ಸುವರ್ಣ ಸೌಧಕ್ಕೆ ಟಿವಿ ಮಾಧ್ಯಮಗಳಿಗೆ ನಿರ್ಬಂಧ- ಪತ್ರಕರ್ತರ ಪ್ರತಿಭಟನೆ ನಂತರ ಅವಕಾಶ ನೀಡಿದ ಸ್ಪೀಕರ್

Media Ban On Assembly: ಅಲ್ಲದೇ ಮಾಧ್ಯಮದವರು ಪ್ರತಿಭಟನೆ ಮಾಡಿದ ನಂತರ ಮಾನ್ಯ ಸ್ಪೀಕರ್ ಅವರು ಮಾಧ್ಯಮ ನಿರ್ಬಂಧದ ಬಗ್ಗೆ ಗೊತ್ತಿಲ್ಲ ಎನ್ನುತ್ತಾರೆ, ಹಾಗಾದ್ರೆ ನಿರ್ಬಂಧ ಹೇರಿದವರು ಯಾರು? ಸ್ಪೀಕರ್ ಅವರಿಗೆ ಗೊತ್ತಿಲ್ಲದೆ ನಿರ್ಬಂಧದ ಸಂದೇಶ ಮಾಧ್ಯಮಗಳಿಗೆ ಕೊಟ್ಟವರು ಯಾರು?

ಧರಣಿ ನಿರತ ಪತ್ರಕರ್ತರು

ಧರಣಿ ನಿರತ ಪತ್ರಕರ್ತರು

  • Share this:
ಚಳಿಗಾಲದ ಅಧಿವೇಶನ (Winter Session) ನಡೆಯುತ್ತಿರುವ ಸುವರ್ಣ ವಿಧಾನಸೌಧಲ್ಲಿ (Suvarna Soudha) ಟಿವಿ ಮಾಧ್ಯಮದವರನ್ನು (Media) ಸದನದ ಒಳಗಡೆಗೆ ಹೋಗದಂತೆ ತಡೆದು ನಿಲ್ಲಿಸಿದ ಘಟನೆ ನಡೆದಿದ್ದು, ಇದು ಪತ್ರಕರ್ತರ (Journalist) ಕೋಪಕ್ಕೆ ಕಾರಣವಾಗಿದೆ. ಎಂದಿನಂತೆ ಇಂದು ಬೆಳಗ್ಗೆ ಟಿವಿ ಮಾಧ್ಯಮದವರು ವಿಧಾನಸೌಧ ಒಳಪ್ರವೇಶಿಸಲು ಹೋದಾಗ ಅವರನ್ನು ಪೊಲೀಸರು ತಡೆದಿದ್ದು, ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಸುವರ್ಣ ಸೌಧದಲ್ಲಿ ಮತಾಂತರ ನಿಷೇಧ ಕಾಯ್ದೆ ಚರ್ಚೆ ಹಿನ್ನೆಲೆಯಲ್ಲಿ ಟಿವಿ ಮಾಧ್ಯಮದವರನ್ನು ಒಳಗೆ ಬಿಡಲು ನಿರ್ಧರಿಸಲಾಗಿತ್ತು, ಪ್ರವೇಶ ನಿರ್ಬಂಧಿಸಿರುವುದನ್ನು ವಿರೋಧಿಸಿ ಟಿವಿ ಮಾಧ್ಯಮಗಳ ವರದಿಗಾರರು, ಕ್ಯಾಮೆರಾಮೆನ್‌ ಗಳು ಸುವರ್ಣ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದ್ದಾರೆ. ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಬಂದು ಟಿವಿ ಮಾಧ್ಯಮದವರಿಗೆ ವಿಧಾನಸೌಧದೊಳಗೆ  ಪ್ರವೇಶ ನೀಡುವಂತೆ ಸೂಚನೆ ನೀಡಿದ ನಂತರ ಅನುಮತಿ ನೀಡಲಾಗಿತ್ತು.

ಆದೇಶದ ಬಗ್ಗೆ ಗೊತ್ತಿಲ್ಲ ಎಂದ ಸ್ಫೀಕರ್

ಸುವರ್ಣ ವಿಧಾನಸೌಧದ ಒಳಗೆ ಮಾದ್ಯಮದವರಿಗೆ ಪ್ರವೇಶ ನಿರ್ಬಂಧದ ಬಗ್ಗೆ ಮಾದ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ  ಸ್ಪೀಕರ್‌ ಸ್ಥಳಕ್ಕೆ ಭೇಟಿ ನೀಡಿ ಈ ಬಗ್ಗೆ ನಾನು ಯಾವುದೇ ಆದೇಶ ನೀಡಿಲ್ಲ ಎಂದು ಸಮಜಾಯಿಶಿ ನೀಡಿದ್ದಾರೆ. ಆದರೆ ಈ ಬಗ್ಗೆ ಆದೇಶ ಪ್ರತಿ ತೋರಿಸಿದ ನಂತರ ಈ ಸಂದೇಶದ ಬಗ್ಗೆ ನಾನು ಪರಿಶೀಲಿಸುತ್ತೇನೆ ಎಂದ ಅವರು, ಮಾದ್ಯಮದವರು ಎಂದಿನಂತೆ ತಮ್ಮ ಚಟುವಟಿಕೆಗಳನ್ನ ನಡೆಸಲು ಯಾವುದೇ ಅಡ್ಡಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಕಡಿಮೆಯಾಯ್ತು ಹಳದಿ ಲೋಹದ ಬೆಲೆ, ಏರಿಕೆ ಕಂಡ ಪೆಟ್ರೋಲ್ ದರ: ಬೆಳಗಿನ ಟಾಪ್​​ ನ್ಯೂಸ್​​ಗಳು

ಸರ್ಕಾರದ ನಡೆ ವಿರುದ್ದ ಮಾಜಿ ಸಿಎಂ ವಾಗ್ಧಾಳಿ

ಇನ್ನು ಸರ್ಕಾರದ ಈ ನಡೆಯನ್ನು ಟೀಕಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ (Former CM Kumaraswamy) ಸುವರ್ಣಸೌಧಕ್ಕೆ ಮಾಧ್ಯಮಗಳನ್ನು ನಿರ್ಬಂಧ ಮಾಡಿರುವ ಕ್ರಮ ಅನೇಕ ಅನುಮಾನಗಳನ್ನು ಹುಟ್ಟುಹಾಕಿದೆ ಎಂದಿದ್ದಾರೆ. ಈ ಕುರಿತಾಗಿ‌ ಟ್ವೀಟ್ ಮಾಡಿದ ಅವರು, ಈಗಾಗಲೇ ಜನರ ಆಕ್ರೋಶಕ್ಕೆ ತುತ್ತಾಗಿರುವ ಬಿಜೆಪಿ ಸರ್ಕಾರ ನಾಡಿನ ಸಮಸ್ಯೆಗಳನ್ನು 'ವಿಷಯಾಂತರ' ಮಾಡಲು ʼಮತಾಂತರʼ ಗುಮ್ಮವನ್ನು ತಂದು ನಿಲ್ಲಿಸಿದೆ ಎಂದು ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.

ನಾಡಿನ ಜನರು ಮತ್ತು ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ರಾಜಕೀಯದ ಲಾಭದ ದುರಾಸೆಗೆ ರಾಜ್ಯದ ಸಾಮರಸ್ಯಕ್ಕೆ ಬೆಂಕಿ ಇಡುವ ಮತಾಂತರ ನಿಷೇಧ ಮಸೂದೆಯ ನಿಜ ಬಣ್ಣ ಎಲ್ಲಿ ಬಯಲಾಗುತ್ತದೋ ಎಂಬ ಭಯದಿಂದ ಸರ್ಕಾರ ಮಾಧ್ಯಮಗಳಿಗೆ ನಿಷೇದ ಹೇರಲು ಪ್ರಯತ್ನಿಸಿದೆ ಎಂಬ ಸಂಶಯ ಹುಟ್ಟಿದೆ,  ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಂತೆ ಮಾಧ್ಯಮ ರಂಗವು ಸಂವಿಧಾನದ ಒಂದು ಅಂಗ. ಅದಕ್ಕೆ ನಿರ್ಬಂಧ ಹೇರುವುದು ʼಸಂವಿಧಾನದ ಒಂದು ಕಾಲು ಮುರಿಯುವ ಪ್ರಯತ್ನ ಮಾಡಿದಂತೆ ಇದು ಸಂವಿಧಾನವನ್ನೇ ಬದಲಾವಣೆ ಮಾಡುತ್ತೇವೆ ಎನ್ನುವವರ ದರ್ಪದ ಹೆಜ್ಜೆ ಎಂದು ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.

ಇದನ್ನೂ ಓದಿ: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

ಅಲ್ಲದೇ ಮಾಧ್ಯಮದವರು ಪ್ರತಿಭಟನೆ ಮಾಡಿದ ನಂತರ ಮಾನ್ಯ ಸ್ಪೀಕರ್ ಅವರು ಮಾಧ್ಯಮ ನಿರ್ಬಂಧದ ಬಗ್ಗೆ ಗೊತ್ತಿಲ್ಲ ಎನ್ನುತ್ತಾರೆ, ಹಾಗಾದ್ರೆ ನಿರ್ಬಂಧ ಹೇರಿದವರು ಯಾರು? ಸ್ಪೀಕರ್ ಅವರಿಗೆ ಗೊತ್ತಿಲ್ಲದೆ ನಿರ್ಬಂಧದ ಸಂದೇಶ ಮಾಧ್ಯಮಗಳಿಗೆ ಕೊಟ್ಟವರು ಯಾರು? ಈ ಬಗ್ಗೆ ಜನರಿಗೆ ಸತ್ಯಾಂಶ ಗೊತ್ತಾಗಬೇಕಿದೆ ಎಂದು ಮಾಜಿ ಸಿಎಂ ಸರ್ಕಾರವನ್ನು ಒತ್ತಾಯಿಸಿದ್ದಾರೆ.
Published by:Sandhya M
First published: