ಗೌರಿ ಲಂಕೇಶ್​​ ಮಾತೃಹೃದಯ ಮತ್ತು ಜೀವಪರ ನಿಲುವುಗಳು

ಗೌರಿಯ ಪ್ರೀತಿ ಎಂದೂ ತೋರಿಕೆಯದಾಗಿರಲಿಲ್ಲ. ಅಥವಾ ಪ್ರೀತಿಯನ್ನು ತೋರಿಸುವಾಗ ಆಕೆಯನ್ನು ಯಾವ ಅಳುಕೂ ಕಾಡುತ್ತಿರಲಿಲ್ಲ. ಆತ್ಮೀಯರು ಕಿರಿಯರೇ ಇರಲೀ ಹಿರಿಯರೇ ಇರಲೀ ಆಕೆ ಅವರನ್ನು ಬಿಗಿದಪ್ಪಿ ಅವರನ್ನು ಅಭಿವಾದಿಸುತ್ತಿದ್ದರು.

Ganesh Nachikethu | news18
Updated:September 5, 2018, 7:12 AM IST
ಗೌರಿ ಲಂಕೇಶ್​​ ಮಾತೃಹೃದಯ ಮತ್ತು ಜೀವಪರ ನಿಲುವುಗಳು
ಗೌರಿಯ ಪ್ರೀತಿ ಎಂದೂ ತೋರಿಕೆಯದಾಗಿರಲಿಲ್ಲ. ಅಥವಾ ಪ್ರೀತಿಯನ್ನು ತೋರಿಸುವಾಗ ಆಕೆಯನ್ನು ಯಾವ ಅಳುಕೂ ಕಾಡುತ್ತಿರಲಿಲ್ಲ. ಆತ್ಮೀಯರು ಕಿರಿಯರೇ ಇರಲೀ ಹಿರಿಯರೇ ಇರಲೀ ಆಕೆ ಅವರನ್ನು ಬಿಗಿದಪ್ಪಿ ಅವರನ್ನು ಅಭಿವಾದಿಸುತ್ತಿದ್ದರು.
Ganesh Nachikethu | news18
Updated: September 5, 2018, 7:12 AM IST
 ಶ್ರೀನಿವಾಸ ಕಾರ್ಕಳ

“ನಿಜವಾದ ಕ್ರಾಂತಿಕಾರಿಗೆ ಪ್ರೀತಿಯ ಒಂದು ಅದ್ಭುತ ಭಾವನೆಯು ನಿರಂತರ ಮಾರ್ಗದರ್ಶನ ಮಾಡುತ್ತಿರುತ್ತದೆ. ಈ ಗುಣವಿಲ್ಲದ ಒಬ್ಬ ನೈಜ ಕ್ರಾಂತಿಕಾರಿಯನ್ನು ಯೋಚಿಸುವುದೂ ಅಸಾಧ್ಯ ಎನ್ನುತ್ತಾನೆ” ಅರ್ಜೆಂಟೀನಾದ ಮಾರ್ಕ್ಸ್​ವಾದಿ ಕ್ರಾಂತಿಕಾರಿ ಚೆ ಗುವೆರಾ.

ಈ ಮಾತನ್ನೇ ಬೇರೊಂದು ರೂಪದಲ್ಲಿ ಜನಚಳುವಳಿಗಳಿಗೂ ಅನ್ವಯಿಸಿ ಹೇಳಬಹುದು. ಚಳುವಳಿಯೊಂದು ಸುಸೂತ್ರವಾಗಿ ನಡೆಯಬೇಕಾದರೆ, ಅಲ್ಲಿ ಸೈದ್ಧಾಂತಿಕ ಬದ್ಧತೆ, ಕಾರ್ಯಾಚರಣೆಗಳಲ್ಲಿನ ಶಿಸ್ತು ಇತ್ಯಾದಿಗಳು ಮಾತ್ರ ಸಾಲುವುದಿಲ್ಲ. ಅವೆಲ್ಲವುಗಳ ಹಿಂದೆ ನಿರಂತರವಾದ ಒಂದು ಮಾನವೀಯ ಸ್ಪರ್ಶವೂ ಬೇಕಾಗುತ್ತದೆ. ಸಂಘಟನೆಯಲ್ಲಿ ಅಂತಹ ಮಾನವೀಯ ಸ್ಪರ್ಶ ನೀಡುವವರು ಅತ್ಯಗತ್ಯವಾಗಿ ಬೇಕಾಗುತ್ತಾರೆ.

ಕರ್ನಾಟಕದ ಇತ್ತೀಚಿನ ಜನ ಚಳುವಳಿಗಳ ಹಿನ್ನೆಲೆಯಲ್ಲಿ ಗೌರಿ ಲಂಕೇಶ್ ಮುಖ್ಯವಾಗುವುದು ವಿಶೇಷವಾಗಿ ಅವರ ತಾಯಿ ಮನಸಿನ ಕಾರಣಕ್ಕೆ. ಮನೆಯೊಳಗೆ ಸಮಸ್ಯೆಯೊಂದು ಉದ್ಭವಿಸಿದಾಗ ತಾಯಿ ಎನಿಸಿಕೊಂಡವಳು ಹೇಗೆ ಅದನ್ನು ಮಾನವೀಯವಾಗಿ ನಿಭಾಯಿಸುತ್ತಾಳೋ, ಮನೆಮಂದಿಗೆ ಒಂದು ಸ್ಪೂರ್ತಿಯ ಆಕರವಾಗಿ ಹೇಗೆ ಕೆಲಸ ಮಾಡುತ್ತಾಳೋ ಆ ಗುಣ ಗೌರಿಯಲ್ಲಿಯೂ ಇದ್ದ ಕಾರಣಕ್ಕೆ. ಕರ್ನಾಟಕದ ನಾನಾ ಸಾಮಾಜಿಕ ಹೋರಾಟಗಳಲ್ಲಿ ಗೌರಿಯವರು ನಿರ್ವಹಿಸಿದ ಈ ತಾಯಿ ಸ್ವರೂಪದ ಪಾತ್ರನಿಜಕ್ಕೂ ಅತ್ಯಂತ ಮಹತ್ವದ್ದು.

ಸಮನ್ವಯ ಸೇತು: ಬಲಪಂಥೀಯರಲ್ಲಿ ಅನೇಕ ಸಂಘಟನೆಗಳಿದ್ದರೂ ತುಲನಾತ್ಮಕವಾಗಿ ಅವರಲ್ಲಿ ಪರಸ್ಪರ ಭಿನ್ನಾಭಿಪ್ರಾಯಗಳು ತುಂಬ ಕಡಿಮೆ. ಇದ್ದರೂ ಕೂಡಾ ಒಂದು ನಿರ್ದಿಷ್ಟ ಗುರಿಯ ಸಂದರ್ಭ ಬಂದಾಗ ಅವರು ತಮ್ಮೆಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ ಒಂದಾಗಿ ಕೆಲಸ ಮಾಡುತ್ತಿರುತ್ತಾರೆ. ಆದರೆ ಪ್ರಗತಿಪರರ ನಡುವೆ ವಿಷಯ ಅಷ್ಟು ಸರಳವಾಗಿಲ್ಲ.

ಸೈದ್ಧಾಂತಿಕ ಕಾರಣಕ್ಕೆ ಅವರು ತಮ್ಮ ತಮ್ಮೊಳಗೆ ಕಚ್ಚಾಡುತ್ತಾ ಆ ಮೂಲಕ ಬಲಪಂಥೀಯರ ಹಾದಿಯನ್ನು ಸುಗಮಗೊಳಿಸುವುದನ್ನೂ ನಾವು ಕಂಡಿದ್ದೇವೆ. ಇಂತಹ ಸಂದರ್ಭಗಳಲ್ಲಿ ಗೌರಿ ಜಗಳಾಡುವ ಬಣಗಳನ್ನು ಹತ್ತಿರ ಕರೆದು ವಾಸ್ತವವನ್ನು ಮನವರಿಕೆ ಮಾಡಿಕೊಟ್ಟು ಅವರು ಒಂದಾಗಿ ಸಾಗುವಂತೆ ಮಾಡುತ್ತಿದ್ದರು. ಅವರ ಪ್ರೀತಿಪೂರ್ವಕ ಒತ್ತಾಯದ ಮಾತುಗಳನ್ನು ಕಾರ್ಯಕರ್ತರು ವಿನಮ್ರರಾಗಿ ಕೇಳುತ್ತಿದ್ದರು ಕೂಡಾ.
Loading...

ಶ್ರೀರಾಮ ರೆಡ್ಡಿಯವರ ಹೇಳಿಕೆಯೊಂದರ ಹಿನ್ನೆಲೆಯಲ್ಲಿ ದಲಿತ ಸಂಘಟನೆಗಳು ಮತ್ತು ಎಡಪಂಥೀಯ ಸಂಘಟನೆಗಳ ನಡುವೆ ವೈಮನಸ್ಸು ಉಂಟಾಗಿ ಆರೋಪ ಪ್ರತ್ಯಾರೋಪಗಳು ತಾರಕಕ್ಕೇರಿದಾಗ ತಾಯಿ ಮನಸಿನ ಇನ್ನೋರ್ವ ಹೋರಾಟಗಾರ್ತಿ ಕೆ.ನೀಲಾ ಅವರು ಅತ್ಯಂತ ವೇದನೆಯಿಂದ ಫೇಸ್ಬುಕ್ನಲ್ಲಿ ಕೆಲ ಅಭಿಪ್ರಾಯಗಳನ್ನು ಹಂಚಿಕೊಂಡರು. ಎಂಥ ಕಲ್ಲು ಹೃದಯವನ್ನೂ ಕರಗಿಸುವಂತಿದ್ದವು ಆ ಮಾತುಗಳು.

ಇದರ ಪರಿಣಾಮವಾಗಿ ಕಲಹ ನಿರತರೆಲ್ಲ ತಮ್ಮ ಭಿನ್ನಾಭಿಪ್ರಾಯ ಬದಿಗೊತ್ತಿ `ನಾವೆಲ್ಲ ಒಂದಾಗಿ ಹೋಗುತ್ತೇವೆ’ ಎಂದು ಹೇಳಿದ್ದು, ನೀಲಾ ಅವರ ಮಾತಿಗೆ ಗೌರಿಯವರೂ ದನಿಗೂಡಿಸಿದ್ದನ್ನು ಮರೆಯುವುದಾದರೂ ಹೇಗೆ? ಗೌರಿಯವರ ಹತ್ಯೆಯಾದಾಗ ಆಕೆಯ ಕೊನೆಯ ಟ್ವೀಟನ್ನು ಹಿಡಿದುಕೊಂಡು ಬಲಪಂಥೀಯ ಒಲವಿನ ಮಾಧ್ಯಮಗಳು ಗೌರಿಯ ಹೇಳಿಕೆಗೆ ತಪ್ಪು ವ್ಯಾಖ್ಯಾನ ಮಾಡಿಕೊಂಡು ನಕ್ಸಲ್ ವಿಚಾರಗಳನ್ನು ಎಳೆದು ತಂದಿದ್ದರು. ಆದರೆ ವಾಸ್ತವದಲ್ಲಿ ಆ ಕೊನೆಯ ಹೇಳಿಕೆಯಲ್ಲೂ ಆಕೆ ಹೇಳಿದ್ದು ನಾವು ನಮ್ಮೊಳಗೆ ಕಚ್ಚಾಡದೆ ಫ್ಯಾಸಿಸ್ಟ್ ಶಕ್ತಿಗಳನ್ನು ಮಟ್ಟಹಾಕುವ ಮಹತ್ತರ ಗುರಿಯತ್ತ ಒಂದಾಗಿ ಹೋಗಬೇಕು ಎಂದೇ.

ಗೌರಿ ಜೀವಪರ ವಿಚಾರಧಾರೆಗಳಿಗೆ, ಹೋರಾಟದ ಕಾರ್ಯಕ್ರಮಗಳಿಗೆ ಎಷ್ಟು ಆದ್ಯತೆ ನೀಡುತ್ತಿದ್ದರೋ ಆ ಹೋರಾಟದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡವರ ವೈಯಕ್ತಿಕ ಸುಖ ಕಷ್ಟಗಳಿಗೂ ಅಷ್ಟೇ ಆದ್ಯತೆ ನೀಡುತ್ತಿದ್ದರು. ಬರೇ ಸಿದ್ಧಾಂತ, ಸಿದ್ಧಾಂತ.. ಅಲ್ಲ. ಅಲ್ಲೊಂದು ಜೀವಪರ ತುಡಿತವಿರುತ್ತಿತ್ತು. ಆರೋಗ್ಯದ ತೊಂದರೆಗೀಡಾದವರಿಗೆ ಆರ್ಥಿಕ ಸಹಾಯ ಮಾಡುತ್ತಿದ್ದರು. ಬೇರೆಯವರನ್ನೂ ಸಹಾಯ ಮಾಡುವಂತೆ ಕೋರುತ್ತಿದ್ದರು.

ವೀರ ಸಂಗಯ್ಯ ಎಂಬವರು ಪೊಲೀಸರ ಲಾಠಿ ಚಾರ್ಜ್ನಿಂದ ಕಿಡ್ನಿ ಸಮಸ್ಯೆಗೀಡಾದಾಗ ಪತ್ರಿಕೆಯಲ್ಲಿ ಈ ಬಗ್ಗೆ ಬರೆದು ಅವರಿಗೆ ಸಹಾಯ ಸಿಗುವಂತೆ ಮಾಡಿದ್ದು ನನಗಿನ್ನೂ ನೆನಪಿದೆ. ಬರೆಹಕ್ಕೆ ಸಂಬಂಧಿಸಿದ ಅನೇಕ ವಿಚಾರಗಳ ಬಗ್ಗೆ ನನಗೆ ಫೋನ್ ಮಾಡಿದಾಗಲೂ “ನಿಮ್ಮ ಆರೋಗ್ಯ ಹೇಗಿದೆ? ಈಗ ಥೆರಪಿ ಏನಾದರೂ ತೆಗೆದುಕೊಳ್ಳುತ್ತಿಲ್ಲವಾ?” ಎಂದು ತಪ್ಪದೆ ಕೇಳುತ್ತಿದ್ದರು. ಆಮೇಲೆಯೇ ಉಳಿದ ವಿಚಾರ.

ಗೌರಿಯ ಬದುಕೇ ಒಂದು ರೋಚಕ ಅಧ್ಯಾಯ. ಎಲ್ಲರಿಗೂ ಗೊತ್ತಿರುವ ಹಾಗೆ, ಆಕೆ ಚಿದಾನಂದ ರಾಜಘಟ್ಟ ಅವರನ್ನು ಪ್ರೀತಿಸಿ ಮದುವೆಯಾದರೂ ಕೊನೆಗೆ ಘನತೆಪೂರ್ವಕವಾಗಿಯೇ ಅವರಿಂದ ವಿಚ್ಛೇದನ ಪಡೆದವರು. ಹೀಗೆ ವಿಚ್ಛೇದನ ಪಡೆದ ಬಳಿಕವೂ ತನ್ನ ಮಾಜಿ ಗಂಡನೊಂದಿಗೆ ಮಾತ್ರವಲ್ಲ, ಆತನ ಎರಡನೆ ಹೆಂಡತಿ ಮತ್ತು ಮೂರನೆ ಹೆಂಡತಿ ಹಾಗೆಯೇ ಆತನ ಮಕ್ಕಳೊಂದಿಗೂ ನಿಕಟ ಸ್ನೇಹ ಸಂಬಂಧವನ್ನು ಇರಿಸಿಕೊಂಡವಳು.

ವಿಚ್ಛೇದಿತ ಕುಟುಂಬಗಳಲ್ಲಿ ಸರ್ವೇಸಾಮಾನ್ಯವಾಗಿ ಕಾಣುವ ವೈಮನಸ್ಸುಗಳು ಕಾದಾಟಗಳ ಹಿನ್ನೆಲೆಯಲ್ಲಿ ನೋಡುವಾಗ ಇದು ತುಂಬಾ ವಿಚಿತ್ರಆದರೂ ಸತ್ಯ. ಇಂತಹ ಸಂಬಂಧಗಳ ವಿಷಯ ಬಂದಾಗ ಗೌರಿ ಒಬ್ಬ ಪತ್ರಕರ್ತೆ, ವಿಚಾರವಾದಿ, ಎಂಬುದೆಲ್ಲವನ್ನೂ ಮೀರಿದ ಓರ್ವ ಅಪ್ಪಟ ಹೆಣ್ಣು; ಒಬ್ಬ ತಾಯಿ.

ಅಪ್ಪಟ ಪ್ರೀತಿ: ಆಕೆಯ ಪ್ರೀತಿ ಎಂದೂ ತೋರಿಕೆಯದಾಗಿರಲಿಲ್ಲ. ಅಥವಾ ಪ್ರೀತಿಯನ್ನು ತೋರಿಸುವಾಗ ಆಕೆಯನ್ನು ಯಾವ ಅಳುಕೂ ಕಾಡುತ್ತಿರಲಿಲ್ಲ. ಆತ್ಮೀಯರು ಕಿರಿಯರೇ ಇರಲೀ ಹಿರಿಯರೇ ಇರಲೀ ಆಕೆ ಅವರನ್ನು ಬಿಗಿದಪ್ಪಿ ಅವರನ್ನು ಅಭಿವಾದಿಸುತ್ತಿದ್ದರು. ಫೇಸ್ಬುಕ್ನಂತಹ ಸಾರ್ವಜನಿಕ ವೇದಿಕೆಯಲ್ಲಿಯೂ `ಲವ್ ಯೂ, ಹಗ್ ಯು’ ಎಂದು ಯಾವ ಅಳುಕೂ ಇಲ್ಲದೆ ಬರೆಯುತ್ತಿದ್ದರು. ಯಾವ ಅಳುಕೂ ಇರುತ್ತಿರಲಿಲ್ಲ ಯಾಕೆಂದರೆ ಆಕೆಯ ತಾಯಿಯಂತಹ ಹೃದಯ ನಿರ್ಮಲವಾಗಿತ್ತು.

ಜೆಎನ್ಯು ಪ್ರಕರಣದ ಹೀರೋ ಕನ್ಹಯ್ಯ ಕುಮಾರ್, ಖಾಲಿದ್ ಉಮರ್, ಶೆಹ್ಲಾ ರಶೀದ್ ಇರಬಹುದು, ಗುಜರಾತ್ನ ದಲಿತ ಹೋರಾಟದ ಹೀರೋ ಜಿಗ್ನೇಶ್ ಮೆವಾನಿ ಇರಬಹುದು, ಉತ್ತರಪ್ರದೇಶದ ದಲಿತ ನಾಯಕ ಅಝಾದ್ ಚಂದ್ರಶೇಖರ್ ಇರಬಹುದು ಅವರೆಲ್ಲರ ಬಗ್ಗೆ ಆಕೆಯಲ್ಲಿ ಎಷ್ಟೊಂದು ಪ್ರೀತಿ ಅಕ್ಕರೆ ಇತ್ತೆಂದರೆ ಅವರನ್ನು ತನ್ನ ಮಕ್ಕಳು ಎಂದೇ ಆಕೆ ಸಂಬೋಧಿಸುತ್ತಿದ್ದರು.

“ಓಹೋ ಆ ದೇಶದ್ರೋಹಿಗಳು ನಿನ್ನ ಮಕ್ಕಳೋ? ಹಾಗಾದರೆ ನೀನು ಎಷ್ಟೊಂದು ಮಂದಿಯೊಂದಿಗೆ ಮಲಗಿದ್ದಿ?” ಎಂದು ಎಂದಿನಂತೆ ಸಂಸ್ಕಾರಹೀನ ಕಿಡಿಗೇಡಿಗಳು ಪ್ರಶ್ನಿಸಿದಾಗಲೂ ಆಕೆ ವಿಚಲಿತಳಾಗದೆ, “ನೀನು ನನ್ನ ಮಗ ಇದ್ದ ಹಾಗೆ” ಎಂದು ಹೇಳಿದರೆ ಅದರ ನಿಜ ಅರ್ಥವೇನು, ಅದರ ಹಿಂದೆ ಇರುವ ಭಾವನೆಯೇನು ಎಂಬುದನ್ನು ಓರ್ವ ಅಪ್ಪಟ ತಾಯಿಯಂತೆಯೇ ವಿವರಿಸಿ ಹೇಳುತ್ತಿದ್ದರು.

ಈಕೆ ಯಾಕೆ ಹೀಗೆ ಅನಗತ್ಯವಾಗಿ ಗೋರ್ಕಲ್ಲ ಮೇಲೆ ನೀರೆರೆಯುವ ಕೆಲಸ ಮಾಡುತ್ತಿದ್ದಾಳೆ ಎಂದು ನಮಗೆ ಎಷ್ಟೋ ಬಾರಿ ಅನಿಸಿದ್ದಿದೆ. ಆದರೆ ಗೌರಿಗೆ ಯಾವತ್ತೂ ಹಾಗೆ ಅನಿಸಿದ್ದಿಲ್ಲ. ಆಕೆಗೆ ಎದುರಾಳಿ ಎಂಥ ದುಷ್ಟರೇ ಇರಲಿ ಅವರನ್ನು ಸಾತ್ವಿಕ ಮಾರ್ಗದಲ್ಲಿಯೇ ಬದಲಾಯಿಸಬಹುದು ಎಂಬ ಅಚಲ ನಂಬಿಕೆಯಿತ್ತು.

ಗೌರಿಗೆ ಮಕ್ಕಳಿರಲಿಲ್ಲ. ಆದರೆ ಆಕೆಯ ತಾಯ್ತನಕ್ಕೆ ತೊಂದರೆಯಿರಲಿಲ್ಲ. ತನ್ನ ತಂಗಿ ಕವಿತಾಳ ಮಗಳನ್ನು ಆಕೆ ತುಂಬ ಪ್ರೀತಿಸುತ್ತಿದ್ದಳು. ತನ್ನನ್ನು `ಅವ್ವ’ ಎಂದು ಕರೆಯಬೇಕು ಎಂದು ಗೌರಿ ಆಕೆಗೆ ತಾಕೀತು ಕೂಡ ಮಾಡಿದ್ದರಂತೆ. ಪತ್ರಿಕೆ, ಹೋರಾಟ ಅದು ಇದು ಎಂದು ಗೌರಿಗೆ ಅಷ್ಟೊಂದು ಸಮಯವಿರುತ್ತಿರಲಿಲ್ಲ.

ಆದರೂ ತನ್ನ ಕುಟುಂಬದೊಂದಿಗೆ ಆಕೆ ಆತ್ಮೀಯ ಸಂಬಂಧ ಹೊಂದಿದ್ದರು. ತಮ್ಮನೊಂದಿಗೆ ಮನಸ್ತಾಪ ಇದ್ದರೂ ಆತನ ಮಕ್ಕಳೊಂದಿಗೆ ಆಕೆ ತಾಯಿಯಂತೆಯೇ ನಡೆದುಕೊಂಡಿದ್ದರು. ಆ ಮಕ್ಕಳ ಆಟ ಪಾಠಗಳಿಗೆ ಸಾಹಿತ್ಯ ಚಟುವಟಿಕೆಗಳಿಗೆ ಅಮ್ಮನ ನೆಲೆಯಲ್ಲಿ ನಿಂತು ಪ್ರೋತ್ಸಾಹ ನೀಡುತ್ತಿದ್ದರು, ಆ ಬಗ್ಗೆ ತನ್ನ ಪತ್ರಿಕೆಯಲ್ಲಿ ಬರೆಯುತ್ತಿದ್ದರು ಕೂಡಾ.

ಒಂದು ದಿನ ಆಕೆ ತಾನು ಮರಾಠಿಯ ಸೈರಾಟ್ ಸಿನಿಮಾ ನೋಡಿದೆ ತುಂಬ ಚೆನ್ನಾಗಿದೆ ಎಂದು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದರು. ಅದನ್ನು ಓದಿದ ನಾನು “ಗೌರಿ ನೀವೇನೋ ಸಿನಿಮಾ ನೋಡಿದಿರಿ, ಆದರೆ ನಾನು ಹೇಗೆ ನೋಡಲಿ? (ಗಾಲಿ ಕುರ್ಚಿ ಅವಲಂಬಿಸಿರುವವನಾದ ಕಾರಣ ಟಾಕೀಸಿಗೆ ಹೋಗಲಾರೆ)” ಎಂದು ಪ್ರಶ್ನಿಸಿದೆ.

ಆಕೆಯ ತಾಯಿ ಮನಸು ಹೇಗೆ ಸ್ಪಂದಿಸಿತು ಎಂದರೆ ತಕ್ಷಣ “ಡೋಂಟ್ ವರಿ.. ನಿನಗೆ ಅದರ ಸಿಡಿ ತಲಪಿಸುತ್ತೇನೆ” ಎಂದರು. ಕೊಟ್ಟ ಮಾತಿಗೆ ಅವರು ತಪ್ಪಲಿಲ್ಲ. ಮುಂದಿನ ಬಾರಿ ಮಂಗಳೂರಿನ ನನ್ನ ಮನೆಗೆ ಬಂದಾಗ ಅವರು ಮೊದಲು ಮಾಡಿದ ಕೆಲಸ ಸಿಡಿ ಕೈಗೆ ಕೊಟ್ಟದ್ದು. `ಸೈರಾಟ್’ ಸಿಗಲಿಲ್ಲ, ಸೈರಾಟ್ ನಿರ್ದೇಶಕನದೇ (ನಾಗರಾಜ ಮಂಜುಳೆ) ನಿರ್ದೇಶನದ `ಫಂಡ್ರಿ’ ತಂದಿದ್ದೇನೆ.

ಮುಂದಿನ ಬಾರಿ ಸೈರಾಟ್ ಖಂಡಿತ ತಂದುಕೊಡುತ್ತೇನೆ ಎಂದರು. ಮಾತು ತಪ್ಪಲಿಲ್ಲ. ಮೂರು ತಿಂಗಳ ನಂತರ ಬಂದವರು ಮೊದಲು ಮಾಡಿದ ಕೆಲಸ ಸೈರಾಟ್ ಸಿನಿಮಾದ ಸಿಡಿಯನ್ನು ನನ್ನ ಕೈಯಲ್ಲಿರಿಸಿದ್ದು. ಒಂದಿಷ್ಟೂ ಬಿಡುವಿರದ ಕೆಲಸಗಳ ನಡುವೆಯೂ ಅತ್ಮೀಯರ ಬಗೆಗೆ ಎಂತಹ ಪ್ರೀತಿ, ಎಂತಹ ಕಾಳಜಿ! ಆತ್ಮೀಯರ ಮನೆಗೆ ಹೋದಾಗಲೂ ಆಕೆ ಸುಮ್ಮನೆ ಅತಿಥಿಯಂತೆ ವರ್ತಿಸುತ್ತಿರಲಿಲ್ಲ. ಅಡುಗೆ ಮನೆಗೆ ಹೋಗಿ ಪಾತ್ರೆಗಳನ್ನು ತಂದು ಡೈನಿಂಗ್ ಟೇಬಲ್ ಮೇಲಿರಿಸಿ ಸ್ವತಃ ಬಡಿಸುತ್ತಿದ್ದರು. ಮಕ್ಕಳು ಮರಿ ಇರುವ ತಾಯಂದಿರಿಗಿಂತಲೂ ದುಪ್ಪಟ್ಟು ತಾಯ್ತನ ಅವರದ್ದು.

ದ್ವೇಷಿಸಿದವರನ್ನೂ ಪ್ರೀತಿಸಿದರು: ಒಮ್ಮೆ ಹೀಗಾಯಿತು - ಫೇಸ್ಬುಕ್ನಲ್ಲಿ ಸಂದೀಪ್ ರಾಜ್ ಎಂಬಾತ (ಇದೊಂದು ಫೇಕ್ ಐಡಿ) `ಈ ಲಂಕಿಣಿ ಸತ್ತರೆ ಸಿಹಿ ಹಂಚುತ್ತೇನೆ’ ಎಂದು ಬರೆದ. ತಕ್ಷಣ ನಾನು ಗೌರಿಗೆ ವಿಷಯ ತಲಪಿಸಿದೆ. ಅದನ್ನು ನೋಡಿದ ಆಕೆ ಫೇಸ್ಬುಕ್ನಲ್ಲಿ ಹೀಗೆ ಬರೆದರು ಸಂದೀಪ್ ರಾಜ್​ ಅನ್ನುವ ಯುವಕ ಫೇಸ್ಬುಕ್ಕಿನಲ್ಲಿ ನನ್ನ ಬಗ್ಗೆ ಹೀಗೆ ಬರೆದಿದ್ದಾನೆ: “ಈ ಮುದುಕಿ ಲಂಕಿನಿ ಸತ್ತಾಗ ನಾನು ಪಟಾಕಿ ಹೊಡೆದು ಸ್ವೀಟ್ ಹಂಚಿ ಸಂಭ್ರಮಿಸುತ್ತೇನೆ. ಆ ಕಾಲ ಬೇಗನೆ ಬರಲಿ ದೇವರೆ”.

ಅವನಿಗೆ ನನ್ನ ಉತ್ತರ ಹೀಗಿದೆ: “ಸಂದೀಪ್ ರಾಜ್, ದಯವಿಟ್ಟು ನಿನ್ನ ಅಡ್ರಸ್ ಕಳುಹಿಸು. ನಾನು ಸಾಯುವ ಮುನ್ನ ನಿನಗೆ ಪಟಾಕಿ ಮತ್ತು ಸ್ವೀಟ್ಸ್ ನಾನೇ ಕಳುಹಿಸುತ್ತೇನೆ. ಅದಕ್ಕೆಂದು ನೀನು ನಿನ್ನ ಹಣವನ್ನು ವೆಚ್ಚ ಮಾಡುವುದು ಬೇಡ. ಮಹಾತ್ಮ ಗಾಂಧಿಯನ್ನು ಕೊಂದ ನಂತರ ನಿನಗೆ ಆದರ್ಶವಾಗಿರುವ ಆರೆಸ್ಸೆಸ್ನವರು ಗಾಂಧಿಯ ಮರಣವನ್ನೂ ಪಟಾಕಿ ಹೊಡೆದು ಸಂಭ್ರಮಿಸಿದ್ದರು.

ನಾನೂ ನಿನ್ನಂಥವರ ಅಭಿಪ್ರಾಯದಲ್ಲಿ ಗಾಂಧಿ ಅವರ ಸಾಲಿಗೆ ಸೇರುತ್ತೇನೆಂದರೆ ಅದಕ್ಕಿಂತ ದೊಡ್ಡ ಭಾಗ್ಯ ನನಗೆ ಇನ್ನೊಂದಿರಲಿಕ್ಕಿಲ್ಲ. ನಿನಗೆ ಮತ್ತು ನಿನ್ನಂಥವರಿಗೆ ನನ್ನ ಧನ್ಯವಾದಗಳು. ತಪ್ಪದೆ ನನ್ನ ಮೆಸೆಜ್ ಬಾಕ್ಸಿಗೆ ನಿನ್ನ ಅಡ್ರೆಸ್ ಕಳುಹಿಸು. ಒಂದು ಗ್ಯಾರಂಟಿ ಕೊಡುವೆ: ನಿನಗೂ ಮುನ್ನ ನಿನ್ನಂಥವರು ನಿನಗಿಂತಲೂ ಹೆಚ್ಚು ಭೀಕರ ಮೆಸೆಜ್ಗಳನ್ನು ನನಗೆ ಕಳುಹಿಸಿದ್ದಾರೆ.

ಅವರ ವಿರುದ್ಧ ನಾನು ಯಾವುದೇ ಪೊಲೀಸ್ ದೂರು ನೀಡಿಲ್ಲ (ಒಬ್ಬನ ವಿರುದ್ಧ ಹೊರತಾಗಿ. ಆ ದೂರನ್ನು ಕೊಟ್ಟಿದ್ದು ಸೈದ್ಧಾಂತಿಕ ಭಿನ್ನಾಭಿಪ್ರಾಯದಿಂದಾಗಿ ಅಷ್ಟೇ). ನಿನ್ನ ವಿರುದ್ಧವೂ ನಾನು ಪೊಲೀಸರಿಗೆ ದೂರು ನೀಡುವುದಿಲ್ಲ. ಇದು ನನ್ನ ಪ್ರಾಮಿಸ್! ಪಟಾಕಿ ಮತ್ತು ಸಿಹಿ ಬೇಕು ಅಂದರೆ, ಅಷ್ಟೇ ಅಲ್ಲ, ನಿನಗೆ ನಿನ್ನ ಅಭಿಪ್ರಾಯದ ಬಗ್ಗೆ ಸ್ಪಷ್ಟತೆ ಇದ್ದರೆ ನೀನು ನಿನ್ನ ಅಡ್ರೆಸ್ ನನಗೆ ಕಳುಹಿಸುವೆ ಎಂದು ನಂಬಿದ್ದೇನೆ. ಇಲ್ಲವೆಂದರೆ ಈ ಎರಡು ಆಯ್ಕೆಗಳಲ್ಲಿ ನಾನು ಯಾವ ತೀರ್ಮಾನಕ್ಕೆ ಬರಬೇಕು ಎಂದು ನೀನೇ ಹೇಳು.

1. ಒಂದು ಚೆಡ್ಡಿಗಳ ಸಿದ್ಧಾಂತದಿಂದಾಗಿ ತಲೆಕೆಡಿಸಿಕೊಂಡಿರುವ ನೀನು ನನ್ನಂತಹ ಮುದುಕಿಯ ಸವಾಲನ್ನೂ ಸ್ವೀಕರಿಸಲಾಗದೆ ಸೈದ್ಧಾಂತಿಕವಾಗಿ ಖಾಲಿ ಬುರುಡೆ ಆಗಿದ್ದೀಯ.

2. ಅಥವಾ ನಿಜವಾಗಲೂ ನೀನು ಅಂಬೇಡ್ಕರ್ ಅವರ ಅಭಿಮಾನಿ ಆಗಿದ್ದೀಯ. ಆಯ್ಕೆ ನಿನ್ನದು. ರೋಹಿತ್​ ವೇಮುಲ, ಕನ್ಹಯ್ಯ ಕುಮಾರ್ ಮತ್ತು ಉಮರ್ ಖಾಲಿದ್ ತರಹ ನೀನೂ ನನ್ನ ಪುತ್ರರಲ್ಲಿ ಒಬ್ಬ - ನೀನು ದಾರಿ ತಪ್ಪಿರುವ ಮಗನಾಗಿದ್ದರೂ - ಎಂಬ ಆಶಯದದೊಂದಿಗೆ ನಿನಗೆ ನನ್ನ ಈ ಪೋಸ್ಟ್​”.

ಆಕೆಯೊಂದಿಗೆ ವಾದಕ್ಕಿಳಿದವರ ಮನ ನೋಯಿಸುವಂತಹ ಮಾತು ಆಡುತ್ತಿರಲಿಲ್ಲ ಗೌರಿ. ಬದಲಿಗೆ ಅವರಿಗೆ ಮನವರಿಕೆ ಮಾಡಿಕೊಡಲು ಯತ್ನಿಸುತ್ತಿದ್ದರು. ಒಮ್ಮೆ ಕಟ್ಟಾ ಬಲಪಂಥೀಯ ವಿಚಾರಧಾರೆಯ ಯುವತಿಯೊಬ್ಬಳೊಂದಿಗೆ ಗೌರಿ ರಾತ್ರಿಯಿಡೀ ವಾದ ನಡೆಸಿದರು.

ಅನುನಯಿಸುವ ರೂಪದ ಅವರ ವಾದದ ವೈಖರಿ ಹೇಗಿತ್ತೆಂದರೆ ಕೊನೆಗೆ ಆ ಯುವತಿ ಗೌರಿಯ ಅಭಿಪ್ರಾಯ ಮೆಚ್ಚಿಕೊಂಡುದು ಮಾತ್ರವಲ್ಲ, ಬೆಂಗಳೂರಿಗೆ ಬಂದಾಗ ಭೇಟಿಯಾಗುವುದಾಗಿಯೂ ಹೇಳಿಬಿಟ್ಟಳು. ಇದೊಂದೇ ಅಲ್ಲ ಇಂತಹ ಅನೇಕ ಯುವಮಂದಿಯನ್ನು ಅವರು ತಾಯಿ ಮನಸ್ಸಿನ ಮೂಲಕವೇ ಬದಲಾಯಿಸಿದ್ದರು.

ನಿಮ್ಮ ಬಗ್ಗೆ ಕೆಲ ಕಿಡಿಗೇಡಿಗಳು ಮಾನಹಾನಿಕರವಾಗಿ ಬರೆಯುತ್ತಿದ್ದಾರಲ್ಲ ಎಂದು ಹೇಳಿದರೆ ಗೌರಿಯ ಪ್ರತಿಕ್ರಿಯೆ ಹೀಗಿರುತ್ತಿತ್ತು- “ನನಗೆ ಆ ಬಗ್ಗೆ ಚಿಂತೆಯಿಲ್ಲ. ಅವರು ಹಾಗೆಯೇ ಇರಲಿ. ನಮ್ಮ ಪೋಸ್ಟ್​ಗಳನ್ನು ಓದಿದ ಮೇಲೆ ನಮ್ಮ ಅಲೋಚನೆಯೇನು, ನಮ್ಮ ಭಾವನೆಗಳೇನು ಎಂಬ ಬಗ್ಗೆ ಅವರಲ್ಲಿ ಅರಿವು ಮೂಡಲಿಕ್ಕೂ ಸಾಕು.

ನಾವು ಅವನ್ನು ಬ್ಲಾಕ್ ಮಾಡಿದರೆ ನಾವು ನಮ್ಮೊಳಗೇ ಚರ್ಚಿಸುತ್ತಾ ಇರುತ್ತೇವೆ. ಇದನ್ನು ನಮ್ಮ ಜೀವನದುದ್ದಕ್ಕೂ ಮಾಡುತ್ತಾ ಬಂದಿದ್ದೇವೆ. ಆತ ಬಿಜೆಪಿಯವನಾಗಿದ್ದರೂ ಅಂಬೇಡ್ಕರ ಅಭಿಮಾನಿಯಿರುವಂತೆ ಕಾಣಿಸುತ್ತದೆ. ಆತನನ್ನು ಬದಲಾಯಿಸಬಹುದು ಅನಿಸುತ್ತದೆ. ಆತನ ಪೋಸ್ಟ್​​ ಬಗ್ಗೆ ನನಗೆ ಯಾವ ಬೇಸರವೂ ಆಗಿಲ್ಲ.

ಅಸಲಿಗೆ ಆತ ತನ್ನ ವಿಳಾಸ ಕೊಟ್ಟರೆ ಆತನಿಗೆ ನಾನು ಸಿಹಿ ತಿಂಡಿಯನ್ನು ಕಳುಹಿಸಿಕೊಡುತ್ತೇನೆ. ಇದು ಒಂದು ಸ್ವೀಟ್ಸ್ ರೀವೆಂಜ್ ಅಲ್ವಾ? ಆರಾಮಾಗಿರು. ಅಂತಹ ಪೋಸ್ಟ್​ಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡ - ಅದು ನಿನ್ನ ಬಗ್ಗೆ ಇರಬಹುದು, ಅಥವಾ ನನ್ನ ಬಗ್ಗೆ ಇರಬಹುದು ಅಥವಾ ಸೆಕ್ಯುಲರ್ ಆದ ನಮ್ಮ ಯಾರ ಬಗ್ಗೆಯೇ ಇರಬಹುದು”.

ಜೀವಪರತೆಯೇ ಜೀವನಮೌಲ್ಯ: ಚಿಂತಕ ಶಿವಸುಂದರ್ ಅವರು ತಮ್ಮ ಕವಿತೆಯಲ್ಲಿ ಗೌರಿಯನ್ನು ಉದ್ದೇಶಿಸಿ, “ನೀನು ಪ್ರೀತಿಯನ್ನು ಪ್ರೀತಿಸಿದೆ, ಅದಕ್ಕೇ ದ್ವೇಷವನ್ನು ದ್ವೇಷಿಸಿದೆ” ಎನ್ನುತ್ತಾರೆ. ಇದು ಅಕ್ಷರಶಃ ನಿಜ. ಅಪ್ಪ ತೀರಿಕೊಂಡಾಗ ಲಂಕೇಶ್ ಪತ್ರಿಕೆಯ ಜವಾಬ್ದಾರಿಯನ್ನು ವಹಿಸಿಕೊಂಡಾಗ ಅವರ ಮುಂದಿದ್ದ ಸವಾಲು ಭಿನ್ನ ಬಗೆಯದು.

ಒಂದೆಡೆಯಲ್ಲಿ ಅಪ್ಪನಲ್ಲಿದ್ದ ಸಾಹಿತ್ಯ ಪ್ರತಿಭೆ, ಬರವಣಿಗೆಯ ಶಕ್ತಿ ಮತ್ತು ಪತ್ರಿಕೆಯನ್ನು ನಡೆಸುವ ಸಾಮರ್ಥ್ಯ ಇರಲಿಲ್ಲ. ಇನ್ನೊಂದೆಡೆಯಲ್ಲಿ ತಮ್ಮನೊಡನಿನ ವಿವಾದದ ಕಾರಣವಾಗಿ ತಾನೇ `ಗೌರಿ ಲಂಕೇಶ್’ ಎಂಬ ಹೊಸ ಪತ್ರಿಕೆ ಸ್ಥಾಪಿಸಬೇಕಾಯಿತು. ಇದೇ ಹೊತ್ತಿನಲ್ಲಿ ನಾಡಿನಲ್ಲಿ ಹಿಂದುತ್ವ ಕೋಮುವಾದ ಬಲಗೊಳ್ಳುತ್ತ ಸಾಗಿತ್ತು. ಇಂತಹ ಇಕ್ಕಟ್ಟು ಬಿಕ್ಕಟ್ಟು ನಾಡಿನ ಜನಚಳುವಳಿಗಳ ಮಟ್ಟಿಗೆ ಒಂದು ಚಾರಿತ್ರಿಕ ತಿರುವಿಗೆ ಕಾರಣವಾಯಿತು.

ಪತ್ರಕರ್ತೆ ಗೌರಿ ಹೋರಾಟಗಾರ್ತಿ ಗೌರಿಯಾಗಿ ಬದಲಾದರು. ಬಾಬಾ ಬುಡನ್ ಗಿರಿ ಹೋರಾಟದಂತಹ ಜನ ಚಳುವಳಿಗೆ ದುಮುಕಿದರು. ಕೋಮು ಸೌಹಾರ್ದ ವೇದಿಕೆಯನ್ನು ಸ್ಥಾಪಿಸಿ ಹಿಂದುತ್ವ ಕೋಮುವಾದಿಗಳನ್ನು ಎದುರಿಸಿದರು. ಹೀಗೆ ಮಾಡುವಾಗಲೆಲ್ಲ ಅವರಲ್ಲಿದ್ದುದು ಜೀವವಿರೋಧಿ ಸಿದ್ಧಾಂತವನ್ನು ವಿರೋಧಿಸಬೇಕು, ಆ ಮೂಲಕ ದೌರ್ಜನ್ಯಕ್ಕೆ ಈಡಾಗುತ್ತಿರುವವರ ಪರ ನಿಲ್ಲಬೇಕು ಎನ್ನುವ ಜೀವಪರ ತುಡಿತವಷ್ಟೇ.

ಅವರ ಜೀವಪರ ನಿಲುವಿಗೆ ಅತ್ಯುತ್ತಮ ಉದಾಹರಣೆ- ಅನೇಕ ಮಂದಿ ನಕ್ಸಲರ ಜೀವವನ್ನು ಉಳಿಸಿದ್ದು. ನಕ್ಸಲರ ಹೋರಾಟದ ಗುರಿಯನ್ನು ಉದ್ದೇಶವನ್ನು ಬಹುತೇಕ ಎಲ್ಲ ಪ್ರಗತಿಪರರೂ ಒಪ್ಪುತ್ತಾರೆ. ಆದರೆ ತಕರಾರು ಇರುವುದು ಅವರು ಆರಿಸಿಕೊಂಡಿರುವ ಮಾರ್ಗದ ಬಗ್ಗೆ ಮಾತ್ರ. ಹಿಂಸೆಯನ್ನು ಪ್ರಜ್ಞಾವಂತರು ಯಾರೂ ಒಪ್ಪಲಾಗದು. ಗೌರಿಯದ್ದೂ ಇದೇ ನಿಲುವು. ನಕ್ಸಲರಿಗೆ ಅವರ ಬೆಂಬಲವಿರಲಿಲ್ಲ. ಆದರೆ ನಕ್ಸಲರ ಬಗ್ಗೆ ಅವರಲ್ಲಿ ಅನುಕಂಪವಿತ್ತು.

ಪಶ್ಚಿಮ ಘಟ್ಟದಲ್ಲಿ ನಕ್ಸಲರನ್ನು ಪೊಲೀಸರು ಕೊಂದುಹಾಕಲಾರಂಭಿಸಿದಾಗ ಅದರಲ್ಲೂ ವಿಶೇಷವಾಗಿ ಸಾಕೇತ್ ರಾಜನ್ ಗುಂಡಿಗೆ ಬಲಿಯಾದಾಗ ಗೌರಿ ಮಮ್ಮಲ ಮರುಗಿದರು. ಸರಕಾರದೊಂದಿಗೆ ಮಾತನಾಡಿ ಉಳಿದ ನಕ್ಸಲರನ್ನು ಮುಖ್ಯವಾಹಿನಿಗೆ ತರಲು ಯತ್ನ ಶುರು ಮಾಡಿದರು. ಕೊನೆಗೂ ಗೌರಿಯ ಶ್ರಮ ಫಲ ಕೊಟ್ಟಿತು. ಇಂದು ಒಂಭತ್ತಕ್ಕೂ ಅಧಿಕ ಮಂದಿ ನಕ್ಸಲರು ಮುಖ್ಯವಾಹಿನಿಗೆ ಬಂದಿದ್ದಾರೆ. ಇದರಲ್ಲಿ ಗೌರಿಯ ಶ್ರಮ ದೊಡ್ಡದು ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಬೆಂಗಳೂರಿನ ಗಾರ್ಮೆಂಟ್ ನೌಕರರು ಕೇಂದ್ರದ ಭವಿಷ್ಯ ನಿಧಿಯ ಯೋಜನೆಯಲ್ಲಿ ತಂದ ಕಾರ್ಮಿಕವಿರೋಧಿ ಬದಲಾವಣೆಯನ್ನು ಖಂಡಿಸಿ ಬೀದಿಗಿಳಿದಾಗ ಕರ್ನಾಟಕದ ಪೊಲೀಸರು ಅವರ ಮೇಲೆ ಕ್ರೂರವಾಗಿ ಲಾಠಿ ಬೀಸಿದರು, ಅನೇಕರನ್ನು ಗಾಯಗೊಳಿಸಿದರು. ಇದನ್ನು ಕಂಡು ನೊಂದುಕೊಂಡ ಗೌರಿ ಆ ಮಹಿಳೆಯರ ಪರ ದಿಟ್ಟವಾಗಿ ನಿಂತರು. ಸರಕಾರವನ್ನೂ ಪ್ರಶ್ನಿಸಿದರು. ಮಾತ್ರವಲ್ಲ, ಗೃಹಮಂತ್ರಿಪರಮೇಶ್ವರ್ ಅವರ ಮನೆಗೇ ಹೋಗಿ ಆ ಮಹಿಳೆಯರ ಮೇಲಿನ ಕೇಸುಗಳನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿದರು ಮತ್ತು ತನ್ನ ಈ ಕೆಲಸದಲ್ಲಿ ಸಫಲರಾದರು ಕೂಡಾ.

ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು, ಮಹಿಳೆಯರು ಎಲ್ಲೇ ದೌರ್ಜನ್ಯಕ್ಕೀಡಾಗಲಿ ಅಲ್ಲಿ ಗೌರಿ ಕಾಣಿಸಿಕೊಳ್ಳುತ್ತಿದ್ದರು. ಉಡುಪಿ ಚಲೋ, ದಿಡ್ಡಳ್ಳಿ ಹೋರಾಟ ಯಾವುದೇ ಇರಲಿ ಅಲ್ಲಿ ಅವರು ಇರುತ್ತಿದ್ದರು. ತಮ್ಮದೇ ಆದ ರೀತಿಯಲ್ಲಿ ಮತ್ತು ತಮ್ಮದೇ ಆದ ಮಿತಿಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುತ್ತಿದ್ದರು.

ನಿಜವಾದ ಅರ್ಥದಲ್ಲಿ ಭರಿಸಲಾಗದನಷ್ಟ:

ಗೌರಿಯ ಅಗಲಿಕೆ ನಿಜವಾದ ಅರ್ಥದಲ್ಲಿ ಭರಿಸಲಾಗದ ನಷ್ಟ. ಯಾಕೆಂದರೆ ಗೌರಿಯ ಹತ್ಯೆಯಿಂದ ಓರ್ವ ಪತ್ರಕರ್ತೆ ಮತ್ತು ಹೋರಾಟಗಾರ್ತಿ ಮಾತ್ರ ನಷ್ಟವಾದುದಲ್ಲ. ಆಕೆಯ ಹಿಂದೆ ಒಂದು ಜನಪರ ಪತ್ರಿಕೆಯಿತ್ತು. ರಾಜ್ಯದ ಬಹುತೇಕ ಜನಪರ ಚಳುವಳಿಗಳಿಗೆ ಅದು ಬೆನ್ನೆಲುಬಾಗಿ ನಿಂತಿತ್ತು. ಅಲ್ಲದೆ ಗೌರಿಯಂತಹ ಓರ್ವ ಹೆಣ್ಣುಮಗಳು ಹೋರಾಟದ ಮುಂಚೂಣಿಯಲ್ಲಿದ್ದಾಗ ಅಲ್ಲಿನ ಅನುಕೂಲಗಳು ಭಿನ್ನ ಬಗೆಯವರು. ಅಂಥವರಿಂದ ಹೋರಾಟಗಳಿಗೆ ಹೊಸದೊಂದು ರೂಪ, ಕಸುವು ಒದಗುತ್ತದೆ. ಗೌರಿ ನಿರ್ಗಮಿಸಿದಾಗ ಆದ ನಷ್ಟ ಇದು.

ಅದೇನೆ ಇರಲಿ ಗೌರಿ ಇನ್ನಿಲ್ಲ ಎಂಬ ವಾಸ್ತವತೆಯನ್ನು ಅನಿವಾರ್ಯವಾಗಿಯಾದರೂ ನಾವು ಒಪ್ಪಿಕೊಂಡು ಮುಂದೆ ಸಾಗಬೇಕಾಗಿದೆ. ಲೇಖನವೊಂದರಲ್ಲಿ ಚಿಂತಕ ಜಿ ರಾಜಶೇಖರ್ ಹೇಳುವ ಹಾಗೆ “ನಾವು ಉಸಿರಾಡುವ ಗಾಳಿಯಲ್ಲೇ ಈ ದಮನ, ದ್ವೇಷ ಮತ್ತು ಹಿಂಸೆಯ ವಿಷ ಸೇರಿ ಹೋಗಿರುವುದು ಗೌರಿಗೆ ಗೊತ್ತಿತ್ತು. ಪತ್ರಿಕೆಯ ಪ್ರತಿವಾರದ ಸಂಚಿಕೆಯಲ್ಲೂ ಆಕೆ ಅದರ ವಿರುದ್ಧ ದನಿ ಎತ್ತಿದರು.

ಕೊನೆಗೆ ಆ ಹಿಂಸೆಗೆ ತಾನೇ ಬಲಿಯಾದರು. ಗೌರಿಯವರ ಈ ಜೀವಹತ್ಯೆಯ ಕುರಿತು ನಾಡಿನ ಎಲ್ಲೆಡೆ ನಡೆದ ಸಂತಾಪ ಸೂಚಕ ಸಭೆಗಳು ಪ್ರತಿಭಟನೆ ಆಗಿ ರೂಪಾಂತರಗೊಂಡದ್ದು ಆಕಸ್ಮಿಕವಲ್ಲ. ಆಗಿರುವುದು ಗೌರಿಯ ದೇಹಾಂತ್ಯ ಮಾತ್ರ. ಹಿಂಸೆ ಮತ್ತು ಶೋಷಣೆಗಳ ವಿರುದ್ಧದ ಅವರ ಅಭಿಯಾನವನ್ನು ಮುಂದುವರಿಸುವುದೇ ಅವರ ನೆನಪಿಗೆ ನಾವು ಸಲ್ಲಿಸಬಹುದಾದ ಗೌರವ”.
First published:September 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...