ವಿಶ್ವ ಆರ್ಥಿಕ ಸಮಾವೇಶ; ಪ್ರತಿಷ್ಠಿತ ಹೂಡಿಕೆದಾರರು, ಉದ್ಯಮಿಗಳಿಂದ ಕರ್ನಾಟಕದಲ್ಲಿ ಹೂಡಿಕೆಗೆ ಉತ್ಸಾಹದ ಪ್ರತಿಕ್ರಿಯೆ

ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರಿಗೆ ಸುಲಭ ದರದಲ್ಲಿ ಆರೋಗ್ಯ ಇಲಾಖೆಯ ಮುಖಾಂತರ ಔಷಧಿಯನ್ನು ಸರಬರಾಜು ಮಾಡಲು ಡ್ಯಾನಿಷ್‍ನ ಪ್ರಸಿದ್ಧ ಔಷಧ ತಯಾರಿಕಾ ಕಂಪನಿಯಾದ ನೋವೋ ನಾರ್‍ಡಿಸ್ಕ್ ಮುಂದಾಗಿದೆ.

HR Ramesh | news18-kannada
Updated:January 22, 2020, 8:00 PM IST
ವಿಶ್ವ ಆರ್ಥಿಕ ಸಮಾವೇಶ; ಪ್ರತಿಷ್ಠಿತ ಹೂಡಿಕೆದಾರರು, ಉದ್ಯಮಿಗಳಿಂದ ಕರ್ನಾಟಕದಲ್ಲಿ ಹೂಡಿಕೆಗೆ ಉತ್ಸಾಹದ ಪ್ರತಿಕ್ರಿಯೆ
ಸಿಎಂ ಬಿಎಸ್​ವೈ ಅವರು ನಿನ್ನೆ ಸಂಜೆ ದಾವೋಸ್ ನಲ್ಲಿ ಸಿ.ಐ.ಐ.ಏರ್ಪಡಿಸಿದ್ದ ಔತಣಕೂಟದ ಸಂದರ್ಭದಲ್ಲಿ ಅರ್ಸೆಲಾರ್ ಮಿತ್ತಲ್ ಸಂಸ್ಥೆಯ ಸಿ.ಇ. ಒ. ಲಕ್ಷ್ಮಿ ಮಿತ್ತಲ್ ಅವರೊಂದಿಗೆ ಚರ್ಚಿಸಿದರು.
  • Share this:
ದಾವೊಸ್ (ಜ.22): ವರ್ಲ್ಡ್ ಎಕನಾಮಿಕ ಫೋರಂ ಸಮಾವೇಶದ ಮೂರನೇ ದಿನವಾದ ಇಂದು ಕರ್ನಾಟಕದ ಪಾಲಿಗೆ ಫಲಪ್ರದವಾಗಿ ಪರಿಣಮಿಸಿತು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರತಿಷ್ಠಿತ ಹೂಡಿಕೆದಾರರು ಹಾಗೂ ಕೈಗಾರಿಕೋದ್ಯಮಿಗಳನ್ನು ಕರ್ನಾಟಕದಲ್ಲಿ ಹೂಡಿಕೆ ಮಾಡುವಂತೆ ಆಹ್ವಾನಿಸಿದರು. ಇದರಲ್ಲಿ ದಸ್ಸಾ ಸಿಸ್ಟಮ್ಸ್, ಅರ್ಸೆಲಾರ್ ಮಿತ್ತಲ್, ಭಾರತ್ ಫೋರ್ಜ್, ಲಾಕ್ ಹೀಡ್ ಮಾರ್ಟಿನ್, ಲುಲು ಗ್ರೂಪ್ ಮತ್ತು ನೊವೊ ನಾರ್ಡಿಸ್ಕ್ ಮೊದಲಾದ ಕಂಪೆನಿಗಳು ಸೇರಿದ್ದವು.

ತಮ್ಮನ್ನು ಭೇಟಿಯಾದ ಹೂಡಿಕೆದಾರರೊಂದಿಗೆ ಮಾತುಕತೆ ನಡೆಸಿದ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರವು ಹೂಡಿಕೆದಾರರಿಗೆ ಎಲ್ಲ ರೀತಿಯಲ್ಲೂ ಬೆಂಬಲ ನೀಡಲಿದೆ ಹಾಗೂ ಎಲ್ಲ ರೀತಿಯ ಅಡಚಣೆಗಳನ್ನು ನಿವಾರಿಸಲಿದೆ ಎಂದು ಸ್ಪಷ್ಟ ಪಡಿಸಿದರು. “ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಅಧಿಕಾರಿಗಳು ಹೆಚ್ಚಿನ ಆಸಕ್ತಿ ವಹಿಸಿ ಹೂಡಿಕೆಗೆ ಸೂಕ್ತ ನೆರವು ಒದಗಿಸಲಿದ್ದಾರೆ” ಎಂದು ತಿಳಿಸಿದರು.

ಈಗಾಗಲೇ ಬೆಂಗಳೂರಿನಲ್ಲಿ ಅಸ್ತಿತ್ವ ಹೊಂದಿರುವ ದಸ್ಸಾ ಸಿಸ್ಟಮ್ಸ್ 3ಡಿಎಸ್ ಅವರಿಂದ ಹೂಡಿಕೆಯ ಕುರಿತು ಅತ್ಯಂತ ಭರವಸೆಯ ಪ್ರತಿಕ್ರಿಯೆ ವ್ಯಕ್ತವಾಯಿತು.

ಕಂಪೆನಿಯ ಉಪಾಧ್ಯಕ್ಷ ‍ಫ್ಲಾರೆನ್ಸ್ ವರ್ಝೆಲೆನ್ ಅವರು ಬೆಂಗಳೂರು ಹಾಗೂ ಯಾವುದಾದರೂ ಜಿಲ್ಲೆಯಲ್ಲಿ ಎರಡು ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಲು ಕ್ರಮ ವಹಿಸುವುದಾಗಿ ತಿಳಿಸಿದರು. “ನಾವು ಪ್ರತಿ ಕೇಂದ್ರದಲ್ಲಿ ಪ್ರತಿ ವರ್ಷ ತಲಾ 2000 ಯುವಕರಿಗೆ ತರಬೇತಿ ನೀಡಿ, ದೊಡ್ಡ ಕಂಪೆನಿಗಳಲ್ಲಿ ಕೌಶಲ್ಯಪೂರ್ಣ ಉದ್ಯೋಗ ಪಡೆಯಲು ಅರ್ಹರನ್ನಾಗಿಸಲಿದ್ದೇವೆ” ಎಂದು ಅವರು ನುಡಿದರು. ಸ್ಮಾರ್ಟ್ ಸಿಟಿ ಯೋಜನೆಗಳಲ್ಲಿ ಯುವಕರಿಗೆ ತರಬೇತಿ ನೀಡಲು ತಾವು ಆಸಕ್ತರಾಗಿರುವುದಾಗಿ ಅವರು ತಿಳಿಸಿದರು.

ಎಂಜಿನಿಯರಿಂಗ್ ಪದವೀಧರರಿಗೂ ತರಬೇತಿ ನೀಡಲಾಗುವುದು ಎಂದು ತಿಳಿಸಿದ ಅವರು ಈ ಕೇಂದ್ರಗಳ ಸ್ಥಾಪನೆಗೆ ಒಂದು ದಶಲಕ್ಷ ಯುರೋ ಹೂಡಿಕೆ ಮಾಡಲಾಗುವುದು ಎಂದು ತಿಳಿಸಿದರು. ಬೆಂಗಳೂರು ರಕ್ಷಣಾ ಉಪಕರಣಗಳು ಹಾಗೂ ಎರೋಸ್ಪೇಸ್ ಕೇಂದ್ರವಾಗಿ ಅಭಿವೃದ್ಧಿ ಹೊಂದುತ್ತಿರುವ ಹಿನ್ನೆಲೆಯಲ್ಲಿ ಈ ವಲಯಗಳಲ್ಲಿ ತರಬೇತಿ ಹೊಂದಿದ ಯುವಕರಿಗೆ ಬೇಡಿಕೆ ಇರುವ ಕುರಿತು ಮುಖ್ಯಮಂತ್ರಿಯವರು ಗಮನ ಸೆಳೆದಾಗ ವರ್ಝೇಲೆನ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿ, ಮುಂದಿನ ದಿನಗಳಲ್ಲಿ ಅಂತಹ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ಉಕ್ಕಿನ ಕೈಗಾರಿಕೆಗಳ ಪ್ರಮುಖ ಉದ್ಯಮಿ ಲಕ್ಷ್ಮಿ ಎನ್. ಮಿತ್ತಲ್ ನಿನ್ನೆ ರಾತ್ರಿ ನಡೆದ ಸಿಐಐ ಭೋಜನ ಕೂಟದ ಸಂದರ್ಭದಲ್ಲಿ ಮುಖ್ಯಮಂತ್ರಿಯವರನ್ನು ಭೇಟಿಯಾದರು. ಇಂದು ಬೆಳಿಗ್ಗೆಯೂ ಕರ್ನಾಟಕ ಪೆವಿಲಿಯನ್ ಗೆ ಆಗಮಿಸಿ, ಕರ್ನಾಟಕದಲ್ಲಿ ಹೂಡಿಕೆ ಮಾಡುವ ಕುರಿತು ಚರ್ಚೆ ನಡೆಸಿದರು. ಅವರ ಕಂಪೆನಿಯು ಬಳ್ಳಾರಿ ಜಿಲ್ಲೆಯಲ್ಲಿ ಈಗಾಗಲೇ 3000 ಎಕರೆ ಭೂಮಿ ಹೊಂದಿದೆ. “2010ರಲ್ಲಿ ತಾವು ಮುಖ್ಯಮಂತ್ರಿಯಾಗಿದ್ದಾಗ ಉಕ್ಕು ತಯಾರಿಕಾ ಘಟಕ ಸ್ಥಾಪನೆಗೆ ಅನುಮತಿ ನೀಡಿದ್ದು, ಕಾರಣಾಂತರಗಳಿಂದ ಇದಕ್ಕೆ ಅಡಚಣೆಗಳು ಉಂಟಾಗಿವೆ. ಈಗ ತಾವು ಎಲ್ಲ ಅಡ್ಡಿ ಆತಂಕಗಳನ್ನು ನಿವಾರಿಸಿ ಎಂದು ಮನವಿ ಮಾಡಿದರು ಹಾಗೂ ಕರ್ನಾಟಕದಲ್ಲಿ ಸೌರ ವಿದ್ಯುತ್ ಸ್ಥಾವರದಲ್ಲಿ ಹೂಡಿಕೆ ಮಾಡುವುದಾಗಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ಉಕ್ಕು ತಯಾರಿಕಾ ಘಟಕ ಹಾಗೂ ಸೌರ ವಿದ್ಯುತ್ ಸ್ಥಾವರಗಳೆರಡರ ಯೋಜನೆಯನ್ನೂ ಕೂಡಲೇ ಪ್ರಾರಂಭಿಸುವಂತೆ ಸಲಹೆ ನೀಡಿದರು. ಅದಕ್ಕೆ ಮಿತ್ತಲ್ ಅವರು ಈ ಕೂಡಲೇ ಉಕ್ಕಿನ ಉಪಯೋಗದ ಕುರಿತ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರವನ್ನು ಬೆಂಗಳೂರಿನಲ್ಲಿ ಪ್ರಾರಂಭಿಸುವುದಾಗಿ ತಿಳಿಸಿದರು.

ಲುಲು ಗ್ರೂಪ್ ಅಧ್ಯಕ್ಷ ಯೂಸುಫ್ ಅಲಿ ಅವರು ಕರ್ನಾಟಕದಲ್ಲಿ ಸರಕು ಸಾಗಾಣಿಕೆ ವಲಯದಲ್ಲಿ 2000 ಕೋಟಿ ರೂ. ಹೂಡಿಕೆ ಮಾಡುವುದಾಗಿ ತಿಳಿಸಿದರು. ಈ ಸಂಸ್ಥೆಯು ವಿಶೇಷವಾಗಿ ಕೃಷಿ ಉತ್ಪನ್ನ ಹಾಗೂ ಶೀಘ್ರ ಕೊಳೆತುಹೋಗುವ ತರಕಾರಿ, ಆಹಾರ ವಸ್ತುಗಳು, ಹಣ್ಣು ಹಂಪಲು ಹಾಗೂ ಪುಷ್ಪಗಳ ಸಾಗಾಣಿಕೆಗೆ ಹೂಡಿಕೆ ಮಾಡಲಿದೆ.ಬಂಡವಾಳ ಹೂಡಲು ಡೆನ್ಸೊ, ಲಾಕ್‍ಹೀಡ್ ಮಾರ್ಟಿನ್ ಸಂಸ್ಥೆ ಉತ್ಸುಕ

ಜಾಗತಿಕ ಭದ್ರತೆ ಮತ್ತು ಏರೋಸ್ಪೇಸ್ ಸಂಸ್ಥೆಯಾದ ಲಾಕ್‍ಹೀಡ್ ಮಾರ್ಟಿನ್ ಕಂಪನಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ರಿಚರ್ಡ್ ಅಂಬ್ರೋಸ್ ಅವರು ಕರ್ನಾಟಕ ಪೆವಿಲಿಯನ್‍ಗೆ ಭೇಟಿ ನೀಡಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿದರು. ಶೀಘ್ರದಲ್ಲಿಯೇ ಬೆಂಗಳೂರಿಗೆ ಭೇಟಿ ನೀಡಿ ಕರ್ನಾಟಕದಲ್ಲಿ ಹೂಡಿಕೆ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳ ಸಾಧ್ಯತೆಗಳನ್ನು ಪರಿಶೀಲಿಸುವುದಾಗಿ ಅವರು ತಿಳಿಸಿದರು.

ಕರ್ನಾಟಕದಲ್ಲಿ ಏರೋಸ್ಪೇಸ್ ಮತ್ತು ಜಾಗತಿಕ ಭದ್ರತಾ ವ್ಯವಸ್ಥೆಯ ಕುರಿತು ವಿವರಿಸಿದ ಮುಖ್ಯಮಂತ್ರಿಗಳು, ಫಾರ್ಚೂನ್ 500 ಕಂಪನಿಗಳ ಪೈಕಿ 400 ಕಂಪನಿಗಳು ಕರ್ನಾಟಕದಲ್ಲಿ ಈಗಾಗಲೇ ಅಸ್ತಿತ್ವದಲ್ಲಿದ್ದು, ಕರ್ನಾಟಕದಲ್ಲಿ ಲಾಕ್‍ಹೀಡ್ ಮಾರ್ಟಿನ್ ಕಂಪನಿ ಹೂಡಿಕೆ ಮಾಡಲು ಸೂಕ್ತ ವಾತಾವರಣ ಇರುವುದಾಗಿ ತಿಳಿಸಿದರು.

ಏರೋಸ್ಪೇಸ್ ಕೈಗಾರಿಕೆಗಳು ಮತ್ತು ಮಲ್ಟಿಕೋರ್ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಅತ್ಯುತ್ತಮ ಪರಿಸರವನ್ನು ಕರ್ನಾಟಕ ಹೊಂದಿದೆ. ರಾಜ್ಯದಲ್ಲಿ ಹೂಡಿಕೆ ಮಾಡುವ ಮೂಲಕ ಲಾಕ್‍ಹೀಡ್ ಮಾರ್ಟಿನ್ ಕಂಪನಿ ರಾಜ್ಯದಲ್ಲಿನ ಕೈಗಾರಿಕಾ ಸಾಮರ್ಥ್ಯವನ್ನು ಬಳಸಿಕೊಳ್ಳಬಹುದಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ತಿಳಿಸಿದರು.

ಜಾಗತಿಕ ಆಟೋಮೇಟಿವ್ ಭಾಗಗಳ ತಯಾರಕ ಕಂಪನಿ ಡೆನ್ಸೊ, ಕರ್ನಾಟಕದ ನಿಯೋಗದೊಂದಿಗೆ ಚರ್ಚಿಸಿತು. ದೆಹಲಿಯಲ್ಲಿ ತಮ್ಮ ಕಂಪನಿಯು ಶ್ರೇಷ್ಠತಾ ಮತ್ತು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿದ್ದು, ಶೀಘ್ರದಲ್ಲಿಯೇ ಬೆಂಗಳೂರಿಗೆ ಭೇಟಿ ನೀಡಿ ದಕ್ಷಿಣ ಭಾರತದಲ್ಲಿ ತಮ್ಮ ಸಂಸ್ಥೆಯನ್ನು ವಿಸ್ತರಿಸುವ ಸಾಧ್ಯತೆಯನ್ನು ಪರಿಶೀಲಿಸುವುದಾಗಿ ಸಂಸ್ಥೆಯ ಉಪಾಧ್ಯಕ್ಷ ಹಿರೋಯುಕಿ ವಕಬಾಸ್ಯಿ ತಿಳಿಸಿದರು.

ಡೆನ್ಸೊ ಸಂಸ್ಥೆಯು ಕಿರ್ಲೋಸ್ಕರ್ ಸಹಯೋಗದೊಂದಿಗೆ ನೆಲಮಂಗಲದಲ್ಲಿ 429 ನೌಕರರುಳ್ಳ ಘಟಕವನ್ನು ಹೊಂದಿದೆ.

ಮಧುಮೇಹಿಗಳಿಗೆ ಸಿಹಿ ಸುದ್ದಿ

ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರಿಗೆ ಸುಲಭ ದರದಲ್ಲಿ ಆರೋಗ್ಯ ಇಲಾಖೆಯ ಮುಖಾಂತರ ಔಷಧಿಯನ್ನು ಸರಬರಾಜು ಮಾಡಲು ಡ್ಯಾನಿಷ್‍ನ ಪ್ರಸಿದ್ಧ ಔಷಧ ತಯಾರಿಕಾ ಕಂಪನಿಯಾದ ನೋವೋ ನಾರ್‍ಡಿಸ್ಕ್ ಮುಂದಾಗಿದೆ.

ಕರ್ನಾಟಕ ಸರ್ಕಾರದೊಂದಿಗೆ ಕೈಜೋಡಿಸುವ ಆಸಕ್ತಿ ವ್ಯಕ್ತಪಡಿಸಿದ ನೋವೋ ನಾರ್‍ಡಿಸ್ಕ್ ಅಧ್ಯಕ್ಷ ಮತ್ತು ಸಿಇಒ ಫ್ರುಯರ್ ಗಾರ್ಡ್ ಜಾರ್‍ಜೆನ್ಸನ್ ಮಧುಮೇಹದ ವಿವಿಧ ಹಂತಗಳಲ್ಲಿರುವ ರೋಗಿಗಳಿಗೆ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಿರುವುದಾಗಿ ತಿಳಿಸಿದರು. ಸುಲಭ ದರದಲ್ಲಿ ಔಷಧಗಳನ್ನು ಸರಬರಾಜು ಮಾಡುವುದಲ್ಲದೆ, ಕಾಯಿಲೆಯನ್ನು ನಿಭಾಯಿಸಲು ಹಾಗೂ ಅದನ್ನು ತಡೆಗಟ್ಟುವ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಸರ್ಕಾರದೊಂದಿಗೆ ಹಮ್ಮಿಕೊಳ್ಳುವುದಾಗಿ ತಿಳಿಸಿದರು. ಮಧುಮೇಹ ಕಾಯಿಲೆಯನ್ನು ನಿಯಂತ್ರಿಸಲು ಕಂಪನಿಯ ಸಹಕಾರವನ್ನು ಪಡೆಯಲು ಸಿದ್ಧವಿರುವುದಾಗಿ ಮುಖ್ಯಮಂತ್ರಿಗಳು ಹೇಳಿದರು.

ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಇವರು ಮಾತನಾಡಿ, ಔಷಧಗಳನ್ನು ಕೊಳ್ಳಲು ಅಶಕ್ತರಾಗಿರುವ ಬಡ ಮಧುಮೇಹಿ ರೋಗಿಗಳಿಗೆ ಸಹಾಯ ಮಾಡಲು ಸಂಸ್ಥೆಯ ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಗುವುದೆಂದು ತಿಳಿಸಿದರು.

ಹೂಡಿಕೆ ಆಕರ್ಷಿಸುವ ರಾಜ್ಯದ ಪ್ರಯತ್ನಕ್ಕೆ ಮಧ್ಯಪ್ರದೇಶ ಸಿಎಂ ಮೆಚ್ಚುಗೆ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಬೆಳಿಗ್ಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಅವರೊಂದಿಗೆ ಬೆಳಗಿನ ಉಪಾಹಾರದೊಂದಿಗೆ ಉಭಯ ರಾಜ್ಯಗಳ ಆರ್ಥಿಕ ಸ್ಥಿತಿಗತಿಗಳ ಕುರಿತು ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಅವರು ರಾಜ್ಯದಲ್ಲಿರುವ ಕೈಗಾರಿಕೆಗಳಿಗೆ ಉತ್ತೇಜನಕಾರಿ ವಾತಾವರಣ ಹಾಗೂ ರಾಜ್ಯಕ್ಕೆ ಬಂಡವಾಳ ತರಲು ಕರ್ನಾಟಕ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಮಧ್ಯಪ್ರದೇಶದ ಸಿಎಂ ಕಮಲನಾಥ್ ಅವರೊಂದಿಗೆ ಸಿಎಂ ಬಿಎಸ್​ವೈ ಚರ್ಚೆ ನಡೆಸಿದರು. ಸಚಿವ ಜಗದೀಶ್ ಶೆಟ್ಟರ್ ಇದ್ದಾರೆ.


ಇದನ್ನು ಓದಿ: ವಿಶ್ವ ಆರ್ಥಿಕ ಸಮಾವೇಶ; ಟ್ರಂಪ್ ಭಾಷಣ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ

“ಪ್ರತಿಯೊಬ್ಬ ಹೂಡಿಕೆದಾರನೂ ಬೆಂಗಳೂರು ಕುರಿತು ಹಾಗೂ ಪೂರ್ವರಾಷ್ಟ್ರಗಳಲ್ಲಿ ಬೆಂಗಳೂರು ಜ್ಞಾನಾಧಾರಿತ ಕೇಂದ್ರವಾಗಿ ಬೆಳೆದಿರುವ ಕುರಿತು ಉಲ್ಲೇಖಿಸುತ್ತಾರೆ. ಈ ವಿಷಯದಲ್ಲಿ ನಿಮ್ಮನ್ನು ಮೀರಿಸಲು ಸಾಧ್ಯವಿಲ್ಲ” ಎಂದು ಮುಖ್ಯಮಂತ್ರಿಯವರನ್ನು ಅಭಿನಂದಿಸಿದರು.



 
First published:January 22, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ