ಇದ್ದರೂ ಇಲ್ಲದಂತಿರೋ ಊರು; ಕಂದಾಯ ಇಲಾಖೆಗೆ ಒಳಪಡದೇ ಸೌಲಭ್ಯ ವಂಚಿತರಾಗುತ್ತಿರುವ ಗ್ರಾಮಸ್ಥರು

ತಾಂಬ್ರಗುಂಡಿ

ತಾಂಬ್ರಗುಂಡಿ

 • Share this:
  ಗದಗ (ಏ. 24): ಅದು ಐತಿಹಾಸಿಕ ಪುಟ್ಟ ಹಳ್ಳಿ. 10ನೇ ಶತಮಾನದಲ್ಲಿ ಚಾಲುಕ್ಯರು ಆಡಳಿತ ಕೇಂದ್ರವನ್ನಾಗಿಸಿದ್ದ‌ ಗ್ರಾಮ. ಪ್ಲೇಗ್, ಕಾಲರಾ ಹಲವು ಕಾರಣಗಳಿಂದ ಆ ಗ್ರಾಮ ಸ್ಥಳಾಂತರವಾಗಿ 3 ಶತಮಾನ ಕಳೆದಿವೆ. ಆದರೂ ಇಂದಿಗೂ ಸಹ ಆ ಗ್ರಾಮ ಕಂದಾಯ ಇಲಾಖೆಗೆ ಒಳಪಟ್ಟಿಲ್ಲ, ಲೋಕೋಪಯೋಗಿ ಇಲಾಖೆ ನಕ್ಷೆಯಲ್ಲಿ ಹೆಸರಿಲ್ಲ. ಇದರಿಂದ ಆ ಗ್ರಾಮದ ಜನರು ಪಡುವ ಕಷ್ಟ ಅಷ್ಟಿಷ್ಟಲ್ಲ. ಜಿಲ್ಲೆಯ ಮುಂಡರಗಿ ತಾಲೂಕಿನ ತಾಂಬ್ರಗುಂಡಿ ಎಂಬ ಗ್ರಾಮದ ಜನರು ಮೊದಲು ಸರ್ವೇ ನಂಬರ್ 226/1 ರಲ್ಲಿ ವಾಸವಿದ್ದರು. 300 ವರ್ಷಗಳ ಹಿಂದೆ, ಪ್ಲೇಗ್, ಕಾಲರಾ, ಬ್ರಹ್ಮ ರಾಕ್ಷಸಗಳ ಕಾಟ ಎಂಬ ಹಲವು ಕಾರಣಗಳಿಂದ ಊರು ತೊರೆದರು. ಅಲ್ಲಿಂದ 2 ಕಿಲೋಮೀಟರ್ ದೂರಬಂದು ಸರ್ವೇ ನಂಬರ್ 77 ಮತ್ತು 78ರಲ್ಲಿ ಹೊಸ ಊರು ಕಟ್ಟಿಕೊಂಡು ವಾಸ ಮಾಡಲಾರಂಭಿಸಿದರು. ಮೂರು ಶತಮಾನ ಕಳೆದರೂ ಈ  ಗ್ರಾಮ‌ ಕಂದಾಯಕ್ಕೊಳಪಟ್ಟಿಲ್ಲ.

  ಜಿಲ್ಲೆಯ ಲೋಕೋಪಯೋಗಿ ಇಲಾಖೆಯ ನಕ್ಷೆಯಲ್ಲಿ ಹೆಸರಿಲ್ಲ. ಇದರಿಂದ ಈ ಊರಿಗೆ ಒಂದೇ ಒಂದು ರಸ್ತೆಯಿಲ್ಲ. ಲೋಕೋಪಯೋಗಿ ನಕ್ಷೆಯಲ್ಲಿ ಪಾಳುಬಿದ್ದ ಗ್ರಾಮವನ್ನೇ ತೋರಿಸುತ್ತಿದೆ. ಇದರಿಂದ ಈ ಗ್ರಾಮ ಮೂಲಭೂತ ಸೌಕರ್ಯಗಳ ವಂಚಿತವಾಗಿದೆ. ಯಾವೊಬ್ಬ ಅಧಿಕಾರಿಗಳು, ಜನಪ್ರತಿನಿಧಿಗಳು ನಮ್ಮ ಕಷ್ಟ ಆಲಿಸುತ್ತಿಲ್ಲ ಅಂತ ಅಳಲು ತೋಡಿಕೊಳ್ಳುತ್ತಿದ್ದಾರೆ ಸ್ಥಳಿಯರು.

  ಸುಮಾರು 1400 ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಈ ತಾಬ್ರಗುಂಡಿ ಗ್ರಾಮದ ಪಕ್ಕದ ಹಾರೋಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಟ್ಟಿದೆ. ಗ್ರಾಮದಲ್ಲಿ ಕೇವಲ ಪ್ರಾಥಮಿಕ‌ ಶಾಲೆ ಮಾತ್ರ ಇದೆ. ಹೆಚ್ಚಿನ ವ್ಯಾಸಂಗಕ್ಕೆ ಹೋಗುವವರು ನಾಲ್ಕು ಕಿಲೋಮೀಟರ್ ಬರದೂರ ಗ್ರಾಮಕ್ಕೆ ನಡೆದು ಹೋಗಬೇಕು. ಸರಿಯಾದ ರಸ್ತೆ ಇಲ್ಲದಕ್ಕೆ, ಬಸ್ ವ್ಯವಸ್ಥೆ ಸಹ ಇಲ್ಲವಾಗಿದೆ. ಗ್ರಾಮದಿಂದ ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಹೊರ‌ ಹೋಗಬೇಕಂದರೆ ಜೀವ ಕೈಯಲ್ಲಿ ಹಿಡಿದು ಹೋಗಬೇಕು.

  ಇದನ್ನು ಓದಿ: ಕೋವಿಡ್​ಗೆ ಕ್ರಿಕೆಟರ್​ ವೇದಾ ಕೃಷ್ಣಮೂರ್ತಿ ತಾಯಿ ಬಲಿ; ಸೋಂಕಿನಿಂದ ಬಳಲುತ್ತಿದೆ ಇಡೀ ಕುಟುಂಬ

  ಗ್ರಾಮದಿಂದ ಮುಖ್ಯ ರಸ್ತೆಗೆ ಬರಲು ಸುಮಾರು 4 ಕಿಲೋಮೀಟರ್ ರೈತರ ಜಮೀನುಗಳಿಗೆ ಹೋಗುವ ರಸ್ತೆನಲ್ಲಿ ಹಾಯಿದು ಬರಬೇಕು. ಜೊತೆಗೆ ಬ್ರಿಡ್ಜ ಕಂ ಬ್ಯಾರೇಜ್ ಮೇಲಿರೋ ಕಿರಿದಾದ ಸೇತುವೆ ಮೇಲೆ ಬರಬೇಕು. ಸಣ್ಣ ನೀರಾವರಿ ನಿಗಮದ ಈ ಬ್ರಿಡ್ಜ್ ನ ರಸ್ತೆಯಲ್ಲಿ ಯಾವುದೇ ವಾಹನ ಚಲಾಯಿಸುವ ಪರವಾನಿಗೆ ಇಲ್ಲ‌‌. ಆದರೆ ಈ ರಸ್ತೆ ಬಿಟ್ಟರೆ ಬೇರೆ ಗತಿನೇ ಇಲ್ಲ. ಮಳೆಗಾಲದಲ್ಲಿ ಇವರ ಪಾಡು ಕೇಳತೀರದು. ಗ್ರಾಮದಲ್ಲಿ ಯಾರಿಗಾದ್ರು ಆರೋಗ್ಯದಲ್ಲೆ ಹೆಚ್ಚು ಕಡಿಮೆಯಾದ್ರೆ ಆಂಬ್ಯುಲೆನ್ಸ್‌ ಪೋನ್‌ ಮಾಡಿದರೆ ಒಂದು ತಾಸು ಬೇಕಾಗುತ್ತಂತೆ. ಹೀಗಾಗಿ ಗ್ರಾಮಕ್ಕೆ ಆಂಬ್ಯುಲೆನ್ಸ್​ ಸಹ ಬರುವುದಕ್ಕೆ ಹಿಂದೆ ಮುಂದೆ ಯೋಜನೆ ಮಾಡುತ್ತಾರೆ ಎಂದು  ಗ್ರಾಮಸ್ಥರು ಗೋಳಾಡುತ್ತಿದ್ದಾರೆ.

  ಈಗಾಗಲೇ ಹಲವಾರು ಬಾರಿ ಸಮಸ್ಯೆ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ. ಆದರೆ ಈ ವರೆಗೂ ಯಾರೋಬ್ಬರು ಈ ಪುಟ್ಟಹಳ್ಳಿಯತ್ತ ತಿರುಗಿ ನೋಡಿಲ್ಲ‌. ನಮ್ಮೂರಿಗೆ ರಸ್ತೆ ಮಾಡಿಕೊಡಿ ಅಂದರೆ, ನಿಮ್ಮೂರು ನಕ್ಷೆಯಲ್ಲಿ ಇಲ್ಲ. ಹಾಗಾಗಿ ಟೆಂಡರ್ ಕರೆಯೋಕೆ ಆಗಲ್ಲ. ಸದ್ಯಕ್ಕೆ ರಸ್ತೆ ಇಲ್ಲ ಎಂದು ಉತ್ತರಿಸುತ್ತಾರೆ. ಇನ್ನಾದರೂ ಈ ಬಗ್ಗೆ ಅಧಿಕಾರಿಗಳು ಎಚ್ಚೆತ್ತು ತಾಂಬ್ರಗುಂಡಿ ಗ್ರಾಮವನ್ನ ಕಂದಾಯ ಇಲಾಖೆ ನಕ್ಷೆಯಲ್ಲಿ ಸೇರಿಸಿ ಗ್ರಾಮದ ರಸ್ತೆ ಹಾಗೂ ಮೂಲಭೂತ ಸೌಕರ್ಯ ದೊರೆಯುವಂತೆ ಮಾಡಲಿ ಎಂಬುದು ಗ್ರಾಮಸ್ಥರ ಬೇಡಿಕೆಯಾಗಿದೆ.

  (ವರದಿ: ಸಂತೋಷ ಕೊಣ್ಣೂರ)
  Published by:Seema R
  First published: