HOME » NEWS » State » GANESH CHATURTHI 2020 MEAT SALE BANNED IN BANGALORE DUE TO GANESH CHATURTHI CELEBRATION TODAY SCT

Ganesh Chaturthi 2020: ಬೆಂಗಳೂರಿನಲ್ಲಿ ಇಂದು ಸಂಭ್ರಮದ ಗಣೇಶ ಚತುರ್ಥಿ; ಮಾಂಸ ಮಾರಾಟ ನಿಷೇಧ

Bengaluru Ganesh Chaturthi: ಗಣೇಶ ಚತುರ್ಥಿ ಹಿನ್ನೆಲೆ ಇಂದು ಬೆಂಗಳೂರಿನಲ್ಲಿ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ. ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಇಂದು ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿದೆ.

news18-kannada
Updated:August 22, 2020, 9:25 AM IST
Ganesh Chaturthi 2020: ಬೆಂಗಳೂರಿನಲ್ಲಿ ಇಂದು ಸಂಭ್ರಮದ ಗಣೇಶ ಚತುರ್ಥಿ; ಮಾಂಸ ಮಾರಾಟ ನಿಷೇಧ
ಪರಿಸರ ಪೂರಕ ಗಣೇಶನ ಮೂರ್ತಿಗಳು
  • Share this:
ಬೆಂಗಳೂರು (ಆ. 22): ಬೆಂಗಳೂರಿನಲ್ಲಿ ಕೊರೋನಾ ಅಬ್ಬರದ ನಡುವೆಯೂ ಇಂದು ಗಣೇಶ ಹಬ್ಬದ ಆಚರಣೆ ಜೋರಾಗಿಯೇ ಇದೆ. ಇಂದು ಬೆಂಗಳೂರಿನ ಎಲ್ಲ ಗಣಪತಿ ದೇವಸ್ಥಾನಗಳಲ್ಲೂ ಗಣಪನಿಗೆ ವಿಶೇಷ ಅಲಂಕಾರ ಮಾಡಲಾಗಿದೆ. ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೂ ಸರ್ಕಾರ ಒಪ್ಪಿಗೆ ನೀಡಿರುವುದರಿಂದ ಅಲ್ಲಲ್ಲಿ ಗಣಪತಿಯನ್ನು ಕೂರಿಸಲಾಗಿದೆ.

ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಇಂದು ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿದೆ. ಪ್ರತಿವರ್ಷ ಇಲ್ಲಿ ಭಾರೀ ವಿಜೃಂಭಣೆಯಿಂದ ಗಣಪತಿ ಹಬ್ಬವನ್ನು ಆಚರಿಸಲಾಗುತ್ತಿತ್ತು. ಆದರೆ, ಈ ಬಾರಿ ಕೊರೋನಾ ಆತಂಕ ಹೆಚ್ಚಾಗಿರುವುದರಿಂದ ನಿಯಮಿತ ಸಂಖ್ಯೆಯಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಇಂದು ಮುಂಜಾನೆಯಿಂದಲೇ ದೊಡ್ಡ ಗಣಪತಿ ದೇವಸ್ಥಾನಕ್ಕೆ ಭಕ್ತರ ದಂಡೇ ಹರಿದುಬರುತ್ತಿದೆ. ಬೆಳಗ್ಗೆ 3.30ರಿಂದಲೇ ವಿಶೇಷ ಪೂಜೆ ನಡೆಸಲಾಗುತ್ತಿದೆ. ಬೆಳಗ್ಗೆ 7 ಗಂಟೆಯವರೆಗೆ ಭಕ್ತರಿಗೆ ಹೊರಗಡೆಯಿಂದ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಇದೀಗ ಒಳಗಡೆ ತೆರಳಿ ದರ್ಶನಕ್ಕೆ ಅವಕಾಶ ನೀಡಲಾಗಿದೆ.  ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿದ್ದಾರೆ. ದೊಡ್ಡ ಗಣಪನಿಗೆ ಈ ಬಾರಿ ಹೂವು ಮತ್ತು ನೋಟಿನ ಅಲಂಕಾರ ಮಾಡಲಾಗಿದೆ.

ಇದನ್ನೂ ಓದಿ: Ganesh Chaturthi 2020: ಗಣೇಶ ಚತುರ್ಥಿಗೆ ನಾಲ್ಕು ದಿನ ಬಾಕಿ; ಇನ್ನೂ ಬಿಡುಗಡೆಯಾಗಿಲ್ಲ ಸರ್ಕಾರದ ಮಾರ್ಗಸೂಚಿ

ಇಂದು ಬೆಳ್ಳಂಬೆಳಗ್ಗೆ ಕಲಾಸಿಪಾಳ್ಯ ಮಾರುಕಟ್ಟೆಯಲ್ಲಿ ಜನರು ಹಬ್ಬಕ್ಕೆ ಹೂವು-ಹಣ್ಣು ಖರೀದಿ ನಡೆಸುತ್ತಿದ್ದಾರೆ. ಮಾರ್ಕೆಟ್ ಬಂದ್ ಆದ ಬಳಿಕ ಕಲಾಸಿಪಾಳ್ಯ ಮುಖ್ಯರಸ್ತೆಯಲ್ಲಿ ವ್ಯಾಪಾರಿಗಳು ಹೂವು- ಹಣ್ಣು ವ್ಯಾಪಾರ ಶುರು ಮಾಡಿದ್ದಾರೆ. ಇಂದು ಗಣೇಶ ಹಬ್ಬದ ಪ್ರಯುಕ್ತ ಬೆಳಗ್ಗೆ ಮೂರು ಗಂಟೆಯಿಂದಲೇ ಭರ್ಜರಿಯಾಗಿ ಹೂವಿನ ವ್ಯಾಪಾರ ನಡೆಯುತ್ತಿದೆ. ಹಬ್ಬಕ್ಕೆ ಬೇಕಾದ ಹೂವು ಹಣ್ಣು ಖರೀದಿಗೆ ಸಾರ್ವಜನಿಕರು ಮುಗಿಬಿದ್ದಿದ್ದಾರೆ. ಕೊರೋನಾ ನಡುವೆಯೂ ಕಲಾಸಿಪಾಳ್ಯ ಮುಖ್ಯರಸ್ತೆಯಲ್ಲಿ ಜನವೋ ಜನ. ಕೊರೊನಾ ಆತಂಕವಿಲ್ಲದೆ ಹೂವು ಹಣ್ಣು ಖರೀದಿಗೆ ಜನ ಮುಗಿಬಿದ್ದಿದ್ದಾರೆ.

ಜೆ.ಪಿ. ನಗರದ ಪುಟ್ಟೇನಹಳ್ಳಿಯಲ್ಲಿರುವ ಶ್ರೀ ಸತ್ಯಸಾಯಿ ಗಣಪತಿ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿದೆ. ವಿವಿಧ ಹೂವುಗಳಿಂದ ಅಲಂಕಾರ ಮಾಡಲಾಗಿದ್ದು, ಬೆಳಗ್ಗೆ 5 ಗಂಟೆಯಿಂದಲೇ ಹೋಮ-ಹವನಗಳನ್ನು ನಡೆಸಲಾಗಿದೆ. ಬೆಂಗಳೂರಿನಲ್ಲಿರುವ ಇತರೆ ದೇವಸ್ಥಾನಗಳಲ್ಲೂ ಇಂದು ವಿಶೇಷ ಪೂಜೆ ನಡೆಸಲಾಗುತ್ತಿದೆ.

ಇಂದು ಮಾಂಸ ಮಾರಾಟ ನಿಷೇಧ:
ಗಣೇಶ ಚತುರ್ಥಿ ಹಿನ್ನೆಲೆ ಇಂದು ಬೆಂಗಳೂರಿನಲ್ಲಿ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ. ಈ ಬಗ್ಗೆ ಆದೇಶ ಹೊರಡಿಸಿರುವ ಬಿಬಿಎಂಪಿ, ಇಂದು ಬೆಂಗಳೂರಿನಲ್ಲಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ಮಾಡದಂತೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನಾದ್ಯಂತ ಎಲ್ಲ ಮಾಂಸದಂಗಡಿಗಳೂ ಬಂದ್ ಆಗಿವೆ.ಇದನ್ನೂ ಓದಿ: ಸಂಘ ಪರಿವಾರ ಜಾತಿವಾದಿಯೂ ಅಲ್ಲ, ದೇಶದ್ರೋಹಿಯೂ ಅಲ್ಲ; ಸಿದ್ದರಾಮಯ್ಯ ಆರೋಪಕ್ಕೆ ಸಿ.ಟಿ. ರವಿ ಆಕ್ರೋಶ

ವಾರ್ಡ್​ಗೆ ಒಂದು ಹಾಗೂ ಗ್ರಾಮಕ್ಕೆ ಒಂದು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲು ಸರ್ಕಾರ ಅನುಮತಿ ನೀಡಿದೆ. ಪ್ರತಿವರ್ಷ ವಿಜೃಂಭಣೆಯಿಂದ ಮನೆ-ಮನೆಗಳಲ್ಲಿ, ಗಲ್ಲಿ-ಗಲ್ಲಿಗಳಲ್ಲಿ, ದೇಗುಲಗಳಲ್ಲಿ ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತಿತ್ತು. ಈ ಬಾರಿ ಕೂಡ ಸಾರ್ವಜನಿಕ ಸ್ಥಳದಲ್ಲಿ ಗಣಪತಿ ಹಬ್ಬ ಆಚರಿಸಲು ಅವಕಾಶ ನೀಡಬೇಕೆಂಬ ಒತ್ತಾಯ ಹೆಚ್ಚಾಗಿದ್ದರಿಂದ ಅದಕ್ಕೆ ಅವಕಾಶ ನೀಡಲಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಿರುವ ಸರ್ಕಾರ ಕೆಲವು ನಿರ್ಬಂಧಗಳನ್ನೂ ವಿಧಿಸಿದೆ. 20 ಜನರು ಮಾತ್ರ ಗಣೇಶ ಚತುರ್ಥಿ ಆಚರಣೆ ಮಾಡಲು ಅವಕಾಶ ನೀಡಲಾಗಿದೆ. ಇದಕ್ಕೆ ಸ್ಥಳೀಯ ಆಡಳಿತದ ಪೂರ್ವ ಅನುಮತಿ ಪಡೆಯಬೇಕು. ಗಣಪತಿ ವಿಸರ್ಜನೆ ವೇಳೆ ಯಾವುದೇ ಮೆರವಣಿಗೆ ಮಾಡುವಂತಿಲ್ಲ. ಸಾಂಸ್ಕೃತಿಕ ಹಾಗೂ ಸಂಗೀತ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ. ನಿಗದಿತ ಸ್ಥಳದಲ್ಲೇ ಮೂರ್ತಿ ವಿಸರ್ಜನೆ ಮಾಡಬೇಕು ಎಂದು ಸರ್ಕಾರ ಸೂಚನೆ ನೀಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಗರಿಷ್ಠ 4 ಅಡಿ ಹಾಗೂ ಮನೆಯಲ್ಲಿ 2 ಅಡಿ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗಿದೆ.
Published by: Sushma Chakre
First published: August 22, 2020, 9:25 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories