ಯಾದಗಿರಿ: ಆ ಗ್ರಾಮಸ್ಥರ ಪಾಲಿಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ದೇವರಾಗಿದ್ದು, ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡಲು ಪ್ರಮುಖ ಪಾತ್ರ ವಹಿಸಿದ ಗಾಂಧೀಜಿ ಅವರನ್ನೇ ದೇವರೆಂದು ಆರಾಧಿಸುತ್ತಿದ್ದಾರೆ. ಗಾಂಧೀಜಿ ಅವರ ನೆನಪಿಗಾಗಿ ಚಿಕ್ಕದಾದ ಮಂದಿರ ನಿರ್ಮಿಸಿ ಪೂಜೆ ಮಾಡಲಾಗುತ್ತಿದೆ. ಪೂಜಿ ಮಾಡುವ ಜೊತೆ ಗಾಂಧೀಜಿ ಅವರ ತತ್ವ ಪಾಲಿಸಲಾಗುತ್ತಿದೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬಲಶೆಟ್ಟಿಹಾಳ ಗ್ರಾಮದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಗುಡಿಯಿದೆ. ಬಲಶೆಟ್ಟಿಹಾಳ ಗ್ರಾಮದ ಪ್ರಮುಖರು ಸೇರಿ ರಾಷ್ಟ್ರಪಿತ ಗಾಂಧೀಜಿ ಅವರ ಮೇಲಿನ ಅಭಿಮಾನದಿಂದ 1949ರಲ್ಲಿ ಗಾಂಧೀಜಿ ಅವರ ಮಂದಿರ ನಿರ್ಮಿಸಿದ್ದಾರೆ.
ದಿ. ಹಂಪಣ್ಣ ಸಾಹುಕಾರ್ ಸ್ವತಃ ಸಿಮೆಂಟ್ನಿಂದ ಗಾಂಧೀಜಿಯ ಪುತ್ಥಳಿ ತಯಾರಿಸಿ, ಈ ಗುಡಿಯನ್ನ ನಿರ್ಮಿಸಲು ಪ್ರಮುಖ ಪಾತ್ರ ವಹಿಸಿದ್ದಾರೆ. ನಂತರದ ದಿನಗಳಲ್ಲಿ ಈಗ ಕಲ್ಲಿನ ಗಾಂಧೀಜಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ. ದಿ. ಹಂಪಣ್ಣ ಸಾಹುಕಾರ ಮಗ ಬಸವರಾಜ ಅವರು ಗಾಂಧೀಜಿ ಮೂರ್ತಿಗೆ ಪೂಜಿಸಿ ಆರಾಧಿಸುತ್ತಾರೆ. ಗ್ರಾಮಸ್ಥರು ಕೂಡ ಮಹಾತ್ಮಗಾಂಧಿ ಅವರಿಗೆ ದೇವರ ಸ್ಥಾನಮಾನ ನೀಡಿ ಆರಾಧಿಸುತ್ತಾರೆ. ಕಳೆದ 71 ವರ್ಷಗಳಿಂದ ರಾಷ್ಟ್ರಪಿತ ಗಾಂಧೀಜಿ ಅವರ ಮಂದಿರ ನಿರ್ಮಿಸಿ ಪೂಜಿಸಿಕೊಂಡು ಬರುತ್ತಿದ್ದಾರೆ.
ಇದನ್ನೂ ಓದಿ: Gandhi Jayanti 2020: ಇಂದು ಮಹಾತ್ಮ ಗಾಂಧಿ ಜಯಂತಿ; ಅಹಿಂಸೆಯ ಹರಿಕಾರನನ್ನು ನೆನೆದ ಗಣ್ಯರು
ಈ ಬಗ್ಗೆ ನ್ಯೂಸ್ 18 ಕನ್ನಡದ ಜೊತೆಗೆ ಬಸವರಾಜ ಅವರು ಮಾತನಾಡಿ, ಗ್ರಾಮದಲ್ಲಿ ಮಹಾತ್ಮ ಗಾಂಧಿ ಮಂದಿರವಿದ್ದು, ಪೂಜೆ ಮಾಡಿಕೊಂಡು ಬರಲಾಗುತ್ತಿದೆ. ಸರಕಾರ ಹಣ ಮಂಜೂರು ಮಾಡಿ ಗಾಂಧಿ ಅವರ ದೇಗುಲ ಅಭಿವೃದ್ಧಿ ಪಡಿಸಬೇಕಾಗಿದೆ. ಗ್ರಾಮದ ಸರ್ಕಾರಿ ಶಾಲೆ ಆವರಣದ ಹತ್ತಿರ ಚಿಕ್ಕದಾದ ಗಾಂಧಿ ಮಂದಿರ ನಿರ್ಮಿಸಲಾಗಿದ್ದು, ಶಾಲೆಯ ವಿದ್ಯಾರ್ಥಿಗಳು ಹಾಗೂ ಮಕ್ಕಳು ಕೂಡ ರಾಷ್ಟ್ರಪಿತ ಗಾಂಧೀಜಿ ಅವರನ್ನು ನಮಸ್ಕರಿಸಿ ಗೌರವ ಸಲ್ಲಿಸುತ್ತಾರೆ. ಗಾಂಧೀಜಿ ಮಂದಿರ ಇರುವುದರಿಂದ ಮಂದಿರದ ಸುತ್ತ ಕಟ್ಟೆ ನಿರ್ಮಿಸಲಾಗಿದ್ದು ಅದನ್ನು ಗಾಂಧಿ ಕಟ್ಟೆಯೆಂದೇ ಕರೆಯುತ್ತಾರೆ. ಗುಡಿಯ ಕಟ್ಟೆಯಲ್ಲೇ ಸ್ಥಳೀಯ ವ್ಯಾಜ್ಯಗಳನ್ನೂ ಬಗೆಹರಿಸಿ, ಸತ್ಯ, ಶಾಂತಿ, ಅಹಿಂಸೆಯ ನಿಷ್ಠೆಯ ತತ್ವ ಸಾರುವ ಕೆಲಸಗಳು ಇಲ್ಲಿ ನಡೆಯುತ್ತವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ