಿ, ದುರ್ಗದಹಳ್ಳಿ, ಮೇಗೂರು, ಮಲೆಮನೆ ಗ್ರಾಮಗಳ ಸ್ಥಳಾಂತರಕ್ಕೆ ಸರ್ಕಾರ ಮುಂದಾಗಿತು. ಇದರ ಜೊತೆಗೆ ಕೆಲವು  ಷರತ್ತುಗಳನ್ನು ವಿಧಿಸಿ ನಿರಾಶ್ರಿತರಿಂದ ದಾಖಲೆಗಳಿಗೆ ಸಹಿಯನ್ನು ಪಡೆಯಲಾಗಿತ್ತು. ಈ  ಷರತ್ತಿನ ಅನ್ವಯ ದಾಖಲೆ ಇರುವರಿಗಷ್ಟೇ ಜಮೀನು , ಒತ್ತುವರಿ ಮಾಡಿಕೊಂಡವರಿಗೆ ಯಾವುದೇ ಪರಿಹಾರವಿಲ್ಲ ಎಂಬ ನಿಯಮಗಳಿಗೆ ಸಹಿ ಹಾಕಿ ಜನರು ಕೂಡ ಒಪ್ಪಿಗೆ ಸೂಚಿಸಿದರು.

ಈ ಎಲ್ಲಾ ಕಾರ್ಯಗಳು ನಡೆದು ತಿಂಗಳುಗಳೇ ಉರುಳಿದರೂ ಇನ್ನು ಕೂಡ ಗ್ರಾಮಸ್ಥರು ಆಶ್ರಯತಾಣದಲ್ಲಿಯೇ ದಿನದೂಡುವಂತೆ ಆಗಿದೆ. ಕಾರಣ ಪುನರ್​ವಸತಿಗೆ ಸರ್ಕಾರ ಇನ್ನೂ ಜಾಗ ಗುರುತು ಮಾಡದೇ ಇರುವುದು. ಸರ್ಕಾರ ಗ್ರಾಮದ ಸ್ಥಳಾಂತರಕ್ಕೆ ಜಾಗ ಹುಡುಕಿದರೆ ಸಾಕು. ಮನೆ ಕಟ್ಟಿಕೊಡುವ ಅವಶ್ಯಕತೆ ಬೇಡ.  ಅಲ್ಲೇ ಶೆಡ್ ಹಾಕೊಂಡ್ ಬದುಕಿಕೊಳ್ಳುತ್ತೇವೆ. ಆದರೆ, ಸರ್ಕಾರ ಮಾತ್ರ ಈ ಬಗ್ಗೆ ನಿರ್ಲಕ್ಷ್ಯ ತೋರುತ್ತಿದೆ ಎಂಬುದು ಸಂತ್ರಸ್ತರ ಆರೋಪ.

ಇನ್ನು, ಈ ಕುರಿತು ಪ್ರತಿಕ್ರಿಯಿಸಿರುವ  ಜಿಲ್ಲಾಧಿಕಾರಿ ಕುಮಾರ್,  ಈಗಾಗಲೇ 276 ಎಕರೆ ಜಾಗ ಬೇಕಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿದ್ದೇವೆ. ಮನೆ ಕಳೆದುಕೊಂಡವರಿಗೆ ಹಾಗೂ ಬೆಳೆ ನಷ್ಟವಾದವರಿಗೆ ನೇರವಾಗಿ ಅವರ ಖಾತೆಗೆ ಹಣ ಜಮಾ ಆಗಿದೆ. ಅಲ್ಲದೇ,  ಐದು ತಿಂಗಳ ಬಾಡಿಗೆ ಹಣವೂ ಬಿಡುಗಡೆಯಾಗಿದೆ ಅಂತಿದ್ದಾರೆ.

ಇದನ್ನು ಓದಿ: ಕಣ್ಣೀರಲ್ಲಿ ಕೈ ತೊಳೆಯುತ್ತಿದೆ ಯೋಧನ ಕುಟುಂಬ; ಬೇಕಿದೆ ನೆರವಿನ ಹಸ್ತತಿಂಗಳಿಗೆ ಐದು ಸಾವಿರ ಮಾತ್ರ ಸರ್ಕಾರ ನೀಡಿದ್ದು, ಇದರಲ್ಲಿ ಬದುಕಲು ಸಾಧ್ಯವಾ ಎಂಬ ಪ್ರಶ್ನೆ ಸಂತ್ರಸ್ತರಿಂದ ಕೇಳಿ ಬಂದಿದೆ. ಅಧಿಕಾರಿಗಳು ಒಂದು ಹೇಳುತ್ತಾರೆ. ಜನಪ್ರತಿನಿಧಿಗಳು ಮತ್ತೊಂದು ಹೇಳುತ್ತಾರೆ. ಈ ನಡುವೆ ಬದುಕು ಕಳೆದುಕೊಂಡ ನಮ್ಮ ಗೋಳು ಅತಂತ್ರವಾಗಿದ್ದು, ಹೀಗೆ ಪರಿಸ್ಥಿತಿ ಮುಂದುವರೆದರೆ ಜೀವ ಕಳೆದುಕೊಳ್ಳುವುದು ನಮಗೆ ಇರುವ ಮಾರ್ಗ ಎಂದು ಬೇಸರದ ವ್ಯಕ್ತಪಡಿಸುತ್ತಾರೆ. ಇನ್ನಾದರೂ ಸರ್ಕಾರ ಹಾಗೂ ಅಧಿಕಾರಿಗಳು ನಮ್ಮ ಕಡೆ ಗಮನಹರಿಸಿ ಬದುಕಲು ಅವಕಾಶ ನೀಡಬೇಕು ಎನ್ನುತ್ತಾರೆ ಸಂತ್ರಸ್ತರು.
Youtube Video
First published: February 13, 2020, 11:50 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories