ಆನೇಕಲ್: ನಡು ರಸ್ತೆಯಲ್ಲಿ ಬೈಕ್ಗಳನ್ನು (Bike) ನಿಲ್ಲಿಸಿ ಹರಠೆ ಹೊಡೆಯುತ್ತಿದ್ದ ಗಾಂಜಾ ಗಿರಾಕಿಗಳು ಪೊಲೀಸ್ ಕಾನ್ಸ್ಟೇಬಲ್ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ಹೊರವಲಯದಲ್ಲಿ (Bengaluru Rural) ನಡೆದಿದೆ. ರಂಗನಾಥ್ ಹಲ್ಲೆಗೊಳಗಾದ ಪೊಲೀಸ್ ಕಾನ್ಸ್ಟೇಬಲ್. ಸಂಜೆ ಬೆಂಗಳೂರು ಹೊರವಲಯ ಆನೇಕಲ್ (Anekal) ಪಟ್ಟಣದ ದಿನ್ನೂರು ಬಳಿಯ ನೀಲಗಿರಿ ತೋಪಿನಲ್ಲಿ ಗಾಂಜಾ ಗ್ಯಾಂಗ್ನಿಂದ ರಂಗನಾಥ್ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದಾರೆ. ಪಟ್ಟಣದ ದೇವರಕೊಂಡಪ್ಪ ವೃತದಲ್ಲಿ ಗಾಂಜಾ ಮತ್ತಿನಲ್ಲಿ ನಡುರಸ್ತೆಗೆ ಬೈಕ್ ನಿಲ್ಲಿಸಿಕೊಂಡು ಓಡಾಡುವ ಜನರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಿದ್ದ ವರುಣ್ ಅಲಿಯಾಸ್ ಕೆಂಚ, ಕಿಶೋರ್ ಅಲಿಯಾಸ್ ಡ್ಯಾನಿ, ಚೇತನ್, ಸೋಮಶೇಖರ್ ಇವರುಗಳಿಗೆ ಆನೇಕಲ್ ಪೋಲೀಸ್ ಠಾಣೆಯ ಪೇದೆ ರಂಗನಾಥ್ ಬೈಕ್ ರಸ್ತೆ ಬದಿ ನಿಲ್ಲಿಸುವಂತೆ ಬುದ್ಧಿವಾದ ಹೇಳಿದ್ದಾರೆ.
ಈ ವೇಳೆ ಗಾಂಜಾ ಗುಂಗಿನಲ್ಲಿದ್ದ ಗುಂಪು ಕರ್ತವ್ಯ ನಿರತ ರಂಗನಾಥ್ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೈಕ್ಗಳನ್ನ ತೆಗೆದುಕೊಂಡು ಅತ್ತಿಬೆಲೆ ಮುಖ್ಯರಸ್ತೆಯ ದಿನ್ನೂರು ತೋಪಿನ ಕಡೆಗೆ ಹೋಗಿದ್ದಾರೆ. ಇವರನ್ನು ಬಿಟ್ಟರೆ ಯಾವುದಾದರೂ ಅಪರಾಧ ಕೃತ್ಯ ಎಸಗುತ್ತಾರೆಂದು ಹಿಂಬಾಲಿಸಿದ ರಂಗನಾಥ್ ತೋಪಿನ ಕಡೆ ಬರುತ್ತಿದ್ದಂತೆ ಸುತ್ತವರಿದ ಕಿರಾತಕರು ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ.
ಎಸ್ಕೇಪ್ ಆಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಖಾಕಿ ಸಮವಸ್ತ್ರದಲ್ಲಿರುವ ಪೊಲೀಸ್ ಎಂದು ತಿಳಿದಿದ್ದರೂ ಪುಂಡರು ರಂಗನಾಥ್ ಮರ್ಮಾಂಗ ಹಾಗೂ ದೇಹದ ಹಲವಾರು ಕಡೆ ಕಚ್ಚಿ ಗಾಯಗೊಳಿಸಿದ್ದಾರೆ. ನಂತರ ಅಲ್ಲಿಂದ ಎರಡು ದ್ವಿಚಕ್ರ ಬೈಕಿನಲ್ಲಿ ನಾಲ್ವರ ತಂಡ ಎಸ್ಕೇಪ್ ಆಗಿದೆ. ಎರಡು ಬೈಕ್ನಲ್ಲಿ ಎಸ್ಕೇಪ್ ಆಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇನ್ನೂ ಇತ್ತೀಚಿಗೆ ಆನೇಕಲ್ ಉಪ ವಿಭಾಗದ ವ್ಯಾಪ್ತಿಯಲ್ಲಿ ನಿರಂತರವಾಗಿ ಕಳ್ಳತನ ದರೋಡೆ ಸುಲಿಗೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ರಾಜಾರೋಷವಾಗಿ ಹಾಡಹಗಲಿನಲ್ಲಿ ದರೋಡೆ ಪ್ರಕರಣಗಳು ನಡೆಯುತ್ತಿವೆ.
ಪೊಲೀಸರ ರಕ್ಷಣೆ ಪ್ರಶ್ನೆ!
ಪೊಲೀಸರೆಂದರೆ ಭಯವೇ ಇಲ್ಲದಂತೆ ಕೆಲವು ಪುಡಿ ರೌಡಿಗಳು ವರ್ತನೆ ತೋರುತ್ತಿದ್ದು, ನಿನ್ನೆ ನಡೆದಿರುವ ಈ ಘಟನೆಯಿಂದಾಗಿ ಸ್ವತಃ ಪೊಲೀಸರ ಸುರಕ್ಷತೆಯ ವಿಚಾರದಲ್ಲಿ ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.
ವರುಣ್ ಅಲಿಯಾಸ್ ಕೆಂಚನ ವಿರುದ್ಧ ಈಗಾಗಲೇ ಹಲವು ಪೋಲೀಸ್ ಠಾಣೆಗಳಲ್ಲಿ ಹತ್ತಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಉಳಿದಂತವರ ಮೇಲೆಯೂ ಸಹ ಗಾಂಜಾ ಮಾರಾಟ, ದರೋಡೆ, ಕಳ್ಳತನ, ಕೊಲೆಯತ್ನ ಇಂತಹ ಕೇಸ್ಗಳು ದಾಖಲಾಗಿ ಜೈಲಿಗೆ ಹೋಗಿ ಬಂದಿದ್ದಾರೆ.
ಅಸಹಾಯಕರಾದ್ರಾ ಪೊಲೀಸರು?
ಇನ್ನೂ ಆನೇಕಲ್ ಠಾಣೆ ಕ್ರೈಂ ಪೊಲೀಸರು ಸರಹದ್ದಿನಲ್ಲಿ ಅಪರಾಧ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಡಲು ವಿಫಲವಾಗಿದ್ದಾರೆ. ಅಂತಹವರ ಜಾಗಕ್ಕೆ ದಕ್ಷ ಪೊಲೀಸ್ ಸಿಬ್ಬಂದಿಯನ್ನು ನೇಮಿಸಬೇಕು ಇಲ್ಲವಾದರೆ ಖಾಕಿ ತೊಟ್ಟ ಪೊಲೀಸರ ಮೇಲೆಯೇ ಈ ರೀತಿಯ ಹಲ್ಲೆ ಮಾಡುವ ಹಂತಕ್ಕೆ ಬಂದಿರುವ ಖದೀಮರು ಇನ್ನೂ ಜನಸಾಮಾನ್ಯರನ್ನು ಸುಮ್ಮನೆ ಬಿಡುತ್ತಾರಾ? ಇಂತಹ ಸಮಾಜ ಘಾತುಕರನ್ನು ಹೆಡೆಮುರಿ ಕಟ್ಟಲು ಹಿಂದೇಟು ಹಾಕುತ್ತಿರುವ ಪೊಲೀಸರ ಅಸಹಾಯಕತೆ ವಿರುದ್ಧ ಸಾರ್ವಜನಿಕರಾದ ಶಶಿ, ವಕೀಲರಾದ ಪುರುಷೋತ್ತಮ್ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಒಟ್ಟಿನಲ್ಲಿ ವರುಣ್ ಅಲಿಯಾಸ್ ಕೆಂಚ ಹಾಗೂ ತಂಡ ಗಾಂಜಾ ಮತ್ತಿನಲ್ಲಿ ಪೊಲೀಸ್ ಪೇದೆ ರಂಗನಾಥ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಪೊಲೀಸ್ ವ್ಯವಸ್ಥೆ ಬಗ್ಗೆ ಸಾರ್ವಜನಿಕರು ಅಪನಂಬಿಕೆಯಿಂದ ನೋಡುವಂತಾಗಿದೆ.
ಇದನ್ನೂ ಓದಿ: Crime News: ಅಪ್ರಾಪ್ತ ಮಗಳಿಗೆ ಬೇಕರಿ ಮಾಲೀಕನಿಂದ ಕಿರುಕುಳ; ಅಂಗಡಿಯನ್ನೇ ಸುಟ್ಟ ಅಪ್ಪ!
ಪುಂಡರ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹ
ಇಂತಹ ಪುಡಿ ರೌಡಿಗಳ ಅಟ್ಟಹಾಸವನ್ನು ಕಂಟ್ರೋಲ್ ಮಾಡಲು ಕಟ್ಟುನಿಟ್ಟಿನ ಕ್ರಮವನ್ನು ಹಿರಿಯ ಪೊಲೀಸ್ ಅಧಿಕಾರಿಗಳು ತೆಗೆದುಕೊಳ್ಳದೇ ಹೋದ್ರೆ ಮುಂದಿನ ದಿನಗಳಲ್ಲಿ ಇವರ ಆಟಾಟೋಪ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಇನ್ನಾದರೂ ಇಂತಹ ಕಿರಾತಕರ ವಿರುದ್ಧ ಪೊಲೀಸರು ಶಿಸ್ತು ಕ್ರಮ ಕೈಗೊಳ್ಳುತ್ತಾರಾ ಎಂಬುದನ್ನ ಕಾದು ನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ