ಅಡಿಕೆ-ಕೊಕ್ಕೊ ಬಳಸಿ ಮಾಡಿದ ಹೋಳಿಗೆಗೆ ಫುಲ್ ಡಿಮ್ಯಾಂಡ್.. ಏನಿದು ಹೊಸ ರುಚಿ ನೀವೇ ನೋಡಿ..

ಅಡಕೆ ಹಾಗೂ ಕೊಕ್ಕೋ ದಿಂದ ಲಡ್ಡು, ಚಾಕಲೇಟ್, ಪೇಯ, ಐಸ್‍ಕ್ರೀಂ ಮುಂತಾದ ತಿನಿಸುಗಳನ್ನು ಈಗಾಗಲೇ ತಯಾರಿಸಲಾಗಿದೆ. ಜತೆಗೆ ಅಡಕೆಯಿಂದ ಟೀ ಮಾಡಿ ಕುಡಿಯುವ ತನಕದ ಸಂಶೋಧನೆಗಳೂ ನಡೆದಿವೆ.

ಅಡಿಕೆಯಿಂದ ಮಾಡಿದ ಹೋಳಿಗೆ

ಅಡಿಕೆಯಿಂದ ಮಾಡಿದ ಹೋಳಿಗೆ

  • Share this:
ಒಂದು ಕಡೆ ಮಂಗಳೂರು ಚಾಲಿ ಅಡಕೆಗೆ ಮಾರುಕಟ್ಟೆಯಲ್ಲಿ ಒಳ್ಳೆಯ ಧಾರಣೆ ಸಿಗುವ ಮೂಲಕ ಕೊರೊನಾ ಸಂಕಷ್ಟದಲ್ಲೂ ಅಡಕೆ ರೈತರು ಬಾಯಿ ಸಿಹಿ ಮಾಡಿಕೊಳ್ಳುತ್ತಿದ್ದಾರೆ. ಇದೇ ವೇಳೆ ಮತ್ತೊಂದು ಕಡೆ ಅಡಕೆಯನ್ನೇ ಬಳಸಿಕೊಂಡು ಬಾಯಿ ಸಿಹಿ ಮಾಡುವ ಸಂಶೋಧನೆ ಫಲ ಕೊಟ್ಟಿದೆ. ಹೌದು ಅಡಕೆ ಹಾಗೂ ಕೊಕ್ಕೋ ಬಳಸಿ  ಹೋಳಿಗೆ ಮಾಡಿರುವ ಪುತ್ತೂರಿನ ಯುವ ಪಾಕಶಾಸ್ತ್ರಜ್ಞರೊಬ್ಬರು ಶೀಘ್ರದಲ್ಲೇ ಅಡಕೆ ಹಾಗೂ ಕೊಕ್ಕೋದ ಹೋಳಿಗೆ ಉದ್ಯಮ ಆರಂಭಿಸಲು ಮುಂದಾಗಿದ್ದಾರೆ.

ದಕ್ಷಿಣಕನ್ನಡ ಜಿಲ್ಲೆಯ  ಪುತ್ತೂರು ತಾಲೂಕಿನ ಬಲ್ನಾಡ್ ಗ್ರಾಮದ ಉಜುರುಪಾದೆ ಸಮೀಪದ ಗುರಿಮೂಲೆ ನಿವಾಸಿಯಾಗಿರುವ ಶ್ರೀಕೃಷ್ಣ ಶಾಸ್ತ್ರಿ ಈ ಸಂಶೋಧನೆ ಮಾಡಿದ ಯುವ ಪಾಕಶಾಸ್ತ್ರಜ್ಞ.  10 ವರ್ಷಗಳಿಂದ ಪಾಕಶಾಸ್ತ್ರಜ್ಞರಾಗಿ ಪರಿಸರದಲ್ಲಿ ಹೆಸರುವಾಸಿಯಾಗಿರುವ ಇವರು ಇದೀಗ ಅಡಕೆ ಹಾಗೂ ಕೊಕ್ಕೋವನ್ನು ಬಳಸಿಕೊಂಡು ಹೋಳಿಗೆ ತಯಾರಿಸಿದ್ದಾರೆ. ಸ್ಯಾಂಪಲ್ ಗಾಗಿ ತಯಾರಿಸಿದ ಹೋಳಿಗೆಗೆ ಭಾರೀ ಬೇಡಿಕೆ ಕಂಡು ಬಂದ ಹಿನ್ನಲೆಯಲ್ಲಿ ಅಡಿಕೆ ಹಾಗೂ ಕೊಕ್ಕೋವನ್ನು ಮೂಲವಸ್ತುವನ್ನಾಗಿ ಬಳಸಿಕೊಂಡು ಹೋಳಿಗೆ ಉದ್ಯಮ ಆರಂಭಿಸಲು ನಿರ್ಧರಿಸಿದ್ದಾರೆ.

ಅಡಕೆ ಹಾಗೂ ಕೊಕ್ಕೋ ದಿಂದ ಲಡ್ಡು, ಚಾಕಲೇಟ್, ಪೇಯ, ಐಸ್‍ಕ್ರೀಂ ಮುಂತಾದ ತಿನಿಸುಗಳನ್ನು ಈಗಾಗಲೇ ತಯಾರಿಸಲಾಗಿದೆ. ಜತೆಗೆ ಅಡಕೆಯಿಂದ ಟೀ ಮಾಡಿ ಕುಡಿಯುವ ತನಕದ ಸಂಶೋಧನೆಗಳೂ ನಡೆದಿವೆ. ಇದೆಲ್ಲವನ್ನು ಕಂಡು ಸ್ಪೂರ್ತಿಗೊಂಡಿದ್ದ ಶ್ರೀಕೃಷ್ಣ ಅಡಿಕೆ ಹಾಗೂ ಕೊಕ್ಕೋ ಬಳಸಿ ಹೋಳಿಗೆ ಏಕೆ ತಯಾರಿಸಬಾರದು ಎನ್ನುವ ಪ್ರಶ್ನೆಯನ್ನು ತನ್ನಲ್ಲೇ ಹಾಕಿಕೊಂಡಿದ್ದಾರೆ.  ಹೇಗೂ ಬಾಣಸಿಗನಾಗಿ ಹೋಳಿಗೆ ತಯಾರಿಯಲ್ಲಿ ನಿಪುಣನಾಗಿರುವ ಇವರು, ಇದನ್ನೇ ಅಡಕೆ ಹಾಗೂ ಕೊಕ್ಕೋದಿಂದ ತಯಾರಿಸಿದರೆ ಹೇಗೆ ಎಂದು ಯೋಚಿಸಿ ಕಾರ್ಯರೂಪಕ್ಕೆ ತಂದಿದ್ದರು.

ಇದನ್ನೂ ಓದಿ: ನನ್ನ ವಿಡಿಯೋ ಇದೆ ಎನ್ನುತ್ತಿದ್ದಾರೆ, ಬ್ಲ್ಯಾಕ್​​ಮೇಲ್​​ ಖೆಡ್ಡಾಗೆ ನಾನು ಬೀಳುವುದಿಲ್ಲ : ರೇಣುಕಾಚಾರ್ಯ ತಿರುಗೇಟು

250 ಗ್ರಾಂ ಡಬ್ಬಲ್ ಚೋಲ್ ಚಾಲಿ ಅಡಕೆಯನ್ನು ತುಪ್ಪದೊಂದಿಗೆ ಬೆರೆಸಿ ನುಣ್ಣಗೆ ಹುಡಿ ಮಾಡಿದೆ. ಬಳಿಕ ಸಕ್ಕರೆ ಪಾಕಕ್ಕೆ ಸೇರಿಸಿ ಮೈದಾ ಮತ್ತಿತರ ಪೂರಕ ಸಾಮಗ್ರಿಗಳನ್ನು ಬಳಸಿ ಹೋಳಿಗೆ ತಯಾರಿಸಲಾಗುತ್ತದೆ. 250 ಗ್ರಾಂ ಅಡಕೆ ಮಿಶ್ರಣದಲ್ಲಿ 52 ಹೋಳಿಗೆ ತಯಾರಿಸಲು ಸಾಧ್ಯವಾಗಿದ್ದು, ಒಂದು ಕಿಲೋ ಅಡಕೆ ಬಳಸಿ ಸುಮಾರು 200 ಹೋಳಿಗೆ ತಯಾರಿಸಬಹುದು ಎಂಬ ಆತ್ಮವಿಶ್ವಾಸದಲ್ಲಿದ್ದಾರೆ.

ಮೊದಲು ತಯಾರಿಸಿದ 52 ಅಡಕೆ ಹೋಳಿಗೆಗಳನ್ನು ಪರಿಸರದಲ್ಲೇ ಹಂಚಲಾಗಿದ್ದು, ಉತ್ತಮ ಅಭಿಪ್ರಾಯ ವ್ಯಕ್ತವಾಗಿತ್ತು.  ಡಬ್ಬಲ್ ಚೋಲ್ ಅಡಕೆಯನ್ನು ನುಣ್ಣಗೆ ಹುಡಿ ಮಾಡುವುದು ಸುಲಭವಲ್ಲ. ಪ್ರಯೋಗ ಸಂದರ್ಭ ಮಿಕ್ಸಿಯಲ್ಲಿ ಅರೆದು ನುಣ್ಣಗೆ ಮಾಡಲಾಗಿದೆ. ಸದ್ಯದಲ್ಲೇ ಇದಕ್ಕೊಂದು ಯಂತ್ರ ಖರೀದಿಸಿ ನಂತರ ಅಡಕೆ ಹಾಗೂ ಕೊಕ್ಕೋದ ಹೋಳಿಗೆ ತಯಾರಿಸುವ ಗೃಹೋದ್ಯಮ ಆರಂಭಿಸಲು ಶ್ರೀಕೃಷ್ಣ ಶಾಸ್ತ್ರಿ ನಿರ್ಧರಿಸಿದ್ದಾರೆ. ಅಡಿಕೆ ಹೋಳಿಗೆಗಾಗಿ ಅಡಿಕೆಯನ್ನು ಶ್ರೀಕೃಷ್ಣ ಶಾಸ್ತ್ರಿ ತಮ್ಮ ತೋಟದಲ್ಲೇ ಬೆಳೆಯುವ ಅಡಕೆ ಬಳಸಿಕೊಳ್ಳುತ್ತಿದ್ದಾರೆ. ಕೊಕ್ಕೊ ಬೀಜವನ್ನು ಹೊರಗಿನಿಂದ ಖರೀದಿಸಲು ಮುಂದಾಗಿದ್ದು,  ಪ್ರಸ್ತುತ ಅಡಕೆಗೆ ಉತ್ತಮ ಧಾರಣೆಯಿದೆ. ಇದರಿಂದ ಮೌಲ್ಯವರ್ಧಿತ ಉತ್ಪನ್ನಗಳು ಹೆಚ್ಚು ಹೆಚ್ಚು ಬಂದಂತೆಲ್ಲ ಅಡಕೆ ಧಾರಣೆಗೆ ಉತ್ತೇಜನ ನೀಡಿದಂತಾಗುತ್ತದೆ ಎನ್ನುತ್ತಾರೆ ಶ್ರೀಕೃಷ್ಣ ಶಾಸ್ತ್ರಿ.
Published by:Kavya V
First published: