news18-kannada Updated:January 19, 2021, 7:44 AM IST
ಸಾವನ್ನಪ್ಪಿದ ಹಸುವಿನ ಮುಂದೆ ರೈತ
ಗದಗ (ಜ. 19): ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕಕ್ಕೂರು ಗ್ರಾಮ ಹೈನುಗಾರಿಕೆಗೆಗೆ ಬಹಳ ಫೇಮಸ್. ಅಲ್ಲಿನ ಜನರು ದಿನನಿತ್ಯ ಹಾಲು ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ, ಈಗ ಅವರ ಆದಾಯಕ್ಕೆ ಹೊಡೆತ ಬಿದ್ದಂತಾಗಿದೆ. ಆದಾಯ ನೀಡುವ ಹಸುಗಳು ರೋಗದಿಂದ ಬಳಲಿ ಸಾವನ್ನಪ್ಪುತ್ತಿವೆ. ಸಕಾಲಕ್ಕೆ ಹಸುಗಳಿಗೆ ಚಿಕಿತ್ಸೆ ನೀಡದಿಕ್ಕೆ ನರಳಿ ನರಳಿ ಸಾವನ್ನಪ್ಪುತ್ತಿವೆ. ಹೀಗಾಗಿ ಗ್ರಾಮದ ಜನರು ಹೈರಾಣಾಗಿ ಹೋಗಿದ್ದಾರೆ.
ಕೊರೊನಾ ಸಮಯದಲ್ಲಿ ಅದೆಷ್ಟೋ ಜನರು ಉದ್ಯೋಗ ಕಳೆದುಕೊಂಡು ಕಷ್ಟದ ಜೀವನ ನಡೆಸುತ್ತಿದ್ದಾರೆ. ಆದರೆ, ಈ ಗ್ರಾಮದ ಜನರು ಮಾತ್ರ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕಕ್ಕೂರು ತಾಂಡಾ ನಿವಾಸಿಗಳು ನೆಮ್ಮದಿಯ ಜೀವನ ನಡೆಸಲು ಕಾರಣ ಇಲ್ಲಿನ ಹೈನುಗಾರಿಕೆ. ಗ್ರಾಮದ ಸುಮಾರು 450 ಕುಟುಂಬಗಳ ಪೈಕಿ, 400 ಕುಟುಂಬಗಳು ಹೈನುಗಾರಿಕೆ ಮಾಡುತ್ತಿದ್ದಾರೆ. ಸುಮಾರು 1000 ಕ್ಕೂ ಹೆಚ್ಚು ಹಾಲು ನೀಡುವ ಹಸುಗಳಿಂದ ನಿತ್ಯ ಹಾಲು ಮಾರಾಟ ಮಾಡಿ ಇದ್ದಿದ್ದರಲ್ಲಿಯೇ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಆದರೆ, ಈಗ ಅವರಿಗೆ ಆದಾಯ ನೀಡುವ ಹಸುಗಳು ಅನಾರೋಗ್ಯದಿಂದ ಸಾವನ್ನಪ್ಪುತ್ತಿವೆ. ಹಸುಗಳಿಗೆ ಚಿಕಿತ್ಸೆ ನೀಡಲು ವೈದ್ಯರೇ ಇಲ್ಲ. ಹೀಗಾಗಿ, ತಿಂಗಳಲ್ಲಿ ಒಂದು ಎರಡು ಹಸುಗಳು ಹಾಗೂ ಕರುಗಳು ಕೂಡ ಸಾವನ್ನಪ್ಪುತ್ತಿವೆ. ಹೀಗಾಗಿ ನಮಗೆ ಬಹಳ ಸಮಸ್ಯೆಯಾಗುತ್ತಿದೆ. ಕೂಡಲೇ ವೈದ್ಯರನ್ನು ನೇಮಕ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ.
ಇದನ್ನೂ ಓದಿ: ಗಡಿ ಕ್ಯಾತೆ ತೆಗೆಯುವ ತಲೆಹರಟೆಗಳಿಗೆ ತಕ್ಕ ಉತ್ತರ ಕೊಡಲೇಬೇಕು; ಟಿ.ಎಸ್.ನಾಗಾಭರಣ
ಇನ್ನು, ದಿನನಿತ್ಯ 10ರಿಂದ 20 ಲೀಟರ್ ಹಾಲು ನೀಡುವ ಹಸುಗಳು ಏಕಾಏಕಿ ಸಾವನ್ನಪ್ಪುತ್ತಿವೆ. ಹೀಗಾಗಿ 50 ರಿಂದ 70 ಸಾವಿರ ರೂಪಾಯಿ ಮೌಲ್ಯದ ಹಸುಗಳನ್ನು ಕಳೆದುಕೊಂಡು ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದ್ದಾರೆ. ನರಳುತ್ತಿರುವ ಹಸುಗಳನ್ನು ಆಸ್ಪತ್ರೆಗೆ ತೆಗೆದುಕೊಂಡು ಬಂದರೆ ಅವುಗಳಿಗೆ ಚಿಕಿತ್ಸೆ ನೀಡಲು ವೈದ್ಯರು ಸಹ ಕೈಗೆ ಸಿಗ್ತಾ ಇಲ್ಲ. ಇನ್ನು ಈ ಕುರಿತು ಗದಗ ಜಿಲ್ಲಾ ಪಶು ಉಪ ನಿರ್ದೇಶಕ ಜಿ ಪಿ ಮನಗೂಳಿ ಅವರನ್ನು ಕೇಳಿದರೆ, ಜಿಲ್ಲೆಯಲ್ಲಿ ಪಶು ವೈದ್ಯರ ಕೊರತೆಯಿದೆ. ಇಡೀ ಮುಂಡರಗಿ ತಾಲೂಕಿಗೆ ಒಬ್ಬರೇ ಒಬ್ಬ ವೈದ್ಯರಿದ್ದಾರೆ. ಹೀಗಾಗಿ ಸಮಸ್ಯೆಯಾಗಿದೆ. ನಾವು ಕೂಡಲೇ ನಮ್ಮ ವೈದ್ಯರು ಹಾಗೂ ಕೆಎಂಎಫ್ ವೈದ್ಯರನ್ನು ಕಕ್ಕೂರು ತಾಂಡಾಗೆ ಕಳುಹಿಸಿ, ಸೂಕ್ತವಾದ ಚಿಕಿತ್ಸೆ ನೀಡುತ್ತೇವೆ ಅಂತ ಹೇಳ್ತಾಯಿದ್ದಾರೆ.
ಜೀವನಕ್ಕೆ ಆಧಾರವಾಗಿರುವ ಹಸುಗಳನ್ನು ಕಳೆದುಕೊಂಡು, ಕಕ್ಕೂರು ತಾಂಡಾ ನಿವಾಸಿಗಳು ದಿಕ್ಕು ಕಾಣದಂತಾಗಿದ್ದಾರೆ. ರಾಜ್ಯದಲ್ಲಿ ಗೋಹತ್ಯ ನಿಷೇಧ ಕಾನೂನು ಜಾರಿ ಮಾಡಿರೋದು ಒಳ್ಳೇಯದು, ಇರುವ ಹಸುಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ಸರ್ಕಾರದ ಮೇಲೆಯಿಂದ, ಹೀಗಾಗಿ ಕೂಡಲೇ ವೈದ್ಯರನ್ನು ನೇಮಕ ಮಾಡಿ ಸಾವನ್ನಪ್ಪತ್ತಿರುವ ಹಸುಗಳ ಪ್ರಾಣ ಉಳಿಸಲಿ ಎಂದು ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.
( ವರದಿ: ಸಂತೋಷ ಕೊಣ್ಣೂರ)
Published by:
Sushma Chakre
First published:
January 19, 2021, 7:38 AM IST