ಗದಗ: ಜಿಲ್ಲೆಯ ನರಗುಂದ ತಾಲೂಕಿನ ಹದ್ಲಿ (Hadli, Naragunda) ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಎರಡು ಕೊಲೆಗಳು ಇಡೀ ಗ್ರಾಮವನ್ನೇ ಬೆಚ್ಚಿ ಬೀಳಿಸಿತ್ತು. ಶಿಕ್ಷಕಿ ಗೀತಾ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ (KIMS, Hubballi) ನಿಧನರಾದ್ರೆ, ನಾಲ್ಕನೇ ತರಗತಿ ಓದುತ್ತಿದ್ದ ಮಗ ಶಾಲಾ ಆವರಣದಲ್ಲಿ ಕೊನೆಯುಸಿರು ಎಳೆದಿದ್ದನು. ಕೊಲೆಯ ಹಿಂದೆ ಶಿಕ್ಷಕಿ ಗೀತಾಳ ಅಕ್ರಮ ಸಂಬಂಧ (Illicit Relationship) ಇತ್ತು. ಶಿಕ್ಷಕಿ ಗೀತಾ ತನ್ನದೇ ಶಾಲೆಯ ಅತಿಥಿ ಶಿಕ್ಷಕ ಮುತ್ತಪ್ಪ ಎಂಬಾತನ ಜೊತೆ ಸಲುಗೆಯಿಂದ ಇದ್ದರು. ಆದ್ರೆ ಇತ್ತೀಚೆಗೆ ಶೈಕ್ಷಣಿಕ ಪ್ರವಾಸಕ್ಕೆ (Tour) ತೆರಳಿದ್ದ ವೇಳೆ ಅದೇ ಶಾಲೆಯ ಮತ್ತೋರ್ವ ಸಹ ಶಿಕ್ಷಕ ಸಂಗನಗೌಡ ಜೊತೆ ಆತ್ಮೀಯವಾಗಿ ಕಾಣಿಸಿಕೊಂಡಿದ್ದು ಮುತ್ತಪ್ಪನ ಕೋಪಕ್ಕೆ ಕಾರಣವಾಗಿತ್ತು. ಕೋಪದಲ್ಲಿಯೇ ಶಾಲೆಗೆ ನುಗ್ಗಿದ್ದ ಮುತ್ತಪ್ಪ, ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ ಗೀತಾ ಪುತ್ರನನ್ನು ಕಟ್ಟಡದ ಮೇಲ್ಭಾಗ ಎಳೆದುಕೊಂಡು ಹೋಗಿ ಕೆಳಗೆ ಎಸೆದು ಕೊಲೆ ಮಾಡಿದ್ದನು. ನಂತರ ಶಾಲೆಯಲ್ಲಿದ್ದ ಸಲಾಕೆಯಿಂದ ಹೊಡೆದು ಗೀತಾ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಎಸ್ಕೇಪ್ ಆಗಿದ್ದನು.
ಎರಡು ದಿನಗಳ ಬಳಿಕ ಗೀತಾ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು. ಮತ್ತೊಂದು ಕಡೆ ಮುತ್ತಪ್ಪನನ್ನು ಬಂಧಿಸಿ, ಪೊಲೀಸರು ಜೈಲಿಗಟ್ಟಿದ್ದಾರೆ. ಅಕ್ರಮ ಸಂಬಂಧ ಎರಡು ಜೀವಗಳನ್ನು ಬಲಿ ಪಡೆದುಕೊಂಡರೆ, ಓರ್ವ ಕತ್ತಲು ಕೋಣೆ ಸೇರುವಲ್ಲಿ ಅಂತ್ಯವಾಗಿತ್ತು.
ಗೀತಾ ಮೇಲೆ ಅವಲಂಬಿತವಾಗಿದ್ದ ಕುಟುಂಬ
ಆದರೆ ಈ ಇಬ್ಬರನ್ನು ನಂಬಿಕೊಂಡಿದ್ದವರ ಜೀವನದಲ್ಲಿ ಕತ್ತಲು ಆವರಿಸಿದೆ. ಗೀತಾ ಮೇಲೆ ಅವಲಂಬಿತರಾಗಿದ್ದ ಆಕೆಯ ಪತಿ ಯಲ್ಲಪ್ಪ ಮತ್ತು 12 ವರ್ಷದ ಮಗಳು ಅನಾಥರಂತೆ ಬದುಕುತ್ತಿದ್ದಾರೆ.
ಗೀತಾ ಓರ್ವ ಮಗ ಭರತ್ ಸಾವನ್ನಪ್ಪಿದ್ರೆ, ಶಿಕ್ಷಕಿಗೆ 12 ವರ್ಷದ ಮಗಳು ಸಹ ಇದ್ದಾಳೆ. ಇತ್ತ ಗೀತಾ ಪತಿ ಯಲ್ಲಪ್ಪ ಹಾಸಿಗೆ ಹಿಡಿದಿದ್ದಾರೆ. ಕೆಲ ವರ್ಷಗಳ ಹಿಂದೆ ಅಪಘಾತದಲ್ಲಿ ಗಾಯಗೊಂಡಿದ್ದ ಗೀತಾ ಪತಿ ಯಲ್ಲಪ್ಪ, ಕೆಲಸ ಮಾಡದ ಸ್ಥಿತಿಯಲ್ಲಿಲ್ಲ. ಆದ್ದರಿಂದ ಗೀತಾ ಕೆಲಸ ಮಾಡುತ್ತಾ ಕುಟುಂಬಕ್ಕೆ ಆಸರೆಯಾಗಿದ್ದರು. ಇಡೀ ಕುಟುಂಬ ಗೀತಾ ದುಡಿಮೆಯ ಮೇಲೆಯೇ ಅವಲಂಬಿತವಾಗಿತ್ತು.
ಅಜ್ಜಿಯ ಆಶ್ರಯದಲ್ಲಿ ಗೀತಾ ಮಗಳು
ಇದೀಗ ಗೀತಾ ಸಾವನ್ನಪ್ಪಿದ್ದರಿಂದ ಯಲ್ಲಪ್ಪ ತಾಯಿ ಲಕ್ಷ್ಮವ್ವ ಅವರ ಆರೈಕೆದಲ್ಲಿದ್ದಾರೆ. ಸದ್ಯ ಮಗಳು ಗೀತಾ ತಾಯಿ ರತ್ನಮ್ಮರ ಆಶ್ರಯದಲ್ಲಿ ಬೆಳೆಯುತ್ತಿದ್ದಾಳೆ. 12 ವರ್ಷದ ಮಗಳು ಅಮ್ಮನಿಲ್ಲದೇ, ತಂದೆ ಇದ್ದರೂ ಇಲ್ಲದಂತಾಗಿದ್ದಾರೆ. ಆದ್ದರಿಂದ ಗೀತಾ ಮಗಳು ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆ ಮೊಣ್ಣರು ಗ್ರಾಮದಲ್ಲಿದ್ದಾಳೆ.
ಸದ್ಯ ಗೀತಾಳ ಮಗಳು ನವೋದಯ ಶಾಲೆಯಲ್ಲಿ ಆರನೇ ತರಗತಿ ಓದುತ್ತಿದ್ದಾಳೆ. ಸೋದರ ಯಲ್ಲಪ್ಪ ಕೆಲಸ ಮಾಡದ ಸ್ಥಿತಿಯಲ್ಲಿದ್ದಾನೆ. ಇತ್ತ ನಾವು ಸಹ ಆರ್ಥಿಕವಾಗಿ ಸಬಲರಾಗಿಲ್ಲ. ಅತ್ತ ಗೀತಾ ಪೋಷಕರು ಸಹ ಬಡವರು. ಅಜ್ಜಿ ಇರೋವರೆಗೂ ಮಗಳು ಅಲ್ಲಿ ಇರುತ್ತಾಳೆ. ಮುಂದೆ ಆಕೆಯ ಭವಿಷ್ಯ ಏನು ಎಂಬುವುದು ತಿಳಿಯುತ್ತಿಲ್ಲ. ಮಗಳ ಭವಿಷ್ಯಕ್ಕಾಗಿ ಸಹಾಯ ಮಾಡುವಂತೆ ಯಲ್ಲಪ್ಪ ಅವರ ಸೋದರ ಮನವಿ ಮಾಡಿಕೊಂಡಿದ್ದಾರೆ.
ಅಮ್ಮನ ಆಶ್ರಯದಲ್ಲಿ ಗೀತಾ ಪತಿ
ಇನ್ನು ಯಲ್ಲಪ್ಪ ಅವರ ಸ್ಥಿತಿ ಸಹ ಇದಕ್ಕಿಂತ ಭಿನ್ನವಾಗಿಲ್ಲ. ಅಮ್ಮ ಇರೋವರೆಗೂ ಮಗನನ್ನು ನೋಡಿಕೊಳ್ಳುತ್ತಾನೆ. ಇಳಿ ವಯಸ್ಸಿನಲ್ಲಿ ತಾಯಿಗೆ ಆಸರೆ ಆಗಬೇಕಿದ್ದ ಮಗ ಹಾಸಿಗೆ ಹಿಡಿದಿದ್ದಾನೆ. ಜೊತೆಯಾಗಿ ಇರುತ್ತೇನೆ ಎಂದು ಸಪ್ತಪದಿ ತುಳಿದಿದ್ದ ಪತ್ನಿ ಅಕ್ರಮ ಸಂಬಂಧಕ್ಕೆ ಬಲಿಯಾಗಿದ್ದಾಳೆ.
ತ್ರಿಕೋನ ಪ್ರೇಮ ಕಥೆಯಲ್ಲಿ ಒಬ್ಬ ಜೈಲು ಸೇರಿದ್ರೆ, ಮತ್ತೊಬ್ಬ ಸಹ ಶಿಕ್ಷಕ ಸಂಗನಗೌಡ ಅದೇ ಶಾಲೆಯಲ್ಲಿ ಸೇವೆ ಮುಂದುವರಿಸಿದ್ದಾರೆ. ಜೈಲುಪಾಲಾಗಿರುವ ಮುತ್ತಪ್ಪನ ಪತ್ನಿ ಹಾಗೂ ಕುಟುಂಬಸ್ಥರು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ