Ginger Crop : ಕುಸಿದ ಶುಂಠಿ ದರ; ಸಂಕಷ್ಟದಲ್ಲಿ ಹಾಸನ ರೈತರು

ಶುಂಠಿ ಬೆಲೆ ದಿಢೀರ್​ ಕುಸಿತದಿಂದಾಗಿ ಜಿಲ್ಲೆಯ ರೈತರು ಕಂಗಾಲಾಗಿದ್ದು, ತಕ್ಷಣಕ್ಕೆ ಸರ್ಕಾರ ನೆರವಿಗೆ ಧಾವಿಸುವಂತೆ ಆಗ್ರಹಿಸಿದ್ದಾರೆ.

ಶುಂಠಿ ಬೆಳೆದ ರೈತರು

ಶುಂಠಿ ಬೆಳೆದ ರೈತರು

 • Share this:
  ಹಾಸನ (ಸೆ. 15):  ಜಿಲ್ಲೆಯ ರೈತರಿಗೆ ಒಂದಲ್ಲ ಒಂದು ರೀತಿ ಕಷ್ಟ ಎದುರಾಗುತ್ತಲೆ ಇವೆ. ಒಂದೆಡೆ ಅತಿವೃಷ್ಠಿ, ಅನಾವೃಷ್ಠಿ, ಇನ್ನೊಂದೆಡೆ ಸೂಕ್ತ ಬೆಲೆ, ರೋಗ ಬಾಧೆ ಈ ರೀತಿ ಹಲವು ಸಮಸ್ಯೆಗಳ ಸರಮಾಲೆಯಿಂದ ರೈತರು ಸಂಕಷ್ಟಕ್ಕೆ ಸಿಲುಕುತ್ತಲೆ ಇದ್ದಾರೆ. ಕೆಲವು ವರ್ಷಗಳಿಂದ ಲಾಭಾದ ಬೆಳೆಯಾಗಿದ್ದ ಶುಂಠಿಯಲ್ಲಿ ಬೆಳೆದ ಅನೇಕ ರೈತರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಾಣಿಜ್ಯ ಬೆಳೆಯಿಂದ ಭಾರೀ ಲಾಭಾಗಳಿಸ ಬಹುದೆಂಬ ಅವರ ಲೆಕ್ಕಾಚಾರ ಉಲ್ಟಾ ಆಗಿದೆ. ಇದರ ಪರಿಣಾಮ ಜಿಲ್ಲೆಯ ರೈತರು ಆರ್ಥಿಕ ನಷ್ಟ ಅನುಭವಿಸುವಂತೆ ಆಗಿದೆ.

  ಸರ್ಕಾರದ ನೆರವಿಗೆ ರೈತರ ಆಗ್ರಹ

  ರೈತರ ಬೆಳೆ ಹಾನಿ ಸೇರಿದಂತೆ ಇನ್ನಿತರ ಪರಿಸ್ಥಿತಿಯಲ್ಲಿ ರೈತರ ನೆರವಿಗಾಗಿ ಸರ್ಕಾರದಿಂದ ಬೆಂಬಲ ಬೆಲೆ ಘೋಷಣೆ ಮಾಡಲಾಗುತ್ತದೆ. ಈ ಮೂಲಕ ಸಂಕಷ್ಟದಲ್ಲಿದ್ದ ರೈತರು ಕೊಂಚ ನಿಟ್ಟುಸಿರು ಬಿಡುವಂತೆ ಆಗುತ್ತದೆ. ಆದರೆ,  ಸರ್ಕಾರ ಕೆಲವೇ ಬೆಳೆಗಳಿಗೆ ಮಾತ್ರ ಬೆಂಬಲ ಬೆಲೆ ಘೋಷಿಸಿದೆ. ಅದರಲ್ಲೂ ವಾಣಿಜ್ಯ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿಲ್ಲ. ಇದರಿಂದ ಜನರು ತೊಂದರೆ ಅನುಭವಿಸುವಂತೆ ಆಗಿದೆ.

  ಲಾಭಾದ ಬೆಳೆಯಾಗಿದ್ದ ಶುಂಠಿ

  ಜಿಲ್ಲೆಯ ಹಲವು ಕಡೆ ಪ್ರದೇಶಕ್ಕೆ ಅನುಗುಣವಾಗಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ.  ಪ್ರಮುಖ ವಾಣಿಜ್ಯ ಬೆಳೆ ಆಲೂಗೆಡ್ಡೆಯನ್ನು ಮೂವತ್ತರಿಂದ ನಲವತ್ತು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಿದ್ದರು. ಸರಿಯಾದ ಬೆಲೆ ಸಿಗದೆ, ರೋಗದಿಂದ ರೈತರು ನಷ್ಟ ಅನುಭವಿಸಿದರು. ಆನಂತರದಲ್ಲಿ ಸರ್ಕಅರ ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಘೋಷಿಸಿದ್ದರಿಂದ ರೈತರು ಅದರತ್ತ ವಾಲಿ ಹೆಚ್ಚು ಬೆಳೆಯಲು ಆರಂಭಿಸಿದರು. ಇದರ ನಡುವೆ ಕೇರಳದಿಂದ ಬಂದ ಕೆಲವರು ರೈತರಿಂದ ಭೂಮಿ ಪಡೆದು ಶುಂಠಿ ಬೆಳೆಯಲು ಆರಂಭಿಸಿದರು. ಶುಂಠಿಗೆ ರೋಗ ಕಾಣಿಸಿಕೊಂಡಿರು ಔಷಧಿ ಸಿಂಪರಣೆ ಮಾಡಿದರು. ಇದರ ಜೊತೆಗೆ ಮಳೆ ಕೊರತೆಯಾದರೂ ಕೊಳವೆ ಬಾವಿ ಕೊರೆದು ನೀರು ಹಾಯಿಸಿ ಉತ್ತಮ ಲಾಭ ಪಡೆದರು. ಬೆಲೆ ಕುಸಿತವಾದರೂ ಅಷ್ಟೇನು ನಷ್ಟವಾಗಲಿಲ್ಲ. ಇದನ್ನು ಕಂಡ ಬಹುತೇಕ ರೈತರು ಆಲೂಗೆಡ್ಡೆ ಬದಲು ಶುಂಠಿ ಬೆಳೆಯತ್ತ ಮುಖ ಮಾಡಿದರು‌.

  ಇದನ್ನು ಓದಿ: ಗೋಡಂಬಿ ಪ್ರಿಯರ ನೀವು?; ಹಾಗಾದ್ರೆ ಅದರ ಆರೋಗ್ಯ ಪ್ರಯೋಜನಗಳನ್ನು ತಿಳಿದುಕೊಳ್ಳಿ!

  ಸಂಕಷ್ಟದಲ್ಲಿ ಜಿಲ್ಲೆಯ ರೈತರು

  ನಂತರದಲ್ಲಿ ಬೇರೆ ಜಿಲ್ಲೆಗಳಿಗಿಂತ ಹಾಸನ ಜಿಲ್ಲೆಯಲ್ಲಿ ಹೆಚ್ಚು ಶುಂಠಿ ಬೆಳೆಯಲಾರಂಭಿಸಿದರು. ಒಂದೊಮ್ಮೆ ಒಂದು ಚೀಲ ಶುಂಠಿಗೆ ಎಂಟು ಸಾವಿರ ರೂ ಬೆಲೆ ಸಿಕ್ಕಿತ್ತು. ಇದರಿಂದ ಅನ್ನದಾತರು ಹೆಚ್ಚಿನ ಪ್ರಮಾಣದಲ್ಲಿ ಶುಂಠಿ ಬೆಳೆಯಲು ಆರಂಭಿಸಿದರು. ಇದೀಗ ಹಾಸನ ಜಿಲ್ಲೆಯಲ್ಲಿ ನಲವತ್ತರಿಂದ ಐವತ್ತು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶುಂಠಿ ಬೆಳೆಯಲಾಗಿದೆ. ಇದಕ್ಕಾಗಿ ರೈತರು ಬ್ಯಾಂಕ್ ನಲ್ಲಿ, ಕೈಸಾಲ, ಒಡವೆ ಅಡವಿಟ್ಟಿದ್ದಾರೆ. ಶುಂಠಿ ಬೆಳೆ ಚೆನ್ನಾಗಿದ್ದರೂ ಸೂಕ್ತ ಬೆಲೆ ಸಿಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

  ರಫ್ತಾಗಾದ ಶುಂಠಿ

  ಚೀಲ ಶುಂಠಿಗೆ ಕೇವಲ 300 ರಿಂದ‌ 400 ರೂ ಬೆಲೆಯಿದ್ದು, ಶುಂಠಿ ಕೊಳ್ಳುವವರಿಲ್ಲ. ಹಾಸನ, ಸಾಲಗಾಮೆ, ಕದಾಳು, ಹಳೇಬೀಡು, ಹೆರಗು, ದುದ್ದ ಸೇರಿದಂತೆ ಹಲವೆಡೆ ಹೊಲಗದ್ದೆಗಳಲ್ಲೇ ಶುಂಠಿ ಕೊಳೆಯಲಾರಂಭಿಸಿದೆ. ಮತ್ತೊಂದೆಡೆ ಹಾಸನದಿಂದ ಪಾಕಿಸ್ತಾನ, ಆಫ್ಘಾನಿಸ್ತಾನ, ಬಾಂಗ್ಲಾದೇಶಕ್ಕೆ ಶುಂಠಿ ರಫ್ತು ಮಾಡಲಾಗುತ್ತಿತ್ತು. ಆಫ್ಘಾನಿಸ್ತಾನವನ್ನು ತಾಲಿಬಾನ್ ಉಗ್ರರು ವಶಕ್ಕೆ ಪಡೆದ ಹಿನ್ನಲೆಯಲ್ಲಿ ಶುಂಠಿ ರಫ್ತಾಗುತ್ತಿಲ್ಲ. ಇದರಿಂದ ಶುಂಠಿ ಕೊಳ್ಳುವವರಿಲ್ಲ, ಕೇಳುವವರಿಲ್ಲ ಎಂಬುದು ರೈತರ ಅಳಲಾಗಿದೆ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡಬೇಕು. ಶುಂಠಿ ಬೆಳೆಗೆ ಬೆಂಬಲ ಬೆಲೆ ನೀಡುವ ಜೊತೆಗೆ, ಶುಂಠಿ ಮಂಡಳಿ ತೆರೆದು ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕೆಂದು ಅನ್ನದಾತರು ಒತ್ತಾಯಿಸಿದ್ದಾರೆ.
  (ವರದಿ: ಶಶಿಧರ್​)
  Published by:Seema R
  First published: