news18-kannada Updated:August 22, 2020, 1:48 PM IST
ಕಾರವಾರದಲ್ಲಿ ಗಣೇಶ ಚತುರ್ಥಿ
ಕಾರವಾರ (ಆ. 22): ಇಷ್ಟು ವರ್ಷ ಸಂಭ್ರಮ ಸಡಗರದಿಂದ ಆಚರಣೆ ಮಾಡುತ್ತಿದ್ದ ಗಣೇಶ ಚತುರ್ಥಿ ಹಬ್ಬ ಈ ವರ್ಷ ಕಾರವಾರದಲ್ಲಿ ಕಳೆಗುಂದಿದೆ. ಸಾರ್ವಜನಿಕ ಗಣೇಶೋತ್ಸವ ಆಚರಣೆ ಮಾಡಲು ಕೊರೋನಾ ಹಿನ್ನಲೆಯಲ್ಲಿ ಸರಕಾರ ಹೇರಿದ್ದ ಷರತ್ತು ಬದ್ಧ ಮಾರ್ಗಸೂಚಿ ಹಬ್ಬದ ಸಂಭ್ರಮವನ್ನು ಕಸಿದುಕೊಂಡಿದೆ. ಮನೆ ಮನೆಯಲ್ಲೂ ಹಬ್ಬದ ಆಚರಣೆ ಅಷ್ಟೇನೂ ಸಂಭ್ರಮ ಪಡೆದಿಲ್ಲ. ಆರ್ಥಿಕತೆಯ ಮೇಲೆ ಕೊರೋನಾ ಕರಿನೆರಳು ಸರಳ ಹಬ್ಬಕ್ಕೆ ಕಾರಣವಾಗಿದೆ. ಆಳೆತ್ತರದ ಗಣೇಶನ ವಿಗ್ರಹ ಕಾಣುತ್ತಿದ್ದ ಸಾರ್ವಜನಿಕ ಗಣೇಶೋತ್ಸವ ಜಾಗದಲ್ಲಿ ಈಗ ಚಿಕ್ಕದಾದ ಗಣೇಶನ ಪ್ರತಿಷ್ಠಾಪನೆ ಮಾಡಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸೇರಿ ಇನ್ನುಳಿದ ತಾಲ್ಲೂಕಿನಲ್ಲಿ ಇಂದಿನ ಗಣೇಶ ಚತುರ್ಥಿ ಹಬ್ಬದ ಸಂಭ್ರಮ ಕಳೆಗುಂದಿದೆ. ಈಗಾಗಲೇ ಕೊರೋನಾ ಹಿನ್ನೆಲೆಯಲ್ಲಿ ಗಣೇಶ ಹಬ್ಬ ಆಚರಣೆಗೆ ಸರಕಾರ ಷರತ್ತುಬದ್ಧ ವಿಧಿಸಿದ ಹಿನ್ನಲೆಯಲ್ಲಿ ಕೆಲವೊಂದು ಗೊಂದಲದಲ್ಲೆ ಹಬ್ಬ ಆಚರಣೆ ನಡೆಯುತ್ತಿದೆ. ಎರಡು ದಿನ ಹಬ್ಬ ಆಚರಣೆ ಮಾಡಲು ಜಿಲ್ಲಾಡಳಿತ ಅವಕಾಶ ನೀಡಿದ್ದು, ಸರಳವಾಗಿ ಹಬ್ಬ ಆಚರಣೆ ಮಾಡಲು ಜನ ಮುಂದಾಗಿದ್ದು ಕಂಡು ಬಂದಿತು. ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಕಳೆದ ವರ್ಷದ ಹಾಗೆ ಯಾವುದೇ ಸಂಭ್ರಮ, ಸಡಗರ ಇಲ್ಲದೆ ಚಿಕ್ಕದಾದ ಗಣೇಶನ ವಿಗ್ರಹ ಪ್ರತಿಷ್ಠಾಪಿಸಿದ್ದಾರೆ.
ಈ ಹಿಂದಿನ ಎಲ್ಲ ವರ್ಷಗಳಲ್ಲೂ ಹತ್ತು ಅಡಿಗಿಂತಲೂ ಎತ್ತರದ ದೊಡ್ಡದಾದ ಗಣೇಶ ವಿಗ್ರಹ ಪ್ರತಿಷ್ಟಾಪಿಸಿ ವಿಜೃಂಭಣೆಯಿಂದ ಹಬ್ಬ ಆಚರಣೆ ಮಾಡುತ್ತಿದ್ದರು. ಆದ್ರೆ ಈ ಬಾರಿ ಈ ಎಲ್ಲ ಸಂಭ್ರಮ ಕೊರೋನಾ ಮಾಹಾಮಾರಿ ನುಂಗಿದೆ. ಸಾರ್ವಜನಿಕ ಗಣೇಶೋತ್ಸವ ಸಂಭ್ರಮ ಕಳೆಗಟ್ಟುತ್ತಿತ್ತು. ಆದರೆ, ಈಗ ಅಲ್ಲಿ ಸಂಭ್ರಮವೂ ಇಲ್ಲ, ಸಡಗರವೂ ಇಲ್ಲ. ಕೇವಲ ಸಾಂಪ್ರದಾಯಿಕ ಪದ್ದತಿ ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಇವತ್ತು ಹಬ್ಬ ಆಚರಣೆ ಮಾಡುತ್ತಿದ್ದಾರೆ. ಮನೆ-ಮನೆಗಳಲ್ಲಿ ಪ್ರತಿಷ್ಟಾಪಿಸಿ ಪೂಜಿಸುವ ಗಣೇಶ ಹಬ್ಬದ ಸಂಭ್ರಮ ಕೂಡ ಮಾಯವಾಗಿದೆ.
ಇದನ್ನೂ ಓದಿ: Ganesh Chaturthi 2020: ಈ ಬಾರಿ ಅರಿಶಿಣ ಪುಡಿಯಿಂದ ತಯಾರಿಸಲಾದ ಆರೋಗ್ಯಸ್ನೇಹಿ ಗಣಪನನ್ನು ಆರಾಧಿಸಿ!
ಇನ್ನೂ ಮನೆ ಮನೆಯಲ್ಲಿ ಸಂಭ್ರಮ ಮನೆ ಮಾಡುತ್ತಿತ್ತು. ಪಕ್ಕದ ಗೋವಾ, ಮಹಾರಾಷ್ಟ್ರ, ಮುಂಬೈ ಭಾಗದಲ್ಲಿ ನೆಲೆಸಿದ ಕಾರವಾರ ಹಾಗೂ ಗ್ರಾಮೀಣ ಭಾಗದ ಜನರು ತವರಿಗೆ ಬಂದು ಹಬ್ಬ ಸಂಭ್ರಮಿಸುತ್ತಿದ್ದರು. ಆದರೆ, ಈ ಬಾರಿ ಆ ಸಂಭ್ರಮವನ್ನು ಕೊರೋನಾ ನುಂಗಿದೆ. ಸರಕಾರದ ಮಾರ್ಗಸೂಚಿಯಂತೆ ಹೆಚ್ಚು ಜನ ಸೇರಬಾರದು. ಹೀಗೆ ಹತ್ತು ಹಲವು ನಿಯಮಕ್ಕೆ ಬೇಸತ್ತ ಜನ ಹಬ್ಬವನ್ನು ಅತೀ ಸರಳವಾಗಿ ಆಚರಣೆ ಮಾಡುತ್ತಿದ್ದಾರೆ. ಯಾವುದೇ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮ ಇಲ್ಲದೆ ಹಬ್ಬ ಆಚರಣೆ ಮಾಡುತ್ತಿದ್ದಾರೆ. ಇಷ್ಟು ವರ್ಷ ಹಬ್ಬಕ್ಕೆ ನಾಲ್ಕು ದಿನ ಇರುವಾಗಲೇ ಮನೆ ಮಂದಿ ಸಂಬಂಧಿಕರ ಜೊತೆಯಾಗಿ ಹಬ್ಬ ಆಚರಣೆ ಮಾಡುತ್ತಿದ್ದರು. ಆದರೆ, ಈ ಬಾರಿ ಕೊರೋನಾ ಸಂಬಂಧಿಕರನ್ನು ಕೂಡ ಸೇರಲು ಬಿಡದೆ ಸಂಭ್ರಮ ಸಡಗರಕ್ಕೆ ಬ್ರೇಕ್ ಹಾಕಿದೆ.
ಒಟ್ಟಾರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಇವತ್ತಿನ ಗಣೇಶ ಚತುರ್ಥಿ ಹಬ್ಬ ಸಂಭ್ರಮ, ಸಡಗರ ಇಲ್ಲದೆ ಸರಳವಾಗಿ ಆಚರಣೆ ಆಗಿದೆ. ಪಟಾಕಿ ಶಬ್ಧ ಕೇಳಿ ಬರುತ್ತಿದ್ದ ಗಲ್ಲಿಯಲ್ಲಿ ಮೌನ ಆವರಿಸಿದೆ. ಡೋಲು ನಗಾರಿ ಸಾಂಸ್ಕ್ರತಿಕ ಕಾರ್ಯ ಕ್ರಮ ಕಾಣುವ ಜಾಗದಲ್ಲಿ ಜನಜಂಗುಳಿ ಇಲ್ಲದೆ ಬೆರಳೆಣಿಕೆಯ ಜನ ಕಾಣುತ್ತಿದ್ದಾರೆ.
Published by:
Sushma Chakre
First published:
August 22, 2020, 1:46 PM IST