HOME » NEWS » State » GANESH CHATURTHI 2020 GOWRI FESTIVAL 2020 BECAUSE OF CORONA SCARE THERE IS NO GOWRI HABBA IN CHAMARAJANAGAR KUDERU VILLAGE SCT

ರಾಜ್ಯದ ಏಕೈಕ ಗೌರಿ ದೇಗುಲವಿರುವ ಚಾಮರಾಜನಗರದ ಕುದೇರಿನಲ್ಲಿ ಈ ಬಾರಿ ಹಬ್ಬದ ಸಂಭ್ರಮವಿಲ್ಲ

Gowri Habba 2020: ಸಾಮಾನ್ಯವಾಗಿ ಗೌರಿಗೆ ಎಲ್ಲಿಯೂ ದೇವಾಲಯವಿಲ್ಲ. ಆದರೆ, ಕುದೇರು ಗ್ರಾಮದಲ್ಲಿ 106 ವರ್ಷಗಳ ಹಿಂದೆಯೇ ಸ್ವರ್ಣಗೌರಿ ದೇವಾಲಯ ನಿರ್ಮಿಸಲಾಗಿದೆ. 12 ದಿನಗಳ ಕಾಲ ಗ್ರಾಮದಲ್ಲಿ ಸಂಭ್ರಮ ಸಡಗರ ಮನೆ ಮಾಡುತ್ತಿತ್ತು.

news18-kannada
Updated:August 21, 2020, 10:45 AM IST
ರಾಜ್ಯದ ಏಕೈಕ ಗೌರಿ ದೇಗುಲವಿರುವ ಚಾಮರಾಜನಗರದ ಕುದೇರಿನಲ್ಲಿ ಈ ಬಾರಿ ಹಬ್ಬದ ಸಂಭ್ರಮವಿಲ್ಲ
ಸಾಂದರ್ಭಿಕ ಚಿತ್ರ
  • Share this:
ಚಾಮರಾಜನಗರ (ಆ. 21): ಎಲ್ಲ ಕಡೆ ಗಣೇಶನಿಗೆ ಅಗ್ರ ಪೂಜೆಯಾದರೆ ಚಾಮರಾಜನಗರ ಜಿಲ್ಲೆಯ ಕುದೇರು ಗ್ರಾಮದಲ್ಲಿ ಮಾತ್ರ ಗೌರಿಗೇ ಮೊದಲ ಪ್ರಾಶಸ್ತ್ಯ. ರಾಜ್ಯದಲ್ಲೇ ಗೌರಿ ದೇವಾಲಯ ಇರುವ ಏಕೈಕ ಗ್ರಾಮ ಇದಾಗಿದೆ. ಹಾಗೆಯೇ ನಾಡಿನ ಎಲ್ಲಾ ಕಡೆ ಗಣೇಶನನ್ನು ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸುವುದು ವಾಡಿಕೆಯಾದರೆ ಈ ಗ್ರಾಮದಲ್ಲಿ ಮಾತ್ರ ಗೌರಿಯನ್ನು ಪ್ರತಿಷ್ಠಾಪಿಸಿ 12 ದಿನಗಳ ಕಾಲ ವಿಜೃಂಭಣೆಯಿಂದ ಪೂಜೆ- ಪುನಸ್ಕಾರಗಳನ್ನು ಮಾಡಿ ನಂತರ ವಿಸರ್ಜಿಸಲಾಗುತ್ತಿತ್ತು.

ಕುದೇರು ಗ್ರಾಮದಲ್ಲಿ  ನಡೆಯುವ ಈ ಗೌರಿ ಹಬ್ಬಕ್ಕೆ  ಹಳೇ ಮೈಸೂರು ಪ್ರಾಂತ್ಯ ಹಾಗೂ ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಸಾವಿರಾರು ಮಂದಿ ಆಗಮಿಸುತ್ತಿದ್ದರು. 12 ದಿನಗಳ ಕಾಲ ಸಂಭ್ರಮವೋ ಸಂಭ್ರಮ. ಆದರೆ ಕೋವಿಡ್-19 ನಿಂದ ಈ ಬಾರಿ ಇದಕ್ಕೆಲ್ಲ ಕಡಿವಾಣ ಬಿದ್ದಿದೆ.

ಸಾಮಾನ್ಯವಾಗಿ ಗೌರಿಗೆ ಎಲ್ಲಿಯೂ ದೇವಾಲಯವಿಲ್ಲ. ಆದರೆ, ಕುದೇರು ಗ್ರಾಮದಲ್ಲಿ 106 ವರ್ಷಗಳ ಹಿಂದೆಯೇ ಸ್ವರ್ಣಗೌರಿ ದೇವಾಲಯ ನಿರ್ಮಿಸಲಾಗಿದೆ. ನಾಡಿನ ಎಲ್ಲ ಕಡೆ ಗಣೇಶನನ್ನು ಪ್ರತಿಷ್ಟಾಪಿಸಿ ಪೂಜಿಸಿದರೆ ಇಲ್ಲಿ ಗೌರಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿತ್ತು. ಗೌರಿಹಬ್ಬದ ದಿನದಂದು ಬೆಳಿಗ್ಗೆ ಗ್ರಾಮದ ದೊಡ್ಡಕೆರೆಯ ಬಳಿ ವಿಶೇಷ ಹೋಮ -ಹವನಗಳೊಂದಿಗೆ ಮರಳಿನ ಗೌರಿ ವಿಗ್ರಹ ಸಿದ್ದಪಡಿಸಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿ ಗ್ರಾಮದಲ್ಲಿರುವ ಸ್ವರ್ಣಗೌರಿ ದೇವಾಲಯದಲ್ಲಿ ಗೌರಿಯನ್ನು ಪ್ರತಿಷ್ಠಾಪಿಸಲಾಗುತ್ತಿತ್ತು.

ಇದನ್ನೂ ಓದಿ: ಉತ್ತರ ಕರ್ನಾಟಕದಲ್ಲಿ ನಿಲ್ಲದ ಪ್ರವಾಹ; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

ಮೆರವಣಿಗೆ ಸಂದರ್ಭದಲ್ಲಿ  ಸುತ್ತಮುತ್ತಲ ಗ್ರಾಮಗಳಷ್ಟೆ ಅಲ್ಲ ರಾಜ್ಯದ ವಿವಿಧೆಡೆಯಿಂದ ನೂರಾರು ಮಹಿಳೆಯರು ಬಂದು ಗೌರಿಗೆ ಬಾಗಿನ ಅರ್ಪಿಸುತ್ತಿದ್ದರು. 12 ದಿನಗಳ ಕಾಲ ಗ್ರಾಮದಲ್ಲಿ ಸಂಭ್ರಮ ಸಡಗರ ಮನೆ ಮಾಡುತ್ತಿತ್ತು. ಆದರೆ, ಕೊರೋನಾ ಮಹಾಮಾರಿ ಪರಿಣಾಮ ಈ ಎಲ್ಲಾ ಧಾರ್ಮಿಕ ಆಚರಣೆಗಳಿಗೆ ಕಡಿವಾಣ ಬಿದ್ದಿದೆ. ಗೌರಿ ತರುವುದಾಗಲಿ, ಮೆರವಣಿಗೆ ಮಾಡುವುದಾಗಲಿ, ದೇವಾಲಯದಲ್ಲಿ ಬಾಗಿನ ಅರ್ಪಿಸುವುದಾಗಲಿ ಯಾವುದಕ್ಕೂ ಅವಕಾಶವಿಲ್ಲ. ಸಾವಿರಾರು ಜನ ಸೇರುವುದರಿಂದ ಕೋವಿಡ್ ಮುಂಜಾಗ್ರತಾ ಕ್ರಮ ವಹಿಸುವುದು ಕಷ್ಟವಾಗಲಿರುವುದರಿಂದ ಈ ಬಾರಿ ಎಲ್ಲ ಆಚರಣೆಗಳನ್ನು ರದ್ದುಪಡಿಸಲಾಗಿದೆ  ಎಂದು ದೇವಸ್ಥಾನದ ಪ್ರಧಾನದ ಅರ್ಚಕ ಉಮೇಶ್ ತಿಳಿಸಿದ್ದಾರೆ.

ಈ ಗೌರಮ್ಮನಿಗೆ ಹರಕೆ ಹೊತ್ತುಕೊಂಡರೆ ಎಲ್ಲಾ ಇಷ್ಟಾರ್ಥಗಳು ಸಿದ್ದಿಸುತ್ತವೆ ಎಂಬ ನಂಬಿಕೆಯಿದೆ. ಅದರಲ್ಲೂ ವಿಶೇಷವಾಗಿ ಕಂಕಣಭಾಗ್ಯ, ಸಂತಾನಭಾಗ್ಯ  ವಿವಾಹಿತರಿಗೆ, ಮುತ್ತೈದೆ ಭಾಗ್ಯ ಲಭಿಸುತ್ತದೆ ಎಂಬ ನಂಬಿಕೆಯಿಂದ ರಾಜ್ಯದ ವಿವಿಧೆಡೆಯಿಂದ ಇಲ್ಲಿಗೆ ಭಕ್ತರ ದಂಡೇ ಹರಿದು ಬರುತ್ತಿತ್ತು. ಇಷ್ಟಾರ್ಥ ಸಿದ್ದಿಸಿದವರು ಗೌರಿಗೆ ಬಾಗಿನ ಅರ್ಪಿಸಿ ತಮ್ಮ ಹರಕೆ  ತೀರಿಸುತ್ತಿದ್ದರು. ಮತ್ತೆ ಕೆಲವರು ಇದೇ ಸಂದರ್ಭದಲ್ಲಿ ಹರಕೆ ಹೊತ್ತುಕೊಳ್ಳುತ್ತಿದ್ದರು. ಆದರೆ, ಇದ್ಯಾವುದಕ್ಕೂ ಈ ಬಾರಿ ಅವಕಾಶವಿಲ್ಲದಂತಾಗಿ ನಿರಾಸೆಯಾಗಿದ್ದರೂ  ಎಲ್ಲರ ಆರೋಗ್ಯ ಮುಖ್ಯವಲ್ಲವೇ? ಹಾಗಾಗಿ ನಮ್ಮ ನಮ್ಮ ಮನೆಗಳಲ್ಲೇ ಪೂಜೆ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ ಎನ್ನುತ್ತಾರೆ ಗ್ರಾಮದ ಸ್ಮಿತಾ ಎಂಬ ಮಹಿಳೆ.
ಕೊರೋನಾ ಮಹಾಮಾರಿ ದೇಶದ ಆರ್ಥಿಕತೆಯನ್ನೇ ಬುಡಮೇಲು ಮಾಡಿ  ಸಾಮಾಜಿಕ ಸ್ಥಿತಿಗತಿಗಳ ಮೇಲು ದುಷ್ಪರಿಣಾಮ ಬೀರಿದೆ. ಕೊರೋನಾದಿಂದ ಉಂಟಾಗಿರುವ ಸಂಕಷ್ಟಗಳು ಒಂದೆರಡಲ್ಲ. ಈಗ ಹಬ್ಬಗಳ ಸಂಭ್ರಮಕ್ಕೂ ತಡೆಯೊಡ್ಡಿದೆ.  ಕೋವಿಡ್-19 ಗೆ  ಸಾವಿರಾರು ಮಂದಿ ಬಲಿಯಾಗುತ್ತಿರುವ ಈ ಸಂದರ್ಭದಲ್ಲಿ ಹಬ್ಬದ ಸಡಗರಕ್ಕೆ ಕಡಿವಾಣ ಬಿದ್ದಿರುವುದು ಅನಿವಾರ್ಯವೂ ಆಗಿದೆ.
Published by: Sushma Chakre
First published: August 21, 2020, 9:53 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories