ಆನೇಕಲ್ (ಆಗಸ್ಟ್ 25): ಅವರು ಕಳೆದ ಮೂರು ದಿನಗಳಿಂದ ವಿಘ್ನ ನಿವಾರಕ ಗಣಪನ ಪ್ರತಿಷ್ಠಾಪಿಸಿ, ಪೂಜಿಸಿದ್ದರು. ಇಂದು ಕೆರೆಯೊಂದರಲ್ಲಿ ಗಣೇಶ ಮೂರ್ತಿ ವಿಸರ್ಜಿಸಲು ಸ್ನೇಹಿತರೊಂದಿಗೆ ತೆರಳಿದ್ದರು. ಆದರೆ, ಗಣೇಶ ವಿಸರ್ಜನೆ ವೇಳೆ ಮೂರ್ತಿ ಜೊತೆ ಇಬ್ಬರು ಬಾಲಕರು ಸಹ ನೀರು ಪಾಲಾಗಿದ್ದು, ಮೃತರ ಆಕ್ರಂದನ ಮುಗಿಲು ಮುಟ್ಟಿದೆ. ಮನೆಯಲ್ಲಿಯೇ ಪ್ರತಿಷ್ಠಾಪಿಸಿ ಕಳೆದ ಮೂರು ದಿನಗಳಿಂದ ಪೂಜಿಸಿದ್ದ ಗಣೇಶ ಮೂರ್ತಿಯನ್ನು ಇಲ್ಲಿನ ಅನಾಸಂದ್ರಂ ಕೆರೆಯಲ್ಲಿ ವಿಸರ್ಜಿಸಲು ಇಬ್ಬರು ಬಾಲಕರು ಸ್ನೇಹಿತರೊಂದಿಗೆ ತೆರಳಿದ್ದರು. ಈ ವೇಳೆ ದುರ್ಘಟನೆ ನಡೆದಿದೆ. ತಮಿಳುನಾಡಿನ ಸೂಳಗಿರಿ ನಿವಾಸಿಗಳಾದ ಭೂಪತಿ(12) ಮತ್ತು ಮುರಳಿ(12) ಹೆಸರಿನ ಇಬ್ಬರು ಬಾಲಕರು ಮೃತಪಟ್ಟವರು.
ಇತ್ತೀಚೆಗೆ ಭರ್ಜರಿ ಮಳೆ ಸಹ ಸುರಿದಿದ್ದರಿಂದ ಕೆರೆಗಳು ಸಹ ತುಂಬಿ ತುಳುಕುತ್ತಿತ್ತು. ಜೊತೆಗೆ ಬಾಲಕರು ಸಹ ಸ್ನೇಹಿತರೊಂದಿಗೆ ಪುಲ್ ಜೋಶ್ ಆಗಿ ಕುಣಿದು ಕುಪ್ಪಳಿಸುತ್ತಾ ಗಣೇಶ ಮೂರ್ತಿ ವಿಸರ್ಜನೆ ತೆರಳಿದ್ದಾರೆ. ಅದೇ ಜೋಶ್ನಲ್ಲಿ ಕೆರೆಯ ಆಳವನ್ನು ಗಮನಿಸದೇ ಗಣೇಶ ಮೂರ್ತಿ ವಿಸರ್ಜನೆಗೆ ಇಳಿದಿದ್ದಾರೆ. ನೋಡ ನೋಡುತ್ತಿದ್ದಂತೆ ಗಣೇಶ ಮೂರ್ತಿ ಜೊತೆ ಇಬ್ಬರು ಬಾಲಕರು ಸಹ ಜಲ ಸಮಾಧಿಯಾಗಿದ್ದಾರೆ.
ಬಾಲಕರ ಜೊತೆಯಲ್ಲಿ ತೆರಳಿದ್ದ ಸ್ನೇಹಿತರು ಸಹ ನೀರಿನಲ್ಲಿ ಮುಳುಗುತ್ತಿರುವ ಬಾಲಕರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಕೊನೆಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಸೂಳಗಿರಿ ಪೊಲೀಸರು ಸ್ಥಳೀಯರ ನೆರವಿನಿಂದ ನೀರುಪಾಲಾಗಿದ್ದ ಇಬ್ಬರು ಬಾಲಕರ ಶವವನ್ನು ಹೊರತೆಗೆದು ಹತ್ತಿರದ ಸರ್ಕಾರಿ ಶವಾಗಾರಕ್ಕೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ