ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಮುಗಿದಿಲ್ಲ ನೆರೆ ಸಂತ್ರಸ್ತರ ಗೋಳು; ಮನೆ ಕಳೆದುಕೊಂಡವರಿಗೆ ಸಿಕ್ಕಿಲ್ಲ ಸೂರು

ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಐದು ಸಾವಿರಕ್ಕೂ ಹೆಚ್ಚು ಮನೆಗಳು ಕುಸಿದು ಬಿದ್ದಿವೆ. ಮನೆ ಕಳೆದುಕೊಂಡ ಸಂತ್ರಸ್ತರಲ್ಲಿ ಬಹುತೇಕರಿಗೆ ಸರ್ಕಾರದಿಂದ ಸಮರ್ಪಕ ಪರಿಹಾರ ಬಂದಿಲ್ಲ ಎನ್ನುವ ಆರೋಪವಿದೆ. ತಾಲ್ಲೂಕು ಆಡಳಿತ ಕೆಲವರಿಗೆ ಇಪ್ಪತ್ತೈದು ಸಾವಿರ ಪರಿಹಾರ ಕೊಟ್ಟರೆ, ಮತ್ತೆ ಕೆಲವರಿಗೆ ಐವತ್ತು ಸಾವಿರ ರೂಪಾಯಿ ಕೊಟ್ಟು ಸುಮ್ಮನಾಗಿದೆ

 ಪ್ರತಿಭಟನೆ ನಡೆಸಿದ ಸಂತ್ರಸ್ತರು

ಪ್ರತಿಭಟನೆ ನಡೆಸಿದ ಸಂತ್ರಸ್ತರು

  • Share this:
ಹುಬ್ಬಳ್ಳಿ(ಮಾ.07) : ಉತ್ತರ ಕರ್ನಾಟಕದಲ್ಲಿ ಸುರಿದ ಭಾರೀ ಮಳೆಗೆ ಲಕ್ಷಾಂತರ ಜನರು ಮನೆ ಕಳೆದುಕೊಂಡು ಬೀದಿಗೆ ಬಂದಿದ್ದರು. ಸಂತ್ರಸ್ತರಿಗೆ ಸಹಾಯ ಹಸ್ತ ಚಾಚುವ ಭರವಸೆ ನೀಡಿದ್ದ ಸರ್ಕಾರ ಸೂರು ಒದಗಿಸಿ ಕೊಡುವುದಾಗಿ ಹೇಳಿತ್ತು. ಆದರೆ ಸಂತ್ರಸ್ತರ ಬದುಕು ಇನ್ನೂ ಬೀದಿಯ ಮೇಲೆಯೇ ಇದೆ. ಸೂಕ್ತ ಪರಿಹಾರ ಸಿಗದೆ ಗೋಳಾಡುವಂತಾಗಿದೆ.

ಕಳೆದ ಆಗಸ್ಟ್‌ನಲ್ಲಿ ಸುರಿದ ಮಳೆಗೆ ಹುಬ್ಬಳ್ಳಿ ತಾಲ್ಲೂಕಿನ ನೂಲ್ವಿ ಗ್ರಾಮದ ಅಜ್ಜಿ ಯಲ್ಲವ್ವ ಮನೆ ಸಂಪೂರ್ಣ ಕುಸಿದು ಬಿದ್ದಿದೆ. ಈ ಅಜ್ಜಿ ತನ್ನ ಬಡ ಕುಟುಂಬದ ಜೊತೆಗೆ ಬೀದಿಗೆ ಬಿದ್ದಿದ್ದಾರೆ. ಅಳಿದುಳಿದ ಪೆಳೆಯುಳಿಕೆಯಂತೆ ಆಗಿರುವ ಮನೆಗೆ ತಾಡಪತ್ರಿ ಕಟ್ಟಿ, ತಗಡಿನ ಶೆಡ್‌ ಮಾಡಿಕೊಂಡು ವಾಸಿಸುತ್ತಿದ್ದಾರೆ. ಪ್ರತಿನಿತ್ಯ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಮನೆ ಕಟ್ಟಿಸಿಕೊಳ್ಳಲು ಪರಿಹಾರ ನೀಡುವುದಾಗಿ ಹೇಳಿದ್ದ ತಾಲ್ಲೂಕು ಆಡಳಿತ ಈಗ ಮೈಮರೆತು ಕುಳಿತಿದೆ. ಸರ್ಕಾರಿ ಕಚೇರಿಗೆ ಅಲೆದಾಡಿ ಸುಸ್ತಾದರೂ ಸರ್ಕಾರದಿಂದ ಬಿಡಿಗಾಸಿನ ಪರಿಹಾರ ಬಂದಿಲ್ಲ. ಇದು ಕೇವಲ ಈ ಒಬ್ಬ ಅಜ್ಜಿಯ ಕಥೆಯಲ್ಲ. ನೂಲ್ವಿ ಗ್ರಾಮದಲ್ಲಿ ಮುನ್ನೂರಕ್ಕೂ ಹೆಚ್ಚು ಮನೆಗಳು ಸಂಪೂರ್ಣ ಹಾನಿಯಾಗಿವೆ.

ಮೂಗಿಗೆ ತುಪ್ಪ ಹಚ್ಚಿ ಸುಮ್ಮನಾದ ಸರ್ಕಾರ

ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಐದು ಸಾವಿರಕ್ಕೂ ಹೆಚ್ಚು ಮನೆಗಳು ಕುಸಿದು ಬಿದ್ದಿವೆ. ಮನೆ ಕಳೆದುಕೊಂಡ ಸಂತ್ರಸ್ತರಲ್ಲಿ ಬಹುತೇಕರಿಗೆ ಸರ್ಕಾರದಿಂದ ಸಮರ್ಪಕ ಪರಿಹಾರ ಬಂದಿಲ್ಲ ಎನ್ನುವ ಆರೋಪವಿದೆ. ತಾಲ್ಲೂಕು ಆಡಳಿತ ಕೆಲವರಿಗೆ ಇಪ್ಪತ್ತೈದು ಸಾವಿರ ಪರಿಹಾರ ಕೊಟ್ಟರೆ, ಮತ್ತೆ ಕೆಲವರಿಗೆ ಐವತ್ತು ಸಾವಿರ ರೂಪಾಯಿ ಕೊಟ್ಟು ಸುಮ್ಮನಾಗಿದೆ. ಸರ್ಕಾರ ಕೊಟ್ಟಿರುವ ಹಣದಲ್ಲಿ ಮನೆಯ ಅಡಿಪಾಯ ಕೂಡ ಹಾಕಲು ಆಗಲ್ಲಾ. ಅಂಥದ್ದರಲ್ಲಿ ಮನೆ ಎಲ್ಲಿಂದ ಕಟ್ಟುವುದು ಎನ್ನುತ್ತಿದ್ದಾರೆ ಸಂತ್ರಸ್ತರು. ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡಲಾಗಿದೆ. ಅಧಿಕಾರಿಗಳು ಅವ್ಯವಹಾರ ನಡೆಸಿದ್ದಾರೆ. ಕಮೀಷನ್‌ ಪಡೆದು ಪರಿಹಾರ ಹಂಚಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ : ಕಲಘಟಗಿಯಲ್ಲಿ ನೆರೆಸಂತ್ರಸ್ತರಿಗೆ ನೀಡಿದ್ದ ಅರ್ಧ ಹಣ ವಾಪಸ್ - ಜನರ ಗಾಯದ ಮೇಲೆ ಬರೆ ಎಳೆದ ಅಧಿಕಾರಿಗಳು

ಮನೆ ಕಟ್ಟಿಕೊಡುವುದಾಗಿ ರಾಜ್ಯ ಸರ್ಕಾರ ನೀಡಿದ್ದ ಭರವಸೆ ಹುಸಿಯಾಗಿದೆ. ಹೀಗಾಗಿ ಸಂತ್ರಸ್ತರ ಆಕ್ರೋಶ ಕಟ್ಟೆಯೊಡೆದಿದೆ. ಸೂಕ್ತ ಪರಿಹಾರ ನೀಡಲು ಆಗ್ರಹಿಸಿ  ಹುಬ್ಬಳ್ಳಿಯಲ್ಲಿ ಸಂತ್ರಸ್ತರು ಅರೆಬೆತ್ತಲೆ ಪ್ರತಿಭಟನೆ ಮಾಡಿದ್ದಾರೆ. ಮಹಿಳೆಯರು ಪೊರಕೆ ಹಿಡಿದು ಹೋರಾಟ ನಡೆಸಿದ್ದಾರೆ.
First published: