20 ಯೋಧರ ಜೀವ ಉಳಿಸಿ ಹುತಾತ್ಮನಾದ ಉಮೇಶ್​ ಹೆಳವರ್​; ಗೋಕಾಕ್​ನಲ್ಲಿ ಅಂತ್ಯಕ್ರಿಯೆ

sushma chakre | news18
Updated:October 22, 2018, 3:50 PM IST
20 ಯೋಧರ ಜೀವ ಉಳಿಸಿ ಹುತಾತ್ಮನಾದ ಉಮೇಶ್​ ಹೆಳವರ್​; ಗೋಕಾಕ್​ನಲ್ಲಿ ಅಂತ್ಯಕ್ರಿಯೆ
sushma chakre | news18
Updated: October 22, 2018, 3:50 PM IST
ನ್ಯೂಸ್​18 ಕನ್ನಡ

ಬೆಳಗಾವಿ (ಅ. 22):  ಹೊಸಮನೆಯನ್ನು ಕಟ್ಟಿ, ದೀಪಾವಳಿಗೆ ಗೃಹಪ್ರವೇಶಕ್ಕೆ ಬರುತ್ತೇನೆ ಎಂದು ಹೇಳಿದ್ದ ಮಗ ಬಂದಿದ್ದು ಮಾತ್ರ ಶವವಾಗಿ. ಮಣಿಪುರದ ಇಂಪಾಲ್​ನಲ್ಲಿ ಸಿಆರ್​ಪಿಎಫ್ ಆಗಿ ಸೇವೆ ಸಲ್ಲಿಸುತ್ತಿದ್ದ ಬೆಳಗಾವಿಯ ಗೋಕಾಕ್​ನ ವೀರಯೋಧ ಉಮೇಶ್​ ಹೆಳವರ್​ ತನ್ನ ಜೊತೆಗಿದ್ದವರ ಪ್ರಾಣ ಉಳಿಸಲು ಹೋಗಿ ಶನಿವಾರ ಹುತಾತ್ಮರಾಗಿದ್ದರು. ಇಂದು ಅವರ ಪಾರ್ಥಿವ ಶರೀರವನ್ನು ಸ್ವಗೃಹಕ್ಕೆ ತರಲಾಗಿದೆ.

ಹ್ಯಾಂಡ್ ಗ್ರೆನೇಡ್​ ಸಿಡಿಯದಂತೆ ಎಚ್ಚರವಹಿಸಲು ಕಂಟೇನರ್​ನಿಂದ ಹೊರಕ್ಕೆ ಜಿಗಿದಿದ್ದ ಉಮೇಶ್​ ಹೆಳವರ್​ 20 ಯೋಧರ ಜೀವ ಉಳಿಸಿ, ಹುತಾತ್ಮರಾಗಿದ್ದರು. ಇಂದು ಅವರ ಮೃತ ದೇಹವನ್ನು ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಿಂದ ಗೋಕಾಕ್​ಗೆ ತರಲಾಗಿತ್ತು ವಾಲ್ಮೀಕಿ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಬಳಿಕ, ಹೆಳವರ್ ಸಮುದಾಯದ ಪ್ರಕಾರ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಇದನ್ನೂ ಓದಿ: ರಜೆ ಮೇಲೆ ಸ್ವಗ್ರಾಮಕ್ಕೆ ಆಗಮಿಸಿದ್ದ ಯೋಧ ಹೃದಯಾಘಾತದಿಂದ ಸಾವು

ಮಣಿಪುರ ರಾಜ್ಯದ ಇಂಪಾಲ್​ನಲ್ಲಿ ಸಿಆರ್​ಫಿಎಫ್​​ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದ ಉಮೇಶ್​ , ಶನಿವಾರ ಸಂಜೆ ಇಂಪಾಲ್ ಮಾರುಕಟ್ಟೆಯಿಂದ ಹ್ಯಾಂಡ್ ಗ್ರೆನೇಡ್ ಲೋಡ್ ಮಾಡಿ ಕಾಂಗ್ಲಾಟೊಂಬಿ ತರಬೇತಿ ಶಿಬಿರಕ್ಕೆ ತೆರಳುತ್ತಿದ್ದಾಗ ಗ್ರೆನೇಡ್ ಸ್ಪೋಟವಾಗಿದೆ. ಆ ಸಮಯಕ್ಕೆ ಸರಿಯಾಗಿ ಯೋಧ ಉಮೇಶ್ ತಾವಿದ್ದ ಕಂಟೇನರ್​ನಿಂದ ಹೊರಕ್ಕೆ ಜಿಗಿದಿದ್ದರು. ಗ್ರೆನೇಡ್ ಸಮೇತ ಹೊರಕ್ಕೆ ಜಿಗಿದ ಉಮೇಶ್ ವಾಹನದಲ್ಲಿದ್ದ ಸುಮಾರು 20 ಮಂದಿಯ ಪ್ರಾಣ ರಕ್ಷಿಸಿ ತಾವು ಪ್ರಾಣತ್ಯಾಗ ಮಾಡಿದ್ದರು.

ಇನ್ನು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್​, 20 ಯೋಧರ ಪ್ರಾಣ ಉಳಿಸಿ ದೇಶಕ್ಕಾಗಿ ಪ್ರಾಣವನ್ನಪ್ಪಿದ ಗೋಕಾಕ್​ನ ಯೋಧನ ಧೈರ್ಯ ಹಾಗೂ ಸಾಹಸ ಮೆಚ್ಚುವಂಥದ್ದು. ಯೋಧನ ಕುಟುಂಬಕ್ಕೆ ಅಗತ್ಯ ಎಲ್ಲ ಸೌಕರ್ಯಗಳನ್ನು ಒದಗಿಸಲು ಸರ್ಕಾರ ಸಿದ್ಧವಿದೆ. ಈ ಬಗ್ಗೆ ಸಿಎಂ ಜತೆ ಚರ್ಚಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.
First published:October 22, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ