ಉಕ್ಕಿ ಹರಿಯುತ್ತಿರುವ ಕಪಿಲಾನದಿ, ಭರ್ತಿಗೊಂಡ ಕಬಿನಿ ಜಲಾಶಯ; ಪ್ರವಾಹ ಸಾಧ್ಯತೆ

news18
Updated:July 11, 2018, 5:43 PM IST
ಉಕ್ಕಿ ಹರಿಯುತ್ತಿರುವ ಕಪಿಲಾನದಿ, ಭರ್ತಿಗೊಂಡ ಕಬಿನಿ ಜಲಾಶಯ; ಪ್ರವಾಹ ಸಾಧ್ಯತೆ
ಭರ್ತಿಯಾಗಿರುವ ಕಬಿನಿ ಜಲಾಶಯ
news18
Updated: July 11, 2018, 5:43 PM IST
-ಪುಟ್ಟಪ್ಪ, ನ್ಯೂಸ್​ 18 ಕನ್ನಡ

ಮೈಸೂರು,(ಜು.11): ಮಳೆರಾಯ ಎಲ್ಲೆಲ್ಲೂ ತನ್ನ ರೌದ್ರನರ್ತನವನ್ನು ತೋರಿಸುತ್ತಲೇ ಇದ್ದಾನೆ. ಅದರಲ್ಲೂ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಸಾವು-ನೋವುಗಳು ಸಂಭವಿಸುವ ಮಟ್ಟಿಗೆ ಅವಾಂತರ ಸೃಷ್ಟಿಸಿದ್ದಾನೆ. ಇನ್ನೂ ಮೈಸೂರಿನ ಕಬಿನಿ ಜಲಾನಯನ ಪ್ರದೇಶದಲ್ಲಿ ಕುಂಭದ್ರೋಣ ಮಳೆಯಾಗುತ್ತಿದ್ದು, ಜಲಾಶಯದ ಒಳಹರಿವು ಮತ್ತು ಹೊರಹರಿವು 50 ಸಾವಿರ ಕ್ಯೂಸೆಕ್ಸ್​​ಗೆ ಹೆಚ್ಚಳವಾಗಿದೆ.

ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲ್ಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯದಲ್ಲಿ 9 ವರ್ಷಗಳ ನಂತರ ಇದೇ ಮೊದಲ ಬಾರಿಗೆ 50 ಸಾವಿರ ಕ್ಯೂಸೆಕ್ಸ್​ ಹೊರಹರಿವು ಹೆಚ್ಚಾಗಿದೆ. 2009ರಲ್ಲಿ ಅತಿ ಹೆಚ್ಚು 70 ಸಾವಿರ ಹೊರಹರಿವು ಇತ್ತು. ಸದ್ಯ ನಾಲೆಗಳಿಗೆ  1 ಸಾವಿರ ಕ್ಯೂಸೆಕ್ಸ್, ಕಪಿಲಾನದಿಗೆ 49,000 ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗಿದೆ. ಕಬಿನಿ ಜಲಾಶಯ 2284 ಅಡಿ ಸಾಮರ್ಥ್ಯವನ್ನು ಹೊಂದಿದ್ದು, ಜಲಾಶಯದ ಸದ್ಯದ ನೀರಿನ ಮಟ್ಟ 2283 ಅಡಿಗಳು.

ಕಪಿಲಾನದಿ ಭೋರ್ಗರೆಯುತ್ತಾ, ಉಕ್ಕಿ ಹರಿಯುತ್ತಿದೆ. ದಕ್ಷಿಣ ಕಾಶಿ ನಂಜನಗೂಡಿನ ತಗ್ಗು ಪ್ರದೇಶಗಳ ಜನರಲ್ಲಿ ಆತಂಕ ಮನೆಮಾಡಿದೆ. ಈಗಾಗಲೇ ನಂಜನಗೂಡಿನ ಹಳ್ಳದಕೇರಿ ಬಡಾವಣೆಗೆ ಕಪಿಲಾನದಿಯ ನೀರು ನುಗ್ಗಿದ್ದು, ಮತ್ತಷ್ಟು ಪ್ರದೇಶಗಳು ಜಲಾವೃತವಾಗುವ ಭೀತಿ ಎದುರಾಗಿದೆ.

ನೀರಾವರಿ ಇಲಾಖೆ ಅಧಿಕಾರಿಗಳು ನಂಜನಗೂಡಿನಲ್ಲಿ ಹೈ ಅಲರ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಇದೇ ಮೊದಲ ಬಾರಿ ಪ್ರವಾಹ ಉಂಟಾಗುವ ಎಚ್ಚರಿಕೆ ನೀಡಿದ್ದಾರೆ. ಮೈಸೂರಿನಿಂದ ಸುತ್ತೂರಿಗೆ ಸಂಪರ್ಕ ಕಲ್ಪಿಸುವ ಸೇತುವೆ ಸಹ ಮುಳುಗಡೆಯಾಗುವ ಭೀತಿ ಇದೆ. ಒಳಹರಿವು ಹೆಚ್ಚಾದರೆ ಹೊರಹರಿವು ಕೂಡ ಮತ್ತಷ್ಟು ಹೆಚ್ಚಳವಾಗಲಿದೆ.  ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ಸುರಕ್ಷಿತ ಪ್ರದೇಶಗಳತ್ತ ತೆರಳುವಂತೆ ನೀರಾವರಿ ಇಲಾಖೆ ಅಧಿಕಾರಿಗಳು ಸೂಚಿಸುತ್ತಿದ್ದಾರೆ. ನದಿ ನೀರಿನ ಮಟ್ಟ ಹೆಚ್ಚುತ್ತಿರುವುದರಿಂದ ಜನರು ಕಪಿಲಾನದಿಗೆ ಇಳಿಯದಂತೆ ಎಚ್ಚರಿಕೆ ನೀಡುತ್ತಿದ್ದಾರೆ.
First published:July 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...