ಸೇತುವೆ ಇಲ್ಲದ ಊರಿಗೆ ತೆಪ್ಪವೇ ಸಾರಿಗೆ; ಕನಿಷ್ಟ ಮೂಲಭೂತ ಸೌಲಭ್ಯವನ್ನಾದರೂ ನೀಡಲು ಇನ್ನೆಷ್ಟು ವರ್ಷಬೇಕು ಸರ್ಕಾರಕ್ಕೆ?

ಕಳೆದ ಎರಡು ವರ್ಷದ ಹಿಂದೆ ತೆಪ್ಪವನ್ನ ದಾಟಿಸೋ ಅಂಬಿಗ ಸುಧಾಕರ್ ಎಂಬುವರು ಸಾವನ್ನಪ್ಪಿ, 50 ದಿನದ ಬಳಿಕ ಶವವಾಗಿ ಪತ್ತೆಯಾಗಿತ್ತು. ಆದರೂ, ಇತ್ತ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಯಾರೂ ಕೂಡ ತಿರುಗಿ ನೋಡೋ ಉಸಾಬರಿಗೆ ಹೋಗಿಲ್ಲ.

news18-kannada
Updated:February 16, 2020, 2:00 PM IST
ಸೇತುವೆ ಇಲ್ಲದ ಊರಿಗೆ ತೆಪ್ಪವೇ ಸಾರಿಗೆ; ಕನಿಷ್ಟ ಮೂಲಭೂತ ಸೌಲಭ್ಯವನ್ನಾದರೂ ನೀಡಲು ಇನ್ನೆಷ್ಟು ವರ್ಷಬೇಕು ಸರ್ಕಾರಕ್ಕೆ?
ತೆಪ್ಪದಲ್ಲಿ ನದಿ ದಾಟುತ್ತಿರುವ ಚಿಕ್ಕಮಗಳೂರು ಗ್ರಾಮದ ಜನ.
  • Share this:
ಚಿಕ್ಕಮಗಳೂರು : ಯಾರಿಗೆ ಬಂತು, ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ. ಜನನಾಯಕರಿಗೆ, ಅಧಿಕಾರಿಗಳಿಗೆ ದುಡ್ ಮಾಡೋಕ್ ಬಂತು ಗಾಂಧಿ ಕೊಡ್ಸಿದ್ ಸ್ವಾತಂತ್ರ್ಯ. ಹೌದು, ಸ್ವಾತಂತ್ರ್ಯ ಬಂದು ಏಳು ದಶಕಗಳೇ ಕಳೆದ್ರು ಈ ಗ್ರಾಮಕ್ಕೆ ಇಂದಿಗೂ ಓಡಾಡೋಕೆ ರಸ್ತೆ ಇಲ್ಲ. ಸ್ವಾತಂತ್ರ್ಯ ಬಂದಾಗಿನಿಂದಲೂ ಇವ್ರಿಗೆ ತೆಪ್ಪ ಬಿಟ್ರೆ ಬದುಕೇ ಇಲ್ಲ. ಬೇಡಿಕೊಳ್ಳದ ರೀತಿ, ಮಾಡದ ಮನವಿ ಎರಡೂ ಉಳಿದಿಲ್ಲ. ಆದ್ರು ಏನೂ ಪ್ರಯೋಜನವಾಗಿಲ್ಲ. ನಡು ಮಧ್ಯಾಹ್ನ ಅನ್ನಂಗಿಲ್ಲ. ನಡು ರಾತ್ರಿ ಅನ್ನಂಗಿಲ್ಲ. ಹುಟ್ಟೋಕು ತೆಪ್ಪಬೇಕು. ಸಾಯೋಕು ದೋಣಿ ಬೇಕು.

ಭದ್ರಾ ನದಿ ಮಧ್ಯ ತೆಪ್ಪದಲ್ಲಿ ಸಾಗ್ತಿರೋ ಇವ್ರು ಪ್ರವಾಸಿಗರಲ್ಲ. ವಾಯುವಿಹಾರಕ್ಕೂ ಹೋಗ್ತಿರೋರಲ್ಲ. ಸ್ವಾತಂತ್ರ್ಯ ಬಂದಾಗಿನಿಂದಲೂ ಇವ್ರ ಬದುಕೇ ಹೀಗೆ. ಹೌದು, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕಳಸ ಹೋಬಳಿಯ ಕಗ್ಗನಹಳ್ಳ ಜನಕ್ಕೆ ಇಂದಿಗೂ ತೆಪ್ಪವೇ ಜೀವಾಳ. ಸತ್ತೋರ್ನ ಅಂತ್ಯ ಸಂಸ್ಕಾರ ಮಾಡೋಕಾಗ್ಲಿ, ಬಾಣಂತಿಯನ್ನ ಆಸ್ಪತ್ರೆಗೆ ಕೊಂಡೊಯ್ಯೋದಕ್ಕಾಗ್ಲಿ, ಮಕ್ಕಳು ಶಾಲೆಗೆ ಹೋಗೋಕಾಗ್ಲಿ ಪ್ರತಿಯೊಂದಕ್ಕೂ ಇವ್ರಿಗೆ ತೆಪ್ಪ ಬೇಕೇ-ಬೇಕು. ಒಂದು ದಿನ ತೆಪ್ಪ ಇಲ್ಲವಾದ್ರು ಇವ್ರಿಗೆ ಬದುಕೇ ಇಲ್ಲ.

50 ರಿಂದ 60 ಅಡಿ ಆಳದ ಭದ್ರಾ ನದಿ ಮೇಲೆ ಇವ್ರು ಏಳು ದಶಕಗಳಿಂದ ತೇಲಿಕೊಂಡೇ ಬದುಕ್ತಿದ್ದಾರೆ. ಬೇರ್ಯಾವುದೇ ಸೌಲಭ್ಯ ಬೇಡ ಸರ್.... ಓಡಾಡೋದಕ್ಕೆ ಸೇತುವೆಯನ್ನಾದರೂ ನಿರ್ಮಿಸಿ ಕೊಡಿ ಎಂದು ಇವ್ರು ದಶಕಗಳಿಂದ ಜನನಾಯಕರು ಹಾಗೂ ಅಧಿಕಾರಿಗಳಿಗೆ ಬೇಡದ ರೀತಿಯಲ್ಲೆಲ್ಲಾ ಬೇಡಿ, ಮಾಡದ ರೀತಿಯ ಮನವಿಯನ್ನೆಲ್ಲಾ ಮಾಡಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಇಂತಹಾ ದುರ್ಗಮ ಸ್ಥಿತಿಯಲ್ಲಿ ಏಳೆಂಟು ದಶಕಗಳಿಂದ ಬದುಕ್ತಿರೋ ಇವ್ರ ಬದುಕೇ ಒಂದು ಯಶೋಗಾಥೆ..

ಇನ್ನೂ ಮೂಡಿಗೆರೆಯಲ್ಲಿ ವಾರ್ಷಿಕ ದಾಖಲೆ ಮಳೆ ಬೀಳುತ್ತೆ. ಮಳೆಗಾಲದಲ್ಲಂತೂ ಇವ್ರ ಸ್ಥಿತಿ ಹೇಳತೀರದು. ಮಳೆಗಾಲದಲ್ಲಿ ಭದ್ರೆಯ ಒಡಲು ಭಯಂಕರ. ಅಂತಹ ಸಂದರ್ಭದಲ್ಲಿ ಮಕ್ಕಳು ತಿಂಗಳುಗಟ್ಟಲೆ ಶಾಲೆಗೆ ಹೋಗಲ್ಲ. ಮಳೆ ನಿಲ್ಲೋವರ್ಗೂ ಏನ್ ಮಾಡೋದಕ್ಕೂ ಆಗಲ್ಲ. ಆಕಡೆಯವ್ರು ಆಕಾಡೆಯೇ. ಈಕಡೆಯವ್ರು ಈಕಡೆಯೇ. ನಿಮಗೆ ಸೇತುವೆ ಮಾಡಿ ಕೊಡ್ತೀವಿ, ರಸ್ತೆ ಮಾಡಿ ಕೊಡ್ತೀವಿ ಅಂತ ಅಧಿಕಾರಿಗಳು, ಜನಪ್ರತಿನಿಧಿಗಳು ಬಂದು ಹೋಗಿದ್ದೇ ಆಯ್ತು, ಸೇತುವೆ ಮಾತ್ರ ನಿರ್ಮಾಣವಾಗಿಲ್ಲ ಅಂತಾ ಸ್ಥಳೀಯರು ಅಧಿಕಾರಿ ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಗ್ಗನಾಳ ಗ್ರಾಮದಿಂದ ನದಿ ಮೂಲಕ ದಾಟಿ ಹೋದ್ರೆ, ಹೊಳಲು, ಇಡ್ಕಣಿ, ಬಿಳಗೂರು ಸೇರಿದಂತೆ ನಾಲ್ಕೈದು ಗ್ರಾಮಗಳ ಸಾವಿರಾರು ಜನರಿಗೆ ಈ ತೆಪ್ಪವೇ ಜೀವಾಳ. ತೆಪ್ಪ ಇಲ್ದಿದ್ರೆ ಆ ದಿನ ಸತ್ತಂತೆ. ಜನರು ಕಳಸ, ಬಾಳೆಹೊಳೆ, ಹೊರನಾಡು, ಮಾಗುಂಡಿ ಕಡೆಗೆ ಬರಬೇಕು ಅಂದ್ರೆ ಈ ತೆಪ್ಪವನ್ನೆ ಏರಿಯೇ, ನದಿಯನ್ನ ದಾಟಿಯೇ ಬರಬೇಕು. ದಿನನಿತ್ಯ ಈ ತೆಪ್ಪವನ್ನೇ ವಿದ್ಯಾರ್ಥಿಗಳು, ನೂರಾರು ಜನರು, ಕೂಲಿ ಕಾರ್ಮಿಕರು ಆಶ್ರಯಿಸಿಕೊಂಡು ಒಂದು ಕಡೆಯಿಂದ ಮತ್ತೊಂದು ಕಡೆಗೆ ಪಯಣ ಬೆಳೆಸುತ್ತಾರೆ.

ಸ್ವಲ್ಪ ಆಯಾ ತಪ್ಪಿದ್ರೂ ಬದುಕಿ ಬರೋ ಯಾವುದೇ ಗ್ಯಾರಂಟಿ ಇಲ್ಲ. ಕಳೆದ ಎರಡು ವರ್ಷದ ಹಿಂದೆ ತೆಪ್ಪವನ್ನ ದಾಟಿಸೋ ಅಂಬಿಗ ಸುಧಾಕರ್ ಎಂಬುವರು ಸಾವನ್ನಪ್ಪಿ, 50 ದಿನದ ಬಳಿಕ ಶವವಾಗಿ ಪತ್ತೆಯಾಗಿತ್ತು. ಆದರೂ, ಇತ್ತ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಯಾರೂ ಕೂಡ ತಿರುಗಿ ನೋಡೋ ಉಸಾಬರಿಗೆ ಹೋಗಿಲ್ಲ.

ಮಳೆಗಾಲದಲ್ಲಿ ಹೊರಜಗತ್ತಿನ ಸಂಪರ್ಕ ಕಳೆದುಕೊಳ್ಳೋ ಇವ್ರಿಗೆ ಪರ್ಯಾಯ ದಾರಿಯಲ್ಲಿ ಹೊರಗಡೆ ಬರಬೇಕು ಅಂದ್ರೆ 20 ಕೀಲೋ ಕಾಡೊಳಗೆ ದುರ್ಗಮ ದಾರಿಯಲ್ಲಿ ನಡೆದುಕೊಂಡೇ ಬರಬೇಕು. ಅಲ್ಲಿ ಯಾರೋ ಓಡಾಡೋದಿಲ್ಲ, ಆಟೋದವ್ರು ಹೇಳಿದ್ದೇ ರೇಟು. ಹಾಗಾಗೀ ಸಂಪೂರ್ಣವಾಗಿ 2-3 ತಿಂಗಳು ಈ ಊರ ಮಂದಿ ಹೊರಜಗತ್ತಿನ ಸಂಪರ್ಕವನ್ನೇ ಕಡಿದುಕೊಳ್ತಾರೆ. ಇವ್ರಿಗೆ ಬೇಡೋದು, ಮನವಿ ಮಾಡೋದು ಬಿಟ್ರೆ ಬೇರೇನೂ ಗೊತ್ತಿಲ್ಲ. ಇನ್ನಾದ್ರು, ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಸರ್ಕಾರ ಇತ್ತ ಗಮನ ಹರಿಸಿ ಈ ಬಡಜನರಿಗೆ ಮೂಲಭೂತ ಸೌಲಭ್ಯವನ್ನಾದ್ರು ಕಲ್ಪಿಸಲಿ ಅನ್ನೋದೇ ನಮ್ಮ ಆಶಯ.ಇದನ್ನೂ ಒದಿ : ಇಂದು ಸಂಜೆ ಬಿಜೆಪಿ ಶಾಸಕಾಂಗ ಸಭೆಗೂ ಮುನ್ನವೇ ನಡೆಯಲಿದೆ ಅಸಮಾಧಾನಿತರ ಸಭೆ; ಕುತೂಹಲ ಮೂಡಿಸಿದ ಬೆಳವಣಿಗೆ
First published:February 16, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ