HOME » NEWS » State » GOKARNA PRIESTS HAPPY ABOUT SUPREME COURT VERDICT DKK SESR

ರಾಮಚಂದ್ರಪುರ ಮಠದ ಆಡಳಿತದಿಂದ ಕೈ ತಪ್ಪಿದ ಗೋಕರ್ಣ ದೇವಾಲಯ; ಅನುವಂಶೀಯ ಅರ್ಚಕರಿಂದ ಸಂಭ್ರಮ

ಸುಪ್ರೀ‌ಂ ಕೋರ್ಟ್ ತೀರ್ಪನ್ನು ಸ್ವಾಗತಿಸಿರುವ ಗೋಕರ್ಣದ ಅನುವಂಶೀಯ ಅರ್ಚಕರು, ದೇಗುಲದ ಬಳಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಸಾರ್ವಜನಿಕರಿಗೆ ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದ್ದಾರೆ.

news18-kannada
Updated:April 19, 2021, 9:44 PM IST
ರಾಮಚಂದ್ರಪುರ ಮಠದ ಆಡಳಿತದಿಂದ ಕೈ ತಪ್ಪಿದ ಗೋಕರ್ಣ ದೇವಾಲಯ; ಅನುವಂಶೀಯ ಅರ್ಚಕರಿಂದ ಸಂಭ್ರಮ
ಅರ್ಚಕರಿಂದ ಸಂಭ್ರಮ
  • Share this:
ಕಾರವಾರ (ಏ. 19) : ಗೋಕರ್ಣ ಮಹಾಬಲೇಶ್ವರ ದೇವಸ್ಥಾನವನ್ನು ರಾಮಚಂದ್ರಪುರ ಮಠದ ಆಡಳಿತದಿಂದ ಹಿಂಪಡೆದು, ನಿವೃತ್ತ ನ್ಯಾಯಾಧೀಶ ಬಿ.ಎನ್.ಶ್ರೀಕೃಷ್ಣ ನೇತೃತ್ವದ ಸಮಿತಿ ರಚಿಸುವಂತೆ ಸುಪ್ರೀಂ ಕೋರ್ಟ್ ಮರು ಆದೇಶ ನೀಡಿದೆ. ಮುಜರಾಯಿ ಇಲಾಖೆಯ ಆಡಳಿತದಲ್ಲಿದ್ದ ಈ ದೇಗುಲವನ್ನು 2004ರಲ್ಲಿ ಆಗಿನ ಟ್ರಸ್ಟಿ ವಿ.ಡಿ. ದೀಕ್ಷಿತ್ ನಿಧನದ ಬಳಿಕ 2008ರ ಆ. 14ರವರೆಗೆ ಅವರ ಮಗ ಬಾಲಚಂದ್ರ ದೀಕ್ಷಿತ್ ಉಸ್ತುವಾರಿ ಆಡಳಿತ ನಡೆಸಿಕೊಂಡು ಬರುತ್ತಿದ್ದರು. ಆದರೆ 2008ರ ಮೇ ತಿಂಗಳಿನಲ್ಲಿ ಹೊಸನಗರದ ರಾಮಚಂದ್ರಾಪುರ ಮಠದವರು, ಈ ದೇವಸ್ಥಾನ ಪುರಾತನ ಕಾಲದಲ್ಲಿ ತಮ್ಮದಾಗಿತ್ತು. ಈಗ ಪುನಃ ಆಡಳಿತದ ನಿರ್ವಹಣೆಯನ್ನು ತಮಗೆ ವಹಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರಿಂದ, 2008ರ ಆ.14ರಂದು ಸೂಚಿತ ಪಟ್ಟಿಯಿಂದ ದೇವಾಲಯವನ್ನು ರದ್ದುಪಡಿಸಿ, ರಾಮಚಂದ್ರಾಪುರ ಮಠಕ್ಕೆ ಅಂದಿನ ಮುಖ್ಯಮಂತ್ರಿ ಬಿ‌.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಹಸ್ತಾಂತರ ಮಾಡಿತ್ತು. ಇದನ್ನು ವಿರೋಧಿಸಿ ಬಾಲಚಂದ್ರ ದೀಕ್ಷಿತ್ ಹಾಗೂ ಇತರರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

10 ವರ್ಷಗಳ ವಿಚಾರಣೆಯ ಬಳಿಕ 2018ರಲ್ಲಿ ಹೈಕೋರ್ಟ್ ವಿಭಾಗೀಯ ಪೀಠವು ರಾಮಚಂದ್ರಾಪುರ ಮಠದ ವಿರುದ್ಧ ತೀರ್ಪು ನೀಡಿತ್ತು. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶ ಬಿ.ಎನ್.ಶ್ರೀಕೃಷ್ಣ ಅವರ ನೇತೃತ್ವದಲ್ಲಿ ದೇವಸ್ಥಾನದ ನಿರ್ವಹಣೆಯನ್ನು ನೋಡಿಕೊಳ್ಳಲು ಸಮಿತಿ ರಚಿಸುವಂತೆ ಸರ್ಕಾರಕ್ಕೆ ಸೂಚಿಸಿತ್ತು. ಈ ತೀರ್ಪಿನ ವಿರುದ್ಧ ರಾಮಚಂದ್ರಾಪುರ ಮಠವು ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಹೀಗಿರುವಾಗ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸುಪ್ರೀಂ ಕೋರ್ಟ್‌ ಸೂಚಿಸಿದ್ದ ಕಾರಣ ಸರಕಾರ ದೇವಸ್ಥಾನವನ್ನು ಮತ್ತೆ ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿತ್ತು. ಆದರೆ, ಪ್ರಕರಣದ ಅರ್ಜಿ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ ಸಿಜೆಐ ಬೊಬ್ಡೆ ನೇತೃತ್ವದ ಪೀಠ, ಈಗ ಈ ಪ್ರಕರಣ ಸಂಬಂಧ ಮಧ್ಯಂತರ ವ್ಯವಸ್ಥೆ ಮಾಡುವ ಸಲುವಾಗಿ ಬಿ.ಎನ್.ಶ್ರೀಕೃಷ್ಣ ನೇತೃತ್ವದ ಸಮಿತಿಯನ್ನು ಮರು ರಚಿಸಿ, ಗೋಕರ್ಣ ಮಹಾಬಲೇಶ್ವರ ದೇವಾಲಯ ಆಡಳಿತದ ಉಸ್ತುವಾರಿಯನ್ನು ಸಮಿತಿಗೆ ವಹಿಸಿ ಆದೇಶಿಸಿದೆ.



ಅನುವಂಶೀಯ ಅರ್ಚಕರಿಂದ ಸಂಭ್ರಮಾಚರಣೆ

ಸುಪ್ರೀ‌ಂ ಕೋರ್ಟ್ ತೀರ್ಪನ್ನು ಸ್ವಾಗತಿಸಿರುವ ಗೋಕರ್ಣದ ಅನುವಂಶೀಯ ಅರ್ಚಕರು, ದೇಗುಲದ ಬಳಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಸಾರ್ವಜನಿಕರಿಗೆ ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದ್ದಾರೆ. ಹಿಂದಿನ ಸರ್ಕಾರದ ನಡೆಯನ್ನು ತಪ್ಪು ಎಂದು ಹೈಕೋರ್ಟ್ ನೀಡಿದ್ದ ಆದೇಶವನ್ನು ರಾಮಚಂದ್ರಾಪುರ ಮಠವು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿತ್ತು. ಇದಕ್ಕೆ ತಾತ್ಕಾಲಿಕ ತಡೆ ನೀಡಬೇಕು ಎಂದು‌ ಕೋರಿತ್ತು. ಆದರೆ ಈ ಅರ್ಜಿಯನ್ನು ಸುಪ್ರೀಂ ತಿರಸ್ಕರಿಸಿ, ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದೆ. ಇದು ಕೇವಲ ಗೋಕರ್ಣಕ್ಕಷ್ಟೇ ಅಲ್ಲ, ಇದು ನಾಡಿನ ಎಲ್ಲರಿಗೂ ಸಂದ ಜಯ ಎಂದು ಅನುವಂಶೀಯ ಅರ್ಚಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಏನಂತಾರೆ ರಾಘವೇಶ್ವರ ಶ್ರೀ?

ಗೋಕರ್ಣ ಶ್ರೀಮಹಾಬಲೇಶ್ವರ ದೇವಸ್ಥಾನ ನಮಗೆ ಸೇವೆಯ ಸಾಧನವಾಗಿತ್ತೇ ವಿನಃ ದೇಗುಲದಿಂದ ಯಾವ ಪ್ರತಿಫಲಾಪೇಕ್ಷೆಯೂ ಇರಲಿಲ್ಲ. ಆದ್ದರಿಂದ ಸುಪ್ರೀಂಕೋರ್ಟ್ ತೀರ್ಪಿನಿಂದ ಆಘಾತ ಅಥವಾ ವ್ಯಥೆಯಾಗುವ ಪ್ರಶ್ನೆಯೇ ಇಲ್ಲ ಎಂದು ರಾಮಚಂದ್ರಾಪುರ ಮಠದ ಪೀಠಾಧೀಶ‌ ಶ್ರೀರಾಘವೇಶ್ವ ಭಾರತೀ ಮಹಾಸ್ವಾಮೀಜಿ ಹೇಳಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಸುಪ್ರೀಂಕೋರ್ಟ್ ಮಧ್ಯಂತರ ತೀರ್ಪು ನೀಡಿ ಮಹಾಬಲೇಶ್ವರ ದೇವಾಲಯದ ನಿರ್ವಹಣೆ ಹೊಣೆಯನ್ನು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಎನ್.ಕೃಷ್ಣ ನೇತೃತ್ವದ ಸಮಿತಿಗೆ ಸುಪ್ರೀಂಕೋರ್ಟ್ ಒಪ್ಪಿಸಿದೆ.
Youtube Video

ಶ್ರೀಮಠ ಗೋಕರ್ಣ ವಿಚಾರದಲ್ಲಿ ದೇಗುಲ ಹಿತಕ್ಕಾಗಿ ಮತ್ತು ಸಮಾಜ ಹಿತಕ್ಕಾಗಿ ಕಾನೂನು ಹೋರಾಟ ಮುಂದುವರಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಶ್ರೀಶಂಕರಾಚಾರ್ಯರ ಕಾಲದಿಂದಲೂ ಶ್ರೀರಾಮಚಂದ್ರಾಪುರಮಠ ಹಾಗೂ ಗೋಕರ್ಣ ಮಹಾಬಲೇಶ್ವರ ದೇವಾಲಯಕ್ಕೆ ಪಾರಂಪರಿಕ ಸಂಬಂಧವಿದ್ದು, ೨೦೦೮ ರಲ್ಲಿ ಶ್ರೀಮಠಕ್ಕೆ ಪುನರ್ ಹಸ್ತಾಂತರವಾದ ನಂತರ "ದೇವಹಿತ - ಭಕ್ತಹಿತ - ಸೇವಕಹಿತ" ತತ್ವದಡಿ ದೇಗುಲ ಕೈಂಕರ್ಯಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಶ್ರೀಮಠಕ್ಕೆ ಗೋಕರ್ಣ ದೇಗುಲ ಸೇವೆಯ ಸಾಧನವಾಗಿತ್ತೇ ವಿನಃ ಎಂದೂ ಇದನ್ನು ಆದಾಯದ ಮೂಲ ಎಂಬ ದೃಷ್ಟಿಯಿಂದ ಶ್ರೀಮಠ ನೋಡಿರಲಿಲ್ಲ ಎಂದು ಹೇಳಿದ್ದಾರೆ.
Published by: Seema R
First published: April 19, 2021, 9:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories