ಗದಗ: ಆಸ್ತಿಗಾಗಿ ನಡೆದ ದಾಯಾದಿಗಳ ಕಲಹದಿಂದ ಮೂಕ ಪ್ರಾಣಿಗಳು ವನವಾಸ ಅನುಭವಿಸುವಂತಾಗಿದೆ. ಹೌದು, ವರ್ಷದುದ್ದಕ್ಕೂ ಆಗುವಷ್ಟು ಆಹಾರವನ್ನು ಶೇಖರಣೆ ಮಾಡಿದ್ದ, ಬಣವೆಗೆ ಬೆಂಕಿ ಇಡಲಾಗಿದೆ. ಹೀಗಾಗಿ ಜಾನುವಾರುಗಳ ಸಮೇತವಾಗಿ ಪೊಲೀಸ್ ಠಾಣೆಗೆ ನ್ಯಾಯ ಕೇಳಲು ಬಂದಿತ್ತು ನೊಂದ ಕುಟುಂಬ. ಹುಟ್ಟುತ್ತಾ ಅಣ್ಣ-ತಮ್ಮಂದಿರು, ಬೆಳೆಯುತ್ತಾ ದಾಯಾದಿಗಳು ಎನ್ನುವ ಗಾದೆ ಮಾತಿನಂತೆ, ಈ ಸಹೋದರರ ಆಸ್ತಿಗಾಗಿ ನಡೆದ ಗಲಾಟೆಯಿಂದ ಮೂಕ ಪ್ರಾಣಿಗಳು ವನವಾಸ ಅನುಭವಿಸುವಂತಹ ಸ್ಥಿತಿ ನಿರ್ಮಾಣವಾಗಿದೆ.
ಹೌದು, ಗದಗ ಜಿಲ್ಲೆಯ ನರಗುಂದ ತಾಲೂಕಿನ ಹುಣಶೀಕಟ್ಟಿ ಗ್ರಾಮದ ನಿವಾಸಿಯಾದ ಹನಮಂತ ಗೌಡ ಹೆಬ್ಬಳ್ಳಿ ಎನ್ನುವವರಿಗೆ ಸೇರಿದ ಮೇವಿನ ಬಣವೆಗಳಿಗೆ ಬೆಂಕಿ ಹಚ್ಚಲಾಗಿದೆ. ಅದು ಬೇರೆ ಯಾರೂ ಅಲ್ಲ, ಈ ಹನಮಂತ ಗೌಡ ಹೆಬ್ಬಳ್ಳಿ ಅವರ ಸಹೋದರ ಬಸವನ ಗೌಡ ಹೆಬ್ಬಳ್ಳಿ. ಹುಣಶೀಕಟ್ಟಿ ಗ್ರಾಮದಲ್ಲಿ ಸುಮಾರು 12 ಎಕರೆ ಜಮೀನಿನ ವಿಷಯದಲ್ಲಿ ಹನಮಂತ ಗೌಡ ಹಾಗೂ ಬಸವನ ಗೌಡ ಹೆಬ್ಬಳ್ಳಿ ನಡುವೆ ಕಲಹ ಉಂಟಾಗಿತ್ತು. ಕೋರ್ಟ್‌ನಲ್ಲಿರುವ ಕೇಸ್ ವಾಪಾಸ್ ಪಡೆಯುವಂತೆ ನಾಲ್ಕೈದು ದಿನಗಳ ಹಿಂದೆ ಹನಮಂತ ಗೌಡ ಹೆಬ್ಬಳ್ಳಿ ಮೇಲೆ ಬಸವನ ಗೌಡ ಹೆಬ್ಬಳ್ಳಿ ಕುಟುಂಬ ಸಮೇತವಾಗಿ ಬಂದು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು. ಅದಾದ ಮೇಲೆ 2 ದಿನಗಳ ಹಿಂದೆ ರಾತ್ರಿ ಮತ್ತೆ ಬಸವನ ಗೌಡ ಹೆಬ್ಬಳ್ಳಿ ಹಾಗೂ ಅವರ ಕುಟುಂಬ ಸದಸ್ಯರು ಜಾನುವಾರುಗಳಿಗೆ ಶೇಖರಣೆ ಮಾಡಿದ ನಾಲ್ಕು ಮೇವಿನ ಬಣವಿಗಳಿಗೆ ಬೆಂಕಿ ಹಚ್ವಿದ್ದಾರೆ.
ಹೀಗಾಗಿ, ಜಾನುವಾರುಗಳಿಗೆ ಹಾಕಲು ಆಹಾರ ಇಲ್ಲ, ನಮಗೆ ನ್ಯಾಯ ಕೊಡಿಸಿ ಎಂದು ಹನಮಂತ ಗೌಡ ಹೆಬ್ಬಳ್ಳಿ ಪೊಲೀಸ ಠಾಣೆಗೆ ಬಂದಿದ್ದಾರೆ. ಸುಮಾರು ಮೂರು ಲಕ್ಷ ರೂ. ಮೌಲ್ಯದ ಜಾನುವಾರುಗಳ ಮೇವಿನ ಬಣವಿ ಹಾಗೂ ಕೃಷಿಗೆ ಉಪಯೋಗಿಸುವ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವ ಹೊತ್ತಿಗೆ ಸುಟ್ಟು ಭಸ್ಮವಾಗಿವೆ. ಇನ್ನೂ ಹನಮಂತ ಗೌಡ ಹೆಬ್ಬಳ್ಳಿ ಮೇಲೆ ಕಳೆದ ಮೂರು ದಿನಗಳ ಹಿಂದೆ ಬಸವನಗೌಡ ಹೆಬ್ಬಳ್ಳಿ ಹಲ್ಲೆ ಮಾಡಿದ್ದಕ್ಕೆ, ನರಗುಂದ ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
(ವರದಿ: ಸಂತೋಷ ಕೊಣ್ಣೂರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ