Taxi Drivers: ಗಣೇಶೋತ್ಸವ ಮುಗಿದ್ರು ತೆಗೆದಿಲ್ಲ ಈದ್ಗಾ ಮೈದಾನದ ಬೀಗ! ಬೀದಿ ಪಾಲಾದ ಟ್ಯಾಕ್ಸಿ ಚಾಲಕರು

ಈದ್ಗಾದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಯಿಂದ ಹಿಂದೂಗಳು ಖುಷಿಪಟ್ಟರು. ಆದರೆ ಟ್ಯಾಕ್ಸಿ ಚಾಲಕರು ಮಾತ್ರ ಕಣ್ಣೀರು ಹಾಕುವಂತಾಗಿದೆ. ಅಧಿಕಾರಿಗಳು ಟ್ಯಾಕ್ಸಿ ನಿಲುಗಡೆಗೆ ಅವಕಾಶ ನೀಡದೇ ಇರೋದ್ರಿಂದ ತುತ್ತಿನ ಚೀಲಕ್ಕೆ ಕುತ್ತು ತಂದಂತಾಗಿದೆ.

ಈದ್ಗಾ ಮೈದಾನ

ಈದ್ಗಾ ಮೈದಾನ

  • Share this:
ಹುಬ್ಬಳ್ಳಿ (ಸೆ.14): ಹುಬ್ಬಳ್ಳಿಯ ಈದ್ಗಾ ಮೈದಾನದ (Idgah Maidan) ಒಂದಲ್ಲ ಒಂದು ಕಾರಣಕ್ಕೆ ಚರ್ಚೆಯಾಗುತ್ತಲೇ ಇರುತ್ತೆ. ಇತ್ತೀಚೆಗೆ ಗಣೇಶ ಪ್ರತಿಷ್ಠಾಪನೆಗೆ (Ganesha Pratishapana) ಸಂಬಂಧಿಸಿ ಜೋರಾದ ಚರ್ಚೆಗೆ ಕಾರಣವಾಗಿತ್ತು. ಕೊನೆಗೆ ಹೈಕೋರ್ಟ್ (High Court) ತೀರ್ಪಿನ ನಂತರ ಪಾಲಿಕೆ ಗಣೇಶೋತ್ಸವಕ್ಕೆ ಅವಕಾಶ ಕಲ್ಪಿಸಿ ಸುಖಾಂತ್ಯ ಹೇಳಿತ್ತು. ಗಣೇಶ ಪ್ರತಿಷ್ಠಾಪನೆಯಿಂದ ಹಿಂದೂ ಭಕ್ತರಲ್ಲಿ (Hindu Devotees) ಸಂತಸ ಮೂಡಿಸಿತ್ತು. ಆದ್ರೆ ಗಣೇಶ ಪ್ರತಿಷ್ಠಾಪನೆ ಬಡ ಟ್ಯಾಕ್ಸಿ ಚಾಲಕರಿಗೆ ಬರೆ ಎಳೆದಿದೆ. 

ಈದ್ಗಾ ಗಣೇಶ ಗದ್ದಲ ಟ್ಯಾಕ್ಸಿ ಚಾಲಕರು ಬಲಿಪಶು

ಹುಬ್ಬಳ್ಳಿಯ ಈದ್ಗಾ ಗಣೇಶ ಗದ್ದಲದಿಂದಾಗಿ ಟ್ಯಾಕ್ಸಿ ಚಾಲಕರು ಬಲಿಪಶುಗಳಾಗುವಂತಾಗಿದೆ. ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಹಾಕಿದ ಸ್ಥಿತಿ ನಿರ್ಮಾಣವಾಗಿದೆ. ಗಣೇಶೋತ್ಸವದಿಂದಾಗಿ ಟ್ಯಾಕ್ಸಿ ಚಾಲಕರು ಬೀದಿ ಪಾಲಾಗಿದ್ದಾರೆ. ಗಣೇಶೋತ್ಸವ ಆಚರಣೆ ಸಂದರ್ಭದಲ್ಲಿ ಈದ್ಗಾ ಮೈದಾನ ದೊಡ್ಡ ಪ್ರಮಾಣದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಇದೇ ಮೈದಾನ ಅವಲಂಬಿಸಿದ್ದ ಟ್ಯಾಕ್ಸಿ ಚಾಲಕರಿಗೆ ತೀವ್ರ ತೊಂದರೆಯಾಗಿದೆ. ಅಧಿಕಾರಿಗಳು ನೂರಾರು ಕುಟುಂಬಗಳ ಕಣ್ಣೀರಿಗೆ ಕಾರಣವಾಗಿದ್ದಾರೆ.

ಈದ್ಗಾ ಮೈದಾನ ಪ್ರವೇಶ ನಿರ್ಬಂಧ

ಪಾಲಿಕೆ ಆಸ್ತಿ ಆಗಿರೋ ಈದ್ಗಾ ಮೈದಾನದಲ್ಲಿ ಟ್ಯಾಕ್ಸಿ ಮತ್ತಿತರ ವಾಹಗಳ ನಿಲುಗಡೆಗೆ ಅವಕಾಶ ನೀಡಲಾಗಿತ್ತು. ಆದರೆ ಗಣೇಶ ವಿವಾದದ ಹಿನ್ನೆಲೆಯಲ್ಲಿ ಪಾಲಿಕೆ, ಪೊಲೀಸ್ ಇಲಾಖೆ ಟ್ಯಾಕ್ಸಿ ಚಾಲಕರನ್ನು ಹೊರ ಹಾಕಿತ್ತು. ಈದ್ಗಾ ಮೈದಾನ ಪ್ರವೇಶ ನಿರ್ಬಂಧಿಸಲಾಗಿತ್ತು. ಈದ್ಗಾ ಮೈದಾನದಲ್ಲಿ ಗಣೇಶನನ್ನು ಕೂಡಿಸಿದ್ದೂ ಆಯ್ತು, ವಿಸರ್ಜನೆಯೂ ಆಯ್ತು. ಗಣೇಶೋತ್ಸವ ಮುಗಿದು ಕೆಲ ದಿನಗಳೇ ಕಳೆದವು. ಆದ್ರೆ ಈದ್ಗಾ ಮೈದಾನಕ್ಕೆ ಹಾಕಿರೋ ಬೀಗವನ್ನು ಅಧಿಕಾರಿಗಳು ತೆಗೆದಿಲ್ಲ.ಟ್ಯಾಕ್ಸಿ ಚಾಲಕರು ಪರದಾಟ

ಇದರಿಂದಾಗಿ ಕಂಡ ಕಂಡಲ್ಲಿ ರಸ್ತೆ ಬದಿ ಕಾರು ನಿಲ್ಲಿಸೋ ಅನಿವಾರ್ಯತೆ ಎದುರಾಗಿದೆ. ಬೇರೆ ಬೇರೆ ಕಡೆ ಕಾರು ನಿಲ್ಲಿಸುತ್ತಿರೋದ್ರಿಂದ ಗ್ರಾಹಕರು ಸಿಗದೇ ಟ್ಯಾಕ್ಸಿ ಚಾಲಕರು ಪರದಾಡುತ್ತಿದ್ದಾರೆ. ಮುಸ್ಲಿಂಮರ ಸಾಮೂಹಿಕ ಪ್ರಾರ್ಥನೆ ಹಾಗೂ ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವದ ವೇಳೆ ಈದ್ಗಾ ಮೈದಾನ ಖಾಲಿ ಮಾಡಿಸಲಾಗ್ತಿತ್ತು. ನಂತರ ಯಥಾರೀತಿ ವಾಹನ ನಿಲುಗಡೆಗೆ, ಹಣ್ಣು ಮಾರಾಟಕ್ಕೆ ಅವಕಾಶ ನೀಡಲಾಗುತ್ತಿತ್ತು. ಆದ್ರೆ ಗಣೇಶ ಗದ್ದಲದ ಕಾರಣಕ್ಕೆ ಕಳೆದ 25 ದಿನಗಳಿಂದಲೂ ಈದ್ಗಾ ಮೈದಾನಕ್ಕೆ ಬೀಗ ಹಾಕಲಾಗಿದೆ.

ಇದನ್ನೂ ಓದಿ: Chikkamagaluru Rains: ಭಾರೀ ಮಳೆ, 391 ಕೋಟಿ ರೂ ನಷ್ಟ; ಜಿಲ್ಲಾಡಳಿತದಿಂದ ಸರ್ಕಾರ ವರದಿ ಸಲ್ಲಿಕೆ; ಪರಿಹಾರ ಯಾವಾಗ?

ಈದ್ಗಾ ಗಣೇಶ ವಿಸರ್ಜನೆಯಾಗಿ 12 ದಿನಗಳಾಯ್ತು. ಆದರೂ ಈದ್ಗಾ ಮೈದಾನಕ್ಕೆ ಯಾರಿಗೂ ಎಂಟ್ರಿಗೆ ಅಧಿಕಾರಿಗಳು ಅವಕಾಶ ಕೊಟ್ಟಿಲ್ಲ. ಇದರಿಂದಾಗಿ ಟ್ಯಾಕ್ಸಿ ಚಾಲಕರು ತೀವ್ರ ಕಂಗಾಲಾಗಿದ್ದಾರೆ. ಸದ್ಯ ಕೋರ್ಟ್ ಆವರಣದಲ್ಲಿ ಪಾರ್ಕಿಂಗ್ ಗೆ ಸ್ಥಳಾವಕಾಶ ಕಲ್ಪಿಸಲಾಗಿದೆ. ಆದರೆ ಕೇವಲ 25 ಕಾರು ನಿಲುಗಡೆಗೆ ಮಾತ್ರ ಅವಕಾಶವಿರೋದ್ರಿಂದ ಉಳಿದವರ ಪರದಾಡುವಂತಾಗಿದೆ. ಸುಮಾರು 300 ಕ್ಕೂ ಹೆಚ್ಚು ಟ್ಯಾಕ್ಸಿ ಚಾಲಕರಿಗೆ ಈದ್ಗಾ ಮೈದಾನ ಆಶ್ರಯಿಸಿದ್ದಾರೆ.

ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ- ಟ್ಯಾಕ್ಸಿ ಚಾಲಕರು

ಮೈದಾನದಲ್ಲಿ ಪಾರ್ಕ್ ಮಾಡುವುದರಿಂದ ನಮ್ಮ ಜೀವನ ಚೆನ್ನಾಗಿತ್ತು. ಈಗ ಪಾರ್ಕಿಂಗ್ ಮಾಡಲು ವ್ಯವಸ್ಥೆ ಇಲ್ಲದ್ದರಿಂದ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ ಅಂತಿದಾರೆ ಟ್ಯಾಕ್ಸಿ ಚಾಲಕರು. ಮೊದಲಿದ್ದ ಸ್ಥಳದಲ್ಲಿ ಪಾರ್ಕಿಂಗ್ ಮಾಡಲು ಅವಕಾಶ ಕೊಡುವಂತೆ ಚಾಲಕರು ಮನವಿ ಮಾಡ್ತಿದಾರೆ.
ಪೊಲೀಸ್ ಕಮೀಷನರ್ ಜೊತೆ ಮಾತನಾಡಿ ವ್ಯವಸ್ಥೆ ಸರಿಪಡಿಸ್ತೇನೆ. ಟ್ಯಾಕ್ಸಿ ನಿಲುಗಡೆಗೆ ಅವಕಾಶ ಮಾಡಿಕೊಡ್ತೇವೆ ಎಂದು ಪಾಲಿಕೆ ಮಹಾಪೌರ ಈರೇಶ ಅಂಚಟಗೇರಿ ತಿಳಿಸಿದ್ದಾರೆ.

ಇದನ್ನೂ ಓದಿ:  Fishing Problems: ಹವಾಮಾನ ವೈಪರೀತ್ಯಕ್ಕೆ ನಲುಗಿದ ಮೀನುಗಾರಿಕೆ, ಕಡಲ ಮಕ್ಕಳಿಗೆ ತಪ್ಪದ ಸಂಕಷ್ಟ

ಒಟ್ಟಿನಲ್ಲಿ ಸರ್ಕಾರದ ನಿರ್ಧಾರವೋ ಅಥವಾ ಹೋರಾಟದ ಬಿಸಿಯೋ ಗೊತ್ತಿಲ್ಲ. ಟ್ಯಾಕ್ಸಿ ಚಾಲಕರ ಬದುಕಿನಲ್ಲಿ ಮಾತ್ರ ಅಲ್ಲೋಲ ಕಲ್ಲೋಲದ ವಾತಾವರಣ ನಿರ್ಮಾಣವಾಗಿದೆ. ಈದ್ಗಾ ಮೈದಾನದಲ್ಲಿ ಆಸರೆ ಪಡೆದುಕೊಂಡಿದ್ದ ಕುಟುಂಬಗಳಿಗೆ ಬರಸಿಡಿಲು ಬಡಿದಂತಾಗಿದ್ದು, ಕೂಡಲೇ ಈ ಬಗ್ಗೆ ಸೂಕ್ತ ಕ್ರಮಗಳನ್ನು ಜರುಗಿಸಿ ಕುಟುಂಬಗಳ ಕಣ್ಣೀರು ಒರೆಸುವ ಕಾರ್ಯ ಮಾಡಬೇಕಿದೆ.
Published by:ಪಾವನ ಎಚ್ ಎಸ್
First published: