ಇವತ್ತು ಸಚಿವರಿಗೆ, ನಾಳೆ ಶಾಸಕರಿಗೆ; ಉಪಾಹಾರ ಪೊಲಿಟಿಕ್ಸ್ ಮೂಲಕ ಪಕ್ಷದೊಳಗೆ ಹಿಡಿತ ಸಾಧಿಸುತ್ತಿದ್ದಾರಾ ಡಿಸಿಎಂ?

ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿಸಿಎಂ ಸರಕಾರಿ ನಿವಾಸದಲ್ಲಿ ನಡೆದ ಉಪಾಹಾರ ಕೂಟದಲ್ಲಿ ಬೆಳಗಾವಿ ರಾಜಕಾರಣವೇ ಹೆಚ್ಚು ಸದ್ದು ಮಾಡಿತು, ಚರ್ಚೆಯ ವಿಷಯವಾಗಿತ್ತು. ಜಿ. ಪರಮೇಶ್ವರ್ ನಾಳೆ ಶಾಸಕರಿಗೂ ಉಪಾಹಾರ ಕೂಟ ಆಯೋಜಿಸುವ ಮೂಲಕ ಎಲ್ಲರನ್ನೂ ಒಳಗೊಂಡು ಹೋಗುವ ಹಿರಿಯಣ್ಣ ತಾನು ಎಂಬ ಸಂದೇಶ ರವಾನಿಸುವ ಪ್ರಯತ್ನದಲ್ಲಿದ್ದಂತಿದೆ.


Updated:September 7, 2018, 1:12 PM IST
ಇವತ್ತು ಸಚಿವರಿಗೆ, ನಾಳೆ ಶಾಸಕರಿಗೆ; ಉಪಾಹಾರ ಪೊಲಿಟಿಕ್ಸ್ ಮೂಲಕ ಪಕ್ಷದೊಳಗೆ ಹಿಡಿತ ಸಾಧಿಸುತ್ತಿದ್ದಾರಾ ಡಿಸಿಎಂ?
ಜಿ. ಪರಮೇಶ್ವರ್

Updated: September 7, 2018, 1:12 PM IST
- ಶ್ರೀನಿವಾಸ ಹಳಕಟ್ಟಿ, ನ್ಯೂಸ್18 ಕನ್ನಡ

ಬೆಂಗಳೂರು(ಸೆ. 07): ಜೆಡಿಎಸ್ ಜೊತೆ ಮೈತ್ರಿ ಸರಕಾರದಲ್ಲಿ ಭಾಗಿಯಾದ ಬಳಿಕ ಕಾಂಗ್ರೆಸ್ ಪಕ್ಷದೊಳಗೆ ಆಂತರಿಕ ಕದನ ಭುಗಿಲೇಳುತ್ತಿದೆ. ಸಿದ್ದರಾಮಯ್ಯ ಪರ ಶಾಸಕರು ಮತ್ತು ಸಚಿವರು ಡಿಸಿಎಂ ಜಿ. ಪರಮೇಶ್ವರ್ ಮೇಲೆ ಮುರಿದುಕೊಂಡು ಬೀಳುತ್ತಿದ್ದಾರೆ. ಬೆಳಗಾವಿ ಪಿಎಲ್​ಡಿ ಬ್ಯಾಂಕ್ ಚುನಾವಣೆ ವಿಚಾರದಲ್ಲಿ ಆ ಜಿಲ್ಲೆಯ ಕಾಂಗ್ರೆಸ್ಸಿಗರ ಕಿತ್ತಾಟವು ಹೈಕಮಾಂಡ್ ಕದ ತಟ್ಟಿ ಪರಮೇಶ್ವರ್ ಅವರಿಗೆ ಇಲ್ಲದ ತಲೆನೋವು ಸೃಷ್ಟಿಸುತ್ತಿದೆ. ಬ್ಯಾಲೆನ್ಸ್ ಮಾಡಲು ಹರಸಾಹಸ ಮಾಡುತ್ತಿರುವ ಜಿ. ಪರಮೇಶ್ವರ್ ಅವರು ಈ ನಿಟ್ಟಿನಲ್ಲಿ ಉಪಾಹಾರ ಕೂಟದ ತಂತ್ರಕ್ಕೆ ಮೊರೆಹೋಗಿದ್ದಾರೆ. ಇವತ್ತು ಕಾಂಗ್ರೆಸ್​ನ ಸಚಿವರಿಗೆ ಅವರು ಬ್ರೇಕ್​ಫಾಸ್ಟ್ ಮೀಟಿಂಗ್ ಆಯೋಜಿಸಿದರು. ನಾಳೆ ಶಾಸಕರಿಗೆ ಉಪಾಹಾರ ಕೂಟಕ್ಕೆ ಆಹ್ವಾನ ಕೊಡುತ್ತಿದ್ದಾರೆ. ಈ ಮೂಲಕ ಎಲ್ಲರನ್ನೂ ಸಂತೈಸಿಸಿ ಕಾಂಗ್ರೆಸ್ ಪಕ್ಷದೊಳಗೆ ಹಿಡಿತ ಸಾಧಿಸುವ ಇರಾದೆ ಮಾಜಿ ಕೆಪಿಸಿಸಿ ಅಧ್ಯಕ್ಷರಿಗಿದ್ದಂತಿದೆ.

ಬೆಳಗಾವಿ ಪೊಲಿಟಿಕ್ಸ್ ಸದ್ದು:
ಕಾಂಗ್ರೆಸ್ ವಲಯದಲ್ಲಿ ಇದೀಗ ರಮೇಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಜಟಾಪಟಿಯೇ ದೊಡ್ಡ ಚರ್ಚೆಯ ವಸ್ತುವಾಗಿದೆ. ಇವತ್ತು ಜಿ. ಪರಮೇಶ್ವರ್ ಅವರು ಸಚಿವರಿಗೆ ಕರೆದಿದ್ದ ಉಪಾಹಾರ ಕೂಟದಲ್ಲಿ ಈ ವಿಚಾರವೇ ಪ್ರಮುಖವಾಗಿ ಕಾಡಿದ್ದು. ಬೆಳಗಾವಿ ಪೊಲಿಟಿಕ್ಸ್​ನಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಆರೋಪವಿರುವ ಡಿಕೆಶಿ ಅವರು ಈ ವಿಚಾರದಲ್ಲಿ ಮೌನ ವಹಿಸಿದ್ದು ವಿಶೇಷವಾಗಿತ್ತು. ಉಪಾಹಾರ ಕೂಟಕ್ಕೆ ಬಂದ ಅನೇಕ ಸಚಿವರು ಮೊದಲು ಕೆದಕಲು ಯತ್ನಿಸಿದ್ದೇ ಡಿಕೆಶಿ ಅವರನ್ನೇ. ಪಿಎಲ್​ಡಿ ಎಲೆಕ್ಷನ್ ಏನ್ ಮಾಡ್ತೀರಾ ಎಂದು ಡಿಕೆಶಿಯನ್ನ ಕಿಚಾಯಿಸಿದರು. ಆದರೆ, ಡಿಕೆಶಿ ಯಾವ ಭಾವಾವೇಶಕ್ಕೆ ಒಳಗಾಗದೇ ನಕ್ಕು ಸುಮ್ಮನಾದರು. ಬೆಳಗಾವಿ ವಿಚಾರದಲ್ಲಿ ಸೈಲೆಂಟ್ ಆಗಿರಿ ಬ್ರದರ್ ಎಂದ ಸಿಎಂ ಹೆಚ್​ಡಿಕೆ ಸಲಹೆಯನ್ನು ಡಿಕೆ ಶಿವಕುಮಾರ್ ಗಂಭೀರವಾಗಿ ತೆಗೆದುಕೊಂಡು ಉದ್ದೇಶಪೂರ್ವಕವಾಗಿ ಮೌನವಾಗಿದ್ದಂತಿತ್ತು.

ಬೆಳಗಾವಿ ರಾಜಕಾರಣದ ಬಗ್ಗೆ ಡಿಕೆಶಿ ಮೌನ ವಹಿಸಿದರೂ ಅದೇ ವಿಚಾರವೇ ಪ್ರಮುಖವಾಗಿ ಸದ್ದು ಮಾಡಿತು. ಸರಕಾರ 100 ದಿನ ಪೂರೈಸಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಶಾಸಕಿಯಾಗಿ ನೂರು ದಿನ ಮಾತ್ರವಾಗಿದೆ. ಈ ಅವಧಿಯಲ್ಲಿ ಅವರ ಇಷ್ಟೊಂದು ಫೋರ್ಸ್ ಸರಿಯಲ್ಲ. ಕೇವಲ ಪಿಎಲ್​ಡಿ ಬ್ಯಾಂಕ್ ಚುನಾವಣೆಯ ವಿಚಾರವು ಹೈಕಮಾಂಡ್ ಬಾಗಿಲು ತಟ್ಟಿದರೆ ಹೇಗೆ? ಬೆಳಗಾವಿಯಲ್ಲಿ ಈ ಗೊಂದಲ ಬೇಡವಾಗಿತ್ತು ಎಂಬ ಅಭಿಪ್ರಾಯಗಳು ಈ ಸಂದರ್ಭದಲ್ಲಿ ವ್ಯಕ್ತವಾದವು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಬೆಳಗಾವಿ ಕಿತ್ತಾಟದ ಬಗ್ಗೆ ಪ್ರತಿಕ್ರಿಯಿಸಿ, ಸದ್ಯ ಏನೂ ಆಗಿಲ್ಲ. ಎಲ್ಲ ಸರಿ ಹೋಗುತ್ತೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಎಲ್ಲಾ ಸೇರಿ ಹೈಕಮಾಂಡ್ ಜೊತೆ ಮಾತಾಡಿದ್ದೇವೆ. ಸಚಿವರಿರಬಹುದು, ಯಾರೇ ಇರಬಹುದು, ಪಕ್ಷದ ಶಿಸ್ತಿಗೆ ಧಕ್ಕೆ ತಂದರೆ ಸುಮ್ಮನಿರಲ್ಲ ಎಂದೂ ದಿನೇಶ್ ಗುಂಡೂರಾವ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
Loading...

ಉಪಾಹಾರ ಕೂಟದಲ್ಲಿ ಬೆಳಗಾವಿ ಪೊಲಿಟಿಕ್ಸ್ ಜೊತೆಗೆ ರಾಜ್ಯದ ಅತಿವೃಷ್ಠಿ, ಅನಾವೃಷ್ಠಿ ಸಮಸ್ಯೆಗಳ ಕುರಿತು ಮಾತುಕತೆ ನಡೆಯಿತು. ಸ್ಥಳೀಯ ಸಂಸ್ಥೆಗಳಲ್ಲಿ ಹೊಂದಾಣಿಕೆ, ಲೋಕಸಭಾ ಚುನಾವಣೆಗೆ ಸಿದ್ಧತೆ, ಮೇಯರ್  ಉಪಮೇಯರ್ ಚುನಾವಣೆ ಇತ್ಯಾದಿ ವಿಚಾರಗಳ ಬಗ್ಗೆ ಚರ್ಚೆಗಳಾದವು.

ಇವತ್ತಿನ ಕೂಟಕ್ಕೆ ರಮೇಶ್ ಜಾರಕಿಹೊಳಿ ಗೈರು:
ಸದಾಶಿವನಗರದಲ್ಲಿರುವ ಜಿ. ಪರಮೇಶ್ವರ್ ಅವರ ಸರಕಾರಿ ನಿವಾಸದಲ್ಲಿ ಆಯೋಜಿಸಲಾದ ಉಪಾಹಾರ ಕೂಟಕ್ಕೆ ಸಚಿವರಾದ ಡಿ.ಕೆ. ಶಿವಕುಮಾರ್, ಜಮೀರ್ ಅಹ್ಮದ್, ವೆಂಕಟರಮಣಪ್ಪ, ಪ್ರಿಯಾಂಕ್ ಖರ್ಗೆ, ಕೃಷ್ಣ ಬೈರೇಗೌಡ, ರಾಜಶೇಖರ್ ಪಾಟೀಲ್ ಹುಮ್ನಾಬಾದ್, ಕೆ.ಜೆ. ಜಾರ್ಜ್, ಶಿವಾನಂದ ಪಾಟೀಲ್, ಪುಟ್ಟರಂಗಶೆಟ್ಟಿ, ಆರ್. ಶಂಕರ್ ಮೊದಲಾದವರು ಆಗಮಿಸಿದ್ದರು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ ಇದ್ದರು. ಸಂಸದ ಡಿ.ಕೆ. ಸುರೇಶ್ ಕೂಡ ಔತನಕೂಟಕ್ಕೆ ಆಗಮಿಸಿದ್ದು ಕುತೂಹಲ ಮೂಡಿಸಿತು.

ಸಚಿವರಾದ ಜಯಮಾಲ, ರಮೇಶ್ ಜಾರಕಿಹೊಳಿ, ಆರ್.ವಿ. ದೇಶಪಾಂಡೆ, ಶಿವಶಂಕರ್ ರೆಡ್ಡಿ ಮತ್ತು ಯು.ಟಿ. ಖಾದರ್ ಅವರು ಈ ಉಪಾಹಾರ ಕೂಟದಲ್ಲಿ ಗೈರಾಗಿದ್ದರು. ಸಿಎಂ ಭೇಟಿ ಹಿನ್ನೆಲೆಯಲ್ಲಿ ಜಯಮಾಲ ಅವರು ಉಡುಪಿಗೆ ಹೋಗಿದ್ದಾರೆ. ಹೀಗಾಗಿ ಅವರು ಬಂದಿಲ್ಲ. ಯು.ಟಿ. ಖಾದರ್ ಅವರು ಅನಾರೋಗ್ಯ ನಿಮಿತ್ತ ಬರಲಿಲ್ಲ. ಆರ್.ವಿ. ದೇಶಪಾಂಡೆ ಮತ್ತು ಶಿವಶಂಕರ್ ರೆಡ್ಡಿ ಅವರು ವಿದೇಶ ಪ್ರವಾಸದಲ್ಲಿದ್ದಾರೆ. ರಮೇಶ್ ಜಾರಕಿಹೊಳಿ ಗೈರುಹಾಜರಾಗಿದ್ದು ಎದ್ದುಕಾಣುತ್ತಿತ್ತು. ಪಿಎಲ್​ಡಿ ಚುನಾವಣೆಯ ಬಿಸಿಯಲ್ಲಿದ್ದರಿಂದ ರಮೇಶ್ ಜಾರಕಿಹೊಳಿ ಬರಲಿಲ್ಲವೆನ್ನಲಾಗಿದೆ.

ಹಾವೂ ಸಾಯಲಿಲ್ಲ; ಕೋಲೂ ಮುರಿಯಲಿಲ್ಲ:
ಇದೀಗ, ಪಿಎಲ್​ಡಿ ಬ್ಯಾಂಕ್ ಚುನಾವಣೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಮಹದೇವ್ ಪಾಟೀಲ್ ಮತ್ತು ಬಾಪುಗೌಡ ಜಮಾದಾರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಹಾಂತೇಶ್ ಪಟೇಲ್ ಅವರು ಯಾವುದೇ ಕಾರಣಕ್ಕೂ ಅಧ್ಯಕ್ಷರಾಗಬಾರದು ಎಂದು ಜಾರಕಿಹೊಳಿ ಸಹೋದರರು ಪಟ್ಟುಹಿಡಿದಿದ್ದರು. ಅದರಂತೆಯೇ ಮಹಾಂತೇಶ್ ಪಾಟೀಲ್ ಅವರಿಗೆ ಕೊಕ್ ನೀಡಲಾಗಿದೆ. ಇದೀಗ ಹಾವೂ ಸಾಯಬಾರದು, ಕೋಲೂ ಮುರಿಯಬಾರದು ಎಂಬಂತಹ ತಂತ್ರವನ್ನ ಡಿಕೆಶಿ ಅನುಸರಿಸಿದ್ದಾರೆ. ಬೆಳಗಾವಿ ಕಾಳಗದಲ್ಲಿ ಡಿಕೆಶಿ ಅಂಡ್ ಲಕ್ಷ್ಮೀ ಹೆಬ್ಬಾಳ್ಕರ್ ಟೀಮ್ ಹಾಗೂ ಜಾರಕಿಹೊಳಿ ಬ್ರದರ್ಸ್ ಟೀಮ್ ಎರಡಕ್ಕೂ ಗೆಲುವು ಸಿಕ್ಕಂತಾಗಿದೆ.

ಜಿ. ಪರಮೇಶ್ವರ್ ಅವರು ಇದೀಗ ಜಾರಕಿಹೊಳಿ ಸಹೋದರರಿಗೆ ಇನ್ನಷ್ಟು ಸಮಾಧಾನ ಮಾಡುವ ಅಗತ್ಯವಿದೆ. ನಾಳೆ ಶಾಸಕರಿಗೆಂದೇ ಉಪಮುಖ್ಯಮಂತ್ರಿಗಳು ಉಪಾಹಾರ ಕೂಟ ಇಟ್ಟುಕೊಳ್ಳಲು ನಿರ್ಧರಿಸಿದ್ಧಾರೆ. ಆ ಸಭೆಯಲ್ಲಿ ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಅವರೂ ಆಗಮಿಸುವ ನಿರೀಕ್ಷೆ ಇದೆ. ಇಬ್ಬರೊಂದಿಗೆ ನೇರವಾಗಿ ಮಾತನಾಡಿ ಭಿನ್ನಾಭಿಪ್ರಾಯಗಳನ್ನ ಶಮನ ಮಾಡಲು ಜಿ.ಪ. ಯತ್ನಿಸುವ ಸಾಧ್ಯತೆ ಇದೆ. ಬೆಳಗಾವಿ ಕಾಂಗ್ರೆಸ್​ನ ಆಂತರಿಕ ಕಿತ್ತಾಟದ ಸಮಸ್ಯೆ ನಿವಾರಿಸುವ ಮೂಲಕ ಪಕ್ಷದಲ್ಲಿ ತಾನೇ ಹಿರಿಯಣ್ಣ ಎಂಬ ಸಂದೇಶವನ್ನು ಪರಮೇಶ್ವರ್ ಅವರು ರವಾನಿಸುವ ಸನ್ನಾಹದಲ್ಲಿದ್ದಾರೆ.
First published:September 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ