ನಮ್ಮೂರ ಹೆಮ್ಮೆ ಡಾಕ್ಟರ್ ನರಸಮ್ಮ: ನಿಸ್ವಾರ್ಥ ಸೇವೆಯ ತಾಯಿಗೆ ಸರ್ಕಾರ ಸಹಾಯಹಸ್ತ

2018ರಲ್ಲಿ ಭಾರತ ಸರ್ಕಾರದ ಶ್ರೇಷ್ಠ ಪ್ರಶಸ್ತಿ ಪದ್ಮಶ್ರೀಯನ್ನು ನೀಡಿ ಗೌರವಿಸಿದಾಗ ಇಡೀ ದೇಶವೇ ಪಾವಗಡದತ್ತ ತಿರುಗಿ ನೋಡಿತ್ತು.

zahir | news18
Updated:November 24, 2018, 8:47 AM IST
ನಮ್ಮೂರ ಹೆಮ್ಮೆ ಡಾಕ್ಟರ್ ನರಸಮ್ಮ: ನಿಸ್ವಾರ್ಥ ಸೇವೆಯ ತಾಯಿಗೆ ಸರ್ಕಾರ ಸಹಾಯಹಸ್ತ
Sulagatti Narasamma
  • Advertorial
  • Last Updated: November 24, 2018, 8:47 AM IST
  • Share this:
ತುಮಕೂರು: ಅದೆಷ್ಟೋ ಜನರ ಪಾಲಿಗೆ ಆಕೆ ಮಹಾತಾಯಿ. ಸಾವಿರಾರು ಪುಟ್ಟ ಕಂದಮ್ಮಗಳಿಗೆ ಕೈಯೊಡ್ಡಿದ ಮಹಾಮಾತೆ. ಹೌದು, ನಮ್ಮ ರಾಜ್ಯದ ಹೆಮ್ಮೆ ಸೂಲಗಿತ್ತಿ ನರಸಮ್ಮ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಸಾಮಾಜಿಕ ಸೇವೆಯ ಮೂಲಕ ಬಾಣಂತಿಯರ ಪಾಲಿನ ದೇವರು ಎನಿಸಿಕೊಂಡ ನರಸಮ್ಮ ಇಂದು ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಹಿನ್ನಲೆಯಲ್ಲಿ ನರಸಮ್ಮನವರ ಸಮಾಜ ಸೇವೆಯನ್ನು ಗೌರವಿಸಿ ರಾಜ್ಯ ಸರ್ಕಾರ ಅವರ ಜೀವಿತಾವಧಿ ವೈದ್ಯಕೀಯ ವೆಚ್ಚವನ್ನು ಭರಿಸಲು ನಿರ್ಧರಿಸಿದೆ. ಅನಾರೋಗ್ಯಕ್ಕೆ ಇಡಾಗಿರುವ ಪದ್ಮಶ್ರೀ ನರಸಮ್ಮನವರಿಗೆ ಸೂಕ್ತ ಚಿಕಿತ್ಸೆ ಒದಗಿಸುವಂತೆ ಸರ್ಕಾರ ಅಧಿಕೃತ ಆದೇಶ ಹೊರೆಡಿಸಿದೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಅವರ ಜೀವತಾವಧಿಯ ವೈದ್ಯಕೀಯ ವೆಚ್ಚವನ್ನು ಸರ್ಕಾರ ಭರಿಸಲಿದೆ.1,500ಕ್ಕೂ ಹೆಚ್ಚಿನ ಹೆರಿಗೆ
ಇಡೀ ವೈದ್ಯಕೀಯ ಲೋಕವೇ ಅಚ್ಚರಿ ಪಡುವಂತೆ ನರಸಮ್ಮ ಇದುವರೆಗೆ ಸೂಲಗಿತ್ತಿ ಕಾರ್ಯದಲ್ಲಿ ವೈಫಲ್ಯವನ್ನೇ ನೋಡಿಲ್ಲ. ತುಮಕೂರು ಜಿಲ್ಲೆಯ ಸುತ್ತಮುತ್ತಲಿನ ಗ್ರಾಮೀಣ ಜನರ ಪಾಲಿಗೆ ನರಸಮ್ಮನವರೇ ನರ್ಸ್. ಗರ್ಭಿಣಿಯರ ಹೊಟ್ಟೆಯ ಮೇಲೆ ಕೈಯಿಟ್ಟರೆ ಭ್ರೂಣದ ನಾಡಿಮಿಡಿತ ನರಸಮ್ಮರಿಗೆ ಕೇಳಿಸುತ್ತದೆ. ಮಗುವಿನ ಬೆಳವಣಿಗೆ, ಹೆರಿಗೆ ಸಮಯವನ್ನು ಮತ್ತು ಮಗು ಹೆಣ್ಣೊ ಅಥವಾ ಗಂಡೊ ಎಂದು ಹೇಳುವ ನಿಖರತೆ ನರಸಮ್ಮರಿಗೆ ಸಿದ್ಧಿಸಿದೆ.  ಹದಿಹರೆಯದಲ್ಲಿ ಮೊದಲ ಹೆರಿಗೆ ಮಾಡಿಸಿದ ನರಸಮ್ಮ ಅಲ್ಲಿಂದ ತಮ್ಮ ಸಮಾಜ ಸೇವೆಯಲ್ಲಿ ಹಿಂತಿರುಗಿ ನೋಡಲಿಲ್ಲ. ತಮ್ಮ ಜೀವನದುದ್ದಕ್ಕೂ 1500ಕ್ಕೂ ಹೆಚ್ಚಿನ ಮಹಿಳೆಯರಿಗೆ ಹೆರಿಗೆ ಮಾಡಿಸಿದ್ದಾರೆ. ಎಷ್ಟೋ ಎಳೆ ಕಂದಮ್ಮಗಳನ್ನು ಗಿಡ ಮೂಳಿಕೆ ಔಷಧಿಗಳನ್ನು ನೀಡಿ ಉಳಿಸಿದ್ದಾರೆ. ಅವರ ನಿಸ್ವಾರ್ಥ ಸೇವೆಯಿಂದ ಗ್ರಾಮೀಣ ಭಾಗದ ಮಕ್ಕಳ ಪಾಲಿನ ಮಹಾತಾಯಿಯಾಗಿ ಗುರುತಿಸಿಕೊಂಡಿದ್ದಾರೆ.

ಅಜ್ಜಿಯನ್ನು ಮೀರಿಸಿದ ಮೊಮ್ಮಗಳು
ನರಸಮ್ಮನವರ ಅಜ್ಜಿ ಮರಿಗೆಮ್ಮ ಸೂಲಗಿತ್ತಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಸದಾ ಅಜ್ಜಿಯೊಂದಿಗೆ ಹೆರಿಗೆ ಸಹಾಯಕಿಯಾಗಿ ಎಲ್ಲ ಊರುಗಳಿಗೆ ನರಸಮ್ಮ ತೆರಳುತ್ತಿದ್ದರು. ಅದೊಂದು ದಿನ ಹೆರಿಗೆ ಮಾಡಿಸಲು ಅಜ್ಜಿಯೊಂದಿಗೆ ನರಸಮ್ಮ ಹೋಗಿದ್ದರು. ಹೆರಿಗೆ ಮಾಡಿಸುವ ಸಮಯದಲ್ಲಿ ಮರಿಗಮ್ಮ ಏನೊ ತರಲು ಹೊರ ಹೋಗಿದ್ದಾರೆ. ಈ ಸಂದರ್ಭದಲ್ಲಿ ಗರ್ಭಿಣಿಯ ನೋವಿನ ಯಾತನೆ ನೋಡಿದ ನರಸಮ್ಮ, ಧೈರ್ಯದಿಂದಲೇ ಹೆರಿಗೆ ಮಾಡಿಸಿದ್ದರು. ಆಗ ನರಸಮ್ಮನವರಿಗೆ ವಯಸ್ಸು ಕೇವಲ 17 ವರ್ಷ. ಅಜ್ಜಿ ಮರಳಿ ಬರುವಷ್ಟರಲ್ಲಿ ನರಸಮ್ಮ ಎಲ್ಲವನ್ನು ಸುಸೂತ್ರವಾಗಿ ಮಾಡಿ ಮುಗಿಸಿದ್ದರು. ಅಜ್ಜಿಯೇ ಮೂಕ ವಿಸ್ಮತರಾಗಿ ನಿಂತರು. ಅಲ್ಲಿಂದ ಶುರುವಾದ ಸೂಲಗಿತ್ತಿ ಸೇವೆಯಲ್ಲಿ ಒಂದೇ ದಿನ ಮೂರು ನಾಲ್ಕು ಹೆರಿಗೆ ಮಾಡಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ಅದೆಷ್ಟೋ ಕಿಲೋ ಮೀಟರ್ ನಡೆದುಕೊಂಡೇ ಹೋಗಿ ತಮ್ಮ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ.  ಆದರೆ ಎಲ್ಲೂ ಕೂಡ ನರಸಮ್ಮನವರು ಹಣಕ್ಕಾಗಿ ಹೆರಿಗೆ ಮಾಡಿಸುತ್ತಿರಲಿಲ್ಲ. ಜನರು ಖುಷಿಯಿಂದ ಏನು ನೀಡುತ್ತಾರೋ ಅದನ್ನು ಸ್ವೀಕರಿಸುತ್ತಿದ್ದರು 'ಡಾಕ್ಟರ್' ನರಸಮ್ಮ.

ಪದ್ಮಶ್ರೀ ಸೇರಿದಂತೆ ಅನೇಕ ಗೌರವ
2014 ರಲ್ಲಿ ತುಮಕೂರು ವಿಶ್ವ ವಿದ್ಯಾಲಯ ನರಸಮ್ಮನವರು  ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ಮಾಡುತ್ತಿದ್ದ ಸೇವೆಯನ್ನು ಗೌರವಿಸಿ  ಡಾಕ್ಟರೇಟ್​ ನೀಡಿ ಗೌರವಿಸಿದೆ. ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ, ದೇವರಾಜು ಅರಸು ಪ್ರಶಸ್ತಿಗಳನ್ನು ನೀಡಿ ನರಸಮ್ಮನವರನ್ನು ಆದರಿಸಿದೆ. ಹಾಗೆಯೇ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಯನ್ನು ಈ ಮಹಾತಾಯಿಗೆ ನೀಡಲಾಗಿದೆ. 2018ರಲ್ಲಿ ಭಾರತ ಸರ್ಕಾರದ ಶ್ರೇಷ್ಠ ಪ್ರಶಸ್ತಿ ಪದ್ಮಶ್ರೀಯನ್ನು ನೀಡಿ ಗೌರವಿಸಿದಾಗ ಇಡೀ ದೇಶವೇ ಪಾವಗಡದತ್ತ ತಿರುಗಿ ನೋಡಿತ್ತು. ಅವರ ನಿಸ್ವಾರ್ಥ ಸೇವೆಯನ್ನು ಕಂಡು ನಿಬ್ಬೆರಗಾಗಿದ್ದರು. ವೈದ್ಯಲೋಕವೇ ಅಚ್ಚರಿ ಪಡುವಂತೆ ನರಸಮ್ಮ ಮಾಡಿರುವ ಸೇವೆಯನ್ನು ಅಂದು ಇಡೀ ದೇಶವೇ ಹಾಡಿ ಹೊಗಳಿತು.
First published:November 24, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ