ದಕ್ಷಿಣ ಕನ್ನಡ (Dakshiba Kannada) ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಪಡಿಬಾಗಿಲು (Padibagilu School) ಎನ್ನುವ ಶಾಲೆಯಲ್ಲಿ ಶಾಲೆಯ ಆರಂಭೋತ್ಸವದ ಸಂದರ್ಭ ಗಣಪತಿ ಹವನ (Ganapati Havana) ಮಾಡಿ ಪ್ರಾರಂಭ ಮಾಡಿದ ವಿಚಾರ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಸಂಬಂಧ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರನ್ನು ಬಂಟ್ವಾಳ (Bantwala) ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಾಥಮಿಕ ತನಿಖೆಯನ್ನು ನಡೆಸಿ ಡಿಡಿಪಿಐಗೆ (DDPI) ವರದಿ ನೀಡಿದ ಘಟನೆ ನಡೆದಿದೆ. ವಿಟ್ಲ ಹೋಬಳಿ ವ್ಯಾಪ್ತಿಯ ಪಡಿಬಾಗಿಲು ದ. ಕ. ಜಿ. ಪಂ. ಹಿ. ಪ್ರಾ ಶಾಲೆಯಲ್ಲಿ ಕಳೆದ ಹದಿನೈದು ವರ್ಷಗಳಿಂದ ಶಾಲಾ ಪ್ರಾರಂಭೋತ್ಸವದಂದು ಗಣಪತಿ ಹವನವನ್ನು ನಡೆಸಿಕೊಂಡು ಬರುವ ಸಂಪ್ರದಾಯವನ್ನು ಇಟ್ಟುಕೊಳ್ಳಲಾಗಿದೆ.
ಪ್ರತಿ ವರ್ಷದಂತೆ ಗಣಪತಿ ಹವನ ನಡೆಸಿ ಶಾಲೆ ಪ್ರಾರಂಭ ಮಾಡುವ ಬಗ್ಗೆ ಎಸ್.ಡಿ.ಎಂ.ಸಿ. 2022 ರ ಮೇ 6 ರಂದು ನಡೆಸಿದ ಸಭೆಯಲ್ಲಿ ತೀರ್ಮಾನವನ್ನು ಕೈಗೊಳ್ಳಲಾಗಿತ್ತು. ಅದರಂತೆ ಹವನವನ್ನು ನಡೆಸಲಾಗಿತ್ತು.
ಶಿಕ್ಷಣ ಇಲಾಖೆಯ ಯಾವುದೇ ಸೂಚನೆಯಲ್ಲೂ ಶಾಲಾ ಪ್ರಾರಂಭೋತ್ಸವದ ಸಮಯ ಹಿಂದು ಧಾರ್ಮಿಕ ಆಚರಣೆಯನ್ನು ಮಾಡಬಾರದೆಂದು ಮಾಹಿತಿಯಿಲ್ಲ. ಶಾಲೆ ಪ್ರಾರಂಭೋತ್ಸವದ ಸುತ್ತೋಲೆಯಲ್ಲಿಯೂ ಇಂತಹ ಆಚರಣೆ ಮಾಡಬಾರದೆಂದು ಹೇಳಿಲ್ಲ.
ಶಿಕ್ಷಣ ಇಲಾಖೆಯಿಂದ ತೀವ್ರ ವಿಚಾರಣೆ
ಶಾಲೆಯ ವಿದ್ಯಾರ್ಥಿಗಳ ಪೋಷಕರಿಂದಲೂ ಯಾವುದೇ ತಕರಾರು ಇಲ್ಲ. ಹಾಗೆಂದು ಶಿಕ್ಷಣ ಇಲಾಖೆಗೆ ದೂರು ಹೋಗಿ ಮೂರು ಮಂದಿ ಅಧಿಕಾರಗಳು ಶಾಲೆಗೆ ಬಂದು ತೀವ್ರವಾದ ವಿಚಾರಣೆಯನ್ನು ಕೈಗೊಂಡಿದ್ದಾರೆ.
ಇದನ್ನೂ ಓದಿ: Hijab Controversy: ಮಂಗಳೂರು ವಿವಿಯಲ್ಲಿ ಮತ್ತೆ ಹಿಜಾಬ್ ವಿವಾದ, ವಿದ್ಯಾರ್ಥಿಗಳಿಂದ ಪ್ರತಿಭಟನೆ
ಶಿಕ್ಷಣ ಇಲಾಖೆ ಅಧಿಕಾರಿಗಳ ಈ ವರ್ತನೆಗೆ ಶಾಲಾಭಿವೃದ್ಧಿ ಸಮಿತಿ ಹಾಗೂ ಪೋಷಕರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಶಾಲೆ ಮತ್ತು ಊರಿನಲ್ಲಿ ಯಾವುದೇ ಭೇಧ-ಭಾವವಿಲ್ಲದೆ ಅನ್ಯೋನ್ಯತೆಯಿಂದ ಇರುವ ಸಂದರ್ಭದಲ್ಲಿ ಶಾಲೆಯಲ್ಲಿ ನಡೆಯುವ ಧಾರ್ಮಿಕ ಆಚರಣೆಗೆ ಎಲ್ಲಾ ಸಮುದಾಯದ ಜನರೂ ಯಾವುದೇ ಆಕ್ಷೇಪಣೆಯನ್ನು ಮಾಡಿಲ್ಲ.
ಅಧಿಕಾರಿಗಳಿಂದಲೇ ವಿವಾದ: ಗ್ರಾಮಸ್ಥರ ಆರೋಪ
ಶಾಲೆ ಆರಂಭಗೊಂಡಂದಿನಿಂದ ಶೈಕ್ಷಣಿಕ ವರ್ಷ ಆರಂಭಗೊಂಡಾಗ ಪ್ರತಿ ವರ್ಷ ಶಾಲೆಯಲ್ಲಿ ಗಣಪತಿ ಹವನ ಮಾಡಿಕೊಂಡು ಬರಲಾಗುತ್ತಿದೆ. ಈ ಬಾರಿಯೂ ಗಣಪತಿ ಹವನವನ್ನು ಮಾಡಲಾಗಿದೆ. ಎಲ್ಲಾ ಪೋಷಕರೂ ಇದಕ್ಕೆ ತಮ್ಮ ಬೆಂಬಲ-ಸಹಕಾರವನ್ನೂ ನೀಡಿದ್ದಾರೆ. ಆದರೆ ಯಾವುದೇ ದೂರುಗಳಿಲ್ಲದಿದ್ದರೂ ಶಿಕ್ಷಣ ಇಲಾಖೆ ಅಧಿಕಾರಿಗಳು ಸುಖಾಸುಮ್ಮನೆ ಈ ವಿಚಾರವನ್ನು ವಿವಾದವಾಗಿ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಶಾಲೆಯಲ್ಲಿ ಪ್ರತಿ ಗುರುವಾರ ಭಜನೆ
ಶಾಲೆಯಲ್ಲಿ ಪ್ರತಿ ಗುರುವಾರ ಈಗಲೂ ಭಜನೆಯನ್ನು ಮಾಡಲಾಗುತ್ತಿದ್ದು, ಎಲ್ಲಾ ಮಕ್ಕಳೂ ಇದರಲ್ಲಿ ಭಾಗವಹಿಸುತ್ತಿರುವಾಗ ಅಧಿಕಾರಿಗಳೇಕೆ ಈ ರೀತಿಯ ವರ್ತನೆ ತೋರುತ್ತಿದ್ದಾರೆ ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.
ಶಾಲೆಯಲ್ಲಿ ಸಮಾನತೆ ಇರಬೇಕು ಅಂದ್ರ ಡಿಡಿಪಿಐ
ಈ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಡಿ.ಡಿ.ಪಿ.ಐ ಸುಧಾಕರ್, ಸರ್ಕಾರದ ಹಾಗೂ ನ್ಯಾಯಲಯದ ಆದೇಶವನ್ನು ಕಾಲಕಾಲಕ್ಕೆ ಪಾಲಿಸಬೇಕಾಗುತ್ತದೆ. ಶಾಲೆಗಳಲ್ಲಿ ಧಾರ್ಮಿಕವಾಗಿ ಯಾವುದೇ ಸಮಸ್ಯೆಯಾಗಬಾರದು ಮತ್ತು ಸಮಾತನೆ ಇರಬೇಕು. ಶಾಲೆಯವರಲ್ಲಿ ಬಂಟ್ವಾಳ ಬಿ.ಇ.ಒ. ಮಾಹಿತಿಯನ್ನು ಕೇಳಿದ್ದಾರೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ.
ಹವನ ನಡೆಸಿದ ಕಾರಣಕ್ಕೆ ತಮ್ಮನ್ನು ವಿಚಾರಣೆ ನಡೆಸಿದ ಹಿನ್ನೆಲೆಯಲ್ಲಿ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಬಾಲಕೃಷ್ಣ ಕಾರಂತ್ ಇದೀಗ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ.
ಇದನ್ನೂ ಓದಿ: Govt School: ಈ ಶಾಲೆಯಲ್ಲಿಲ್ಲ ಕೊಠಡಿ ವ್ಯವಸ್ಥೆ : ಪೋಷಕರಿಂದ ಮಕ್ಕಳ ಕಳುಹಿಸದೆ ಪ್ರತಿಭಟನೆ
ಗ್ರಾಮಸ್ಥರ ಆಕ್ರೋಶ
ಈ ಬೆಳವಣಿಗೆ ಇದೀಗ ಮತ್ತೆ ವಿವಾದಕ್ಕೆ ಕಾರಣವಾಗಿದ್ದು, ಶಾಲೆ ಮುಚ್ಚಿ ಹೋಗುವ ಸಂದರ್ಭದಲ್ಲಿ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿ ಗ್ರಾಮಸ್ಥರು ಶಾಲೆಯನ್ನು ಮುಂದುವರಿಯುವಂತೆ ಮಾಡಿದ್ದಾರೆ. ಆಗ ಶಾಲೆಯ ಬಗ್ಗೆ ಇಲ್ಲದ ಕಾಳಜಿ ಅಧಿಕಾರಿಗಳಿಗೆ ಈಗ ಬರಲು ಕಾರಣವೇನು ಎನ್ನುವ ಪ್ರಶ್ನೆಯನ್ನೂ ಗ್ರಾಮಸ್ಥರು ಹಾಕಲಾರಂಭಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ