ಶಾಲಾ-ಕಾಲೇಜುಗಳಲ್ಲಿ ಉತ್ತಮ ಹಾಜರಾತಿ; ಶಿಕ್ಷಣ ಸಚಿವ ಸುರೇಶ್ ಕುಮಾರ್

ಬಹುದಿನಗಳ ಕಾಲ ಶಾಲೆಗಳು ಆರಂಭವಾಗದೇ ಮಕ್ಕಳ ಭವಿಷ್ಯದ ಕುರಿತು ಆತಂಕದಲ್ಲಿದ್ದ ಪೋಷಕರು  ಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯದೆಲ್ಲೆಡೆ ಶಾಲಾರಂಭಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಬೆಂಗಳೂರು: ರಾಜ್ಯದಲ್ಲಿರುವ 5492 ಪದವಿ ಪೂರ್ವ ಕಾಲೇಜುಗಳಲ್ಲಿ ದಾಖಲಾಗಿರುವ 4,24,250 ವಿದ್ಯಾರ್ಥಿಗಳ ಪೈಕಿ ಮಂಗಳವಾರ 2,42,886 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. (ಶೇ.57.25 ಹಾಜರಿ) ಅಂತೆಯೇ 16,850 ಪ್ರೌಢಶಾಲೆಗಳಲ್ಲಿ 10ನೇ ತರಗತಿಗೆ ದಾಖಲಾಗಿರುವ 9,29,130 ವಿದ್ಯಾರ್ಥಿಗಳ ಪೈಕಿ 4,77,051 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. (ಶೇ.51.34   ಹಾಜರಾತಿ) ಎಂದು  ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ  ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

6 ರಿಂದ 9ನೇ ತರಗತಿಗಳಿಗೆ ನಡೆಯುತ್ತಿರುವ ಪರಿಷ್ಕೃತ ವಿದ್ಯಾಗಮ ತರಗತಿಗಳಿಗೆ ಮಂಗಳವಾರ 6,30,557  ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಪ್ರಸ್ತುತ ವರ್ಷದ ಶಾಲಾರಂಭದ ಐದನೇ ದಿನವಾದ ಮಂಗಳವಾರ ವಿದ್ಯಾರ್ಥಿಗಳ ಹಾಜರಾತಿ ಯಥಾಸ್ಥಿತಿಯಲ್ಲಿ ಮುಂದುವರೆದಿದ್ದು, ಶಾಲಾ ಕಾಲೇಜುಗಳನ್ನು ಆರಂಭಿಸಿರುವುದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದಂತಾಗಿದೆ ಎಂದು ಅವರು ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಐವರು ಶಿಕ್ಷಕರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಅವರು ಶಾಲಾರಂಭಕ್ಕೂ ಮುನ್ನವೇ ಕೊರೋನಾ ಪರೀಕ್ಷೆಯ ಫಲಿತಾಂಶ ಬಂದಿದ್ದರಿಂದ ಆ ಶಿಕ್ಷಕರು ಕ್ವಾರಂಟೈನ್‍ನಲ್ಲಿದ್ದಾರೆ. ಅವರು ಮಕ್ಕಳ ಸಂಪರ್ಕಕ್ಕೆ ಬಂದಿಲ್ಲವಾದ್ದರಿಂದ ಶಾಲೆಗಳು ಸಮರ್ಪಕವಾಗಿ ನಡೆಯುತ್ತಿವೆ. ವಿಜಯಪುರ ಜಿಲ್ಲೆಯ ಪ್ರಾಥಮಿಕ ಶಾಲೆಯ ಒಬ್ಬ ಶಿಕ್ಷಕರು ಕೊರೋನಾ ಸೋಂಕಿಗೊಳಗಾಗಿದ್ದು ಅವರು ಮನೆಯಲ್ಲಿಯೇ ಪ್ರತ್ಯೇಕವಾಗಿದ್ದಾರೆ. ಹುಕ್ಕೇರಿ ಶೈಕ್ಷಣಿಕ ಜಿಲ್ಲೆಯಲ್ಲಿ ನಾಲ್ವರು ಶಿಕ್ಷಕರು ಹೋಂ ಕ್ವಾರಂಟೈನ್‍ನಲ್ಲಿದ್ದಾರೆ. ಕೊಪ್ಪಳ ಜಿಲ್ಲೆಯ ವಡಗನಹಳ್ಳಿ ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ  ಒಬ್ಬ ಶಿಕ್ಷಕರಿಗೆ ಕೊರೋನಾ ಪಾಸೀಟಿವ್ ಬಂದಿದ್ದು, ಶಾಲೆಯನ್ನು ಸ್ಯಾನಿಟೈಸೇಷನ್ ಮಾಡಿಸಲಾಗಿದೆ. ಬಾಗಲಕೋಟೆ ಜಿಲ್ಲೆಯ ಐವರು ಶಿಕ್ಷಕರಿಗೆ ಕೊರೋನಾ ಪಾಸಿಟಿವ್ ಬಂದಿದ್ದು ಅವರೆಲ್ಲ ಗೃಹ ಪ್ರತ್ಯೇಕತೆಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ವಿವಿಧ ಐದು ಶಾಲೆಗಳ ಐವರು ಶಿಕ್ಷಕರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಅವರೆಲ್ಲ ಗೃಹ ಪ್ರತ್ಯೇಕತೆಯಲ್ಲಿದ್ದಾರೆ. ಮಕ್ಕಳಿಗೆ ಯಾವುದೇ ತೊಂದರೆಯಾಗಿಲ್ಲ. ಬೆಳಗಾವಿ ಜಿಲ್ಲೆ ಕಡೋಲಿ ಶಾಲೆಯ ಶಿಕ್ಷಕರಿಗೆ ಈ ತನಕ ಕೊರೋನಾ ಸೋಂಕು ದೃಢಪಟ್ಟಿಲ್ಲ. ಅವರಿಗೆ ಟೆಸ್ಟ್ ಆಗಿದ್ದು, ಇನ್ನು ಫಲಿತಾಂಶ ಬರಬೇಕಿದೆ. ರ‍್ಯಾಪಿಡ್ ಅಂಟಿಜನ್ ಟೆಸ್ಟ್ ಪರೀಕ್ಷೆಯಲ್ಲಿ ನೆಗೆಟಿವ್ ಫಲಿತಾಂಶ ಬಂದಿದೆ. ಪೂರ್ಣ ಫಲಿತಾಂಶ ಬರುವ ತನಕ ಈ ಶಿಕ್ಷಕರು ಶಾಲೆಗೆ ಹಾಜರಾಗುತ್ತಿಲ್ಲ. ನಾಳೆ ಟೆಸ್ಟ್ ಫಲಿತಾಂಶ ಬರಬಹುದು.  ಈ ಯಾವ ಶಿಕ್ಷಕರೂ ಮ್ಕಕಳ ಸಂಪರ್ಕಕ್ಕೆ ಬಂದಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

ಇದನ್ನು ಓದಿ: ರಷ್ಯಾ ಅಧ್ಯಕ್ಷ ಪುಟಿನ್ ರೀತಿ ಭಾರತದಲ್ಲಿ ಮೊದಲು ಆತ್ಮನಿರ್ಭಾರ್ ಎನ್ನುವವರು ಲಸಿಕೆ ಹಾಕಿಸಿಕೊಳ್ಳಲಿ; ಎಂ.ಬಿ. ಪಾಟೀಲ

ಮಂಗಳವಾರ ಹುಕ್ಕೇರಿ ತಾಲೂಕಿನ ವಿವಿಧ ಶಾಲೆಗಳಿಗೆ ಭೇಟಿ ನೀಡಿದ್ದ ಸ್ಥಳೀಯ ವಿಧಾನಸಭಾ ಸದಸ್ಯ  ಗಣೇಶ ಹುಕ್ಕೇರಿ ಶಾಲಾ ಮಕ್ಕಳಿಗೆ ಮಾಸ್ಕ್ ಮತ್ತು ಸ್ಯಾನಿಟೈಜರ್ ಒದಗಿಸುವುದಾಗಿ ಭರವಸೆ ನೀಡಿದ್ದು, ಅವರಿಗೆ ಸಚಿವರು ಕೃತಜ್ಞತೆ ಸಲ್ಲಿಸಿದ್ದಾರೆ.

ವಿದ್ಯಾಗಮ ತರಗತಿಗಳೂ ಸಹ ಸುರಕ್ಷಿತ ವಾತಾವರಣದಲ್ಲಿ ನಡೆಯುತ್ತಿದ್ದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಹೆಚ್ಚಿನ ಮಕ್ಕಳು ಹಾಜರಾಗುತ್ತಿದ್ದಾರೆ. ಪೋಷಕರು ಮತ್ತು ಮಕ್ಕಳು ಶಾಲಾರಂಭದ ಕುರಿತು ಸಂತಸ ವ್ಯಕ್ತಪಡಿಸಿದ್ದಾರಲ್ಲದೇ, ಸುರಕ್ಷತೆ ಮತ್ತು ಎಸ್‍ಒಪಿ ಪಾಲನೆ ಕುರಿತು ವಿಶ್ವಾಸ ಹೊಂದಿದ್ದಾರೆ. ಬಹುದಿನಗಳ ಕಾಲ ಶಾಲೆಗಳು ಆರಂಭವಾಗದೇ ಮಕ್ಕಳ ಭವಿಷ್ಯದ ಕುರಿತು ಆತಂಕದಲ್ಲಿದ್ದ ಪೋಷಕರು  ಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯದೆಲ್ಲೆಡೆ ಶಾಲಾರಂಭಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
Published by:HR Ramesh
First published: