ಬೆಂಗಳೂರು (ಅಕ್ಟೋಬರ್ 06); ರಾಷ್ಟ್ರ ರಾಜಕಾರಣದಲ್ಲಿ (National Politics) ಹಲವಾರು ಆಗುಹೋಗುಗಳು ನಡೆಯುತ್ತಿದೆ. ಪಂಜಾಬ್ ಕಾಂಗ್ರೆಸ್ ಬಿಕ್ಕಟ್ಟಿನಿಂದ ಉತ್ತರಪ್ರದೇಶದ ಲಖೀಂಪುರ್ ಗಲಭೆಯ (Lakhimpur Violence)ವರೆಗೆ ಅನೇಕ ಪ್ರಮುಖ ವಿಚಾರಗಳು ರಾಜಕೀಯ ತಿರುವು ಪಡೆದುಕೊಳ್ಳುತ್ತಿವೆ. ಅಲ್ಲದೆ, ಕಾಂಗ್ರೆಸ್ ಪಕ್ಷದ ಒಳಗೆ ಸೋನಿಯಾ ಗಾಂಧಿ (Sonia Gandhi) ಮತ್ತು ರಾಹುಲ್ ಗಾಂಧಿ (Rahul Gandhi) ವಿರುದ್ಧ ಜಿ-23 ಹೆಸರಿನಲ್ಲಿ ಹಿರಿಯ ನಾಯಕರ ಪ್ರತ್ಯೇಕ ಗುಂಪೊಂದು ಹುಟ್ಟಿಕೊಂಡಿದೆ. ಈ ಗುಂಪು ರಾಜ್ಯದ ಮಾಜಿ ಸಿಎಂ ಹಾಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನೂ ತಮ್ಮ ಬಣಕ್ಕೆ ಸೆಳೆದುಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ನಡೆದ ಸಿದ್ದರಾಮಯ್ಯ (Siddaramaiah) ಮತ್ತು ಸೋನಿಯಾ ಗಾಂಧಿ ಅವರ ಭೇಟಿ ಸಾಕಷ್ಟು ಮಹತ್ವ ಪಡೆದುಕೊಂಡಿತ್ತು. ಅಲ್ಲದೆ, ಈ ಭೇಟಿಯಲ್ಲಿ ಇಬ್ಬರು ನಾಯಕರು ಯಾವ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂಬ ಕುರಿತು ಸಾಕಷ್ಟು ಊಹಾಪೋಹಗಳು ಹರಿದಾಡಿದ್ದವು.
ಇದೀಗ ಪ್ರಮುಖ ನಾಯಕರು ಚರ್ಚೆ ಮಾಡಿದ ವಿಚಾರಗಳ ಸಂಪೂರ್ಣ ಮಾಹಿತಿ ನ್ಯೂಸ್ 18ಗೆ ಲಭ್ಯವಾಗಿದೆ. ಸ್ವತಃ ಸಿದ್ದರಾಮಯ್ಯನವರು ನ್ಯೂಸ್18 ವರದಿಗಾರ ಚಿದಾನಂದ ಪಟೇಲ್ ಅವರಿಗೆ ನೀಡಿದ ಸಂದರ್ಶನದಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಸಿದ್ದರಾಮಯ್ಯ ಸಂದರ್ಶನದ ಸಂಪೂರ್ಣ ವಿವರ ಇಲ್ಲಿದೆ!
ಜಿ-23 ಟೀಮ್ ಬಗ್ಗೆ ಸಮಾಲೋಚನೆ;
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ನಾಯಕತ್ವದ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಕಳೆದ ಎರಡೂವರೆ ವರ್ಷದಿಂದ ಹೊಸ ಅಧ್ಯಕ್ಷರನ್ನು ಪಕ್ಷಕ್ಕೆ ನೇಮಕ ಮಾಡದೆ ಇರುವುದು ಸಹ ಈ ಅಸಮಾಧಾನಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕರು ಜಿ-23 ಹೆಸರಿನಲ್ಲಿ ಬಂಡಾಯವೇಳುವ ಸೂಚನೆ ನೀಡಿದ್ದಾರೆ. ಅಲ್ಲದೆ, ಎಲ್ಲಾರಾಜ್ಯದ ಪ್ರಮುಖ ನಾಯಕರನ್ನು ತನ್ನತ್ತ ಸೆಳೆದು ಮತ್ತಷ್ಟು ಬಲಿಷ್ಠವಾಗುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.
ಪ್ರತಿ ರಾಜ್ಯದ ಮಾಸ್ ಲೀಡರ್ ಗಳ ಸಂಪರ್ಕ ಮಾಡುತ್ತಿರುವ ಕಾಂಗ್ರೆಸ್ ಜಿ -23 ಸೀನಿಯರ್ ಲೀಡರ್ಸ್ಗಳ ತಂಡ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೂ ಗಾಳ ಹಾಕಿತ್ತು. ದೆಹಲಿಯ ಮೂವರು ನಾಯಕರಿಂದ ಸಿದ್ದು ಸಂಪರ್ಕಕ್ಕೆ ಯತ್ನಿಸಲಾಗಿತ್ತು. ಅಲ್ಲದೆ, ಜಿ-23 ಗುಂಪಿಗೆ ಸಿದ್ದುಗೆ ಆಹ್ವಾನವನ್ನೂ ನೀಡಲಾಗಿತ್ತು. ಆದರೆ, ಈ ಆಹ್ವಾನವನ್ನು ಸಿದ್ದರಾಮಯ್ಯ ತಿರಸ್ಕರಿಸಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ, ಸಿದ್ದರಾಮಯ್ಯ ಮಾತುಕತೆಗೂ ಅವಕಾಶ ನೀಡಿಲ್ಲ ಎನ್ನಲಾಗಿದೆ. ಜಿ-23 ನಾಯಕರಿಗೆ ಡೋಂಟ್ ಕೇರ್ ಎನ್ನದ ಸಿದ್ದು
ಐಯಾಮ್ ಕಾಂಗ್ರೆಸ್ ಮ್ಯಾನ್ ಎಂದು ನಿರಾಶೆ ಮೂಡಿಸಿದ್ದಾರೆ. ಸಿದ್ದರಾಮಯ್ಯ - ಸೋನಿಯಾ ಗಾಂಧಿ ಭೇಟಿಯ ಸಂದರ್ಭದಲ್ಲಿ ಈ ಬಗ್ಗೆ ಮಾತುಕತೆ ನಡೆಸಲಾಗಿದೆ.
ಪಂಜಾಬ್ ಕಾಂಗ್ರೆಸ್ ಬೆಳವಣಿಗೆ ಬಗ್ಗೆಯೂ ಚರ್ಚೆ;
ಪಂಜಾಬ್ ಕಾಂಗ್ರೆಸ್ ಬೆಳವಣಿಗೆ ಪ್ರಸ್ತುತ ಕಾಂಗ್ರೆಸ್ ಹೈಕಮಾಂಡ್ ಇರಿಸು ಮುರಿಸಿಗೆ ಕಾರಣವಾಗಿದೆ ಎನ್ನಲಾಗಿದೆ. ಸಿದ್ದರಾಮಯ್ಯ ಜೊತೆಗಿನ ಮಾತುಕತೆ ವೇಳೆ ಸೋನಿಯಾ ಗಾಂಧಿ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಹೀಗಾಗಿ ಕರ್ನಾಟಕ ಕಾಂಗ್ರೆಸ್ ನಲ್ಲೂ ಆಂತರಿಕ ಕಲಹ ಆಗದಂತೆ ಸೋನಿಯಾ ಮುನ್ನೆಚ್ಚರಿಕೆ ವಹಿಸುವಂತೆ ಸಿದ್ದರಾಮಯ್ಯ ಜೊತೆ ಆರೋಗ್ಯರ ಚರ್ಚೆ ನಡೆಸಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಸಣ್ಣ ಪುಟ್ಟ ಕೈ ನಾಯಕರ ಅಸಮಾಧಾನವನ್ನು ತಾವೇ ನಿಂತು ಸರಿಪಡಿಸಿ. ಅಸಮಾಧಾನಿತ ನಾಯಕರ ಕರೆದು ಮಾತನಾಡಿಸಿ ಮನವೊಲಿಸುವಂತೆ ಸಿದ್ದರಾಮಯ್ಯ ಅವರಿಗೆ ಸೋನಿಯಾ ಗಾಂಧಿ ಜವಾಬ್ದಾರಿ ನೀಡಿದ್ದಾರೆ.
2023 ಚುನಾವಣೆಗೆ ಪಕ್ಷ ಸಂಘಟನೆ;
ಮುಂದಿನ 2023ರ ವಿಧಾನಸಭಾ ಚುನಾಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಹಿಡಿಯುವ ಅವಕಾಶ ಇದೆ. ಬಿಜೆಪಿ ಸರ್ಕಾರದ ಆಡಳಿತದಿಂದ ಜನ ಬೇಸತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಸರ್ಕಾರದ ನಿರ್ಲಕ್ಷ್ಯ ಜನರಿಗೆ ಬೇಸರ ತಂದಿದೆ. ಅಭಿವೃದ್ಧಿ ಕಾರ್ಯಕ್ರಮ ಗಳು ಆಗುತ್ತಿಲ್ಲ. ಭ್ರಷ್ಟಾಚಾರದ ಆರೋಪಗಳಿವೆ. ಸ್ವಶಕ್ತಿಯಿಂದ ಗೆಲ್ಲೋ ಬಿಜೆಪಿ ನಾಯಕರಿಂದಲೆ ಸರ್ಕಾರದ ಮೇಲೆ ಬೇಸರವಾಗಿದೆ. ಹೀಗಾಗಿ 2023ರ ಚುನಾವಣೆಗೆ ಬಿಜೆಪಿ ಗೆಲ್ಲೋ ಶಕ್ತಿ ಇರೋ ಎಂಟಕ್ಕೂ ಹೆಚ್ಚು ಶಾಸಕರು ಕಾಂಗ್ರೆಸ್ ಗೆ ಬರಲು ಮನಸು ಮಾಡಿದ್ದಾರೆ.
ಚುನಾವಣೆ ಹತ್ತಿರವಿದ್ದಾಗ ಬಿಜೆಪಿ ಶಾಸಕರು ರಾಜೀನಾಮೆ ಕೊಡಲಿದ್ದಾರೆ. ರಾಜೀನಾಮೆ ಕೊಡಲು ಆರಂಭಿಸಿದರೆ. ಬಿಜೆಪಿ ಸರ್ಕಾರ ಡಿಸ್ಟರ್ಬ್ ಆಗೋ ಸಾಧ್ಯತೆ ಇದೆ. ಅವಧಿಗೂ ಮೊದಲೆ ಸರ್ಕಾರ ಕೆಳಗಿಳಿದು ಚುನಾವಣೆಗೆ ಹೋಗೋ ಸಾಧ್ಯತೆಯೂ ಇದೆ. ಬಿಜೆಪಿ ಸರ್ಕಾರದ ವಿರುದ್ಧ ನಾವು ಇನ್ನು ಮುಂದೆ ಮತ್ತಷ್ಟು ಹೋರಾಟ ನಡೆಸಬೇಕು. ತಳಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಬೇಕು. ಜನರ ಬಳಿಗೆ ಕಾಂಗ್ರೆಸ್ ಪಕ್ಷ ಹೋಗಲಿದೆ ಎಂದು ಭೇಟಿಯ ವೇಳೆ ಸೋನಿಯಾ ಗಾಂಧಿಗೆ ಸಿದ್ದು ವಿವರಣೆ ನೀಡಿದ್ದಾರೆ.
ಲಿಂಗಾಯತ ಮತಗಳನ್ನು ಸೆಳೆಯಲು ಯತ್ನ:
ರಾಜ್ಯ ಬಿಜೆಪಿ ಸರ್ಕಾರ ಮತ್ತು ಬಿಎಸ್ವೈ ಪದಚ್ಯುತಿ ಬಗ್ಗೆ ಸೋನಿಯಾ ಗಾಂಧಿ ಮಾತುಕತೆ ವೇಳೆ ಮಾಹಿತಿ ಪಡೆದಿದ್ಧಾರೆ. ಈ ಬಗ್ಗೆಯೂ ಸೋನಿಯಾ ಗಾಂಧಿ ಅವರಿಗೆ ಸಂಪೂರ್ಣ ಮಾಹಿತಿ ನೀಡಿರುವ ಸಿದ್ದರಾಮಯ್ಯ, "ಬಿಎಸ್ವೈ ಪದಚ್ಯುತಿ ಬಳಿಕ ಒಂದಷ್ಟು ಲಿಂಗಾಯತರು ಬೇಸರಗೊಂಡಿದ್ದಾರೆ. ಸಿಎಂ ಬೊಮ್ಮಾಯಿ ನೇತ್ರತ್ವದ ಸರ್ಕಾರ ಹೈಕಮಾಂಡ್ ಆಜ್ಞೆಯಂತೆ ನಡೆಯುತ್ತಿದೆ. ಯಡಿಯೂರಪ್ಪ ಪದಚ್ಯುತಿ ಕಾಂಗ್ರೆಸ್ಗೆ 2023ರ ಚುನಾವಣೆಗೆ ಅನುಕೂಲವಾಗಬಹುದು.
ಎರಡರಿಂದ ಮೂರು ಪರ್ಸೆಂಟ್ ಲಿಂಗಾಯತರು ಕೈ ಹಿಡಿದರೆ ಸಾಕು, ಕಾಂಗ್ರೆಸ್ ಗೆ ದೊಡ್ಡ ಲಾಭ ಆಗುತ್ತದೆ. ಬಿಎಸ್ವೈ ರಾಜಕೀಯ ಮುಗಿದ ಅಧ್ಯಾಯ, ಹಾಗಾಗಿ ಒಳಗೊಳಗೆ ಬಿಜೆಪಿ ಮೇಲೆ ಸಿಟ್ಟಿದೆ. ಇದು ನಮಗೆ ಅನುಕೂಲ ಆಗಲಿದೆ. ಇದೆ ಕಾರಣಕ್ಕೆ ರಾಜ್ಯದಲ್ಲಿ ಲಿಂಗಾಯತರಿಗೆ ಪ್ರಾಶಸ್ತ್ತ, ಲಿಂಗಾಯತ ನಾಯರಿಗೆ ಪಕ್ಷದೊಳಗೆ ಜವಾಬ್ದಾರಿ ಕೊಡಬೇಕು. ಪಕ್ಷದ ಅನುಕೂಲಕ್ಕಾಗಿ ಲಿಂಗಾಯತ ನಾಯಕರಿಗೆ ಮನ್ನಣೆ ಕೊಡಬೇಕಾಗಿದೆ" ಎಂದು ಸಿದ್ದರಾಮಯ್ಯ ಮನವರಿಕೆ ಮಾಡಿಕೊಟ್ಟಿದ್ದಾರೆ.
ಅಲ್ಲದೆ, ರಾಷ್ಟ್ರಾದ್ಯಂತ ನಡೆಯುತ್ತಿರುವ ರೈತ ಹೋರಾಟ ಮತ್ತು ಲಖೀಂಪುರ ರೈತ ಹತ್ಯೆಗೆ ಸಂಬಂಧಿಸಿದಂತೆ ರಾಷ್ಟ್ರವ್ಯಾಪಿ ಹೋರಾಟ ಮತ್ತು ಅಭಿಯಾನ ನಡೆಸಲು ಸೋನಿಯಾ ಗಾಂಧಿ ಅವರು ಸಿದ್ದರಾಮಯ್ಯ ಅವರ ಬಳಿ ರಚನಾತ್ಮಕ ಹೋರಾಟದ ಬಗ್ಗೆ ಹಲವು ಉಪಾಯಗಳನ್ನೂ ಕೇಳಿದ್ದಾರೆ ಎನ್ನಲಾಗಿದೆ.
(ಸಂದರ್ಶನ - ಚಿದಾನಂದ ಪಟೇಲ್)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ