ವ್ಯಾಪಾರಿಗಳಿಗೆ ಗುಡ್ ನ್ಯೂಸ್; ಕಲಾಸಿಪಾಳ್ಯ-ಕೆ.ಆರ್‌‌.ಮಾರ್ಕೆಟ್ ಆರಂಭಕ್ಕೆ ಬಿಬಿಎಂಪಿ ಒಪ್ಪಿಗೆ

ಕೊರೋನಾ ವೈರಸ್​ ಪ್ರಸ್ತುತ ನಿಯಂತ್ರಣದಲ್ಲಿದೆ. ಹೀಗಾಗಿ ವ್ಯಾಪಾರಸ್ಥರ ಒತ್ತಾಯದ ಮೇರೆಗೆ ಬಿಬಿಎಂಪಿ ಇಂದು ಕಲಾಸಿಪಾಳ್ಯ ಮತ್ತು ಕೆ.ಆರ್. ಮಾರುಕಟ್ಟೆಯನ್ನು ಪುನಃ ತೆಗೆಯಲು ವ್ಯಾಪಾರ ವಹಿವಾಟು ನಡೆಸಲು ಅನುಮತಿ ನೀಡಿದೆ.

ಕೆ.ಆರ್. ಮಾರುಕಟ್ಟೆ

ಕೆ.ಆರ್. ಮಾರುಕಟ್ಟೆ

 • Share this:
  ಬೆಂಗಳೂರು (ಜುಲೈ 15); ಮಾರಕ ಕೊರೋನಾ ಎರಡನೇ ಅಲೆ ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ಕಳೆದ ಎರಡು ತಿಂಗಳಿನಿಂದ ಸಾಕಷ್ಟು ಹಾನಿ ಮಾಡಿದೆ. ಕೊರೋನಾ ಸೋಂಕಿಗೆ ಸಾವಿರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಸೋಂಕು ನಿಯಂತ್ರಣ ಅನಿವಾರ್ಯವಾಗಿದ್ದ ಕಾರಣ ರಾಜ್ಯ ಸರ್ಕಾರ ರಾಜ್ಯಾದ್ಯಂತ 6 ವಾರಗಳ ಲಾಕ್​ಡೌನ್ ಘೋಷಣೆ ಮಾಡಿತ್ತು. ಪರಿಣಾಮ ಬೆಂಗಳೂರಿನ ಜನನಿಬಿಡ ಪ್ರದೇಶವಾಗಿದ್ದ ಕೆ.ಆರ್​. ಮಾರ್ಕೆಟ್​, ಕಲಾಸಿಪಾಳ್ಯ ಮಾರ್ಕೆಟ್​ ಸಹ ಮುಚ್ಚಲಾಗಿತ್ತು. ಇದರಿಂದ ಸಾವಿರಾರು ವ್ಯಾಪಾರಿಗಳು ಸಂಕಷ್ಟಕ್ಕೆ ಒಳಗಾಗಿದ್ದರು. ಆದರೆ, ಕೊರೋನಾ ಹಾವಳಿ ಕಡಿಮೆಯಾಗಿ ರಾಜ್ಯ ಸರ್ಕಾರ ಈವರೆಗೆ 3 ಹಂತಗಳಲ್ಲಿ ರಾಜ್ಯವನ್ನು ಅನ್​ಲಾಕ್ ಮಾಡಿದ್ದರೂ ಸಹ ಕೆ.ಆರ್. ಮಾರುಕಟ್ಟೆ ತೆಗೆಯಲು ಅನುಮತಿ ನೀಡಿರಲಿಲ್ಲ. ಆದರೆ, ಬಿಬಿಎಂಪಿ ಇಂದು ಕೊನೆಗೂ ಅನುಮತಿ ನೀಡಿರುವುದು, ವ್ಯಾಪಾರಿಗಳ ಸಂತಸಕ್ಕೆ ಕಾರಣವಾಗಿದೆ.​

  ಕೊರೋನಾ ವೈರಸ್​ ಪ್ರಸ್ತುತ ನಿಯಂತ್ರಣದಲ್ಲಿದೆ. ಹೀಗಾಗಿ ವ್ಯಾಪಾರಸ್ಥರ ಒತ್ತಾಯದ ಮೇರೆಗೆ ಬಿಬಿಎಂಪಿ ಇಂದು ಕಲಾಸಿಪಾಳ್ಯ ಮತ್ತು ಕೆ.ಆರ್. ಮಾರುಕಟ್ಟೆಯನ್ನು ಪುನಃ ತೆಗೆಯಲು ವ್ಯಾಪಾರ ವಹಿವಾಟು ನಡೆಸಲು ಅನುಮತಿ ನೀಡಿದೆ. ಆದರೆ, ಕೊರೋನಾ ಮಾರ್ಗಸೂಚಿಯನ್ನು ತಪ್ಪದೆ ಪಾಲನೆ ಮಾಡಬೇಕು ಎಂದು ಗ್ರಾಹಕರು ಮತ್ತು ವ್ಯಾಪಾರಸ್ಥರಿಗೆ ಸೂಚನೆ ನೀಡಲಾಗಿದೆ.

  ವ್ಯಾಪಾರಿಗಳು ಮತ್ತು ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಹಾಕಬೇಕು, ಅಂಗಡಿ ಎದುರು ಸಾಮಾಜಿಕ ಅಂತರ ಕಾಪಾಡಲು ಬಾಕ್ಸ್ ಮಾಡಬೇಕು, ವ್ಯಾಪಾರಿಗಳು ಹಾಗೂ ಜನರು ಕೋವಿಡ್ ಟೆಸ್ಟ್ ಹಾಗೂ ವ್ಯಾಕ್ಸಿನ್ ಪಡೆದುಕೊಳ್ಳಬೇಕು, ವ್ಯಾಪಾರಿಗಳು ಹಾಗೂ ಗ್ರಾಹಕರು ಸಾಮಾಜಿಕ ಅಂತರ ಕಾಪಾಡಬೇಕು, ಅಂಗಡಿಯಲ್ಲಿ ಶುಚಿತ್ವ ಕಾಪಾಡಬೇಕು, ಗ್ರಾಹಕರಿಗೆ ಸ್ಕ್ರೀನಿಂಗ್ ಟೆಸ್ಟ್ ಕಡ್ಡಾವಾಗಿ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ಅಲ್ಲದೆ, ಕೋವಿಡ್ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಲು ಸಹ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.

  ಇದನ್ನೂ ಓದಿ: ಡ್ರೋನ್ ಉತ್ಪಾದನೆ ಮತ್ತು ಹಾರಾಟಕ್ಕೆ ಸಂಬಂಧಿಸಿ ಹೊಸ ಕರಡು ನಿಯಮ ಹೊರಡಿಸಿದ ಕೇಂದ್ರ ಸರ್ಕಾರ

  ಕೊರೋನಾ ಎರಡನೇ ಅಲೆ ಪ್ರಸ್ತುತ ತಣ್ಣಗಾಗಿದೆ ನಿಜ. ಆದರೆ, ಜನರನ್ನು ಹೀಗೆ ಮತ್ತೆ ಸಾಮಾಜಿಕವಾಗಿ ಓಡಾಡಲು ಅನುಮತಿ ನೀಡಿದರೆ, ಕೆ.ಆರ್​. ಮಾರುಕಟ್ಟೆ ಯಂತಹ ಜನನಿಬಿಡ ಪ್ರದೇಶಗಳಿಗೆ ಮತ್ತೆ ಅನುಮತಿ ನೀಡಿದರೆ, ಕೊರೋನಾ ಮೂರನೇ ಅಲೆಗೆ ನಾವೇ ಆಹ್ವಾನ ನೀಡಿದಂತೆ, ಹೀಗಾಗಿ ಭವಿಷ್ಯದ ಅನಾಹುತಗಳನ್ನು ತಪ್ಪಿಸಲು ಸರ್ಕಾರ ಲಾಕ್​ಡೌನ್ ಅನ್ನು ವಿಸ್ತರಣೆ ಮಾಡಬೇಕು ಎಂದು ಅನೇಕ ತಜ್ಞರು ಒತ್ತಾಯಿಸುತ್ತಿದ್ದಾರೆ. ಆದರೆ, ಈ ನಡುವೆ ಬಿಬಿಎಂಪಿ ಮಾರುಕಟ್ಟೆ ತೆರೆಯಲು ಅನುಮತಿ ನೀಡಿರುವ ಕುರಿತು ಅನೇಕರು ಆತಂಕ ವ್ಯಕ್ತಪಡಿಸಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: