ಗೋಕರ್ಣ: ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಜೆಡಿಎಸ್ ಪಂಚರತ್ನ ರಥಯಾತ್ರೆ (JDS Pancharatna Ratha Yatra) ಹಿನ್ನಲೆ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy), ಗೋಕರ್ಣ ಮಹಾಬಲೇಶ್ವರ ದೇವಸ್ಥಾನಕ್ಕೆ (Gokarna Mahabaleshwar Temple ) ತೆರಳಿ ಪೂಜೆ ಸಲ್ಲಿಸಿದ್ದರು. ಈ ವೇಳೆ ಆತ್ಮಲಿಂಗ ಸ್ಪರ್ಷಿಸಿ ಪೂಜೆ ಸಲ್ಲಿಸಿದ ಬಳಿಕ ಮಹಾಗಣಪತಿ ಸ್ಪರ್ಷಿಸಿ ಪೂಜೆ ಸಲ್ಲಿಸಿದ್ದರು. ಇದೇ ವೇಳೆ ಬ್ರಾಹ್ಮಣರ ವಿಚಾರವಾಗಿ ಹೇಳಿಕೆ ನೀಡಿದ್ದ ಕುಮಾರಸ್ವಾಮಿಗೆ ನಿಮ್ಮ ಹೇಳಿಕೆಯಿಂದ ನಮಗೆ ಬೇಸರವಾಗಿದೆ, ಈ ಬಗ್ಗೆ ಕ್ಷಮೆ ಕೇಳಬೇಕು ಎಂದು ಅರ್ಚಕ ನರಸಿಂಹ ಉಪಾದ್ಯ ಹೆಚ್‌ಡಿಕೆ ಮುಂದೆಯೇ ಒತ್ತಾಯಿಸಿದ್ದರು.
ನೀವು ಹೇಳಿದ ಮಾತಿಗೆ ಇಲ್ಲೇ ಸ್ಪಷ್ಟೀಕರಣ ಕೊಡಿ
ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿದ ಬಳಿಕ ಕುಮಾರಸ್ವಾಮಿ ಅವರನ್ನು ನೇರವಾಗಿ ಪ್ರಶ್ನೆ ಮಾಡಿದ ಅರ್ಚಕ ನರಸಿಂಹ ಉಪಾದ್ಯ ಅವರು, ಬ್ರಾಹ್ಮಣರ ಬಗ್ಗೆ ಆಡಿದ ಮಾತು ಬೇಜಾರಾಗಿದೆ. ನಾವು ಈ ರೀತಿ ಹೇಳುತ್ತೇವೆ ಅಂತ ಬೇಜಾರು ಮಾಡ್ಕೋಬಾರದು. ದೇವೇಗೌಡರ ಬಗ್ಗೆ ನಿಮ್ಮ ಬಗ್ಗೆ ಹೆಮ್ಮೆ ಇದೆ. ನಿಮ್ಮ ಆಡಳಿತ ವೈಖರಿ ನಮಗೆ ಖುಷಿ ಕೊಟ್ಟಿದೆ. ಆದರೆ ನೀವು ಹೇಳಿದ ಮಾತಿಗೆ ಇಲ್ಲೇ ಸ್ಪಷ್ಟೀಕರಣ ಕೊಡಿ ಎಂದು ಪ್ರಶ್ನಿಸಿದರು.
ಇದಕ್ಕೆ ಸ್ಥಳದಲ್ಲೇ ಸ್ಪಷ್ಟನೆ ನೀಡಿದ ಕುಮಾರಸ್ವಾಮಿ ಅವರು, ನಾನು ಬ್ರಾಹ್ಮಣ ವಿರೋಧಿ ಅಲ್ಲ. ನಾನ ಹಾಗೇ ಹೇಳಿದ್ದಲ್ಲಾ, ತಪ್ಪಾಗಿ ಅರ್ಥೈಸಲಾಗಿದೆ. ಪೇಶ್ವೆ ಬ್ರಾಹ್ಮಣರ ಬಗ್ಗೆ ಹೇಳಿದ್ದೇನೆ ಎಂದು ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದರು.
ಬ್ರಾಹ್ಮಣ ಸಮುದಾಯದ ಸಭೆ ಕರೆದು ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಬೇಕು
ಇನ್ನು, ಈ ಕುರಿತಂತೆ ನ್ಯೂಸ್18 ಕನ್ನಡ ಜೊತೆ ಮಾತನಾಡಿದ ಅರ್ಚಕ ನರಸಿಂಹ ಉಪಾದ್ಯ ಅವರು, ಎರಡು ಮೂರು ದಿನದ ಹಿಂದೆ ಕುಮಾರಸ್ವಾಮಿ ಅವರು ನೀಡಿದ್ದ ಹೇಳಿಕೆಗೆ ಖಂಡನೀಯ ಎಂದು ವಿರೋಧ ವ್ಯಕ್ತಪಡಿಸಿದ್ದೆ. ಏಕೆಂದರೆ ದೇವೇಗೌಡರು, ಜೆಹೆಚ್ ಪಾಟೇಲರು ನಾಯಕರಾಗಿದ್ದ ವೇಳೆ ನಾನು ಜನತಾ ಪರಿವಾರದಲ್ಲೇ ಕೆಲಸ ಮಾಡಿದ್ದೆ. ಆದ್ದರಿಂದ ಅವರು ಸಿಎಂ, ಪಿಎಂ ಆಗಿದ್ದರು. ಅವರ ಮೇಲಿನ ಗೌರವದಿಂದ ಸಣ್ಣ ಸಲಹೆ ನೀಡಿದ್ದೇನೆ.
ಈಗ ಕುಮಾರಸ್ವಾಮಿ ಅವರು ಒಂದೇ ಪಕ್ಷ ಅಧಿಕಾರಕ್ಕೆ ಬರಬೇಕು ಎಂದು ಓಡಾಡುತ್ತಿದ್ದಾರೆ. ಆದ್ದರಿಂದ ಚುನಾವಣಾ ರಾಜಕೀಯ ವೇಳೆ ಇಂತಹ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಸಲಹೆ ನೀಡಿದ್ದೇನೆ ಅಷ್ಟೇ. ಬ್ರಾಹ್ಮಣ ಸಮುದಾಯದ ಸಭೆ ಕರೆದು ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಬೇಕು ಒತ್ತಾಯ ಮಾಡಿದ್ದೇನೆ ಎಂದು ತಿಳಿಸಿದರು.
ಕುಮಾರಸ್ವಾಮಿ ಅವರು ನನಗೆ ಸ್ಪಷ್ಟನೆ ನೀಡಿದರು. ಅವರ ಮಾತು ನನಗೆ ಸಮಾಧಾನ ಮಾಡಬಹುದು, ಆದರೆ ಇದು ಸಮುದಾಯದ ಪ್ರಶ್ನೆ ಅಲ್ವಾ. ಆದ್ದರಿಂದ ಸಮುದಾಯಕ್ಕೆ ಸ್ಪಷ್ಟನೆ ನೀಡಬೇಕು ಎಂದು ಸಲಹೆ ನೀಡಿದ್ದೇನೆ. ನನಗೆ ಕುಮಾರಸ್ವಾಮಿ ಅವರ ಬಗ್ಗೆ ಸಾಕಷ್ಟು ಗೌರವ ಹೊಂದಿದ್ದೇನೆ. ಆದ್ದರಿಂದ ಅವರು ಸಮುದಾಯಕ್ಕೆ ಉದ್ದೇಶಿಸಿ ಮಾತನಾಡಿದರೆ ಎಲ್ಲರಿಗೂ ಒಂದು ಸಮಾಧಾನ ಆಗುತ್ತೆ ಎಂದು ಮನವಿ ಮಾಡಿದರು.
ಅರ್ಚರ ನೇರ ಪ್ರಶ್ನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, ಹಿಂದೂ ಧರ್ಮ ರಕ್ಷಣೆ ನಾವು ಮಾಡುತ್ತೇವೆ. ಹಿಂದೂ ಧರ್ಮದ ಹೆಸರಿನಲ್ಲಿ ಅಧಿಕಾರ ಬಂದವರು ಏನು ಮಾಡಿದ್ದಾರೆ? ಬ್ರಾಹ್ಮಣ ಸಮುದಾಯಕ್ಕೆ ನಾನು ಸಿಎಂ ಆಗಿದ್ದಾಗ ಬೆಂಗಳೂರಿನಲ್ಲಿ ಸಮುದಾಯ ಭವನಕ್ಕೆ ಜಾಗ ಕೊಟ್ಟೆ. ಬ್ರಾಹ್ಮಣ ಪ್ರಾಧಿಕಾರ ರಚನೆ ಮಾಡಿದೆ. ಬಿಜೆಪಿ ಏನು ಮಾಡಿದೆ ಹೇಳಿ. ನಮಗೆ ಸಾವರ್ಕರ್ ಸಂಸ್ಕೃತಿ ಬೇಡ, ಸರ್ವೇ ಜನ ಸುಖಿನೋ ಭವಂತು ಅನ್ನುವ ಬ್ರಾಹ್ಮಣರು ನಮಗೆ ಬೇಕು ಎಂದು ಸ್ಪಷ್ಟಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ