ಕೋಲಾರ(ಸೆ.23): ಕೊರೋನಾ ಲಾಕ್ಡೌನ್ ವೇಳೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೇ, ಬೆಳೆ ಕಟಾವು ಮಾಡಲಾಗದೆ ಅದೆಷ್ಟೋ ರೈತರು ತಮ್ಮ ಬೆಳೆಯನ್ನ ನಾಶ ಮಾಡಿದ್ದರು. ಆದರೆ ಕೋಲಾರ ಜಿಲ್ಲೆಯಲ್ಲಿ ಶುಂಠಿ ಬೆಳೆಗಾರರಿಗೆ ಮಾತ್ರ ಲಾಕ್ಡೌನ್ ವೇಳೆ ಯಾವುದೇ ನಷ್ಟವಾಗಿಲ್ಲ, ಹೀಗಂತಾ ರೈತರೇ ಹೇಳುತ್ತಿದ್ದಾರೆ. ಯಾಕೆಂದರೆ ಬೆಳೆಯನ್ನು ಭೂಮಿಯಿಂದ ತೆಗೆಯದೆ ಹಾಗೆ 3 ವರ್ಷಗಳ ಕಾಲ ಇಟ್ಟರೂ ಯಾವುದೇ ಸಮಸ್ಯೆಯಾಗಲ್ಲ. ಹಾಗಾಗಿ ಇದೀಗ ದುಪ್ಪಟ್ಟು ಬೆಲೆಗೆ ಬೆಳೆಯನ್ನು ಮಾರಾಟ ಮಾಡಲ ಸಿದ್ದಮಾಡಿಕೊಳ್ಳುತ್ತಿರುವುದಾಗಿ ರೈತರು ತಿಳಿಸಿದ್ದಾರೆ. ಹೌದು, ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕಣಿವೇನಹಳ್ಳಿ ಗ್ರಾಮದಲ್ಲಿನ, ಹನುಮಾನ್ ಕೃಷಿ ಕ್ಷೇತ್ರದಲ್ಲಿ ಸುಮಾರು 8 ಎಕರೆ ಪ್ರದೇಶದಲ್ಲಿ ವ್ಯವಸಾಯ ಮಾಡುತ್ತಿರುವ, ಮಾಜಿ ಕೆಎಎಸ್ ಅಧಿಕಾರಿ ಹನುಮಂತಪ್ಪ ಅವರು, ಇದೀಗ 2 ಎಕರೆಯಲ್ಲಿ ಬೆಳೆದಿರುವ ಶುಂಠಿ ಬೆಳೆಗೆ ಡಬಲ್ ರೇಟ್ ಸಿಗುವ ನಿರೀಕ್ಷೆಯಲ್ಲಿದ್ದಾರೆ.
ಹೌದು, ಕಳೆದ ಏಪ್ರಿಲ್ ತಿಂಗಳಲ್ಲಿ ಕಟಾವು ಆಗಬೇಕಿದ್ದ ಶುಂಠಿ ಬೆಳೆಯನ್ನ ಇಂದಿಗೂ ರಕ್ಷಿಸಿಕೊಂಡಿರುವ ಹನುಮಂತಪ್ಪ, ಗಿಡಗಳನ್ನ ಇಲ್ಲಿಯವರೆಗೂ ಫಲವಾತ್ತಾಗಿ ಆರೈಕೆ ಮಾಡಿದ್ದಾರೆ. ಮೂಲತಃ ಶುಂಠಿ ಬೆಳೆಯನ್ನ ಮೂರು ವರ್ಷಗಳ ಕಾಲ ಭೂಮಿಯಲ್ಲೇ ಬಿಟ್ಟರೂ ಇಳುವರಿಗೆ ಯಾವುದೇ ಧಕ್ಕೆಯಾಗಲ್ಲ. ಹಾಗಾಗಿ ಶುಂಠಿ ಗಿಡಗಳಿಗೆ ಮತ್ತೊಂದು ಪದರ ಮಣ್ಣು ಹಾಕಿಸಿ, ಗೊಬ್ಬರ ಮತ್ತು ಸರಿಯಾದ ಸಮಯಕ್ಕೆ ನೀರುಣಿಸುತ್ತಾ ಇದೀಗ, ಹೆಚ್ಚುವರಿ ಇಳುವರಿಯನ್ನ ತಮ್ಮದಾಗಿಸಿಕೊಂಡಿದ್ದಾರೆ.
2015ರಿಂದ ಪ್ರಧಾನಿ ಮೋದಿ ಸುತ್ತಿದ ದೇಶ ಎಷ್ಟು? ಖರ್ಚಾದ ಹಣ ಎಷ್ಟು?; ರಾಜ್ಯಸಭೆಗೆ ಸರ್ಕಾರ ನೀಡಿದ ಮಾಹಿತಿ ಇಲ್ಲಿದೆ
2 ಎಕರೆಯಲ್ಲಿನ ಶುಂಠಿಯನ್ನ ಈ ಹಿಂದೆ ಮಾರಾಟ ಮಾಡಿದ್ದರು, ಸುಮಾರು 10 ಲಕ್ಷ ಆದಾಯ ನಿರೀಕ್ಷೆ ಮಾಡಿದ್ದರು, ಈಗ ಇಳುವರಿ ದ್ವಿಗುಣವಾಗುವ ದೃಷ್ಟಿಯಿಂದ 15 ಲಕ್ಷಕ್ಕೂ ಹೆಚ್ಚು ಆದಾಯ ನಿರೀಕ್ಷೆ ಮಾಡ್ತಿದ್ದಾರೆ. ಈ ಕುರಿತು ಮಾತನಾಡಿರುವ ಅವರು ಲಾಕ್ಡೌನ್ ವೇಳೆಯಲ್ಲಿ ದಳ್ಳಾಳಿಗಳು ಹಾಗೂ ವಾಹನದ ಸಮಸ್ಯೆಯಿಂದ ಮಾರಾಟಕ್ಕೆ ಸಮಸ್ಯೆ ಎದುರಾಗಿತ್ತು. ಈಗ ಎಲ್ಲವೂ ಸುಧಾರಿಸಿದ್ದು, ಅಧಿಕ ಲಾಭ ನಿರೀಕ್ಷೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
ಸದ್ಯ ಮಾರುಕಟ್ಟೆಯಲ್ಲಿ ಶುಂಠಿಗೆ ಭರ್ಜರಿ ಬೆಲೆಯಿಲ್ಲದೆ ಇದ್ದರೂ, ರೈತರಿಗೆ ಸಮಾಧಾನಕರವಾದ ಬೆಲೆ ಲಭಿಸುತ್ತಿದೆ, ಆದರೆ ಹೊಸ ಶುಂಠಿ ಬೆಳೆಗೆ ಕಡಿಮೆ ಬೆಲೆಯಿದೆ. 60 ಕೆಜಿ ಒಂದು ಮೂಟೆಗೆ ಸುಮಾರು 3,500 ರೂ.ವರೆಗೂ ಬೆಲೆಯಿದೆ. ಲಾಕ್ ಡೌನ್ ವೇಳೆಗೆ ಹೋಲಿಸಿದರೆ ಇದು ಕಡಿಮೆ ಬೆಲೆಯೇ ಆದರೂ ಈಗ ಬೇಡಿಕೆ ಕಡಿಮೆ ಹಿನ್ನಲೆ ಬೆಲೆಯೂ ಇಳಿಕೆಯಾಗಿದೆ.
ಒಟ್ಟಿನಲ್ಲಿ ಬೆಳೆಯನ್ನ ರಕ್ಷಿಸಿಕೊಂಡು ಆರೈಕೆ ಮಾಡಿದ್ದಕ್ಕೆ ಇಂದು ನಷ್ಟದ ಸುಳಿಯಲ್ಲಿ ಸಿಲುಕದೆ, ಹಾಕಿದ ಬಂಡವಾಳಕ್ಕಿಂತ ಕೊಂಚ ಹೆಚ್ಚು ಲಾಭವನ್ನ ಪಡೆಯುವ ಉತ್ಸುಕದಲ್ಲಿದ್ದಾರೆ ಪ್ರಗತಿಪರ ರೈತ ಹನಮಂತಪ್ಪ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ