CA Exam: ಸಿಎ ಪರೀಕ್ಷೆಯಲ್ಲಿ ದೇಶಕ್ಕೆ 10 ರ‍್ಯಾಂಕ್ ಪಡೆದ ಗದುಗಿನ ಯುವಕ​

ಪೋಷಕರೊಂದಿಗೆ ಆದಿತ್ಯ ಅಡಿಗ

ಪೋಷಕರೊಂದಿಗೆ ಆದಿತ್ಯ ಅಡಿಗ

ಆದಿತ್ಯ ಅಗಡಿ ಪಿಯುಸಿ ಮುಗಿದ ತಕ್ಷಣವೇ ಸಿಎ ಫೌಂಡೇಷನ್ ಪರೀಕ್ಷೆ ಪಾಸು ಮಾಡುವ ಮೂಲಕ ನೇರವಾಗಿ ಸಿಎ ಇಂಟರ್ ಪರೀಕ್ಷೆಗೆ ಅರ್ಹತೆಗಳಿಸಿದ್ದಾ‌ನೆ.

  • Share this:

ಗದಗ (ಫೆ. 10): ಮುದ್ರಣ ಕಾಶಿ ಗದುಗಿನ 24 ವರ್ಷದ ಯುವಕ ಆದಿತ್ಯ ಅಡಿಗ ಇದೀಗ ರಾಜ್ಯಕ್ಕೆ ಮಾದರಿಯಾಗಿದ್ದಾನೆ. ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್  ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿದ ಚಾರ್ಟೆಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಆದಿತ್ಯ ದೇಶಕ್ಕೆ 10 ನೇ ರ‍್ಯಾಂಕ್ ಪಡೆದಿದ್ದಾನೆ. ನಗರದ ಕಲಾಮಂದಿರ ರಸ್ತೆಯ ನಿವಾಸಿ ಚಂದ್ರಶೇಖರ್ ಅಡಿಗ ಮತ್ತು ಸುಜಾತಾ ಅಡಿಗ ದಂಪತಿಯ ಒಬ್ಬನೇ ಮಗ ಆದಿತ್ಯ. ಪ್ರಾಥಮಿಕದಿಂದ ಪಿಯುಸಿವರೆಗೂ ಆದಿತ್ಯ ವಿದ್ಯಾಭ್ಯಾಸದಲ್ಲಿ ಮುಂದಿದ್ದ. ಎಲ್ಲಾ ವಿದ್ಯಾರ್ಥಿಗಳು ಪಿಯುಸಿ ಮುಗಿದ ನಂತರ ಪದವಿ ಶಿಕ್ಷಣದತ್ತ ಮುಖ ಮಾಡಿದ್ರೆ ಆದಿತ್ಯ ಮಾತ್ರ ಸ್ವಲ್ಪ ವಿಭಿನ್ನವಾಗಿ ಹೆಜ್ಜೆಯಿಟ್ಟಿದ್ದಾನೆ. ತಂದೆ ಮೊದಲಿನಿಂದಲೂ ದೇವಸ್ಥಾನದ ಪೌರೋಹಿತ್ಯ, ಜ್ಯೋತಿಷ್ಯದ ಅಲ್ಪ ಆದಾಯದಲ್ಲೇ ಕಷ್ಟಕಟ್ಟು ಜಿವನ ನಡೆಸಿದವರು. ಇದನ್ನ ಅರಿತ‌ ಆದಿತ್ಯ ಏನಾದರೂ ಸಾಧನೆ ಮಾಡಬೇಕು ಎನ್ನುವ ಸಂಕಲ್ಪ ಮಾಡಿದ್ದ. ಹೀಗಾಗಿ ಕಠಿಣವಾದ ಲೆಕ್ಕ ಪರಿಶೋಧಕ ಪರೀಕ್ಷೆಯಲ್ಲಿ ಶೇ.56.12 ರಷ್ಟು ಅಂಕಗಳಿಸಿ ದೇಶಕ್ಕೆ 10 ನೇ ಸ್ಥಾನ ಪಡೆದು  ಸಾಧನೆ ಮಾಡಿದ್ದಾನೆ.


ಇನ್ನು ಆದಿತ್ಯ ಸಿಎ ಓದಲು ಹೆಚ್ಚಿನ ಕೋಚಿಂಗ್ ಮೊರೆ ಹೋಗಿಲ್ಲ‌. ಸಿಎ ಇಂಟರ್ ಪರೀಕ್ಷೆ ಬಳಿಕ 2016 ರಿಂದ 2019 ರವರೆಗೆ ಬೆಂಗಳೂರಿನ ಆರ್.ಜಿ.ಎನ್ ಪ್ರೈಸ್ ಕಂಪನಿಯಲ್ಲಿ ಆರ್ಟಿಕಲ್ ಅಸಿಸ್ಟೆಂಟ್ ಆಗಿ ಕೆಲಸ ನಿರ್ವಹಿಸಿದ. ಇನ್ನು ತನ್ನ ಅಕ್ಕ ಕೂಡಾ ಸಿಎ ಆಗಿದ್ದು ಅವರ ಮಾರ್ಗದರ್ಶನ ಮತ್ತು ಲಾಕ್ಡೌನ್ ಸಮಯದಲ್ಲಿ 10-12 ಗಂಟೆಗಳ ಕಾಲ ನಿರಂತರ ಅಭ್ಯಾಸ ಮಾಡಿದ್ದಾನೆ. ಕಳೆದ ನವೆಂಬರ್​ನಲ್ಲಿ ನಡೆದ ಸಿಎ ಪರೀಕ್ಷೆಯಲ್ಲಿ ಗ್ರೂಪ್-1 ವಿಭಾಗದಲ್ಲಿ 12,026 ಅಭ್ಯರ್ಥಿಗಳು ಪರೀಕ್ಷೆ ಎದುರಿಸಿದ್ದು, 2145 ಜನರು ಉತ್ತೀರ್ಣರಾಗಿದ್ದಾರೆ. ಗ್ರೂಪ್-2 ವಿಭಾಗದಲ್ಲಿ 17132 ಅಭ್ಯರ್ಥಿಗಳಲ್ಲಿ 5442 ಜನರು ತೇರ್ಗಡೆಯಾಗಿದ್ದಾರೆ. ಗ್ರೂಪ್​ 1 ಮತ್ತು 2 ಎರಡನ್ನೂ ಆಯ್ದುಕೊಂಡಿದ್ದ 4,143 ಅಭ್ಯರ್ಥಿಗಳಲ್ಲಿ ಕೇವಲ 242 ಜನ ಉತ್ತೀರ್ಣರಾಗಿದ್ದು ಈ ಪೈಕಿ ಗದುಗಿನ ಆದಿತ್ಯ ಚಂದ್ರಶೇಖರ್ ಅಡಿಗ ಕೂಡಾ ಒಬ್ಬರು. ಒಟ್ಟು 800 ಅಂಕಗಳಲ್ಲಿ 449 ಅಂಕ ಪಡೆದು ಜಿಲ್ಲೆಗೆ ಕೀರ್ತಿ ತ‌ಂದಿದ್ದಾನೆ. ಸಾಮಾನ್ಯವಾಗಿ ಬಿಕಾಂ, ಎಂ.ಕಾಂ, ಎಂಬಿಎ ಪದವೀಧರರು ಸಿಎ ಪರೀಕ್ಷೆ ಪಾಸು ಮಾಡಲು ಇನ್ನಿಲ್ಲದ ಕಸರತ್ತು ನಡೆಸುತ್ತಾರೆ. ಆದರೆ, ಆದಿತ್ಯ ಅಗಡಿ ಪಿಯುಸಿ ಮುಗಿದ ತಕ್ಷಣವೇ ಸಿಎ ಫೌಂಡೇಷನ್ ಪರೀಕ್ಷೆ ಪಾಸು ಮಾಡುವ ಮೂಲಕ ನೇರವಾಗಿ ಸಿಎ ಇಂಟರ್ ಪರೀಕ್ಷೆಗೆ ಅರ್ಹತೆಗಳಿಸಿದ್ದಾ‌ನೆ.


ಇದನ್ನು ಓದಿ: ದೇವಾಲಯದ ಜಾಗವೆಂದು ಶಾಲೆ ತೆರವಿಗೆ ಪತ್ರ ಬರೆದ ದೇವಾಲಯ ಸಮಿತಿ


ಇಂಟರ್​ನಲ್ಲೂ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದ ಆದಿತ್ಯ, ಸಿಎ ಅಂತಿಮ ಪರೀಕ್ಷೆಯನ್ನು ಎರಡನೇ ಪ್ರಯತ್ನದಲ್ಲಿ ದೇಶಕ್ಕೆ ಟಾಪ್-10 ಆಗಿ ಹೊರಹೊಮ್ಮಿದ್ದು ವಿಶೇಷ. ಮಗನ ಸಾಧನೆ ಕಂಡು ತಂದೆ ಚಂದ್ರಶೇಖರ ಅಡಿಗ ಅವರು ಹೆಮ್ಮೆ ಪಡ್ತಾಯಿದ್ದಾರೆ.


ಪುರೋಹಿತರಾದ ಆದಿತ್ಯ ತಂದೆ ಮಧ್ಯಮ ಕುಟುಂಬದವರಾಗಿದ್ದು ಆದಿತ್ಯ ಓದಿಗೆ ಹೆಚ್ಚು ಸೌಲಭ್ಯ ಕಲ್ಪಿಸಲಾಗಲಿಲ್ಲ ಅನ್ನೋ ಕೊರಗು ಇತ್ತು. ಆದರೆ ಇದೀಗ ಮಗನ ಸಾಧನೆ‌ ನೋಡಿ ತಂದೆ ತಾಯಿ ಇಬ್ಬರಿಗೂ ಕಷ್ಟ ಮತ್ತು ಸುಖದ ಸಾರ್ಥಕತೆ ತಂದೊಡ್ಡಿದೆ. ಒಟ್ಟಾರೆ ಛಲದಂಕ‌ ಮಲ್ಲನಂತೆ ಆದಿತ್ಯ ಕಷ್ಟ ಪಟ್ಟು ಓದಿ ಸಿಎ ಪರೀಕ್ಷೆನಲ್ಲಿ ಏಕಲವ್ಯನ ತರ ಸಾಧನೆ ಮಾಡಿದ್ದು ಜಿಲ್ಲೆಯ ಜನತೆಗೆ ಕೀರ್ತಿ ಹೆಚ್ಚಿಸಿದೆ..


(ವರದಿ: ಸಂತೋಷ ಕೊಣ್ಣೂರ)

First published: