ಬೆಂಗಳೂರು(ಜ.28) ಹಿಂದೊಮ್ಮೆ ಉದ್ಯಾನಗಳ(Parks) ನಗರಿ, ಕೆರೆಗಳ ನಗರಿ ಎಂಬೆಲ್ಲ ಬಿರುದಾವಳಿಗಳನ್ನು ಹೊಂದಿದ್ದ ಬೆಂಗಳೂರು ಇಂದು ಆ ಹೆಸರನ್ನು ಕಾಪಾಡಿಕೊಳ್ಳಲು ಸಾಕಷ್ಟು ಪರದಾಡುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ನಗರೀಕರಣ ರಭಸದ ಪ್ರಗತಿಯೊಂದಿಗೆ ಬೆಂಗಳೂರಿನ ಹಲವು ಸ್ಥಳಗಳು ಕಸ(Garbage), ತ್ಯಾಜ್ಯಗಳ ಕೊಂಪೆಯಾಗುತ್ತಿದೆ. ಬೆಂಗಳೂರಿನ(Bengaluru) ಸೋಮಸುಂದರಪಾಳ್ಯದ ಕೆರೆಯ ಸ್ಥಿತಿಯೂ ದಯನಿಯವೇ ಆಗಿತ್ತು. ಕೆಲ ವರ್ಷಗಳ ಹಿಂದೆ ಕಸದ ದೊಡ್ಡ ಕೊಂಪೆಯಾಗಿತ್ತು ಈ ಪ್ರದೇಶ.
2014 ಮತ್ತು 2015 ರಲ್ಲಿ ಬೆಂಗಳೂರಿನ ಸೋಮಸುಂದರಪಾಳ್ಯ ಕೆರೆಯ ಬಳಿ ಕಸದಿಂದ ತುಂಬಿದ ದೊಡ್ಡ ಪ್ರದೇಶವಿತ್ತು. ಆ ಪ್ರದೇಶವನ್ನು ಈಗ ಸುಂದರವಾದ ನಗರ ಅರಣ್ಯವಾಗಿ ಪರಿವರ್ತಿಸಲಾಗಿದ್ದು, 14,000 ಮರಗಳನ್ನು ಸೊಮಸುಂದರಪಾಳ್ಯದ ನಿವಾಸಿಗಳು ನೆಟ್ಟಿದ್ದಾರೆ.
ಸುಂದರವನ ಎಂದು ಹೆಸರು
ಈ ಪ್ರದೇಶವನ್ನು 'ಸುಂದರವನ' ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಇಲ್ಲಿನ ನಿವಾಸಿಗಳು 2020 ರಲ್ಲಿ ಸಸಿಗಳನ್ನು ನೆಟ್ಟಿದ್ದು, ಆ ಸಸಿಗಳು ಈಗ 15 ಅಡಿಗಳವರೆಗೆ ಬೆಳೆದಿವೆ. ಕೆರೆಯ ಸಮೀಪದಲ್ಲಿರುವ ನಾಲ್ಕು ಎಕರೆ ಜಮೀನನ್ನು ಕರ್ನಾಟಕ ಕಾಂಪೋಸ್ಟ್ ಡೆವಲಪ್‌ಮೆಂಟ್ ಕಾರ್ಪೊರೇಷನ್ (ಕೆಸಿಡಿಸಿ) ಮೂಲಕ ಕಸ ಹಾಕಲು ಹಲವು ವರ್ಷಗಳಿಂದ ಬಳಸಲಾಗುತ್ತಿತ್ತು. ಕಸದ ರಾಶಿಗಳಿಂದ ದುರ್ವಾಸನೆ ಕೂಡ ಬರುತ್ತಿತ್ತು. ಬೇಸಿಗೆಯಲ್ಲಿ, ಈ ಕಸದ ರಾಶಿಯನ್ನ ಬೆಂಕಿ ಹಚ್ಚಿ ಸುಡಲಾಗುತ್ತಿತ್ತು. ಬೆಂಕಿಯ ಹೊಗೆ ಹತ್ತಿರದ ಮನೆಗಳಿಗೆ ಆವರಿಸುತ್ತಿತ್ತು.
ನೆಡುತೋಪು ಅಭಿಯಾನ
ಇದರಿಂದ ಬೇಸತ್ತ ನಿವಾಸಿಗಳು ಕ್ರಿಯಾ ಯೋಜನೆಯೊಂದಿಗೆ ಒಂದು ನಿರ್ಧಾರಕ್ಕೆ ಬಂದರು. ಸೋಮಸುಂದರಪಾಳ್ಯದ ನಿವಾಸಿಗಳು ಸಮುದಾಯ ಕಾರ್ಯಪಡೆ (ಸಿಟಿಎಫ್), ರೋಟರಿ ಬೆಂಗಳೂರು ಎಚ್‌ಎಸ್‌ಆರ್ ಮತ್ತು ಎಚ್‌ಎಸ್‌ಆರ್ ಲೇಔಟ್ ನಿವಾಸಿಗಳು ಒಗ್ಗೂಡಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬಳಿ ಬಂಜರು ಭೂಮಿಯನ್ನು ತೆರವುಗೊಳಿಸಿ, ನೆಡುತೋಪು ಅಭಿಯಾನ ನಡೆಸಲು ಅನುಮತಿ ನೀಡುವಂತೆ ಕೋರಿದರು. ಇಲಾಖೆಯು ಇದಕ್ಕೆ ಅನುಮತಿ ನೀಡಿತು. 2020ರಲ್ಲಿ ನಿವಾಸಿಗಳ ತಂಡವು ಎಲ್ಲಾ ಕಸವನ್ನು ತೆಗೆದುಹಾಕಲು ಪ್ರಾರಂಭಿಸಿತು.
ಇದನ್ನೂ ಓದಿ: Aero India 2023: ಏಷ್ಯಾದ ಅತಿದೊಡ್ಡ ಏರ್ ಶೋ 'ಏರೋ ಇಂಡಿಯಾ'ಗೆ 1.40 ಕೋಟಿ ರೂಪಾಯಿ ವೆಚ್ಚದಲ್ಲಿ ಬಿಬಿಎಂಪಿ ಸಿದ್ಧತೆ
ಮರ ನೆಡುವ ಕಾರ್ಯ
ಹೀಗಾಗಿ, ಲಾಕ್‌ಡೌನ್ ಸಮಯದಲ್ಲಿ, ಬೆಳಿಗ್ಗೆ 7 ರಿಂದ 9.30 ರವರೆಗೆ, ಗುಂಪು ಪೌರಕಾರ್ಮಿಕರ ಸಹಾಯದಿಂದ ನಿವಾಸಿಗಳು ಕಸವನ್ನು ತೆರವುಗೊಳಿಸಲು ಪ್ರಾರಂಭಿಸಿದರು. ಎಲ್ಲಾ ಕಸವನ್ನು ತೆರವುಗೊಳಿಸಿದ ನಂತರ, ಮರ ನೆಡುವ ಕಾರ್ಯವನ್ನು ಕೈಗೊಳ್ಳಲಾಯಿತು. ಪ್ರತಿ ಭಾನುವಾರ ಜನರು ಇಲ್ಲಿ ಬಂದು ಸಸಿಗಳನ್ನು ನೆಡುತ್ತಿದ್ದರು.
ಸಿಟಿಎಫ್‌ನ ಸಹ ಸಂಸ್ಥಾಪಕ ಕಾಮೇಶ್ ರಸ್ತೋಗಿ ಮಾತನಾಡಿ, "ಬೃಹತ್ ಕಸದ ರಾಶಿಯನ್ನು ತೆರವುಗೊಳಿಸುವುದು ಸವಾಲಿನ ಕೆಲಸವಾಗಿತ್ತು. ನಾವು ಪ್ರತಿದಿನ ತ್ಯಾಜ್ಯವನ್ನು ತೆರವುಗೊಳಿಸುವುದು ಬೇಸರದ ಕೆಲಸವಾಗಿತ್ತು. ನಾವು ಏಳು ಅಡಿ ಆಳವನ್ನು ಅಗೆಯಬೇಕಾಗಿತ್ತು.
ಕೆಳಭಾಗದ ಭೂಮಿಯನ್ನು ಸರಿಯಾಗಿ ನೋಡಿದ ನಾವು ಮರಳು, ಕೆಂಪು ಮಣ್ಣು ಮತ್ತು ಗೊಬ್ಬರವನ್ನು ಬಳಸಲು ನಿರ್ಧರಿಸಿದೆವು, ಭೂಮಿಯನ್ನು ಸ್ವಚ್ಛಗೊಳಿಸಿದ ನಂತರ, ನಾವು ವಿವಿಧ ನರ್ಸರಿಗಳಿಗೆ ಹೋಗಿ ಅನೇಕ ಹೂವು ಮತ್ತು ಹಣ್ಣುಗಳನ್ನು ಹೊಂದಿರುವ ಸಸ್ಯಗಳನ್ನು ಖರೀದಿ ಮಾಡಿದ್ದೇವೆ.
ನಾಲ್ಕು ಎಕರೆಯಲ್ಲಿ ಎರಡು ಎಕರೆಯನ್ನು ಸಸಿ ನೆಡಲು ಬಳಸಿದರೆ, ಉಳಿದ ಜಾಗವನ್ನು ಬಿಬಿಎಂಪಿ ಇತರೆ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಂಡಿದೆ ಎಂದು ಹೇಳುತ್ತಾರೆ
"ಸುಂದರವನ ನಿರ್ಮಾಣಕ್ಕೆ ಸ್ಥಳೀಯ ನಾಯಕರು ಯಾವುದೇ ಹಣವನ್ನು ನೀಡಲಿಲ್ಲ. ಈ ಯೋಜನೆಯನ್ನು ನಾಗರಿಕರ ಸಹಾಯದೊಂದಿಗೆ ಸಂಪೂರ್ಣವಾಗಿ ನಡೆಸಲಾಯಿತು.
ನಾವುಆಮ್ಲಜನಕ ಉದ್ಯಾನವನವನ್ನು ಸಹ ನಿರ್ಮಾಣ ಮಾಡುತ್ತಿದ್ದು, ಅಲ್ಲಿ ನಾವು 200 ಕ್ಕೂ ಹೆಚ್ಚು ಬಿದಿರಿನ ಮರಗಳನ್ನು ನೆಟ್ಟಿದ್ದೇವೆ, ಅದು ಹೆಚ್ಚು ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ ಹಾಗೂ ಪರಿಸರಕ್ಕೆ ಪ್ರಯೋಜನಕಾರಿಯಾಗಿದೆ"ಎಂದು ಇನ್ನೊಬ್ಬ ಸದಸ್ಯೆ ಲಲಿತಾಂಬ ಬಿವಿ ಹೇಳುತ್ತಾರೆ.
ನಾಗರಿಕರ ಶ್ರಮವನ್ನು ಕಂಡ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಬೋರ್ ವೆಲ್ ಹಾಗೂ ಪ್ರವಾಸಿಗರಿಗೆ ಆಸನ ಕಲ್ಪಿಸುವ ಮೂಲಕ ನೀರು ನಿರ್ವಹಣೆಗೆ ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ