ತೈಲ ಬೆಲೆ ಏರಿಕೆ ವಿರೋಧಿಸಿ ಜೆಡಿಎಸ್ ಪ್ರತಿಭಟನೆಗೆ ಅನುಮತಿ ನಿರಾಕರಣೆ; ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ ಅಸಮಾಧಾನ

ಪೆಟ್ರೋಲಿಯಂ ಅನ್ನು GSTಗೆ ತರಬಾರದೆಂಬ ನಿಲುವುಳ್ಳ ನಮ್ಮ ಹೋರಾಟವನ್ನು ತಡೆಯಲಾಗಿದೆ. ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕತೆ ವಿರೋಧಿಗಳೆಂಬುದು ಸಾಬೀತಾಗಿದೆ ಎಂದು ಟ್ವಿಟ್ ಮೂಲಕ ಹೇಳಿದ್ದಾರೆ.

ನಿಖಿಲ್ ಕುಮಾರಸ್ವಾಮಿ

ನಿಖಿಲ್ ಕುಮಾರಸ್ವಾಮಿ

  • Share this:
    ಬೆಂಗಳೂರು: ತೈಲ ಬೆಲೆ ಏರಿಕೆ ವಿರೋಧಿಸಿ ಜೆಡಿಎಸ್​ನಿಂದ ಕರೆ ನೀಡಲಾಗಿದ್ದ ಪ್ರತಿಭಟನೆಗೆ ಸರ್ಕಾರ  ಅನುಮತಿ ನಿರಾಕರಿಸಿದೆ. ಈ ವಿಷಯವಾಗಿ ನಿಖಿಲ್ ಕುಮಾರಸ್ವಾಮಿ ಅವರು ಟ್ವೀಟ್ ಮಾಡುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಲೆ ಏರಿಕೆ ವಿರೋಧಿಸಿ ಜೆಡಿಎಸ್ ಜೂನ್‌ 28ರಂದು ಪ್ರತಿಭಟನೆ ಹಮ್ಮಿಕೊಂಡಿತ್ತು. ಆದರೆ, ಕೋವಿಡ್‌ ನಿಯಮಾವಳಿ ಮುಂದಿಟ್ಟು ಸರ್ಕಾರ ಪ್ರತಿಭಟನೆಗೆ ಅನುಮತಿ ನಿರಾಕರಿಸಿದೆ. ಕೋವಿಡ್‌ ಸಂದರ್ಭದ ಸರ್ಕಾರದ ಈ ನಿರ್ಧಾರ ಒಪ್ಪುತ್ತೇವೆ. ಆದರೆ, ಬಿಜೆಪಿ ಹಾಗೂ ಕಾಂಗ್ರೆಸ್ ಸಮಾರಂಭಗಳಿಗೆ ಇಲ್ಲದ ನಿಬಂಧನೆ ಜನತಾದಳದಕ್ಕೆ ಮಾತ್ರ ಏಕೆ? ಎಂದು ನಿಖಿಲ್ ಕುಮಾರಸ್ವಾಮಿ ಅವರು ಪ್ರಶ್ನೆ ಮಾಡಿದ್ದಾರೆ.



    ಸಮಾವೇಶ, ಹೋರಾಟಗಳಂಥ ಜನರನ್ನು ಒಟ್ಟುಗೂಡಿಸುವ ಕೆಲಸಗಳಿಂದ ಜೆಡಿಎಸ್‌ ಈ ಕೋವಿಡ್‌ ಕಾಲದಲ್ಲಿ ದೂರವೇ ಉಳಿದಿತ್ತು. ಜನರನ್ನು ರಕ್ಷಣೆ ಮಾಡುವುದು ನಮ್ಮ ನಿಲುವಾಗಿತ್ತು. ಈಗ ಲಾಕ್‌ಡೌನ್‌, ಕೋವಿಡ್‌ ನಿಯಮಗಳನ್ನು ಸರ್ಕಾರವೇ ಸಡಿಲಗೊಳಿಸಿದೆ. ಹೀಗಾಗಿಯೇ, ಬೆಲೆ ಏರಿಕೆಯಂಥ ಸಮಸ್ಯೆಯಿಂದ ಪರಿಹಾರ ಕೊಡಿಸಲು ಜೆಡಿಎಸ್‌ ಹೋರಾಟ ಹಮ್ಮಿಕೊಂಡಿತ್ತು. ಕೋವಿಡ್‌ ನಿಯಮಾವಳಿಗಳಿಗೆ ಬದ್ಧವಾಗಿ ಪ್ರತಿಭಟನೆ ನಡೆಸಬೇಕೆಂದು ಪಕ್ಷದ ಪೂರ್ವಭಾವಿ ಸಭೆಯಲ್ಲಿ ಕಾರ್ಯಕರ್ತರಿಗೆ ತಿಳಿಸಿದ್ದೆ. ಸಭೆಯ ನಂತರ ಮಾಧ್ಯಮಗಳಿಗೂ ಇದನ್ನೇ ಹೇಳಿದ್ದೆ. ಅನುಮತಿ ಕೋರಿ ಸಲ್ಲಿಸಿದ್ದ ಪತ್ರದಲ್ಲೂ ಅದನ್ನೇ ಉಲ್ಲೇಖಿಸಲಾಗಿತ್ತು. ಆದರೂ, ಅನುಮತಿ ಸಿಕ್ಕಿಲ್ಲ. ಈ ಮೂಲಕ ಸರ್ಕಾರ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಿದೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಆರೋಪಿಸಿದ್ದಾರೆ.

    ಇದನ್ನು ಓದಿ: ಕಾಂಗ್ರೆಸ್‌ನಲ್ಲಿ ಉದಯವಾಯ್ತು ಥರ್ಡ್ ಫ್ರಂಟ್; ಸಿಎಂ ಗಾದಿಗಾಗಿ ದಲಿತ‌ ಅಸ್ತ್ರ..!

    ಕೋವಿಡ್‌ ನಿಯಮಾವಳಿಗಳು ಕಠಿಣವಾಗಿದ್ದಾಗ, ಲಾಕ್‌ಡೌನ್‌ ಜಾರಿಯಲ್ಲಿದ್ದಾಗಲೂ ಬಿಜೆಪಿ, ಕಾಂಗ್ರೆಸ್‌ ಹಲವು ಸಭೆ ಸಮಾರಂಭಗಳನ್ನು ನಡೆಸಿವೆ. ತೈಲ ದರ ಏರಿಕೆ ವಿರೋಧಿಸಿ, ಪೆಟ್ರೋಲಿಯಂ ಉತ್ಪನ್ನಗಳನ್ನು GSTಗೆ ತರಬೇಕೆಂದು ಆಗ್ರಹಿಸಿ ಕಾಂಗ್ರೆಸ್‌ ಲಾಕ್‌ಡೌನ್‌ ವೇಳೆ ಪ್ರತಿಭಟನೆ ನಡೆಸಿತ್ತು. ಆಗ ಕಾಂಗ್ರೆಸ್‌ಗಿದ್ದ ಅನುಮತಿ ಈಗ ನಮಗೇಕಿಲ್ಲ.  ಪೆಟ್ರೋಲಿಯಂ ಅನ್ನು GSTಗೆ ತಂದು ರಾಜ್ಯಗಳ ಆದಾಯವನ್ನು ಕೇಂದ್ರಕ್ಕೆ ತಿರುಗಿಸುವುದು ಬಿಜೆಪಿ ಕಾಂಗ್ರೆಸ್‌ ವಾದ. ಇದಕ್ಕೆ ಪೂರಕವಾದ ಕಾಂಗ್ರೆಸ್‌ ಪ್ರತಿಭಟನೆಗೆ ಅನುಮತಿ ನೀಡಲಾಯಿತು. ಪೆಟ್ರೋಲಿಯಂ ಅನ್ನು GSTಗೆ ತರಬಾರದೆಂಬ ನಿಲುವುಳ್ಳ ನಮ್ಮ ಹೋರಾಟವನ್ನು ತಡೆಯಲಾಗಿದೆ. ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕತೆ ವಿರೋಧಿಗಳೆಂಬುದು ಸಾಬೀತಾಗಿದೆ ಎಂದು ಟ್ವಿಟ್ ಮೂಲಕ ಹೇಳಿದ್ದಾರೆ.
    Published by:HR Ramesh
    First published: