ಮಹದಾಯಿ ವಿಚಾರದಲ್ಲಿ ಗೋವಾದಿಂದ ಮತ್ತೆ ಕ್ಯಾತೆ ; ಕರ್ನಾಟಕದಿಂದ ಅಕ್ರಮ ಎಂದು ಗೋವಾ ಸಿಎಂ ಆರೋಪ

ಮಹದಾಯಿ ಐತೀರ್ಪು ಪ್ರಶ್ನಿಸಿ ಗೋವಾ ಸರ್ಕಾರ ಸಲ್ಲಿಸಿರುವ ಅರ್ಜಿ ವಿಚಾರಣೆಯ ಹಂತದಲ್ಲಿದ್ದಾಗ ಕಳಸಾ- ಬಂಡೂರಿಗೆ ನೀರು ತಿರುಗಿಸಿ ಕರ್ನಾಟಕ ನ್ಯಾಯಾಂಗ ನಿಂದನೆ ಮಾಡಿದೆ ಎನ್ನುವ ಆರೋಪ ಮಾಡಲಾಗಿದೆ

 ಮಹದಾಯಿ ನದಿ

ಮಹದಾಯಿ ನದಿ

  • Share this:
ಹುಬ್ಬಳ್ಳಿ(ಅಕ್ಟೋಬರ್​. 07): ಮಹದಾಯಿ ಮತ್ತು ಕಳಸಾ- ಬಂಡೂರಿ ಯೋಜನೆ ಜಾರಿ ವಿಚಾರದಲ್ಲಿ ಗೋವಾ ಸರ್ಕಾರ ಮತ್ತೊಮ್ಮೆ ಕ್ಯಾತೆ ಶುರು ಮಾಡಿದೆ. ಕಳಸಾ- ಬಂಡೂರಿ ನಾಲೆಗಳ ಮೂಲಕ ಕರ್ನಾಟಕ ಅಕ್ರಮವಾಗಿ ನೀರು ತಿರುಗಿಸಿದೆ ಎಂದು ಗೋವಾ ಮುಖ್ಯಮಂತ್ರಿ ಆರೋಪಿಸಿದ್ದಾರೆ. ಈ ಕುರಿತು ಗೋವಾ ಸರ್ಕಾರ ಕರ್ನಾಟಕದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ದೂರ ನೀಡಿದೆ‌. ಕರ್ನಾಟಕದ ವಿರುದ್ಧ ಮತ್ತೊಂದು ಮೊಕದ್ದಮೆ ದಾಖಲು ಮಾಡುವ ಮೂಲಕ‌ ಗೋವಾ ಸರ್ಕಾರ ಉದ್ದಟತನ ಪ್ರದರ್ಶಿಸಿದೆ‌. ಕರ್ನಾಟಕ ಸರ್ಕಾರ ಕಳಸಾ- ಬಂಡೂರಿ ನಾಲೆಗಳ ಮೂಲಕ ಮಹದಾಯಿಯಿಂದ ಮಲಪ್ರಭೆಗೆ ನೀರು ತಿರುಗಿಸಿದೆ. ಈ ಕುರಿತು ವಿಡಿಯೋ ಸಾಕ್ಷ್ಯಗಳಿವೆ ಎಂದು ಗೋವಾ ವಾದಿಸುತ್ತಿದೆ. ಈ ಬಗ್ಗೆ ಸುಪ್ರಿಂ ಕೋರ್ಟ್‌ಗೆ ದೂರು ಸಲ್ಲಿಸಿರುವುದಾಗಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಟ್ವೀಟ್ ಮಾಡಿದ್ದಾರೆ. ಮಹದಾಯಿಗಾಗಿ ಗೋವಾ ಸರ್ಕಾರದ ಹೋರಾಟ ಮುಂದುವರೆಸುವುದಾಗಿ ಅವರು ಹೇಳಿಕೆ ನೀಡಿದ್ದಾರೆ.

ಮಹದಾಯಿ ಐತೀರ್ಪು ಪ್ರಶ್ನಿಸಿ ಗೋವಾ ಸರ್ಕಾರ ಸಲ್ಲಿಸಿರುವ ಅರ್ಜಿ ವಿಚಾರಣೆಯ ಹಂತದಲ್ಲಿದ್ದಾಗ ಕಳಸಾ- ಬಂಡೂರಿಗೆ ನೀರು ತಿರುಗಿಸಿ ಕರ್ನಾಟಕ ನ್ಯಾಯಾಂಗ ನಿಂದನೆ ಮಾಡಿದೆ ಎನ್ನುವ ಆರೋಪ ಮಾಡಲಾಗಿದೆ. ಈ ಮೂಲಕ ಗೋವಾ ಸಿಎಂ ಪ್ರಮೋದ್ ಸಾವಂತ್ ಮತ್ತೆ ಮಹದಾಯಿ ಕಿಚ್ಚು ಹೊತ್ತಿಸಿದ್ದಾರೆ.

ಮಹದಾಯಿ ನ್ಯಾಯಾಧಿಕರಣ ಕರ್ನಾಟಕಕ್ಕೆ 13.42 ಟಿಎಂಸಿ ನೀರು ಹಂಚಿಕೆ ಮಾಡಿ ಐತೀರ್ಪು ನೀಡಿತ್ತು. ಅಲ್ಲದೇ ಇದರ ಆಧಿಸೂಚನೆ ಹೊರಡಿಸಲು 2020 ರ ಫೆಬ್ರವರಿ 2 ರಂದು ಆದೇಶಿಸಿತ್ತು. ಸುಪ್ರೀಂಕೋರ್ಟ್ ಹೊರಡಿಸಿದ್ದ ಆದೇಶದ ಹಿನ್ನೆಲೆಯಲ್ಲಿ ಫೆಬ್ರವರಿ 27 ಕ್ಕೆ ಕೇಂದ್ರ ಸರ್ಕಾರ ಗೆಜೆಟ್ ಆಧಿಸೂಚನೆ ಹೊರಡಿಸಿ ನೀರು ಬಳಕೆಗೆ ಸಮ್ಮತಿ ನೀಡಿತ್ತು. ಹೀಗಾಗಿ ಕರ್ನಾಟಕ ಮಹದಾಯಿ ನದಿ ತಿರುವು ಯೋಜನೆಗೆ ಸಿದ್ಧತೆ ಮಾಡಿಕೊಂಡಿದೆ.

ಇದನ್ನೂ ಓದಿ : ದುಬಾರಿ ಮಾಸ್ಕ್​ ದಂಡ: ವಿರೋಧ ಹಿನ್ನಲೆ 1000ರೂ ನಿಂದ 250ಕ್ಕೆ ಬೆಲೆ ಇಳಿಸಿದ ಕರ್ನಾಟಕ ಸರ್ಕಾರ

ಕಾಮಗಾರಿ ಕೂಡ ಪ್ರಗತಿಯಲ್ಲಿದೆ. ಇದರಿಂದಾಗಿ ಕಂಗೆಟ್ಟಿರುವ ಗೋವಾ ಮತ್ತೆ ಕ್ಯಾತೆ ತೆಗೆದಿದೆ. ಸುಪ್ರೀಂಕೋರ್ಟ್‌ಗೆ ಅನವಶ್ಯಕ ದೂರು ಸಲ್ಲಿಸಿರುವ ಗೋವಾ ಸರ್ಕಾರ ಕರ್ನಟಕದ ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಕೂಡಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ರಾಜ್ಯದ ರೈತರಿಗೆ ಅನ್ಯಾಯ ಆಗದಂತೆ ಕ್ರಮಕೈಗೊಳ್ಳಬೇಕು. ಗೋವಾ ಕ್ಯಾತೆಗೆ ತಕ್ಕ ಉತ್ತರ ನೀಡಬೇಕು. ಮಹದಾಯಿ ಕಾಮಗಾರಿಗೆ ಅಡ್ಡಿಯಾಗದಂತೆ ರಾಜ್ಯ ಸರ್ಕಾರ ನೋಡಿಕೊಳ್ಳಬೇಕೆಂದು ಮಹದಾಯಿ ಹೋರಾಟಗಾರರು ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ಮಹದಾಯಿ ಹೋರಾಟದ ಸ್ವರೂಪ ಈ‌ ಹಿಂದಿನಂತೆ ತೀವ್ರ ಸ್ವರೂಪ ಪಡೆಯಲಿದೆ ಎಂದು ಎಚ್ಚರಿಸಿದ್ದಾರೆ.
Published by:G Hareeshkumar
First published: