• Home
  • »
  • News
  • »
  • state
  • »
  • Gandhi Jayanti 2020: ಇಂದು ಮಹಾತ್ಮ ಗಾಂಧಿ ಜಯಂತಿ; ರಾಷ್ಟ್ರಪಿತನನ್ನು ನೆನೆದ ಗಣ್ಯರು

Gandhi Jayanti 2020: ಇಂದು ಮಹಾತ್ಮ ಗಾಂಧಿ ಜಯಂತಿ; ರಾಷ್ಟ್ರಪಿತನನ್ನು ನೆನೆದ ಗಣ್ಯರು

ಮಹಾತ್ಮ ಗಾಂಧೀಜಿ

ಮಹಾತ್ಮ ಗಾಂಧೀಜಿ

Mahatma Gandhi Jayanti 2020: ದೇಶದ ಜನರಿಂದ ಬಾಪೂಜಿ ಎಂದು ಕರೆಯಲ್ಪಟ್ಟ ಮಹಾತ್ಮ ಗಾಂಧೀಜಿ ಹುಟ್ಟಿದ ದಿನ ಇಂದು. ಗಾಂಧೀಜಿಯ ಜೀವನವೇ ಒಂದು ಸಂದೇಶವಾಗಿದ್ದು,ಪ್ರಧಾನಿ ಮೋದಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಸಿಎಂಗಳಾದ ಹೆಚ್​.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಗಾಂಧಿ ಜಯಂತಿಗೆ ಶುಭಾಶಯ ಕೋರಿದ್ದಾರೆ.

ಮುಂದೆ ಓದಿ ...
  • Share this:

ಬೆಂಗಳೂರು (ಅ. 2): ಶಾಂತಿ, ಅಹಿಂಸೆಗಳ ಹರಿಕಾರನೆಂದೇ ಕರೆಯಲ್ಪಡುವ, ದೇಶದ ಜನರಿಂದ ಬಾಪೂಜಿ ಎಂದು ಕರೆಯಲ್ಪಟ್ಟ ಮಹಾತ್ಮ ಗಾಂಧೀಜಿ ಹುಟ್ಟಿದ ದಿನ ಇಂದು. ಗಾಂಧೀಜಿಯ ಜೀವನವೇ ಒಂದು ಸಂದೇಶವಾಗಿದ್ದು, ಅವರ ಹೆಸರು ಭಾರತೀಯರ ಮನಸಿನಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿದೆ. ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡಲು ಅಹಿಂಸಾ ಮಾರ್ಗದಲ್ಲಿ ಹೋರಾಟ ಮಾಡಿದ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿಯಂದು ದೇಶದ ಹಲವು ಗಣ್ಯರು ಅವರನ್ನು ನೆನಪಿಸಿಕೊಂಡಿದ್ದಾರೆ.


1869ರ ಅಕ್ಟೋಬರ್ 2ರಂದು ಗುಜರಾತ್​ನ ಪೋರಬಂದರಿನಲ್ಲಿ ಹುಟ್ಟಿದ ಮೋಹನದಾಸ್ ಕರಮಚಂದ ಗಾಂಧಿ ಮುಂದೆ ಮಹಾತ್ಮ ಎಂದು ಕರೆಯಲ್ಪಟ್ಟರು. ಕಸ್ತೂರ ಬಾ ಅವರನ್ನು ಮದುವೆಯಾಗಿದ್ದ ಗಾಂಧೀಜಿ ಭಾರತದಲ್ಲಿ ಮಾತ್ರವಲ್ಲದೆ ದಕ್ಷಿಣ ಆಫ್ರಿಕಾದಲ್ಲೂ ವರ್ಣಭೇದ ನೀತಿಯ ವಿರುದ್ಧ ಹೋರಾಡಿ, ಮನೆಮಾತಾದರು. ಇದೇ ಕಾರಣಕ್ಕೆ ದಕ್ಷಿಣ ಆಫ್ರಿಕಾದಲ್ಲಿಯೂ ಅನೇಕ ಕಡೆ ಗಾಂಧೀಜಿಯವರ ಪುತ್ಥಳಿಗಳನ್ನು ನಿರ್ಮಿಸಲಾಗಿದೆ.ಕ್ವಿಟ್ ಇಂಡಿಯಾ ಚಳುವಳಿ, ಉಪ್ಪಿನ ಸತ್ಯಾಗ್ರಹ ಮುಂತಾದ ಅನೇಕ ಶಾಂತಿಯುತ ಹೋರಾಟಗಳ ಮೂಲಕ ಬ್ರಿಟಿಷರ ವಿರುದ್ಧ ದೇಶದ ಜನರನ್ನು ಸಂಘಟಿಸಿದವರು ಮಹಾತ್ಮ ಗಾಂಧಿ. ಅವರ ಹುಟ್ಟುಹಬ್ಬವನ್ನು ಪ್ರತಿವರ್ಷ ಅ. 2ರಂದು ಆಚರಿಸಲಾಗುತ್ತದೆ. ಇಂದು ಅವರ 151ನೇ ಜನ್ಮದಿನ. ಪ್ರಧಾನಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಸಿಎಂಗಳಾದ ಹೆಚ್​.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಗಾಂಧಿ ಜಯಂತಿಗೆ ಶುಭಾಶಯ ಕೋರಿ, ಬಾಪೂಜಿಯವರನ್ನು ನೆನಪಿಸಿಕೊಂಡಿದ್ದಾರೆ.


ಸತ್ಯ, ಅಹಿಂಸೆಗಳ ನಂದಾದೀಪದ ಬೆಳಕಿನಲ್ಲಿ ಸತ್ಯಾಗ್ರಹದ ದಾರಿಯಲ್ಲಿ ನಡೆದು, ಭಾರತಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಜಯಂತಿಯಂದು ಅವರಿಗೆ ನಮ್ಮ ಅನಂತ ಪ್ರಣಾಮಗಳನ್ನು ಸಲ್ಲಿಸೋಣ. ಸ್ವಚ್ಛತೆ, ಸ್ವಾವಲಂಬಿತ್ವಗಳ ಪ್ರತಿಪಾದಕರಾಗಿದ್ದ ಗಾಂಧೀಜಿಯವರ ಕನಸನ್ನು ನನಸು ಮಾಡುವ ಸಂಕಲ್ಪ ತೊಡೋಣ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಟ್ವಿಟ್ಟರ್​ ಮೂಲಕ ಗಾಂಧೀಜಿಯನ್ನು ನೆನಪಿಸಿಕೊಂಡಿದ್ದಾರೆ.


ಸತ್ಯ, ಅಹಿಂಸೆ, ನೈತಿಕತೆ ಮತ್ತು ಸರಳತೆಯ ಹಾದಿ ಸುಗಮ ಅಲ್ಲ, ಮಹಾತ್ಮಗಾಂಧೀಜಿಯವರು ಆ ಹಾದಿಯಲ್ಲಿ ನಡೆದು ಗುರಿ ಮುಟ್ಟಬಹುದೆಂದು ತೋರಿಸಿಕೊಟ್ಟಿದ್ದಾರೆ. ನಾವೂ ಗಾಂಧಿ ಮಾರ್ಗದ ಪಥಿಕರಾಗೋಣ ಎಂದು ಗಾಂಧಿ ಜಯಂತಿಯ ಸಂದರ್ಭದಲ್ಲಿ ಶಪಥ ಮಾಡೋಣ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಶುಭಾಶಯ ಕೋರಿದ್ದಾರೆ.
ಗಾಂಧೀಜಿ ಜೊತೆಗೆ ಇಂದು ಮಾಜಿ ಪ್ರಧಾನಿ ಲಾಲ್​ ಬಹದ್ದೂರ್​ ಶಾಸ್ತ್ರಿ ಅವರು ಹುಟ್ಟಿದ ದಿನವೂ ಹೌದು. ಈ ಹಿನ್ನೆಲೆಯಲ್ಲಿ ಶುಭಾಶಯ ಕೋರಿರುವ ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ, ಸತ್ಯ ಮತ್ತು ಅಹಿಂಸಾತ್ಮಕ ಹೋರಾಟದ ಮೂಲಕ ಜಗಕೆ ಹೊಸ ಹೊಳಹು ನೀಡಿದ ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಸರಳ ವ್ಯಕ್ತಿತ್ವ, ದೃಢ ನಿರ್ಧಾರದ ಮಾಜಿ ಪ್ರಧಾನಿ ಲಾಲ್ ಬಹಾದುರ್ ಶಾಸ್ತ್ರಿ ಅವರ ಜನ್ಮ ದಿನದ ಶುಭಾಶಯಗಳು. ಜನಮಾನಸದಲ್ಲಿ ಚಿರಸ್ಥಾಯಿಯಾಗಿರುವ ಈ ಮಹಾ ಪುರುಷರ ಬದುಕಿನ ತತ್ವ, ಆದರ್ಶಗಳು ಹಾಗೂ ಮಾದರಿ ಬದುಕು ಸರ್ವಕಾಲಕ್ಕೂ ಅನುಕರಣೀಯ. ಅವರ ಹುಟ್ಟುಹಬ್ಬದ ದಿನವಾದ ಇಂದು ಅವರನ್ನು ವಿನಮ್ರವಾಗಿ ಸ್ಮರಿಸಿಕೊಳ್ಳುತ್ತೇನೆ. ಈ ಮಹಾಚೇತನಗಳ ಸಾಮಾಜಿಕ ಬದ್ಧತೆ, ಜೀವನ ಮತ್ತು ಮಾದರಿ ವ್ಯಕ್ತಿತ್ವ ನಮ್ಮೆಲ್ಲರಿಗೂ ಸ್ಫೂರ್ತಿಯ ಸೆಲೆ. ಅವರ ಸತ್ಯದ ಹಾದಿ ಮತ್ತು ಪ್ರಾಮಾಣಿಕತೆ ನಮ್ಮೆಲ್ಲರಿಗೂ ದೀವಿಗೆ ಎಂದಿದ್ದಾರೆ.

Published by:Sushma Chakre
First published: